ಮಂಗಳವಾರ, ಆಗಸ್ಟ್ 4, 2020
24 °C

‘ವಾಡವಾಸಲ್‌’ನಲ್ಲಿ ಸೂರ್ಯ ದ್ವಿಪಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರ್ಯ

ವೆಟ್ರಿಮಾರನ್‌ ನಿರ್ದೇಶನದ ಹೊಸ ಚಿತ್ರದಲ್ಲಿ ತಮಿಳು ನಟ ಸೂರ್ಯ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ತಂದೆ ಹಾಗೂ ಮಗನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. 

ಇದು ಸೂರ್ಯ ಅವರ ವೃತ್ತಿ ಜೀವನದ 40ನೇ ಚಿತ್ರ. ಈಗ ಈ ಚಿತ್ರಕ್ಕೆ ‘ವಾಡವಾಸಲ್‌’ ಎಂದು ಶೀರ್ಷಿಕೆ ಇಡಲಾಗಿದ್ದು, ಇದರಲ್ಲಿ ತಂದೆ– ಮಗ (ಸೂರ್ಯ) ಇಬ್ಬರೂ ಗೂಳಿಯ ತರಬೇತುದಾರರು.

ನಿರ್ಮಾಪಕ ಕಲೈಪುಳಿ ಎಸ್‌.ತನು ಅವರು ಕಳೆದ ಡಿಸೆಂಬರ್‌ ತಿಂಗಳಲ್ಲಿಯೇ ಈ ಸಿನಿಮಾ ನಿರ್ಮಾಣ ಮಾಡುವ ವಿಷಯವನ್ನು ಪ್ರಕಟಿಸಿದ್ದರು. ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಈಗಾಗಲೇ ಆರಂಭವಾಗಿವೆ. ಈ ಚಿತ್ರದ ಉಳಿದ ಕಲಾವಿದರ ಆಯ್ಕೆ ಬಗ್ಗೆ ಚಿತ್ರತಂಡ ಯಾವ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. 

ಈ ಹಿಂದೆ  ಗೌತಮ್‌ ಮೆನನ್‌ ನಿರ್ದೇಶನದ ‘ವರನಂ ಆಯಿರಂ’ ಹಾಗೂ ವಿಕ್ರಮ್‌ ಕುಮಾರ್‌ ಅವರ ‘24’ ಸಿನಿಮಾದಲ್ಲಿ ನಟ ಸೂರ್ಯ ಅವರು ತಂದೆ– ಮಗನ ದ್ವಿಪಾತ್ರ ಮಾಡಿದ್ದರು. ಈ ಹೊಸ ಚಿತ್ರ 2017ರಲ್ಲಿ ಪ್ರಕಟವಾದ ಸಿ.ಎಸ್‌. ಚೆಲ್ಲಪ್ಪ ಅವರ ಜನಪ್ರಿಯ ತಮಿಳು ಕಾದಂಬರಿ ‘ವಾಡಿ ವಾಸಲ್’ ಆಧರಿಸಿದೆ ಎನ್ನಲಾಗಿದೆ. ನಿರ್ದೇಶಕ ವೆಟ್ರಿಮಾರನ್, ಸಿನಿಮಾ ನಿರ್ಮಾಣಕ್ಕಾಗಿ ಕಾದಂಬರಿಕಾರರಿಂದ ಹಕ್ಕನ್ನು ಪಡೆದುಕೊಂಡಿದ್ದಾರೆ. ಇದು ತಮಿಳುನಾಡಿನ ಜನಪ್ರಿಯರಾಗಿರುವ ಜಲ್ಲಿಕಟ್ಟು ಕುರಿತಾದ ಕತೆಯಾಗಿದೆ. 

ಸದ್ಯ ವೆಟ್ರಿಮಾರನ್,‌ ಹಾಸ್ಯನಟ ಸೂರಿ ಜೊತೆಗೆ ಸಿನಿಮಾ ಮಾಡುತ್ತಿದ್ದು, ಆ ಚಿತ್ರದ ನಂತರ ಸೂರ್ಯ ನಟನೆಯ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಬಹುತೇಕ 2021ರಲ್ಲಿ ಚಿತ್ರೀಕರಣ ಆರಂಭವಾಗಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು