ಗುರುವಾರ , ಏಪ್ರಿಲ್ 2, 2020
19 °C

ಖಾಕಿ ಸಿನಿಮಾ ವಿಮರ್ಶೆ: ಸಮವಸ್ತ್ರದಲ್ಲಲ್ಲ ಖಾಕಿಯ ಖದರ್‌ ಹೃದಯದಲ್ಲಿ

ಕೆ.ಎಂ. ಸಂತೋಷ್‌ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಖಾಕಿ ಸಿನಿಮಾ ವಿಮರ್ಶೆ

ನಿರ್ದೇಶನ: ನವೀನ್ ರೆಡ್ಡಿ

ನಿರ್ಮಾಣ: ತರುಣ್‌ ಶಿವಪ್ಪ, ಮಾನಸಾ ತರುಣ್‌

ತಾರಾಗಣ: ಚಿರಂಜೀವಿ ಸರ್ಜಾ, ತಾನ್ಯಾ ಹೋಪ್, ಛಾಯಾ ಸಿಂಗ್‌, ದೇವ್‌ ಗಿಲ್, ಶಿವಮಣಿ, ಶಶಿ, ಸುಧಾ ಬೆಳವಾಡಿ, ನವ್ಯಾ

ಒಂದು‌ ಗಂಭೀರ ಸಮಸ್ಯೆಯತ್ತ ಜನರು ಗಮನ ಕೇಂದ್ರೀಕರಿಸಿ, ಅದನ್ನು ಪ್ರಶ್ನಿಸಲು ಶುರು ಮಾಡಿದರೆ ಅವರ ಗಮನವನ್ನು ಬೇರೆಡೆ ತಿರುಗಿಸಲು ಇನ್ನೊಂದು‌ ಸಮಸ್ಯೆ ಸೃಷ್ಟಿಸುವುದೇ ‘ಮೈಂಡ್ ಗೇಮ್’. ಆಳುವವರು ಮಾಡುತ್ತಿರುವುದು ಇದನ್ನೇ. ಪ್ರಸ್ತುತ ಸಮಾಜದಲ್ಲಿ ನಿತ್ಯ ಕಾಣುವ ಇಂತಹ ಕರಾಳ ವ್ಯವಸ್ಥೆಗೆ ಭೂತಗನ್ನಡಿ ಹಿಡಿಯುವ ಪ್ರಯತ್ನ ‘ಖಾಕಿ’ ಚಿತ್ರದಲ್ಲಿದೆ. 

ಕೇಬಲ್‌ ಆಪರೇಟರ್‌ ಆದ ಚಿರು (ಚಿರಂಜೀವಿ ಸರ್ಜಾ) ತಾನು ವಾಸಿಸುವ ಪ್ರದೇಶದ ಜನರನ್ನು ಭೂಮಾಫಿಯಾ (ದೇವ್‌ ಗಿಲ್‌) ಮತ್ತು ದುಷ್ಟ ಶಾಸಕನ (ಶಿವಮಣಿ) ಕಿರುಕುಳದಿಂದ ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥಾಹಂದರ. ಕೇಬಲ್‌ ಜೋಡಿಸಿದಷ್ಟೇ ಸರಾಗವಾಗಿ ನಾಯಕನಿಗೆ ಜತೆಯಾಗುವಂತಹ ಪಾತ್ರ ನಾಯಕಿ ತಾನ್ಯಾ ಹೋಪ್‌ ಅವರದ್ದು. ತಾನ್ಯಾ ಡಾನ್ಸ್‌ ಮುಂದೆ ಚಿರು ಸ್ಟೆಪ್ಪು ಸಪ್ಪೆ ಎನಿಸುತ್ತದೆ. ಆದರೆ, ಖಡಕ್‌ ಡೈಲಾಗ್‌ಗಳಿಂದ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ ಚಿರು.

ನಿರ್ದೇಶಕ ನವೀನ್‌ ರೆಡ್ಡಿ, ‘ಖಾಕಿ ಧರಿಸಿದವರಷ್ಟೇ ಪೊಲೀಸ್‌ ಅಲ್ಲ; ಸಮಾಜದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರತಿಯೊಬ್ಬರೂ ಪೊಲೀಸ್‌ ಇದ್ದಂತೆ’ ಎನ್ನುವ ಸಂದೇಶವನ್ನು ಒತ್ತಿಹೇಳುವ ಭರದಲ್ಲಿ ಅಲ್ಲಲ್ಲಿ ಖಾಕಿಯ ಖದರ್‌ ಮಸುಕಾಗಿದೆ ಅನಿಸುವುದು ಸಹಜ. ವಾಸ್ತವದಲ್ಲಿ ಅಸಾಧ್ಯವಾಗಿರುವ ‘ಪ್ಯಾರಲಲ್‌ ಪೊಲೀಸ್‌ ಪಡೆ’ ಕಟ್ಟುವ ಪ್ರಯತ್ನವನ್ನು ಸಲೀಸಾಗಿಸಲು ನಿರ್ದೇಶಕರು ಅನುಕೂಲಸಿಂಧು ದೃಶ್ಯ ಹೆಣಿಗೆ ಮಾಡಿದ್ದಾರೆ. ಇದರಿಂದ ಕಥೆಯಲ್ಲಿ ಬಿಗಿಬಂಧವಿಲ್ಲದೆ, ನಿರೂಪಣೆಯೂ ಜಾಳು ಜಾಳೆನಿಸುತ್ತದೆ.

ಸಿದ್ಧಸೂತ್ರದ ಜಾಡಿನಲ್ಲಿ ಹೆಣೆದ ಚಿತ್ರದಲ್ಲಿ ಹೊಸತನ್ನು ಹುಡುಕಿದರೆ ನಿರಾಸೆಯಾದೀತು. ಆದರೆ, ಭಾವುಕ ಸನ್ನಿವೇಶವೊಂದು ಎಂತಹ ಗಟ್ಟಿ ಹೃದಯಗಳನ್ನೂ  ಆರ್ದ್ರಗೊಳಿಸಿಬಿಡುತ್ತದೆ ಎನ್ನುವುದಕ್ಕೆ ನಾಗರಿಕ ಸಮಸ್ಯೆಗಳ ಪರ ಧ್ವನಿ ಎತ್ತುವ ಹೋರಾಟಗಾರನೊಬ್ಬ ದುಷ್ಟರ ಚೂರಿ ಇರಿತಕ್ಕೆ ಸಿಕ್ಕು ರಕ್ತ ಬಸಿದು ನೆಲಕ್ಕುರುಳುವ ಸನ್ನಿವೇಶ ಸಾಕ್ಷಿಯಾಗುತ್ತದೆ. ಹೋರಾಟಗಾರನ ಪುಟಾಣಿ ಮಗುವಿನ ‘ಅಪ್ಪಾ ಏಳಪ್ಪಾ’ ಎನ್ನುವ ಆಕ್ರಂದನ ಪ್ರೇಕ್ಷಕನ ಕಣ್ಣಂಚಿನಲ್ಲಿ ನೀರು ಜಿನುಗಿಸುತ್ತದೆ.  

ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಛಾಯಾ ಸಿಂಗ್‌ ಗಮನ ಸೆಳೆದಿದ್ದಾರೆ. ದೇವ್‌ ಗಿಲ್‌ ಮತ್ತು ಶಿವಮಣಿ ಖಳನಾಯಕರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸುಧಾ ಬೆಳವಾಡಿ ಮತ್ತು ಲಹರಿ ವೇಲು ಪೋಷಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಿತ್ವಿಕ್ ಮುರಳೀಧರ್‌ ಸಂಗೀತವಿರುವ ಹಾಡುಗಳು ನೆನಪಿನಲ್ಲಿ ಅಷ್ಟಾಗಿ ಉಳಿಯುವುದಿಲ್ಲ. ಬಾಲಾ ಅವರು ಛಾಯಾಗ್ರಹಣದಲ್ಲಿ ವಿಶೇಷವಾದುದ್ದೇನನ್ನು ಮೊಗೆದುಕೊಟ್ಟಂತೆ ಕಾಣಿಸುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು