ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕಿಂಗ್‌ ಸ್ಟಾರ್‌ ಯಶ್‌ ಸಂದರ್ಶನ: ಕೆ.ಜಿ.ಎಫ್‌... ಕರ್ನಾಟಕದ ಹೆಮ್ಮೆ

Last Updated 7 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಚಂದನವನದ ಛಾಪನ್ನು ಅಂತರರಾಷ್ಟ್ರೀಯಮಟ್ಟಕ್ಕೆ ಒಯ್ದು ಚಿತ್ರಜಗತ್ತು ಇತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್‌. ಅಂತಹ ಚಿತ್ರದ ಚಾಪ್ಟರ್‌–2 ಬಿಡುಗಡೆಯ ಹೊಸ್ತಿನಲ್ಲಿರುವಾಗ ‘ರಾಕಿಭಾಯ್‌’ ಯಶ್‌ ಅವರು ಏನೆನ್ನುತ್ತಾರೆ ಎಂಬ ಕುತೂಹಲ ಅಭಿಮಾನಿಗಳದ್ದು. ಅವರ ಜತೆಗಿನ ಮಾತುಕತೆಯ ಝಲಕ್‌ ಇಲ್ಲಿದೆ.

***

8 ವರ್ಷಗಳ ಕೆಜಿಎಫ್‌ ‘ಗಣಿಗಾರಿಕೆ’ ಹೇಗಿತ್ತು?

ಈ ಪ್ರಯಾಣ ತುಂಬಾ ಚೆನ್ನಾಗಿತ್ತು. ಆ ಚಿತ್ರದ ಕುರಿತು ಖುಷಿಯಿದೆ. ಜನ ಸಹ ಮೆಚ್ಚಿಕೊಂಡಿದ್ದಾರೆ. ನಾವು ಮಾನಸಿಕವಾಗಿ ಹಾಗೂ ಎಲ್ಲಾ ರೀತಿಯಲ್ಲಿ ಬೆಳೆದಿದ್ದೇವೆ. ನೆನಪುಗಳೇ ಮನುಷ್ಯನ ಆಸ್ತಿ ಅಲ್ಲವೇ?

‘ರಾಕಿ ಭಾಯ್‌’ ಆಗಿ ಬದಲಾಗಲು ತಯಾರಿ ಹೇಗಿತ್ತು?

ತಯಾರಿ ಎಂದು ಏನೂ ಇಲ್ಲ. ಯಾವಾಗಲೂ ತಯಾರಾಗಿಯೇ ಇರುತ್ತೇವೆ. ಒಳ್ಳೆಯ ಕಥೆ, ನಿರ್ದೇಶಕರು ಸಿಗಬೇಕು ಅಷ್ಟೆ. ಈಗ ನನಗೆ ಸಿಕ್ಕಿದ್ದು ಪ್ರಶಾಂತ್‌ ನೀಲ್‌ ಅಂತಹ ಅದ್ಭುತ ನಿರ್ದೇಶಕ. ಮೊದಲ ಹಂತದಿಂದಲೂ ಒಟ್ಟಿಗೇ ಕೂತು ಕೆಲಸ ಮಾಡಬೇಕು. ಕಥೆಯ ಹಂತಗಳು, ಆಯಾಮಗಳು ಇವೆಲ್ಲವನ್ನೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ನಟನೆ ಅನ್ನುವುದು ಕೊನೆಗೆ ಬರುತ್ತದೆ. ಎಲ್ಲರ ಕೊಡುಗೆಯ ಫಲವೇ ‘ರಾಕಿ ಭಾಯ್‌’. ಈ ಪಾತ್ರ ಹೇಗಿರಬೇಕು ಅನ್ನುವುದನ್ನು ನನ್ನ ಮತ್ತು ನಿರ್ದೇಶಕರ ಚಿಂತನೆಗಳು ಸೇರಿ ನಿರ್ಧರಿಸಿವೆ.

ಕೆಜಿಎಫ್‌ 1 ಮತ್ತು 2 ಅವಧಿಯಲ್ಲಿ ತಾವೇಕೆ ಹೊಸ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ?

ಒಂದು ಚಿತ್ರಕ್ಕೆ ಬದ್ಧನಾದ ಮೇಲೆ ಅದನ್ನು ಪೂರ್ಣಗೊಳಿಸುವವರೆಗೆ ಹೊಸ ಯೋಜನೆಯನ್ನು ಒಪ್ಪಿಕೊಂಡಿಲ್ಲ. ಏಕೆಂದರೆ ಗಮನ ಬದಲಾಗಬಾರದು. ಹಾಗೇನಾದರೂ ಮಾಡಿದರೆ ಅದು ಈ ಚಿತ್ರದ ಮೇಲೆ ಪರಿಣಾಮ ಬೀರುತ್ತದೆ.

ಈ ಚಿತ್ರದಲ್ಲಿ ಬಾಲಿವುಡ್‌ನ ದಿಗ್ಗಜರ ಜೊತೆ ಅಭಿನಯಿಸಿದ್ದೀರಿ. ಆ ಒಡನಾಟ ಹೇಗಿತ್ತು?

ಅದ್ಭುತವಾದ ಅನುಭವ ಅದು. ಇಲ್ಲಿ ಯಾರೂ ಹೆಚ್ಚು ಅಥವಾ ಕಡಿಮೆ ಎಂದು ಇಲ್ಲ. ಆ ಪಾತ್ರ ಎಷ್ಟು ದೊಡ್ಡದು ಎಂಬುದಷ್ಟೇ ಮುಖ್ಯ. ಕಳೆದ ಬಾರಿ ರಾಮ್‌ ಅವರು ಗರುಡನ ಪಾತ್ರ ಮಾಡಿದ್ದರು. ಅವರು ನನ್ನ ಜೊತೆಯಲ್ಲಿದ್ದವರು. ಆದರೆ, ಆ ಪಾತ್ರದ ಜೊತೆ ನೋಡಿದಾಗ ಅದರ ಮೌಲ್ಯವೇ ಬೇರೆ. ದಿಗ್ಗಜ ನಟರಿಂದ ಶಿಸ್ತು, ಬದ್ಧತೆ ಕಲಿಯುವುದು ಬೇಕಾದಷ್ಟಿರುತ್ತದೆ. ಒಳ್ಳೆಯ ಕಲಾವಿದರ ಜೊತೆಗಿದ್ದಾಗ ನಮ್ಮ ಕೆಲಸಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ.

ಕೆಜಿಎಫ್‌ ಚಾಪ್ಟರ್ –2 ಪ್ರಚಾರ ಉತ್ತರ ಭಾರತದತ್ತ ಹೆಚ್ಚು ಕೇಂದ್ರೀಕರಿಸುತ್ತಿದೆಯೇ?

ಹಾಗೇನಿಲ್ಲ. ಇದು ಆರಂಭವಾದದ್ದು ಕನ್ನಡದಲ್ಲೇ. ಉತ್ತರದತ್ತ ತಿರುಗಾಡಿದ್ದು ಒಂದು ಮಾರ್ಗ ಅಷ್ಟೆ. ಅಲ್ಲೆಲ್ಲಾ ಸುತ್ತಾಡಿ ಮತ್ತೆ ನಮ್ಮ ಮನೆಯಲ್ಲಿ ಕುಳಿತು ಮಾತನಾಡುತ್ತೇವೆ.

ಕೆಜಿಎಫ್‌ ಚಿತ್ರರಂಗಕ್ಕೆ ತೂಕ ಕೊಟ್ಟಿರುವ ಹೊತ್ತಿನಲ್ಲಿ ಯಶ್‌ ಅವರಿಗೆ ಅನಿಸುವುದೇನು?

ಇದೊಂದು ಕನಸು. ಜನ ನನ್ನ ಪ್ರತಿಯೊಂದು ಸಿನಿಮಾವನ್ನು ಗೆಲ್ಲಿಸಿ ಗುರುತಿಸಿದ ಮೇಲೆ ನಾನು ಆ ಉದ್ಯಮದಲ್ಲಿದ್ದುಕೊಂಡು ಆ ಉದ್ಯಮಕ್ಕೆ ಬೆಲೆ ತರುವ ಕೆಲಸ ಮಾಡಲೇಬೇಕು. ಉದ್ಯಮ ಖುಷಿಯಾಗಿರುವುದು ನೋಡಿ ನನಗೂ ಒಂದು ಶಕ್ತಿ ಬರುತ್ತದೆ. ಈ ಚಿತ್ರವನ್ನು ನಾನು ಕರ್ನಾಟಕದ ಹೆಮ್ಮೆ ಎಂದೇ ಕರೆಯುತ್ತೇನೆ. ನಟನಾಗಿ ಮಾತ್ರವೇ ಅಲ್ಲ. ಒಬ್ಬ ಕನ್ನಡಿಗನಾಗಿ ನನಗೆ ಹೆಮ್ಮೆ ಇದೆ.

ಕೆಜಿಎಫ್‌–2 ನಿಮ್ಮ ಬದುಕಿಗೆ ನೀಡಬಹುದಾದ ತಿರುವು ಏನು?

ಅಂಥದ್ದೇನೂ ಇಲ್ಲ. ನೀವು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ಹೋಗಲು ಏನು ತಯಾರಿ ಮಾಡಿದ್ದೀರಿ? ಶ್ರಮಪಟ್ಟಿದ್ದೀರಿ ಎನ್ನುವುದು ಮುಖ್ಯ. ಇವೆಲ್ಲವೂ ಒಂದು ಇಂಧನ ಇದ್ದಂತೆ. ಹಾಗೆ ಹೋಗುತ್ತಿದ್ದಾಗ ಜನ ನಮಗೆ ದಾರಿ ತೋರಿಸುತ್ತಾರೆ.

‘ರಾಕಿ ಭಾಯ್‌’ ಒಬ್ಬರದೇ ಅಬ್ಬರವೇ ಅಥವಾ ನಾಯಕಿಗೂ ಜಾಗ ಇದೆಯೇ?

ಹಾಗೇನಿಲ್ಲ, ಕಥೆ ಏನನ್ನು ಹೇಳುತ್ತದೆ, ಯಾವ ವಿಷಯವನ್ನು ಕೇಂದ್ರೀಕರಿಸುತ್ತದೆ ಎನ್ನುವುದನ್ನು ನೋಡಿಕೊಂಡು ಅದರ ಪ್ರಕಾರವೇ ಎಲ್ಲ ಪಾತ್ರಗಳಿಗೆ ಆದ್ಯತೆ ಕೊಟ್ಟಿದ್ದೇವೆ. ಇಲ್ಲಿರುವುದು ರಾಕಿ ಎನ್ನುವ ವ್ಯಕ್ತಿಯ ಕಥೆ. ಇಲ್ಲಿ ರಾಕಿ ಮತ್ತು ಕೆಜಿಎಫ್‌ ಅನ್ನುವ ಜಾಗ ಎರಡೇ ಪಾತ್ರಗಳು ಇರುವುದು. ಮಹಾಭಾರತವನ್ನು ಯಾವುದೇ ಪಾತ್ರ ಕೇಂದ್ರೀಕರಿಸಿ ಹೇಳಬಹುದಲ್ವಾ ಹಾಗೆ.

‘ಯಶೋಮಾರ್ಗ’ ಹೇಗಿದೆ?

ಯಶೋಮಾರ್ಗ ಫೌಂಡೇಷನ್‌ನ ಕೆಲಸಗಳೂ ತುಂಬಾ ಚೆನ್ನಾಗಿ ಸಾಗಿವೆ. ಹಲವಾರು ಜನರಿಗೆ ಸ್ಫೂರ್ತಿ ಕೊಟ್ಟಿದೆ. ಮುನ್ನಡೆಸುತ್ತಿದ್ದೇವೆ.

ಅಭಿಮಾನಿಗಳಿಗೆ ಏನು ಹೇಳುತ್ತೀರಿ?

ನಿಮ್ಮ ಜೀವನಕ್ಕೆ ಬೇಕಾದ ಹಾಗೆ ಸೂಪರ್‌ ಆಗಿ ಇರಿ. ಒಳ್ಳೆಯ ಗುರಿ ಇರಿಸಿಕೊಂಡು ಸಾಧಿಸುವ ರೀತಿ ಮುನ್ನಡೆಯಿರಿ. ನನ್ನ ಕಷ್ಟಸುಖದಲ್ಲಿ ಇರುವವರು ಅವರೇ. ನನ್ನ ಬಂಧುಗಳು ಎಂದರೆ ಅಭಿಮಾನಿಗಳೇ. ಸಿನಿಮಾ ನೋಡಿ. ಖುಷಿಪಡಿ, ಖುಷಿಯಾಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT