ಗುರುವಾರ , ಆಗಸ್ಟ್ 11, 2022
21 °C

ಉಪೇಂದ್ರ ಅಣ್ಣನ ಮಗ ನಿರಂಜನ್‌ ಮೊದಲ ಸಿನಿಮಾ ‘ಸೂಪರ್‌ ಸ್ಟಾರ್’‌ಗೆ 4ರಂದು ಮುಹೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸೂಪರ್‌ ಸ್ಟಾರ್’‌ ಹೆಸರಿನ ಇನ್ನೊಂದು ಚಿತ್ರಕ್ಕೆ ಡಿ.4ರಂದು ಮುಹೂರ್ತ ನಡೆಯಲಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ಇದು. 

ಸಿನಿಮಾದ ಕುರಿತು ಮಾಹಿತಿ ನೀಡಿದ ನಿರ್ದೇಶಕ ರಮೇಶ್‌ ವೆಂಕಟೇಶ್‌ ಬಾಬು, ‘ಈ ಚಿತ್ರಕ್ಕಾಗಿ ನಾಲ್ಕು ವರ್ಷಗಳಿಂದ ಸಿದ್ಧತೆ ನಡೆಸಿದ್ದೇವೆ. ಸುಮಾರು 8ರಿಂದ 10 ಕೋಟಿ ಬಜೆಟ್‌ನ ಸಿನಿಮಾ ಇದು. ಆರ್‌ವಿಬಿ ಸಿನಿಮಾಸ್‌ ಮತ್ತು ಮೈಲಾರಿ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಡಿ. 7ರಿಂದ ಶೂಟಿಂಗ್‌ ಆರಂಭವಾಗಲಿದೆʼ ಎಂದರು.

ನಾಯಕಿಯ ಹುಡುಕಾಟ: ‘ನಾಯಕ 6.2 ಅಡಿ ಎತ್ತರ ಇದ್ದಾರೆ. ಆ ಎತ್ತರಕ್ಕೆ ತಕ್ಕನಾದ ನಾಯಕಿಯ ಹುಡುಕಾಟ ನಡೆದಿದೆ. ಹಲವರ ಆಡಿಷನ್‌ ನಡೆಸಿದ್ದೇವೆ’ ಎಂದರು.

‘ರಾಘವೇಂದ್ರ ವಿ. ಅವರ ಸಂಗೀತ ಇದೆ. ಯೋಗಿ ಅವರ ಛಾಯಾಗ್ರಹಣ ಇರಲಿದೆ. ವಿಜಯ್‌ ಎನ್‌.ಕುಮಾರ್‌ ಅವರು ಸಂಕಲನ ಮಾಡಿದ್ದಾರೆ. ಮೋಹನ್‌ ಬಿ. ಕೆರೆ ಕಲಾ ನಿರ್ದೇಶಕರು’ ಎಂದು ಅವರು ತಿಳಿಸಿದರು.

ಮೊದಲ ಹಂತದಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ವಿಜಯ್‌ ಮಾಸ್ಟರ್‌ ಅವರ ನೇತೃತ್ವದಲ್ಲಿ ನೃತ್ಯದ ಶೂಟಿಂಗ್‌ ನಡೆಯಲಿದೆ. ಅಂದ ಹಾಗೆ ಇದು ಅಂತರರಾಷ್ಟ್ರೀಯ ನೃತ್ಯಪಟುವೊಬ್ಬನ ಕಥೆ. ಪ್ಯಾರಿಸ್‌ನಲ್ಲಿಯೂ ಶೂಟಿಂಗ್‌ ನಡೆಯಲಿದೆ ಎಂದು ಅವರು ವಿವರಿಸಿದರು.

‘ಹಿಂದೆ ಉಪೇಂದ್ರ ಅಭಿನಯದ ‘ಸೂಪರ್‌ ಸ್ಟಾರ್’‌ಗೂ ಈ ‘ಸೂಪರ್‌ ಸ್ಟಾರ್’‌ಗೂ ಯಾವುದೇ ಸಂಬಂಧ ಇಲ್ಲ. ಎರಡೂ ಕಥೆಗಳು ಬೇರೆಯೇ ಆಗಿವೆ. ಈ ವಿಚಾರದಲ್ಲಿ ಗೊಂದಲ ಬೇಡ’ ಎಂದು ಸ್ಪಷ್ಟಪಡಿಸಿದರು.

ಎಲ್ಲವೂ ನಿಗದಿಯಂತೆ ನಡೆದರೆ ಮುಂದುನ ಜೂನ್‌, ಜುಲೈ ವೇಳೆಗೆ ಬಿಡುಗಡೆ ಮಾಡುವ ಚಿಂತನೆ ಇದೆ ಎಂದು ನಿರ್ದೇಶಕರು ಹೇಳಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು