ಶನಿವಾರ, ಸೆಪ್ಟೆಂಬರ್ 26, 2020
23 °C

ತೆಲುಗು ನಟ ನಿತಿನ್ ಮದುವೆ| ‘ರಂಗ್‌ ದೇ’ ಟೀಸರ್ ಉಡುಗೊರೆ ನೀಡಿದ ಚಿತ್ರತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಜಯಂ’ ಖ್ಯಾತಿಯ ತೆಲುಗು ನಟ ನಿತಿನ್‌ ತಮ್ಮ ಬಹುಕಾಲದ ಪ್ರೇಯಸಿಯೊಂದಿಗೆ ನಿನ್ನೆ ಸಪ್ತಪದಿ ತುಳಿದರು. ಕೆಲ ದಿನಗಳ ಹಿಂದೆ ಪ್ರೇಯಸಿ ಶಾಲಿನಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ನಿತಿನ್‌ ನಿನ್ನೆ ಹೈದರಾಬಾದ್‌ನ ಫಲಕ್‌ನುಮಾ ಪ್ಯಾಲೆಸ್‌ನಲ್ಲಿ ಹಸೆಮಣೆ ಏರಿದ್ದರು. ರಾತ್ರಿ 9ಗಂಟೆ 9 ನಿಮಿಷದ ಶುಭ ಮುಹೂರ್ತದಲ್ಲಿ ನಿತಿನ್‌ ಶಾಲಿನಿ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದರು. ಸರ್ಕಾರದ ನಿಯಮದಂತೆ ಆತ್ಮೀಯರು ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಟರು ಹಾಗೂ ನಿತಿನ್‌ಗೆ ಆತ್ಮೀಯರು ಆದ ಸಾಯಿ ಧರ್ಮತೇಜ, ವರುಣ್ ತೇಜ್‌, ಆರ್‌ಎಕ್ಸ್‌100 ಖ್ಯಾತಿಯ ಕಾರ್ತಿಕೇಯ ಮದುವೆಯಲ್ಲಿ ಪಾಲ್ಗೊಂಡಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪುತ್ರಿ ಕೆ. ಕವಿತಾ, ಸಚಿವ ತಲಸಾನಿ ಶ್ರೀನಿವಾಸ ಯಾದವ್‌ ಸೇರಿದಂತೆ ಕೆಲವು ಶಾಸಕರು ಹಾಗೂ ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ದಂಪತಿಗಳನ್ನು ಹರಿಸಿದ್ದರು.

ಮದುವೆಯ ಶುಭ ಸಮಾರಂಭದಲ್ಲಿ ನಿತಿನ್‌ ಕೆಂಪು ಬಣ್ಣದ ಶೇವಾರ್ನಿ ಧರಿಸಿದ್ದರೆ, ಶಾಲಿನಿ ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದರು.

ಮದುವೆಗೆ ರಂಗ್‌ ದೇ ಟೀಸರ್ ಗಿಫ್ಟ್‌

ಮದುವೆಗೆ ನಿತಿನ್ ನಟನೆಯ ಮುಂದಿನ ಚಿತ್ರ ‘ರಂಗ್‌ ದೇ’ಯ ಟೀಸರ್‌ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ ಚಿತ್ರತಂಡ. ಈ ಚಿತ್ರದಲ್ಲಿ ನಿತಿನ್ ಜೊತೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ತೆರೆ ಹಂಚಿಕೊಳ್ಳಲಿದ್ದಾರೆ. 

ನಾಯಕಿಯನ್ನು ಇಷ್ಟಪಡದ ನಾಯಕ ತಂದೆಯ ಬಲವಂತಕ್ಕೆ ಮದುವೆಯಾಗಿ ಅಡುಗೆಮನೆಯಲ್ಲಿ ಪಾತ್ರೆ ತೊಳೆಯುವ, ಬಟ್ಟೆ ಇಸ್ತ್ರಿ ಮಾಡುವ ದೃಶ್ಯಗಳು ಟೀಸರ್‌ನಲ್ಲಿದೆ.

ಈ ಚಿತ್ರವು ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದಿದೆ ಚಿತ್ರತಂಡ. ರಂಗ್ ದೇ ಟೀಸರ್ ನಿತಿನ್ ಮದುವೆಗೆ ಬೆಸ್ಟ್‌ ಗಿಫ್ಟ್ ಎನ್ನುತ್ತಿದ್ದಾರೆ ಅಭಿಮಾನಿಗಳು.

ವೆಂಕಿ ಅಲ್ಲುರಿ ನಿರ್ದೇಶನದ ರಂಗ್‌ ದೇ ಹಾಸ್ಯಾತ್ಮಕ ಕೌಟುಂಬಿಕ ಮನೋರಂಜನೆಯುಳ್ಳ ಚಿತ್ರವಾಗಿರಬಹುದು ಎನ್ನುತ್ತಿದ್ದಾರೆ ಟೀಸರ್ ನೋಡಿದ ಮಂದಿ. ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಸಿತಾರಾ ಎಂಟರ್‌ಟೈನ್‌ಮೆಂಟ್ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದೆ. ಟೀಸರ್ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು