ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈನಾಮಿಕ್‌ ಫ್ಯಾಮಿಲಿ!

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಈ ಚಿತ್ರದಲ್ಲಿ ದೇವರಾಜ್‌ಗೆ ಚಾನ್ಸ್ ಕೊಟ್ಟಿಲ್ವಲ್ಲ?’ ಎಂಬ ಪ್ರಶ್ನೆಗೆ, ‘ಇಲ್ಲ... ಅವರಿಗೆ ಸಂಭಾವನೆ ಕೊಡೋಷ್ಟು ದುಡ್ಡು ನಮ್ಮಲ್ಲಿಲ್ಲ!’ ಎನ್ನುವ ನಿರ್ಮಾಪಕಿ ಚಂದ್ರ ಅವರ ಸ್ಪಷ್ಟನೆ ನಗೆಬುಗ್ಗೆ ಉಕ್ಕಿಸಿತು. ತಕ್ಷಣವೇ ಮತ್ತೊಂದು ಸ್ಪಷ್ಟನೆ ಅವರಿಂದ ಬಂತು: ‘ಮುಂದಿನ ಸಿನಿಮಾಕ್ಕೆ ಅವರೇ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್!’

ಅದೊಂದು ರೀತಿ ಕೌಟುಂಬಿಕ ಕಾರ್ಯಕ್ರಮ. ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ದೇವರಾಜ್ ತಮ್ಮದೇ ಆದ ನಿರ್ಮಾಣ ಸಂಸ್ಥೆ ‘ಡೈನಾಮಿಕ್ ವಿಷನ್ಸ್’ನ ಅನೌಪಚಾರಿಕ ಉದ್ಘಾಟನೆ ಸಮಾರಂಭಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದರು. ಈ ಬ್ಯಾನರ್‌ಅಡಿ ಕೈಗೆತ್ತಿಕೊಂಡ ಮೊದಲ ಸಿನಿಮಾ ‘ನೀನಾದೆ ನಾ’. ಇದರ ನಿರ್ಮಾಪಕಿ– ಪತ್ನಿ ಚಂದ್ರ; ಸಹ ನಿರ್ಮಾಪಕ– ಪುತ್ರ ಪ್ರಣಾಮ್ ಹಾಗೂ ನಾಯಕ– ಪುತ್ರ ಪ್ರಜ್ವಲ್‌ ಜತೆಗಿದ್ದರು.

ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ ಬಳಿಕ ನಿರ್ಮಾಣ, ನಿರ್ದೇಶನಕ್ಕೆ ಬರುವವರ ಸಾಲಿಗೆ ದೇವರಾಜ್ ಹೊಸ ಸೇರ್ಪಡೆ. ‘ಡೈನಾಮಿಕ್ ವಿಷನ್ಸ್’ ಮೂಲಕ ಚಿತ್ರ ನಿರ್ಮಾಣದತ್ತ ಹೊರಳಿದ್ದಾರೆ. ‘ಮುರಳಿ ಮೀಟ್ಸ್ ಮೀರಾ’ ಚಿತ್ರದಲ್ಲಿನ ‘ನೀನಾದೆ ನಾ ನೀನೊಲಿದಾ ಈ ಕ್ಷಣ...’ ಹಾಡಿನ ಮೊದಲೆರಡು ಶಬ್ದಗಳೇ ಅವರ ಸಿನಿಮಾದ ಶೀರ್ಷಿಕೆ.

ತಮಿಳು ಹಾಗೂ ಕನ್ನಡದ ಹಲವು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಕಂದಹಾಸ್ ಈ ಸಿನಿಮಾದ ಮೂಲಕ ನಿರ್ದೇಶಕರಾಗಲಿದ್ದಾರೆ. ‘ಅಂಗಾರಕ’ ಚಿತ್ರದ ಎರಡು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಅವರು, ಪ್ರಜ್ವಲ್‌ ಜತೆ ವಿಮಾನನಿಲ್ದಾಣದಿಂದ ಕಾರಿನಲ್ಲಿ ವಾಪಸಾಗುವಾಗ ಕಥೆಯ ಎಳೆಯೊಂದನ್ನು ಹೇಳಿದ್ದರಂತೆ.

ಅದೇ ‘ನೀನಾದೆ ನಾ’ ಸಿನಿಮಾದ ಕಥೆಯಾಗಿದೆ. ‘ನಾನು ಮೂಲತಃ ನೃತ್ಯ ನಿರ್ದೇಶಕ. ಪ್ರಜ್ವಲ್‌ಗೆ ಹೇಳಿದ ಕಥೆ ಕೇಳಿ, ಅದಕ್ಕೆ ದೇವರಾಜ್ ಒಪ್ಪಿಗೆ ನೀಡಿದರು. ಏನು ಬೇಕೋ ಅದನ್ನೆಲ್ಲ ಒದಗಿಸಿದರು’ ಎಂದ ಕಂದಹಾಸ್, ತಮಗೆ ಜೀವ ಕೊಟ್ಟಿದ್ದು ಅಪ್ಪ ಅಪ್ಪ; ಜೀವನ ಕೊಟ್ಟಿದ್ದು ಈ ಅಪ್ಪ– ಅಮ್ಮ (ದೇವರಾಜ್– ಚಂದ್ರ) ಎಂದು ಭಾವೋದ್ವೇಗದಿಂದ ನುಡಿದರು.

ಪ್ರಜ್ವಲ್ ಚಿತ್ರರಂಗಕ್ಕೆ ಬಂದು ಆರು ವರ್ಷಗಳಾಗಿವೆ. ಈಗ ಕುಟುಂಬದವರೆಲ್ಲ ಸೇರಿ ಮಾಡುತ್ತಿರುವ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವುದು ಅವರಿಗೂ ಖುಷಿ ಕೊಟ್ಟಿದೆ. ‘ಚಿತ್ರರಂಗಕ್ಕೆ ತೀರಾ ಹತ್ತಿರವಾಗಿರುವಂಥ ಕಥೆಯಲ್ಲಿ ಪ್ರೇಮಕಥೆ ಸೃಷ್ಟಿಸಲಾಗಿದೆ. ನನ್ನ ಪಾತ್ರ ವಿಭಿನ್ನವಾಗಿದ್ದು, ಈವರೆಗೆ ಯಾರೂ ನೋಡದ ಬಗೆಯಲ್ಲಿ ನನ್ನನ್ನು ಪ್ರೇಕ್ಷಕರು ನೋಡಲಿದ್ದಾರೆ’ ಎಂದರು.

ಮುಂಬೈ ಮೂಲದವರಾದ ಅಂಕಿತಾ ಮಹೇಶ್ವರಿ ಹಾಗೂ ಪ್ರಿಯಾಂಕಾ ಖಂಡ್ವಾಲಾ ನಾಯಕಿಯರು. ದೇವರಾಜ್ ಪ್ರಾಣಸ್ನೇಹಿತ ಅವಿನಾಶ್ ಸೇರಿದಂತೆ ಬುಲೆಟ್ ಪ್ರಕಾಶ, ದೊಡ್ಡಣ್ಣ ಇತರರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಶ್ರೀನಿವಾಸ ರಾಮಯ್ಯ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಕಲ್ಯಾಣ್, ಯೋಗರಾಜ ಭಟ್ ಹಾಗೂ ಚಂದನ್ ಬರೆದಿರುವ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT