ಬುಧವಾರ, ಜೂನ್ 29, 2022
26 °C

ಹೃತಿಕ್‌ ರೋಷನ್‌ ಅಕ್ಕ ಸುನೈನಾ ಬದುಕಲ್ಲಿ ಪ್ರಣಯವೆಂಬ ಬಿರುಗಾಳಿ: ಧರ್ಮದ ತಾಕಲಾಟ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ‘ಮುಸ್ಲಿಮ್‌ ವ್ಯಕ್ತಿಯೊಬ್ಬರನ್ನು ಇಷ್ಟಪಟ್ಟ ಕಾರಣಕ್ಕೆ ನನ್ನ ಕುಟುಂಬ ನನ್ನನ್ನು ಹಿಂಸಿಸುತ್ತಿದೆ,’ ಎಂದು ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರ ಅಕ್ಕ, ನಿರ್ಮಾಪಕಿ ಸುನೈನಾ ರೋಶನ್‌ ಹೇಳಿಕೊಂಡಿದ್ದಾರೆ.

ಸಿನಿಮಾ ವೆಬ್‌ಸೈಟ್‌ವೊಂದಕ್ಕೆ ಸಂದರ್ಶನ ನೀಡಿರುವ ಅವರು, ತವರು ಮನೆಯಲ್ಲಿ ತಾವು ಅನುಭವಿಸುತ್ತಿರುವ ಯಾತನೆ, ಸಂದಿಗ್ಧ ಪರಿಸ್ಥಿತಿಯಲ್ಲಿ ನೆರವಿಗೆ ಬಾರದ ಸೋದರ ಹೃತಿಕ್‌ ರೋಶನ್‌ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಈ ಪರಿಸ್ಥಿತಿಯಿಂದ ಪಾರು ಮಾಡುವಂತೆ ಸಿನಿಮಾ ನಟಿ ಕಂಗನಾ ರಾಣಾವತ್‌ ಮತ್ತು ಅವರ ಸೋದರಿ ರಂಗೋಲಿ ಚಂದೆಲ್‌ ಅವರ ನೆರವು ಕೋರಿದ್ಧಾರೆ. 

ಏನು ಹೇಳಿದ್ದಾರೆ ಸುನೈನಾ ರೋಷನ್‌? 

‘ಕಳೆದ ವರ್ಷದಿಂದ ನಾನು ಮುಸ್ಲಿಂ ಪತ್ರಕರ್ತರೊಬ್ಬರನ್ನು ಇಷ್ಟಪಟ್ಟಿದ್ದೇನೆ. ಅವರ ಹೆಸರು ರುಹೈಲ್‌ ಅಮಿನ್‌. ಆದರೆ ನನ್ನ ತಂದೆಗೆ (ರಾಕೇಶ್‌ ರೋಶನ್‌) ಅವರೆಂದರೆ ಇಷ್ಟವಿಲ್ಲ. ಅವರು ಮುಸ್ಲಿಂ ಎಂಬ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ನನ್ನ ಕೆನ್ನೆಗೆ ಹೊಡೆದಿದ್ದಾರೆ. ನೀನು ಪ್ರೀತಿ ಮಾಡುತ್ತಿರುವುದು ಒಬ್ಬ ಉಗ್ರನನ್ನು ಎಂದೆಲ್ಲ ನಿಂದಿಸಿದರು. ರುಹೈಲ್‌ ಒಬ್ಬ ಉಗ್ರನಾಗಿದ್ದಾರೆ. ಮಾಧ್ಯಮ ರಂಗದಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ?’ ಎಂದು ಸುನೈನಾ ರೋಷನ್‌ ಪ್ರಶ್ನೆ ಮಾಡಿದ್ದಾರೆ. 

ಕುಟುಂಬದೊಂದಿಗೆ ಸುನೈನಾ ರೋಷನ್‌
ಕುಟುಂಬದೊಂದಿಗೆ ಸುನೈನಾ ರೋಷನ್‌

ರುಹೈಲ್‌ ಅಮಿನ್ ಮತ್ತು ತಮ್ಮ ನಡುವಿನ ಸ್ನೇಹದ ಕುರಿತು ಮಾತನಾಡಿರುವ ಸುನೈನಾ, ‘ನಾನು ಅವರನ್ನು ಫೇಸ್‌ಬುಕ್‌ ಮೂಲಕ ಪರಿಚಯ ಮಾಡಿಕೊಂಡೆ. ಆದರೆ, ಅವರ ಮೊಬೈಲ್‌ ನಂಬರ್‌ ಅನ್ನು ನಾನು ಸೇವ್‌ ಮಾಡಿಕೊಂಡಿರಲಿಲ್ಲ. ಯಾಕೆಂದರೆ ಈ ಸ್ನೇಹ ಮನೆಯವರಿಗೆ ತಿಳಿಯಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಈ ನಡುವೆ ನಾನು ಮುಂಬೈನ ಜುಹು ಎಂಬಲ್ಲಿರುವ ಪ್ಯಾಲಾಜ್ಜೋ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಹೂಡಿದೆ. ಅದು ನಮ್ಮ ತಂದೆ ತಾಯಿ ವಾಸ ಮಾಡುವ ಮನೆಯಾಗಿತ್ತಾದರೂ, ಅವರು ಹೊಟೇಲ್‌ನಲ್ಲಿಯೇ ಉಳಿದುಕೊಂಡಿದ್ದರು. ನಾನು ಅಲ್ಲಿಗೆ ಹೋಗುತ್ತಲೇ ತಂದೆ ತಾಯಿಯೂ ಬಂದರು. ಹೀಗಾಗಿ ನಾನು ರುಹೈಲ್‌ರನ್ನು ಅವರ ಕಚೇರಿಯಲ್ಲೇ ಭೇಟಿಯಾಗುತ್ತಿದ್ದೆ. ಈ ವಿಚಾರ ತಿಳಿದ ನನ್ನ ತಂದೆ ತಾಯಿ ನಮ್ಮ ಸ್ನೇಹಕ ವಿರೋಧ ವ್ಯಕ್ತಪಡಿಸಿದರು. ರುಹೈನ್‌ರನ್ನು ಭೇಟಿ ಮಾಡದಂತೆ ಒತ್ತಡ ಹೇರಲಾರಂಭಿಸಿದರು. ನನ್ನ ಬದುಕನ್ನು ನರಕಗೊಳಿಸಿದರು,’ ಎಂದು ತಮಗೆ ಒದಗಿದ ಕಷ್ಟ ಬಿಚ್ಚಿಟ್ಟಿದ್ದಾರೆ.  

‘ನಾನು ರುಹೈಲ್‌ರ ಸ್ನೇಹ ಬಿಡಲು ತಯಾರಿರಲಿಲ್ಲ. ನಮ್ಮಿಬ್ಬರ ಪ್ರೀತಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದೆ. ನಾನು ಅವರನ್ನು ಮದುವೆಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನು ರುಹೈಲ್‌ ಜತೆಗೆ ಇರಬೇಕಷ್ಟೇ. ಆದರೆ, ಅವರು ಮುಸ್ಲಿಂ ಎಂಬ ಕಾರಣಕ್ಕೆ ನನ್ನ ಕುಟುಂಬ ವಿರೋಧ ಮಾಡುತ್ತಿದೆ,‘ ಎಂದು ಸುನೈನ ಹೇಳಿಕೊಂಡಿದ್ದಾರೆ.

ಮನೆ ಕೊಡಿಸಲಿಲ್ಲ ಹೃತಿಕ್‌ 

‘ನನ್ನ ವಿಚಾರದಲ್ಲಿ ಹೃತಿಕ್‌ ಕೂಡ ಸಹಾಯ ಮಾಡಲಿಲ್ಲ. ಯಾಕೆಂದರೆ ಆತ ನನ್ನ ತಂದೆಯ ಅಡಿಯಲ್ಲೇ ಬುದುಕುತ್ತಿದ್ದಾನೆ. ಅವನೂ ನನ್ನ ಸಂಬಂಧ ಒಪ್ಪಲು ತಯಾರಿಲ್ಲ. ಹೃತಿಕ್‌ ಮುಂಬೈನಲ್ಲಿ ನನಗೊಂದು ಮನೆ ಕೊಡಿಸುವುದಾಗಿ ಹೇಳಿದ್ದ. ಆದರೆ, ಆತ ಮನೆ ಕೊಡಿಸಲಿಲ್ಲ. ನಾನು ಮುಂಬೈನಲ್ಲಿ ಬಾಡಿಗೆ ಮನೆ ಹುಡುಕಿಕೊಂಡಾಗ, ದುಬಾರಿಯಾಯಿತು... ನನ್ನಿಂದಾಗದು ಎಂದ. 2.50ಲಕ್ಷದ ಬಾಡಿಗೆ ಮನೆ ಅವನಿಗೆ ಹೊರೆಯಾಯಿತೇ. ಹೃತಿಕ್‌ಗೆ ಅದು ಹೊರೆಯೇ ಅಲ್ಲ. ಹೃತಿಕ್‌ ನನ್ನ ವಿಚಾರದಲ್ಲಿ ಮಾತು ತಪ್ಪಿದ. ಈಗ ಯಾರೂ ನನಗೆ ನೆರವು ನೀಡುತ್ತಿಲ್ಲ,’ ಎಂದು ಸೋದರನ ವಿರುದ್ಧ ದೂರಿದ್ದಾರೆ. 

1992ರಲ್ಲಿ ಆಶಿಶ್‌ ಸೋನಿ ಎಂಬುವವರನ್ನು ಮದುವೆಯಾಗಿ 2000ರಲ್ಲಿ ವಿಚ್ಛೇದನ ಪಡೆದಿರುವ ಸುನೈನಾರ ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಆಶಿಶ್‌ ಸೋನಿಯವರನ್ನು ತೊರೆದ ನಂತರ ಮೋಹನ್‌ ನಗರ್‌ ಎಂಬುವವರನ್ನು ಅವರು ವಿವಾಹವಾದರು. ಆದರೆ, ನಂತರ ವಿಚ್ಛೇದನವನ್ನೂ ಪಡೆದಿದ್ದಾರೆ ಎನ್ನಲಾಗುತ್ತದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿಗಳಿಲ್ಲ. ಅವರಿಗೆ ಒಬ್ಬಳು ಮಗಳೂ ಇದ್ದಾರೆ. ಸುನೈನಾ ಕ್ಯಾನ್ಸರ್‌ಗೂ ತುತ್ತಾಗಿದ್ದರು. ಚಿಕಿತ್ಸೆ ಪಡೆದು ಗುಣಮುಖರಾಗಿರುವ ಅವರು, ಸದ್ಯ ಪತ್ರಕರ್ತ ರುಹೈಲ್‌ ಅಮಿನ್‌ರ ಜತೆ ಪ್ರಣಯದಲ್ಲಿದ್ದಾರೆ. ಇದೇ ವಿಚಾರ ಹೃತಿಕ್‌ ರೋಷನ್‌ ಕುಟುಂಬದಲ್ಲಿ ಕೋಲಾಹಲ ಸೃಷ್ಟಿಸಿದೆ. ಧರ್ಮದ ತಾಕಲಾಟ ತಂದಿಟ್ಟಿದೆ. 

ಇದರಿಂದ ಪಾರಾಗಲು ನಟಿ ಕಂಗನಾ ರಾಣಾವತ್‌ ಮತ್ತು ಅವರ ಸೋದರಿ ರಂಗೋಲಿಯ ನೆರವು ಕೇಳುತ್ತಿದ್ದಾರೆ ಸುನೈನಾ. ಇದೇ ಹಿನ್ನೆಲೆಯಲ್ಲಿ ರಂಗೋಲಿ ಚಂದೇಲ್‌ ಅವರೂ ಸುನೈನಾ ಅವರ ಕೌಟುಂಬಿಕ ಪರಿಸ್ಥಿಯ ಬಗ್ಗೆ ಹಲವು ಸರಣಿ ಟ್ವೀಟ್‌ ಮಾಡಿದ್ದರು. 

'ನಾನು ನರಕದಲ್ಲಿ ಬದುಕುತ್ತಿದ್ದೇನೆ. ನನ್ನ ಪರಿಸ್ಥಿತಿಯ ಬಗ್ಗೆ ರಂಗೋಲಿ ಮಾಡಿರುವ ಟ್ವೀಟ್‌ಗಳನ್ನು ನಾನು ಗಮನಿಸಿದ್ದೇನೆ. ಆ ಟ್ವೀಟ್‌ನಲ್ಲಿದ್ದ ಸಂಗತಿ. ನಾನು ಕಂಗನಾ ಮತ್ತು ರಂಗೋಲಿ ಅವರನ್ನು ಭೇಟಿ ಮಾಡುತ್ತೇನೆ. ಅವರು ನನಗೆ ನ್ಯಾಯ ದೊರಕಿಸಿಕೊಡುವ ವಿಶ್ವಾಸವಿದೆ,’ ಎಂದು ಸುನೈನಾ ಹೇಳಿಕೊಂಡಿದ್ದಾರೆ. 

ಇನ್ನಷ್ಟು...

ಮಿ–ಟೂ: ಹೃತಿಕ್ ರೋಷನ್ ಶಿಕ್ಷೆಗೆ ಅರ್ಹ ವ್ಯಕ್ತಿ ಎಂದ ಕಂಗನಾ 

* ಹೃತಿಕ್‌ ತಂದೆ ರಾಕೇಶ್‌ ರೋಷನ್‌ಗೆ ಗಂಟಲು ಕ್ಯಾನ್ಸರ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು