ಗುರುವಾರ , ಆಗಸ್ಟ್ 5, 2021
23 °C

ಯಾರು ಈ ದಿಶಾ ಸಾಲಿಯಾನ್? ಸುಶಾಂತ್ ಸಿಂಗ್ ಸಾವಿನ ಹಿಂದೆ ದಿಶಾ ಅಂತ್ಯದ ಛಾಯೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Sushant Singh Rajput

ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದ ನಗುಮೊಗದ ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿನ ಬೆನ್ನಲ್ಲೇ ಹೆಚ್ಚಿನವರು ಆತನ ಮಾಜಿ ಮ್ಯಾನೇಜರ್‌ ದಿಶಾ ಸಾಲಿಯಾನ್ ದುರಂತ ಅಂತ್ಯದ ಬಗ್ಗೆಯೂ ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಾಟ ನಡೆಸಿದ್ದಾರೆ.

ಬಾಲಿವುಡ್‌ ಬೆಡಗಿ ಐಶ್ಚರ್ಯಾ ರೈ, ಸುಶಾಂತ್ ಸಿಂಗ್‌ ರಜಪೂತ್‌‌ ಸೇರಿದಂತೆ ಹಲವರ ಬಳಿ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದ ದಿಶಾ ಸಾಲಿಯಾನ್‌ ಐದಾರು ದಿನಗಳ ಹಿಂದೆಯಷ್ಟೇ ಮುಂಬೈನ ಬಹುಮಹಡಿ ಕಟ್ಟದಿಂದ ಬಿದ್ದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. 

28 ವರ್ಷದ ದಿಶಾ ಸಾವು ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ಅದರ ಬೆನ್ನಲ್ಲೇ ಸಂಭವಿಸಿದ ಸುಶಾಂತ್ ಸಾವು ಈಗ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: 

ಸುಶಾಂತ್ ಸಿಂಗ್‌, ಕಾಮಿಡಿಯನ್‌ ಭಾರತಿ ಸಿಂಗ್‌, ವರುಣ್ ಶರ್ಮಾ, ರಿಹಾ ಚಕ್ರವರ್ತಿ ಸೇರಿದಂತೆ ಹಲವು ಬಾಲಿವುಡ್‌ ಸೆಲೆಬ್ರಿಟಿಗಳ ಬಳಿ ಪಿ.ಆರ್‌. ಮ್ಯಾನೇಜರ್ (ಸಾರ್ವಜನಿಕ ಸಂಪರ್ಕ ಅಧಿಕಾರಿ) ಆಗಿ ಕೆಲಸ ಮಾಡಿದ್ದ ದಿಶಾ, ಕೆಲ ಕಾಲ ಐಶ್ಚರ್ಯಾ ರೈ ಬಳಿಯೂ ಕೆಲಸ ಮಾಡಿದ್ದರು.

ಮುಂಬೈನ ದಾದರ್‌ನಲ್ಲಿ ತಂದೆ, ತಾಯಿ ಜತೆ ವಾಸವಾಗಿದ್ದ ದಿಶಾ, ಮಲಾಡ್‌ನ ಡಿಜೆಡ್‌ ಗೆಲಾಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ  ವಾಸವಾಗಿರುವ ತನ್ನ ಬಾಯ್‌ಫ್ರೆಂಡ್‌ ರೋಹನ್‌ ರಾಯ್‌ ಭೇಟಿಯಾಗಲು ಪದೇ ಪದೇ ಅಲ್ಲಿಗೆ ಹೋಗುತ್ತಿದ್ದರು. ರೋಹನ್ ಜತೆ ದಿಶಾ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಈಚೆಗೆ ಇಬ್ಬರ ಸಂಬಂಧ ಹಳಿಸಿತ್ತು.   

ಜೂನ್‌ 8ರಂದು ತಡರಾತ್ರಿವರೆಗೂ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದ ದಿಶಾ ನಶೆಯಲ್ಲಿ14ನೇ ಮಹಡಿಯ‌ ಬಾಲ್ಕನಿಯಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ಸುದ್ದಿ ಹೊರಬಿತ್ತು. ಆದರೆ, ಈ ಸಾವು ದೊಡ್ಡ ಸುದ್ದಿಯಾಗಲಿಲ್ಲ. ಬಾಲಿವುಡ್‌ ಅಂಗಳ ದಾಟಿ ಆಚೆಗೆ ಬರಲಿಲ್ಲ. ಬಂದರೂ ಯಾರ ಗಮನವನ್ನೂ ಸೆಳೆದಿರಲಿಲ್ಲ.

ಇದನ್ನೂ ಓದಿ: 

ದಿಶಾ ಸಾವನ್ನಪ್ಪಿ ವಾರ ಕಳೆಯುವ ಮುನ್ನವೇ ದುರಂತ ಅಂತ್ಯ ಕಂಡ ಸುಶಾಂತ್ ಸಾವು ಸಾಕಷ್ಟು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಅನೇಕ ಪ್ರಶ್ನೆಗಳನ್ನು ಬಿಟ್ಟು ಹೋಗಿದೆ. ಎಲ್ಲರೂ ಮರೆತಿದ್ದ ದಿಶಾ ಸಾವು ಕೂಡ ಮುನ್ನೆಲೆಗೆ ಬಂದಿದೆ.  

ಕೊರೊನಾ ಲಾಕ್‌ಡೌನ್‌ನ ಒಂದೂವರೆ ತಿಂಗಳಲ್ಲಿ ಬಾಲಿವುಡ್‌ ಅಂಗಳದಲ್ಲಿ ನಡೆಯುತ್ತಿರುವ ಏಳನೇ ಸಾವಿದು. ಇರ್ಫಾನ್‌ ಖಾನ್ ಅವರಿಂದ ಶುರುವಾದ ಸಾವಿನ ಸರಣಿ ರಿಷಿ ಕಪೂರ್‌, ಸಂಗೀತ ನಿರ್ದೇಶಕ ವಾಜಿದ್‌ ಖಾನ್‌, ಗೀತಕಾರರಾದ ಯೋಗೇಶ್ ಗೌರ್‌, ಅನ್ವರ್‌ ಸಾಗರ್‌, ಖ್ಯಾತ ನಿರ್ದೇಶಕ ಬಸು ಚಟರ್ಜಿ ನಂತರ ಸುಶಾಂತ್ ಸಿಂಗ್‌ಗೆ ಬಂದು ತಲುಪಿದೆ. ಸಾಲು, ಸಾಲು ಸಾವುಗಳಿಂದ ಬಾಲಿವುಡ್‌ನಲ್ಲಿ ಆತಂಕದ ಜತೆಗೆ ಸೂತಕದ ವಾತಾವರಣ ಮನೆ ಮಾಡಿದೆ.

ನಟ, ನಟಿಯರ ದುರಂತ ಅಂತ್ಯಗಳು ಬಾಲಿವುಡ್‌ಗೆ ಹೊಸದಲ್ಲ. ಇಂಥ ಎಷ್ಟೋ ಸಾವುಗಳನ್ನು ಬಾಲಿವುಡ್ ಅರಗಿಸಿಕೊಂಡಿದೆ. ಈ  ಹಿಂದೆ ಸುಂದರ ನಟಿ ದಿವ್ಯಾ ಭಾರತಿ ಮತ್ತು ನಿರ್ದೇಶಕ ಮನಮೋಹನ್‌ ದೇಸಾಯಿ ಆಕಸ್ಮಿಕವಾಗಿ ಬಾಲ್ಕನಿಯಿಂದ ಬಿದ್ದು ದುರಂತ ಅಂತ್ಯ ಕಂಡಿದ್ದರು. ದಿವ್ಯಾ ಭಾರತಿ ಅನುಮಾನಸ್ಪದ ಸಾವಿನಲ್ಲಿ ಮುಂಬೈ ಭೂಗತಲೋಕದ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ವಿದ್ಯಾಭಾರತಿ ಸಾವಿನ ರಹಸ್ಯವನ್ನು ಪೊಲೀಸರಿಗೆ ಇದೂವರೆಗೂ ಭೇದಿಸಲು ಸಾದ್ಯವಾಗಿಲ್ಲ.

ಇನ್ನಷ್ಟು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು