ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಪಾತ್ರಗಳೇ ನಟನ ಗುರುತು: ಅರವಿಂದ ಅಯ್ಯರ್‌

Last Updated 18 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ಯಾವುದೇ ದೃಶ್ಯ, ಸಂದರ್ಭಕ್ಕೆ ನಟನೊಬ್ಬ ಸ್ವಾಭಾವಿಕವಾಗಿ, ಮನಸ್ಸಿನಾಳದಿಂದ ಪ್ರತಿಕ್ರಿಯಿಸಬೇಕು. ಆ ಕೌಶಲವು ಸೆಟ್‌ನಲ್ಲಿ ಪ್ರಯೋಗಕ್ಕೆ ಒಳಗಾಗುತ್ತಿದ್ದಾಗಲೇ ಒಬ್ಬ ಅದ್ಭುತ ನಟ ಹುಟ್ಟುತ್ತಾನೆ...’ ಹೀಗೆ ಸಿನಿಮಾ ಸೆಟ್ಟನ್ನು ಪ್ರಯೋಗಶಾಲೆಗೆ ಹೋಲಿಕೆ ಮಾಡಿ ಮಾತನಾಡಿದವರು ನಟ ಅರವಿಂದ ಅಯ್ಯರ್‌.

ಅರವಿಂದ ಅಯ್ಯರ್ ಅವರು ಕಾರ್ತಿಕ್‌ ಸರಗೂರು ನಿರ್ದೇಶನದ ‘ಭೀಮಸೇನ ನಳಮಹಾರಾಜ’ ಹಾಗೂ ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ವೆಬ್‌ಸಿರೀಸ್‌ ‘ಹೇಟ್‌ ಯೂ ರೋಮಿಯೋ’ದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವೆರಡೂ ಬಿಡುಗಡೆಗೆ ಸಿದ್ಧವಾಗಿವೆ.

ಅರವಿಂದ ಓದಿದ್ದು ಮೆಕಾನಿಕಲ್‌ ಎಂಜಿನಿಯರಿಂಗ್‌. ಯುರೋಪ್‌ನಲ್ಲಿಅಟೊಮೋಟಿವ್‌ ಎಂಜಿನಿಯರಿಂಗ್‌ ಪದವಿಯನ್ನೂ ಮುಗಿಸಿದ್ದಾರೆ. ನಂತರ ಫೋರ್ಡ್‌, ಜಾಗ್ವಾರ್‌ ಕಂಪೆನಿಗಳಲ್ಲಿ ಕೆಲಸವೂ ಸಿಕ್ಕಿತ್ತು. ಶಾಲೆ– ಕಾಲೇಜಿನಲ್ಲಿ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರಿಗೆ ಸಿನಿಮಾ ಕುರಿತು ಆಸಕ್ತಿ ಇತ್ತು.ವಿದೇಶದಲ್ಲಿರುವಾಗ ದಿನಾ ಎರಡು– ಮೂರು ಸಿನಿಮಾಗಳನ್ನು ನೋಡುತ್ತಿದ್ದರು. ಅಡುಗೆ ಮಾಡುವಾಗ, ಸ್ನೇಹಿತರ ಜೊತೆ ಇದ್ದಾಗಲೂ ಸಿನಿಮಾ ಬಗ್ಗೆಯೇ ಮಾತು.

ನಂತರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದ ಅವರು,ರಂಗಾಯಣ ತಂಡ ಸೇರಿದರು. ಮೂರು ವರ್ಷ ಅಲ್ಲಿ ನಟನೆ ಬಗ್ಗೆ ಕಲಿತರು. ಕೆಲ ಕಿರುಚಿತ್ರಗಳಲ್ಲಿ ನಟಿಸಿದರು. ‘ಕಹಿ’ ಇವರ ಮೊದಲ ಸಿನಿಮಾ. ಆದರೆ ಅದು ಅವರಿಗೆ ಅಷ್ಟೊಂದು ಹೆಸರು ತಂದುಕೊಡಲಿಲ್ಲ.

‘ಕಿರಿಕ್‌ ಪಾರ್ಟಿ’ ಸಿನಿಮಾ ಅವಕಾಶ ನಿರ್ದೇಶಕ ಹೇಮಂತ್‌ ರಾವ್‌ ಮೂಲಕ ಅರವಿಂದ್‌ಗೆ ಸಿಕ್ಕಿತು. ‘ಅವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ವೇಳೆ ನನಗೆ ಪರಿಚಯವಾಗಿದ್ದರು. ಅವರು ಹೊಸ ಸಿನಿಮಾದ ಆಡಿಶನ್‌ ಬಗ್ಗೆ ಹೇಳಿದರು. ನಾನು ರಿಷಭ್‌ ಶೆಟ್ಟಿಯವರಿಗೆ ಫೋನ್ ಮಾಡಿ ಕತೆ ಬಗ್ಗೆ ತಿಳಿದುಕೊಂಡೆ. ಆಡಿಶನ್‌ಗೆ ಹೋದೆ. ಅಲ್ಲಿ ಕಿರಿಕ್‌ ಪಾರ್ಟಿ ಸಿನಿಮಾಕ್ಕೆ ಆಯ್ಕೆಯಾದೆ. ಆ ಸಿನಿಮಾ ನಿರೀಕ್ಷೆಗಿಂತಲೂ ಹೆಚ್ಚು ಹಿಟ್‌ ಆಯಿತು. ನನ್ನ ಪಾತ್ರವನ್ನೂ ಜನ ಗುರುತಿಸೋಕೆ ಆರಂಭಿಸಿದರು’ ಎಂದು ತಮ್ಮ ಸಿನಿ ಪಯಣದ ಆರಂಭವನ್ನು ನೆನಪಿಸಿಕೊಂಡರು.

ಈಗ ಬಿಡುಗಡೆಗೆ ಸಿದ್ಧವಾಗಿರುವ ‘ಭೀಮಸೇನ ನಳಮಹಾರಾಜ’, ನಾಯಕ ನಟನಾಗಿ ಅವರಿಗೆ ಚೊಚ್ಚಲ ಚಿತ್ರ. ‘ಇದರಲ್ಲಿ ನನ್ನದು ಅಡುಗೆ ಭಟ್ಟನ ಪಾತ್ರ.ಇದರಲ್ಲಿ ಹಲವಾರು ಪಾತ್ರಗಳಿವೆ. ಉಳಿದ ಪಾತ್ರಗಳು ಅಡುಗೆಯಲ್ಲಿನ ಹುಳಿ, ಸಿಹಿ, ಖಾರ ಹೀಗೆ ಹೀಗೆ ಒಂದೊಂದು ರಸವನ್ನು ಪ್ರತಿನಿಧಿಸುತ್ತವೆ. ಈ ಎಲ್ಲಾ ರಸಗಳನ್ನು ಒಬ್ಬ ಅಡುಗೆ ಭಟ್ಟ ಅಥವಾ ಶೆಫ್‌ ಒಟ್ಟು ಸೇರಿಸಿ, ಹೇಗೆ ರುಚಿಯಾದ ಅಡುಗೆ ಮಾಡುತ್ತಾನೋ, ಹಾಗೇ ಬೇರೆ ಬೇರೆ ಮನಸ್ಥಿತಿಯ ಜನರನ್ನು ಒಂದೇ ಕುಟುಂಬದಂತೆ ನೋಡಿಕೊಳ್ಳುವ, ಸಾಮರಸ್ಯ ಸಾಧಿಸುವ ಪಾತ್ರ ನನ್ನದು’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು.

‘ಮನೆಯಿಂದ ದೂರ ಇದ್ದಾಗ ಅಡುಗೆ ಮಾಡಿಕೊಂಡು ಅಭ್ಯಾಸ ಇತ್ತು. ಆದರೂ ಚಿತ್ರಕ್ಕಾಗಿ ಅಡುಗೆ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕಿತ್ತು. ಹಾಗಾಗಿ ಎರಡು– ಮೂರು ಹೋಟೆಲ್‌ಗಳಿಗೆ ಹೋಗಿ ಅಲ್ಲಿ ಈರುಳ್ಳಿ ಹೆಚ್ಚುವ, ಜೋಳದ ರೊಟ್ಟಿ ಮಾಡುವ, ತರಕಾರಿ ಹೆಚ್ಚುವ ಕೆಲಸ ಕಲಿತುಕೊಂಡೆ. ಎರಡು– ಮೂರು ತಿಂಗಳು ಅಲ್ಲಿ ಕೆಲಸ ಮಾಡಿ ಟ್ರೈನಿಂಗ್‌ ಪಡೆದದ್ದು ಸಿನಿಮಾದಲ್ಲಿ ಉಪಯೋಗಕ್ಕೆ ಬಂತು’ ಎಂದು ಸಿನಿಮಾ ತಯಾರಿಯನ್ನು ನೆನಪಿಸಿಕೊಂಡರು.

‘ಕಿರಿಕ್‌ ಪಾರ್ಟಿ’ ಮುಗಿದ ಕೂಡಲೇ ಅರವಿಂದ ಅಯ್ಯರ್‌ಗೆ‌ ‘ಭೀಮಸೇನ ನಳಮಹಾರಾಜ’ ಅವಕಾಶ ಸಿಕ್ಕಿತ್ತು. ಆದರೆ ‘ಚಿತ್ರದ ಅಂಡರ್‌ ವಾಟರ್ ಶೂಟಿಂಗ್‌ ಸಂದರ್ಭದಲ್ಲಿ ನಿರ್ದೇಶಕ ಕಾರ್ತಿಕ್‌ ಸರಗೂರು, ನಾಯಕಿಗೆ ಆರೋಗ್ಯ ಸಮಸ್ಯೆ ಕಾಡಿತ್ತು. ಬೇರೆ ಬೇರೆ ಕಾರಣಗಳಿಂದ ಚಿತ್ರೀಕರಣ, ಚಿತ್ರದ ಕೆಲಸ ತಡವಾಯಿತು. ಮುಂದೆ ಇಷ್ಟೊಂದು ತಡ ಆಗದಂತೆ ವರ್ಷಕ್ಕೆ ಒಂದೆರಡು ಸಿನಿಮಾಗಳಲ್ಲಾದರೂ ನಟಿಸಬೇಕು ಎಂದು ಅಂದುಕೊಂಡಿದ್ದೇನೆ’ ಎಂದು ನಗುತ್ತಾರೆ ಅವರು.ಈಗ ಚಿತ್ರ ಸಿದ್ಧವಾಗಿದ್ದು, ಲಾಕ್‌ಡೌನ್‌ನಿಂದಾಗಿ ಚಿತ್ರ ಒಟಿಟಿ ಮೂಲಕ ಬಿಡುಗಡೆಯಾಗುವ ಸಾಧ್ಯತೆಯಿದೆ.

‘ಕಿರಿಕ್‌ ಪಾರ್ಟಿ’ ನಂತರ ಬೇರೆ ಭಾಷೆಗಳ ಸಿನಿಮಾಗಳಿಂದ ಅವಕಾಶಗಳು ಅರವಿಂದ ಅಯ್ಯರ್‌ಗೆ ಬಂತು. ಆದರೆ ಚಂದನವನದಲ್ಲಿಯೇ ಗುರುತಿಸಿಕೊಳ್ಳುವುದು ಅರವಿಂದ ಅಯ್ಯರ್‌ ಗುರಿ.

‘ಹೇಟ್‌ ಯೂ ರೋಮಿಯೊ’ ವೆಬ್‌ಸಿರೀಸ್‌ನಲ್ಲಿ ನಟನೆ
ಅರವಿಂದ ಅಯ್ಯರ್‌‘ಹೇಟ್‌ ಯೂ ರೋಮಿಯೊ’ ಎಂಬ ವೆಬ್‌ಸಿರೀಸ್‌ನಲ್ಲೂ ನಾಯಕನಾಗಿ ನಟಿಸಿದ್ದಾರೆ. ಈ ಸರಣಿಯನ್ನು ಹಸೀನ್ ಖಾನ್‌, ಇಶಾಮ್‌ ಖಾನ್‌ ನಿರ್ದೇಶಿಸಿದ್ದಾರೆ. ರೊಮ್ಯಾನ್ಸ್‌ ಮತ್ತು ಹಾಸ್ಯದ ಹಳಿಯ ಮೇಲೆ ಸಾಗುವ ಕತೆ ಹೊಂದಿರುವ ಈವೆಬ್‌ ಸರಣಿಯಲ್ಲಿ ರೂಪದರ್ಶಿಯಾಗಿ ಅರವಿಂದ ನಟಿಸಿದ್ದಾರೆ. ಇದು ಈ ವರ್ಷವೇ ಬಿಡುಗಡೆಯಾಗಲಿದೆ.

‘ಭೀಮಸೇನ ನಳಮಹಾರಾಜ’ದಲ್ಲಿ ಶೀರ್ಷಿಕೆಯಲ್ಲಿ ಇರುವ ಹಾಗೇ ಭೀಮನ ಆಕಾರ, ಸ್ವಭಾವದ, ನಳನ ಹಾಗೇ ಅಡುಗೆ ಮಾಡುವ ಪಾತ್ರ. ‘ಹೇಟ್‌ ಯೂ ರೋಮಿಯೊ’ದಲ್ಲಿ ಇದಕ್ಕೆ ತದ್ವಿರುದ್ಧವಾದ ಲವ್‌ಬಾಯ್‌ ಪಾತ್ರ.

‘ಯಾವ ಪಾತ್ರ ಮಾಡುತ್ತಿದ್ದೀನೋ ಅದಕ್ಕೆ ತಕ್ಕಂತೆ ನಾನು ತಯಾರಿ ಮಾಡಿಕೊಳ್ಳುತ್ತೇನೆ. ಭೀಮಸೇನ ನಳಮಹಾರಾಜ ಸಿನಿಮಾಕ್ಕೆ ದಪ್ಪಗಾದೆ. ಆದರೆ ‘ಹೇಟ್‌ ಯೂ ರೋಮಿಯೊ’ದಲ್ಲಿ ನನ್ನದು ರೂಪದರ್ಶಿ ಪಾತ್ರ. ಅದಕ್ಕಾಗಿ ಏರಿಸಿಕೊಂಡ ತೂಕವನ್ನೇ ಇಳಿಸಿಕೊಂಡು ಸಣ್ಣಗಾದೆ. ಪಾತ್ರ ಏನು ಬೇಡುತ್ತದೋ ಅದನ್ನು ಮಾಡೋಕೆ ನಾನು ರೆಡಿ. ಹಾಗೇ ಪ್ರತಿ ಸಿನಿಮಾದಲ್ಲೂ ಭಿನ್ನ ಭಿನ್ನ ಪಾತ್ರಗಳನ್ನು ನಿರ್ವಹಿಸಬೇಕು’ ಎಂದು ಹೇಳುತ್ತಾರೆ ಅರವಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT