ಭಾನುವಾರ, ಫೆಬ್ರವರಿ 28, 2021
31 °C

ನವೆಂಬರ್‌ನಲ್ಲಿ ‘ಎಬಿಸಿಡಿ 3’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟ ವರುಣ್ ಧವನ್‌ ‘ಎಬಿಸಿಡಿ 3’ ಚಿತ್ರಕ್ಕಾಗಿ ಸಿಕ್ಸ್‌ ಪ್ಯಾಕ್‌ ಹುರಿಮಾಡಿಕೊಂಡಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ಫಸ್ಟ್‌ ಲುಕ್‌ ಪೋಸ್ಟರ್‌ನಲ್ಲೂ ಸಿಕ್ಸ್‌ ಪ್ಯಾಕ್‌ ಸೊಗಸಿನ ಪ್ರದರ್ಶನ ಮಾಡಿದ್ದಾರೆ ವರುಣ್.

‘ಎಬಿಸಿಡಿ 3’ಯಲ್ಲಿ ಪಂಜಾಬ್‌ನ ನೃತ್ಯ ಕಲಾವಿದನ ಪಾತ್ರ ವರುಣ್‌ ಅವರದ್ದು. ಅದಕ್ಕಾಗಿ ಅವರು ಪಂಜಾಬಿ ಶೈಲಿಯ ನೃತ್ಯ  ಕರಗತ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕಿ ಶ್ರದ್ಧಾ ಕಪೂರ್. ಪಾಕಿಸ್ತಾನದ ನುರಿತ ನೃತ್ಯ ಪಟುವಾಗಿ ಅವರು ಚಿತ್ರದಲ್ಲಿ ಮಿಂಚಲಿದ್ದಾರೆ.

ಫಸ್ಟ್‌ ಲುಕ್ ಪೋಸ್ಟರ್‌ನಲ್ಲಿ ವರುಣ್‌ ಫೋಟೊಗಿಂತಲೂ ಎಲ್ಲರನ್ನೂ ಸೆಳೆದಿರುವುದು ಚಿತ್ರದ ಬಿಡುಗಡೆ ದಿನಾಂಕ. ಇದೇ ವರ್ಷ ನವೆಂಬರ್‌ 8ರಂದು ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ನಲ್ಲೇ ಪ್ರಕಟಿಸಲಾಗಿದೆ.

ಕರಣ್‌ ಜೋಹರ್‌ ನಿರ್ದೇಶನದ ‘ಕಳಂಕ್‌’ ಚಿತ್ರೀಕರಣವನ್ನು ಈಗಷ್ಟೇ ಮುಗಿಸಿರುವ ವರುಣ್‌ ವಿಶ್ರಾಂತಿ ತೆಗೆದುಕೊಳ್ಳದೆ ರೆಮೊ ಡಿಸೋಜಾ ಕ್ಯಾಂಪ್‌ಗೆ ಹಾಜರಾಗಿದ್ದಾರೆ. ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಸಾಮಾಜಿಕ ಜಾಲ ತಾಣಗಳಿಗೆ ಹಂಚಿಕೊಂಡ ವರುಣ್‌ ‘ಹೆಸರಿಗೆ ಒಂದು ಹೆಜ್ಜೆ ಹತ್ತಿರ, 2019ರ ರೂಲ್ಸ್‌ ಮುರಿಯುವವರು ಬರುತ್ತಿದ್ದಾರೆ’ ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ.

ಇದೇ ವಾರ ಲಂಡನ್‌ನಲ್ಲಿ ಚಿತ್ರೀಕರಣ  ಶುರುವಾಗಲಿದೆ. ವರುಣ್‌, ಶ್ರದ್ಧಾ ಅಲ್ಲದೆ, ಪ್ರಭುದೇವ್‌, ನೋರಾ ಫತೇಹಿ ಮತ್ತು ಸೋನಂ ಬಜ್ವಾ ಲಂಡನ್‌ನ ವಿವಿಧ ತಾಣಗಳಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. 

ಕಳೆದ ವಾರ ಅಮೃತಸರದಲ್ಲಿ ನೃತ್ಯಾಭ್ಯಾಸದಲ್ಲಿ ತೊಡಗಿದ್ದ ವೇಳೆ ವರುಣ್‌ ಮಂಡಿಗೆ ಗಾಯವಾಗಿತ್ತು. ಲಂಡನ್‌ಗೆ ಹೊರಡುವುದಕ್ಕೂ ಮೊದಲು ಅವರು ಮಂಡಿನೋವಿಗೆ ಚಿಕಿತ್ಸೆ ಪಡೆಯಬೇಕಿದೆ.

ರೆಮೊ ಡಿಸೋಜಾ ನಿರ್ದೇಶನದ ‘ಎಬಿಸಿಡಿ 3’, ಚಿತ್ರೀಕರಣಕ್ಕೂ ಮೊದಲೇ ಸಾಕಷ್ಟು ಸುದ್ದಿ ಮತ್ತು ಚರ್ಚೆಯನ್ನು ಹುಟ್ಟುಹಾಕಿದ ಚಿತ್ರ. ಇದಕ್ಕೆ ಕಾರಣ ‘ಎಬಿಸಿಡಿ’ ಸರಣಿಯ ಮೂರನೇ ಭಾಗದಲ್ಲಿ ಮುಂಚೂಣಿ ಪಾತ್ರಗಳಲ್ಲಿ ಯಾವ ನಟರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ. ಸಲ್ಮಾನ್‌ ಖಾನ್‌ ಹೆಸರು ಒಂದು ಹಂತದಲ್ಲಿ ಅಂತಿಮಗೊಂಡಿದ್ದರೂ ಆ ಅವಕಾಶ ವರುಣ್‌ ಧವನ್‌ ಪಾಲಾಗಿತ್ತು. 

ಮತ್ತೊಂದೆಡೆ, ‘ಭಾರತ್‌’ನಲ್ಲಿ ಸಲ್ಮಾನ್‌ ಖಾನ್‌ ಜೊತೆ ಚಿತ್ರೀಕರಣದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ನೆಪವೊಡ್ಡಿ ಕತ್ರಿನಾ ಕೈಫ್‌ ನೀಡಿದ್ದ ಕಾಲ್‌ಶೀಟ್‌ ಅನ್ನು ಕೈಬಿಟ್ಟರು. ಮಹತ್ವದ ಚಿತ್ರಗಳಲ್ಲಿ ಒಂದಾದ ಎಬಿಸಿಡಿ 3ಯಲ್ಲಿ ನಾಯಕನಟಿಯಾಗಿ ನಟಿಸಬೇಕು ಎಂದು ಬಾಲಿವುಡ್‌ ಮತ್ತು ಕಾಲಿವುಡ್‌ನ ಕೆಲವು ನಟಿಯರು ಹಾತೊರೆದಿದ್ದರು. ಆದರೆ ಶ್ರದ್ಧಾ ಕಪೂರ್‌ ತಮ್ಮ ಬಿಡುವಿಲ್ಲದ ಶೆಡ್ಯೂಲ್‌ಗಳ ಮಧ್ಯೆಯೂ ರೆಮೊ ಡಿಸೋಜಾ ಅವರಿಗೆ ಕಾಲ್‌ಶೀಟ್‌ ನೀಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು