ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Year Ender 2022 | ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡಿದ ಕನ್ನಡದ 5 ಸಿನಿಮಾಗಳು

2022ರಲ್ಲಿ ರಾಜ್ಯ, ದೇಶದ ಗಡಿ ಮೀರಿ ಸದ್ದು ಮಾಡಿದ ಕನ್ನಡದ ಚಿತ್ರಗಳು
Last Updated 29 ಡಿಸೆಂಬರ್ 2022, 7:23 IST
ಅಕ್ಷರ ಗಾತ್ರ

2020ರ ಬಳಿಕ ಕೋವಿಡ್‌ ಭಯ ಇಲ್ಲದ ‘ಮೊದಲ ವರ್ಷ‘ ಅಂತ್ಯವಾಗುತ್ತಿದೆ. ಹಲವು ಏಳು–ಬೀಳು, ಸಿಹಿ–ಕಹಿಗಳನ್ನು ಉಣಬಡಿಸಿ 2022 ವಿದಾಯದ ಬಾಗಿಲಿನಲ್ಲಿ ನಿಂತಿದೆ. ಕೋವಿಡ್‌ನಿಂದಾಗಿ ಸರ್ವ ವಲಯಗಳೂ ನೆಲಕಚ್ಚಿದಾಗ, 2022ನೇ ಇಸವಿಯು ಆಶಾದಾಯಕ ವರ್ಷವಾಗಿ ನಮ್ಮ ಮುಂದೆ ಬಂದು ನಿಂತಿತ್ತು. ಅದರಲ್ಲೂ ತತ್ತರಿಸಿ ಹೋಗಿದ್ದ ಸಿನಿಮಾ ವಲಯಕ್ಕೆ 2022ನೇ ಇಸವಿ ಮತ್ತೆ ಉಸಿರು ನೀಡಿತ್ತು. ಈ ವರ್ಷ ತೆರೆಕಂಡ ಕನ್ನಡದ ಸಿನಿಮಾಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದವು. ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡಿದ ಕನ್ನಡದ ಪ್ರಮುಖ ಸಿನಿಮಾಗಳ ವಿವರ ಇಲ್ಲಿದೆ.


1. ಕೆ.ಜಿ.ಎಫ್‌ ಚಾಪ್ಟರ್–2

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ, ಪ್ರಶಾಂತ್ ನೀಲ್‌ ನಿರ್ದೇಶನದ ಕೆ.ಜಿ.ಎಫ್‌ ಚಾಪ್ಟರ್–2 ಭಾರತೀಯ ಚಿತ್ರರಂಗದಲ್ಲಿ ಹೊಸ ಛಾಪನ್ನು ಮೂಡಿಸಿತು. ಪ್ಯಾನ್‌ ಇಂಡಿಯಾ ಸಿನಿಮಾವಾಗಿ ತೆರೆಕಂಡ ಕನ್ನಡದ ಈ ಸಿನಿಮಾ, ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಸಿ ದಾಖಲೆ ಬರೆಯಿತು. ಸಿನಿಮಾದ ಮೇಕಿಂಗ್‌, ಡೈಲಾಗ್‌ಗಳು, ಹಾಡುಗಳು ಜನರ ಮನಸೂರೆಗಳಿಸಿದವು. ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರದಲ್ಲಿ ಸಂಜಯ್‌ ದತ್‌, ರವೀಣ ಟಂಡನ್‌, ಶ್ರೀನಿಧಿ ಶೆಟ್ಟಿ, ಪ್ರಕಾಶ್‌ ರಾಜ್‌, ಅರ್ಚನಾ ಜೋಯಿಸ್, ಅಚ್ಯುತ್‌ ಕುಮಾರ್‌, ರಾವ್ ರಮೇಶ್‌, ಈಶ್ವರಿ ರಾವ್‌, ಮಾಳವಿಕ ಅವಿನಾಶ್‌ ಹಾಗೂ ವಶಿಷ್ಠ ಸಿಂಹ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.

2. ಕಾಂತಾರ

‘ಸಾಮಾನ್ಯ‘ ಸಿನಿಮಾವಾಗಿ ತೆರೆಕಂಡು, ಬಳಿಕ ಸೂಪರ್‌ ಹಿಟ್‌ ಆದ ಅಪರೂಪದ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದು. ಕರ್ನಾಟಕದ ಕರಾವಳಿಯ ತಳ ಸಮುದಾಯವೊಂದರ ಜೀವನ ಶೈಲಿಯನ್ನು ಸರಳವಾಗಿ ಪರದೆಯಲ್ಲಿ ತೋರಿಸಿದ ಸಿನಿಮಾಗೆ, ಅಭೂತ‍ಪೂರ್ವ ಪ್ರತಿಕ್ರಿಯೆ ಲಭಿಸಿತು. ಈ ಸಿನಿಮಾದ ಕ್ಲೈಮಾಕ್ಸ್‌ ಹಾಗೂ ಹಾಡುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯ್ತು. ತುಳುನಾಡಿನ ಸಂಸ್ಕೃತಿಗಳಾದ ಭೂತಾರಾಧನೆ, ಕಂಬಳ ಮುಂತಾದವುಗಳನ್ನು ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿತ್ತು.

ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಈ ಸಿನಿಮಾವು, ಹೊಂಬಾಳೆ ಫಿಲಂಸ್‌ ನಿರ್ಮಾಣದಲ್ಲಿ ತಯಾರಾಗಿತ್ತು. ಸಪ‍್ತಮಿ ಗೌಡ, ಪ್ರಮೋದ್‌ ಶೆಟ್ಟಿ, ಅಚ್ಯುತ್‌ ಕುಮಾರ್‌ ಮುಂತಾದವರು ಅಭಿನಯಿಸಿದ್ದರು. ಸೆಪ್ಟೆಂಬರ್‌ 30ರಂದು ತೆರೆಗೆ ಬಂದ ಸಿನಿಮಾ ಈಗಲೂ ಥಿಯೇಟರ್‌ಗಳಲ್ಲಿ ಲಭ್ಯ ಇರುವುದು ವಿಶೇಷ. ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಈ ಸಿನಿಮಾ ಗಳಿಸಿದೆ.

3. 777 ಚಾರ್ಲಿ

ಸಾಹಸ, ಹಾಸ್ಯಮಯ ಸಿನಿಮಾ ಆಗಿರುವ 777 ಚಾರ್ಲಿ, ಶ್ವಾನ ಪ್ರೇಮಿಗಳ ಮೆಚ್ಚುಗೆ ಪಾತ್ರವಾಯ್ತು. ಸಿನಿಮಾ ತೆರೆ ಕಂಡ ಬಳಿಕ ಬೀದಿ ನಾಯಿಗಳ ರಕ್ಷಣೆ, ಶ್ವಾನಗಳ ಬಗೆಗಿನ ಕಾಳಜಿ, ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಹಲವು ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ, ಎಲ್ಲಾ ಭಾಷಿಕರಿಂದ ಮೆಚ್ಚುಗೆ ಪಡೆದುಕೊಂಡಿತು. ಕಿನ್ನರಾಜ್‌ ನಿರ್ದೇಶನದ, ಪರಮ್‌ವಹ್‌ ನಿರ್ಮಾಣದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದರು. ಸಂಗೀತ ಶೃಂಗೇರಿ, ರಾಜ್‌ ಬಿ. ಶೆಟ್ಟಿ, ದಾನೀಶ್‌ ಸೇಠ್, ಬಾಬಿ ಸಿಂಹ ಬಣ್ಣ ಹಚ್ಚಿದ್ದರು.

4. ಜೇಮ್ಸ್‌

ಕರ್ನಾಟಕ ರತ್ನ, ದಿವಂಗತ ನಟ ಪುನೀತ್‌ ರಾಜ್‌ಕುಮಾರ್ ಅಭಿನಯದ ಈ ಚಿತ್ರ ಕನ್ನಡ ಪ್ರೇಕ್ಷಕರು ಎದೆಗೆ ಅಪ್ಪಿಕೊಂಡು ವೀಕ್ಷಣೆ ಮಾಡಿದರು. ‍ಪುನೀತ್‌ ಅವರ ಮರಣದ ಬಳಿಕ ಈ ಸಿನಿಮಾ ಬಿಡುಗಡೆಯಾಗಿತ್ತು. ಹಿರಿ ತೆರೆಯಲ್ಲಿ ತಮ್ಮ ನೆಚ್ಚಿನ ನಟನನ್ನು ಮತ್ತೆ ನೋಡಿ ಅಭಿಮಾನಿಗಳು ಪುಳಕಿತಗೊಂಡರು. ವಿಶ್ವಾದ್ಯಂತ ಈ ಚಿತ್ರ 80 ಕೋಟಿ ರೂಪಾಯಿ ಗಳಿಸಿತು.

5. ವಿಕ್ರಾಂತ್ ರೋಣ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರನ್ನು ತೆರೆ ಮೇಲೆ ವಿಶೇಷವಾಗಿ ತೋರಿಸಿದ ಸಿನಿಮಾ ಇದು. ಈ ಸಿನಿಮಾದಲ್ಲಿ ಸುದೀಪ್‌ ಅವರದ್ದು ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರ. ಕೊಲೆ ಪ್ರಕರಣವನ್ನು ಬೇಧಿಸುವ ಕತೆ ಇರುವ ಈ ಸಿನಿಮಾದ, ಗಡಂಗ್‌ ರಕ್ಕಮ್ಮ ಹಾಡು ಭಾರೀ ವೈರಲ್‌ ಆಗಿತ್ತು. ಬಹುಭಾಷೆಯಲ್ಲಿ ನಿರ್ಮಾಣವಾದ ಈ ಸಿನಿಮಾ ಕನ್ನಡೇತರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆಯಿತು. ಸದ್ಯ ಈ ಸಿನಿಮಾ ಝಿ 5 ಒಟಿಟಿಯಲ್ಲೂ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT