ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಆಗುವುದಿಲ್ಲ: ಪ್ರಶಾಂತ್ ನೀಲ್

ಸಲಾರ್ ಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಪಿಟಿಐ ಸುದ್ದಿಸಂಸ್ಥೆ ಸಂದರ್ಶನ
Published 19 ಡಿಸೆಂಬರ್ 2023, 10:28 IST
Last Updated 19 ಡಿಸೆಂಬರ್ 2023, 10:28 IST
ಅಕ್ಷರ ಗಾತ್ರ

ಮುಂಬೈ: ‘ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕೆಂದು ಮಾಡುವುದಿಲ್ಲ. ಆ ರೀತಿ ಯೋಜಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲೂ ಆಗುವುದಿಲ್ಲ‘ ಎಂದು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.

ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿರುವ ತಮ್ಮ ‘ಸಲಾರ್’ ಚಿತ್ರದ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಅವರು ಹಲವು ವಿಷಯಗಳನ್ನು ಹಂಚಿಕೊಂಡರು.

‘ನಾನು ಕೆಜಿಎಫ್‌ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದುಕೊಂಡು ಮಾಡಲಿಲ್ಲ. ಕಥೆಯೊಂದನ್ನು ಒಂದು ಸಿನಿಮಾವಾಗಿ ಕಟ್ಟಿಕೊಡುವ ಯೋಜನೆ ಮುಖ್ಯ. ಸಲಾರ್ ಚಿತ್ರವನ್ನೂ ಹಾಗೆಯೇ ಮಾಡಿರುವುದು. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲೂಬಹುದು, ಆಗದೇ ಇರಬಹುದು. ಒಂದು ವೇಳೆ ಇಡೀ ದೇಶದಲ್ಲಿ ಈ ಚಿತ್ರ ಹವಾ ಸೃಷ್ಟಿಸಿದರೆ ಅದು ನಮಗೆ ದೊಡ್ಡ ಬೋನಸ್. ಕೆಜಿಎಫ್ ಸಿನಿಮಾ ಸಹ ಇದೇ ರೀತಿ ಆಗಿರುವುದು’ ಎಂದು ನೀಲ್ ಹೇಳಿದರು.

‘ಸಿನಿಮಾಗಳೆಂದರೆ ಅವುಗಳನ್ನು ತುಂಬಾ ಚೆನ್ನಾಗಿಯೇ ಮಾಡಬೇಕಾಗುತ್ತದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲೆಂದೇ ನಟರನ್ನು ಹುಡುಕಲು ಆಗುವುದಿಲ್ಲ. ನಮಗೆ ಚಿತ್ರದ ಕಥೆ ಹಾಗೂ ಬಜೆಟ್ ಮುಖ್ಯವಾಗುತ್ತದೆ. ಅದಕ್ಕೆ ಅನುಗುಣವಾಗಿ ನಾವು ಚಿತ್ರ ತಯಾರಿಸಿ ಅದನ್ನು ಪ್ರೇಕ್ಷಕರ ಮುಂದಿಡಬೇಕು’ ಎಂದರು.

‘ನಾವು ಕತೆ ಹೇಳಲು ಸಿನಿಮಾ ಮಾಡುತ್ತವೆ. ಆ ಕಥೆಯ ಪಾತ್ರಗಳಿಗೆ ತಕ್ಕ ಹಾಗೇ ನಟರನ್ನು ಹುಡುಕಬೇಕಾಗುತ್ತದೆ. ಹೀರೊಗಾಗಿ ನಾವು ಕಥೆ ಮಾಡಲು ಹೋದರೆ ಅದು ಒಂದು ಪಕ್ಷ ಸೋಲಲೂಬಹುದು’ ಎಂದು ನೀಲ್ ಹೇಳಿದರು.

‘ಬಾಹುಬಲಿ ಸಿನಿಮಾಗಳ ನಂತರ ಪ್ರಭಾಸ್ ದೊಡ್ಡ ಸೂಪರ್‌ಸ್ಟಾರ್ ಆದರು. ಆ ನಂತರ ಅವರ ‘ರಾಧೆಶ್ಯಾಮ’ ಹಾಗೂ ‘ಆದಿಪುರುಷ’ ಸಿನಿಮಾಗಳು ಸೋತವು. ಆದರೆ, ಒಂದಂತೂ ಸತ್ಯ.. ಒಬ್ಬ ಸೂಪರ್‌ಸ್ಟಾರ್ ಎಂದಿಗೂ ಸೂಪರ್‌ ಸ್ಟಾರ್. ಆ ವಿಷಯದಲ್ಲಿ ನಾವು ಶಾರುಕ್ ಖಾನ್ ಅವರನ್ನೂ ಉದಾಹರಿಸಬಹುದು’ ಎಂದರು.

ಸಲಾರ್ ಚಿತ್ರ ‘ದೇವಾ’ ಮತ್ತು ‘ವರದ’ ಎಂಬ ಇಬ್ಬರು ಸ್ನೇಹಿತರ ನಡುವಿನ ಸ್ನೇಹ ಹಾಗೂ ದ್ವೇಷದ ಕಥೆಯನ್ನು ಹೊಂದಿದೆ ಎಂದು ಪ್ರಶಾಂತ್ ನೀಲ್ ಹೇಳಿದರು.

ಬಹುನಿರೀಕ್ಷಿತ ಸಲಾರ್ ಚಿತ್ರ ಇದೇ ಡಿಸೆಂಬರ್ 22 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ದೇವ ಪಾತ್ರದಲ್ಲಿ ಪ್ರಭಾಸ್ ಮಿಂಚಿದ್ದರೆ, ವರದ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಹಾಗೂ ಶ್ರೀಯಾ ರೆಡ್ಡಿ ಪ್ರಮುಖ ತಾರಾಗಣದಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT