ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಭೀತಿ | ಬರುವರಯ್ಯ ಜನ ಸಿನಿಮಂದಿರಕೆ...

Last Updated 9 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸಿನಿಮಾ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು ರಾಜ್ಯದಲ್ಲಿ ಬಾಗಿಲು ಮುಚ್ಚಿ ವಾರಗಳೇ ಕಳೆದಿವೆ. ಏಪ್ರಿಲ್‌ 15ರ ನಂತರ ಸಿನಿಮಾ ಪ್ರದರ್ಶನ ಹಾಗೂ ಹೊಸ ಸಿನಿಮಾಗಳ ಬಿಡುಗಡೆ ಶುರು ಆಗಬಹುದೇ ಎಂಬ ಪ್ರಶ್ನೆಗೆ ಖಚಿತ ಉತ್ತರ ಇನ್ನೂ ಸಿಕ್ಕಿಲ್ಲ. ಈ ನಡುವೆ, ‘ಜನ ಮನೆಯಲ್ಲೇ ಕುಳಿತು ಒಟಿಟಿ ವೇದಿಕೆಗಳ ಮೂಲಕ ಒಳ್ಳೆಯ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಾರೆ. ಸಿನಿಮಾ ಮಂದಿರಗಳ ಬಾಗಿಲು ತೆರೆದ ನಂತರವೂ, ಜನ ಮನೆ ಬಿಟ್ಟು ಬರಲಿಕ್ಕಿಲ್ಲ’ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

ಜನ ಸಿನಿಮಾ ಮಂದಿರಗಳಿಗೆ ಬರುವಂತೆ ಮಾಡಬೇಕು ಎಂಬ ಗುರಿಯೊಂದಿಗೆ ಪಿವಿಆರ್ ಸಿನಿಮಾಸ್ ಕಂಪನಿಯು, ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದೆ. ಹಾಗಾದರೆ, ಲಾಕ್‌ಡೌನ್‌ ಮುಗಿದ ನಂತರ ಜನ ಸಿನಿಮಾ ಮಂದಿರಗಳಿಗೆ ಮರಳುವರೇ? ‘ಖಂಡಿತ ಬರುತ್ತಾರೆ’ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ ಕೆಲವು ನಿರ್ದೇಶಕರು, ನಿರ್ಮಾಪಕರು.

‘ಸಿನಿಮಾ ಮಾಧ್ಯಮವು ಈ ರೀತಿಯ ಸಂಕಷ್ಟಗಳನ್ನು ಹಿಂದೆಯೂ ಕಂಡಿದೆ. ಅವುಗಳನ್ನೆಲ್ಲ ದಾಟಿ ಬಂದಿದೆ ಕೂಡ. ಕತ್ತಲೆಯ ಕೋಣೆಯಲ್ಲಿ ಕುಳಿತು ಸಿನಿಮಾ ವೀಕ್ಷಿಸುವ ಅನುಭವಕ್ಕೆ ಯಾವ ಒಟಿಟಿ ವೇದಿಕೆಯೂ ಸಾಟಿಯಲ್ಲ’ ಎಂದು ಹೇಳುತ್ತಾರೆ ನಿರ್ದೇಶಕ ಹೇಮಂತ್ ಎಂ. ರಾವ್.

ಸಿನಿಮಾ ಮಂದಿರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟ ಎನ್ನುವ ಅಭಿಪ್ರಾಯ ಇದೆ. ‘ಈ ಕಾರಣದಿಂದಾಗಿ ಜನ ಸಿನಿಮಾ ಮಂದಿರಗಳಿಗೆ ಬರಲು ಹಿಂಜರಿಯಬಹುದೇ’ ಎನ್ನುವ ಪ್ರಶ್ನೆಯನ್ನು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಮುಂದಿರಿಸಿದಾಗ, ‘ಹಾಗಾದರೆ ಮದುವೆ ಕಾರ್ಯಕ್ರಮಗಳಿಗೆ, ಜಾತ್ರೆಗಳಿಗೆ, ಐಪಿಎಲ್‌ ಪಂದ್ಯಗಳಿಗೆ ಹೋಗುವುದನ್ನು ಕೂಡ ಜನ ನಿಲ್ಲಿಸಿಬಿಡುತ್ತಾರೆಯೇ’ ಎನ್ನುವ ಮರುಪ್ರಶ್ನೆ ಹಾಕಿದರು.

‘ಜಗತ್ತು ಹಿಂದೆಯೂ ಇಂತಹ ಕಷ್ಟಗಳನ್ನು ಕಂಡಿದೆ. ಅವನ್ನು ಆಯಾ ಕಾಲಘಟ್ಟಗಳ ಜನ ಎದುರಿಸಿದ್ದಾರೆ. ಈಗ ಎದುರಾಗಿರುವಂತಹ ಪರಿಸ್ಥಿತಿ ತಿಳಿಯಾದ ನಂತರ ಜನರಿಗೆ ಹೊರಗಡೆ ಹೋಗಬೇಕು ಎಂಬ ಆಸೆ ಹೆಚ್ಚಾಗುವುದೂ ಇದೆ. ಏಕತಾನತೆಯನ್ನು ಹೋಗಲಾಡಿಸುವ ಮಾರ್ಗಗಳಲ್ಲಿ ಹೊರಗಡೆ ಹೋಗಿ ಸಿನಿಮಾ ವೀಕ್ಷಿಸುವುದೂ ಒಂದು. ಮನುಷ್ಯನಿಗೆ ಮನುಷ್ಯತ್ವವನ್ನು ನೆನಪು ಮಾಡಿಕೊಡುವ ಮಾಧ್ಯಮ ಕೂಡ ಹೌದು ಸಿನಿಮಾ. ಅದನ್ನು ಮನುಷ್ಯ ಬಿಟ್ಟುಕೊಡುವುದಿಲ್ಲ’ ಎನ್ನುವ ವಿವರಣೆ ನೀಡಿದರು ರಾಜ್.

ಕೊರೊನಾ ಭೀತಿ ನಿವಾರಣೆ ಆಗುವವರೆಗೆ ಸಿನಿಮಾ ಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಿಲುವು ನಿರ್ಮಾಪಕ ಜಾಕ್ ಮಂಜು ಅವರದ್ದು. ‘ಈಗ ಎಲ್ಲ ಸಿನಿಮಾ ಮಂದಿರಗಳಲ್ಲೂ, ಎಲ್ಲ ಸಿನಿಮಾಗಳ ಪ್ರದರ್ಶನದ ವೇಳೆಯಲ್ಲೂ ಹೌಸ್‌ಫುಲ್‌ ಇರುವುದಿಲ್ಲ. ಹಾಗಾಗಿ, ಆರಂಭಿಕ ಹೆಜ್ಜೆಯಾಗಿ, ಸಿನಿಮಾ ಮಂದಿರಗಳಲ್ಲಿ ಮೂರನೆಯ ಒಂದರಷ್ಟು ಆಸನಗಳ ಟಿಕೆಟ್‌ ಮಾತ್ರ ಮಾರಾಟ ಮಾಡಬೇಕು. ಅಂದರೆ, 600 ಆಸನಗಳ ಸಾಮರ್ಥ್ಯದ ಚಿತ್ರಮಂದಿರದವರು 200 ಜನರಿಗೆ ಮಾತ್ರ ಟಿಕೆಟ್ ಮಾರಬೇಕು. ವೀಕ್ಷಕರ ನಡುವೆ ಎರಡು ಆಸನಗಳ ಅಂತರ ಇರುವಂತೆ ನೋಡಿಕೊಳ್ಳಬೇಕು.ಇದು ಸಾಮಾಜಿಕ ಅಂತರವನ್ನು ಖಾತರಿಪಡಿಸುತ್ತದೆ.ಕೊರೊನಾ ಭಯ ತುಸು ಕಡಿಮೆ ಆದ ನಂತರ, ಈ ನಿಯಮ ಸಡಿಲಿಸಿಕೊಳ್ಳಬಹುದು’ ಎನ್ನುವುದು ಮಂಜು ಅವರ ಮಾತು.

‘ಒಟಿಟಿ ಭಯ ಬೇಡ’: ‘ಒಟಿಟಿ ಮೂಲಕ ಸಿನಿಮಾ ನೋಡುವ ಸಂಸ್ಕೃತಿಗೆ ಜನ ಹೊಂದಿಕೊಳ್ಳುತ್ತ ಇದ್ದಾರೆ ಎಂಬ ಮಾತು ಇದೆ. ಆದರೆ, ಜನರಿಗೆ ಮನೆಯೊಳಗೇ ಇರುವುದಕ್ಕೆ ಆಗುವುದಿಲ್ಲ. ಅವರು ಹೊರಗಡೆ ಬರುತ್ತಾರೆ. ಜನ ಸಿನಿಮಾ ಮಂದಿರಗಳಿಗೆ ಬರುವುದು ಸಿನಿಮಾ ನೋಡಲು ಮಾತ್ರವೇ ಅಲ್ಲ. ಹೊರಗೆ ಬಂದು, ಎಲ್ಲರ ಜೊತೆ ಬೆರೆಯಬೇಕು ಎಂಬ ಉದ್ದೇಶದಿಂದಲೂ ಅವರು ಸಿನಿಮಾ ಮಂದಿರಗಳಿಗೆ ಬರುತ್ತಾರೆ. ಹಾಗಾಗಿ, ಸಿನಿಮಾ ಮಂದಿರಗಳಿಗೆ ಜನರ ಕೊರತೆಯೇನೂ ಆಗುವುದಿಲ್ಲ’ ಎಂದು ಮಂಜು ಹೇಳಿದರು.

ಒಟಿಟಿ ವೇದಿಕೆಗಳ ಕುರಿತು ಭಯ ಬೇಡ ಎನ್ನುವ ಮಾತನ್ನು ರಾಜ್ ಅವರೂ ಹೇಳುತ್ತಾರೆ. ‘ಒಟಿಟಿ ಎಂಬುದು ಒಳ್ಳೆಯ ವೇದಿಕೆ ಹೌದು. ಆದರೆ ಅವು ಎಲ್ಲರ ಕೈಗೂ ಸಿಕ್ಕಿವೆ ಎನ್ನುವ ಭಾವನೆಯಲ್ಲಿ ನಾವು ಇದ್ದೇವೆ. ಮಧ್ಯಮ ವರ್ಗದವರಿಗೆ ಅದು ದಕ್ಕಿರಬಹುದು. ಹಾಗಂತ, ಮಧ್ಯಮ ವರ್ಗವೊಂದೇ ಎಲ್ಲವೂ ಅಲ್ಲ. ಕುಟುಂಬ ಸಮೇತ ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳಿಗೆ ಬರುವವರು ಬಹಳಷ್ಟು ಜನ ಇದ್ದಾರೆ. ಎಲ್ಲರೂ ಒಟ್ಟಾಗಿ ಸಿನಿಮಾ ವೀಕ್ಷಿಸಿದಾಗ ಸಿಗುವ ಖುಷಿಯನ್ನು ಒಟಿಟಿ ನೀಡಲು ಸಾಧ್ಯವಿಲ್ಲ. ಒಟಿಟಿ ಇರುವುದು ಖಾಸಗಿ ವೀಕ್ಷಣೆಗೆ ಮಾತ್ರ. ಒಟಿಟಿಗಳು ಸಿನಿಮಾ ಮಂದಿರಗಳಿಗೆ ಪರ್ಯಾಯವಲ್ಲ; ಅವು ಪೂರಕ ವೇದಿಕೆಗಳು ಮಾತ್ರ’ ಎಂಬ ಅಭಿಪ್ರಾಯ ನೀಡಿದರು ರಾಜ್.

ಒಟಿಟಿ ವೇದಿಕೆಗಳಾದ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ ಮತ್ತು ನೆಟ್‌ಫ್ಲಿಕ್ಸ್‌ ವೀಕ್ಷಣೆಯಲ್ಲಿ ಶೇಕಡ 82.63ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ವರದಿಯೊಂದು ಹೇಳಿದೆ. ಆದರೆ, ‘ಸಿನಿಮಾ ಮಂದಿರಗಳು ಬಾಗಿಲು ತೆರೆದ ನಂತರ, ಜನ ಅಲ್ಲಿಗೆ ಬರುತ್ತಾರೆ’ ಎನ್ನುವ ನಂಬಿಕೆ ಮಂಜು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT