ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ವಿಮರ್ಶೆ: ಕಣ್ಣು ಕೀಲಿಸಿಕೊಳ್ಳುವ ಕಥಾವಲ್ಲರಿ

Last Updated 30 ಸೆಪ್ಟೆಂಬರ್ 2022, 15:23 IST
ಅಕ್ಷರ ಗಾತ್ರ

ಚಿತ್ರ: ಪೊನ್ನಿಯಿನ್ ಸೆಲ್ವನ್–1 (ತಮಿಳು)

ನಿರ್ಮಾಣ: ಮಣಿರತ್ನಂ, ಸುಭಾಸ್ಕರನ್ ಅಲ್ಲಿರಾಜಾ

ನಿರ್ದೇಶನ: ಮಣಿರತ್ನಂ

ತಾರಾಗಣ: ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯರಾಂ ರವಿ, ತೃಶಾ, ಜಯರಾಂ, ಪ್ರಕಾಶ್ ರಾಜ್, ಐಶ್ವರ್ಯಾ ಲಕ್ಷ್ಮಿ, ಪಾರ್ಥಿಬನ್.

ಮಣಿರತ್ನಂ ದೀರ್ಘಕಾಲದ ಕನಸು ತೆರೆಮೇಲೆ ಸಶಕ್ತವಾಗಿ ಮೂಡಿದೆ.

1990ರ ದಶಕದಲ್ಲಿ ಒಮ್ಮೆ, ಹೊಸ 2010ರ ದಶಕದ ಶುರುವಿನಲ್ಲಿ ಇನ್ನೊಮ್ಮೆ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಮಾಡಬೇಕೆಂದು ಅವರು ಹೊರಟು, ಸಾಧ್ಯವಾಗದೆ ಸುಮ್ಮನಾಗಿದ್ದರು. 1950ರ ದಶಕದಲ್ಲಿ ಎಂ.ಜಿ.ಆರ್ ಈ ಚಲನಚಿತ್ರ ಮಾಡಬೇಕೆಂದುಕೊಂಡಿದ್ದರೂ, ಸಂಕೀರ್ಣತೆಯಿಂದಾಗಿ ದೊಡ್ಡ ಮಟ್ಟದ ಬಂಡವಾಳ ಬೇಕಾದೀತೆಂದು ಅಂಜಿ ಹಿಂದೆ ಸರಿದಿದ್ದರು. 1955ರಲ್ಲಿ ಕಲ್ಕಿ ಕೃಷ್ಣಮೂರ್ತಿ ಬರೆದಿದ್ದ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದು. ಹತ್ತನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ರಾಜಮನೆತನದಲ್ಲಿ ಆಗುವ ಬೆಳವಣಿಗೆಗಳ ಕಥನ.

ಸುಂದರ ಚೋಳ ಬಸವಳಿದಿದ್ದ ಹೊತ್ತು. ಅವನಿಗೆ ಅದಿತ ಕರಿಕಾಳನ್, ಅರುಳ್‌ಮೊಳಿ ವರ್ಮನ್ ಎಂಬಿಬ್ಬರು ಮಕ್ಕಳು. ದಕ್ಷಿಣ ಭಾರತದಲ್ಲಿ ಸಾಮ್ರಾಜ್ಯ ವಿಸ್ತರಣೆಗೆ ಇಬ್ಬರೂ ಮುಂದಾಗಿದ್ದ ಸಂದರ್ಭ. ಪೆರಿಯ ಪಳುವತ್ತರಯ್ಯಾರ್ ಎಂಬ ವಯಸ್ಸಾದವನಿಗೆ ನಂದಿನಿ ಎಂಬ ಪತ್ನಿ. ಅವನ ರಾಜಾಸ್ಥಾನದಲ್ಲಿಯೂ ಹುನ್ನಾರ. ಆ ನಂದಿನಿ ಅದಿತನ ಒಂದುಕಾಲದ ಪ್ರೇಮಿ. ಅದು ಭಗ್ನವಾದ ಭಾವದಲ್ಲಿ ಅದಿತನ ಕ್ರೋಧ ಇನ್ನಷ್ಟು ಉಲ್ಬಣಿಸಿದೆ. ವಲ್ಲವರಯ್ಯನ್ ವಂದಿಯದೇವನ್ ಅದಿತನ ಸ್ನೇಹಿತ. ಚುರುಕುಮತಿ. ಹುನ್ನಾರಗಳ ಸಿಕ್ಕು ಬಿಡಿಸುವ ಅವನ ಪಯಣದ ಕಥನವಾಗಿ ‘ಪೊನ್ನಿಯಿನ್ ಸೆಲ್ವಂ’ನ ಮೊದಲ ಭಾಗವನ್ನು ಮಣಿರತ್ನಂ ಕಟ್ಟಿಕೊಟ್ಟಿದ್ದಾರೆ.

ತೆಲುಗಿನ ಜನಪ್ರಿಯ ನಿರ್ದೇಶಕ ರಾಜಮೌಳಿ ‘ಬಾಹುಬಲಿ’ಯ ಮೂಲಕ ‘ಚಂದಮಾಮ’ದಂಥ ಕಥೆಯನ್ನು ತಂದು, ಕಣ್ಕಟ್ಟಿನ ಮಾದರಿಯೊಂದನ್ನು ತೇಲಿಬಿಟ್ಟು ವರ್ಷಗಳೇ ಆಗಿವೆ. ಮಣಿರತ್ನಂ ಅಂತಹ ಮಾದರಿಯನ್ನು ತಮ್ಮದಾಗಿಸಿಕೊಂಡಿಲ್ಲ. ಕಥನದ ಇತಿಹಾಸದ ಭಿತ್ತಿ ದೊಡ್ಡದಿದ್ದು, ಎಣಿಕೆಗೆ ಸುಲಭವಾಗಿ ನಿಲುಕದಷ್ಟು ಪಾತ್ರಗಳು ಇದ್ದರೂ ಕಥೆಯನ್ನು ದೃಶ್ಯವತ್ತಾಗಿ ಸರಾಗವಾಗಿ ಹೇಳುವ ಮಾರ್ಗದಲ್ಲಿ ನಡೆದಿದ್ದಾರೆ.

ವಲ್ಲವರಯ್ಯನ್ ಪಾತ್ರ ಮೊದಲ ಭಾಗದ ಚಲನಚಿತ್ರದ ಕೇಂದ್ರ. ಕಥನದ ಸಿಕ್ಕುಗಳೆಲ್ಲ ಅವನ ದೃಷ್ಟಿಕೋನದಿಂದಲೇ ಬಹುವಾಗಿ ಬಿಚ್ಚಿಕೊಳ್ಳುವುದು. ಹೀಗಾಗಿ ಈ ಪಾತ್ರದ ಗ್ರಾಫ್ ಬರವಣಿಗೆಯ ದೃಷ್ಟಿಯಿಂದ ತುಂಬಾ ಮಹತ್ವದ್ದು. ಇಳಂಗೊ ಕುಮಾರವೇಲ್ ಹಾಗೂ ಬಿ.ಜಯಮೋಹನ್ ಜತೆಗೆ ಮಣಿರತ್ನಂ ಕೂತು ಪಾತ್ರಗಳಿಗೆ ತುಂಬಿರುವ ಜೀವಂತಿಕೆ ಆಸಕ್ತಿಕರವಾಗಿದೆ.

ಐಶ್ವರ್ಯಾ ರೈ ತೆರೆಮೇಲೆ ಬಂದಾಗಲೆಲ್ಲ ಬೆಳಕಿನ ಕೋಲೊಂದನ್ನು ನೋಡಿದ ಸೌಂದರ್ಯ ಭಾವ ಪ್ರವಹಿಸುತ್ತದೆ. ಅವರ ಕೆಂಪು ಕಣ್ಣುಗಳಲ್ಲಿನ ಸೇಡಿನ ಕಥಾನಕ ದಾಟುವುದು ತುಂಬಾ ತಡವಾಗಿ. ಇಡೀ ಸಿನಿಮಾದಲ್ಲಿ ಕಾರ್ತಿ ತಮ್ಮ ಮೊಗದ ಮೇಲೆ ತುಂಟತನವನ್ನು ಕುಣಿಸುತ್ತಾ ಕಣ್ಣು ಕೀಲಿಸಿಕೊಳ್ಳುತ್ತಾರೆ. ಅವರ ಪಾತ್ರದಲ್ಲೇ ಹಾಸ್ಯ ರಸಾಯನವನ್ನೂ ಮಣಿರತ್ನಂ ಇಡುಕಿರಿದಿದ್ದಾರೆ. ತೃಶಾ ಹಾಗೂ ಐಶ್ವರ್ಯಾ ಲಕ್ಷ್ಮಿ ಇಬ್ಬರ ಪಾತ್ರಗಳು ಗ್ಲ್ಯಾಮರ್, ಔಚಿತ್ಯ ಬೆರೆತಂಥವು. ವಿಕ್ರಂ ಮೊದಲ ಭಾಗದಲ್ಲಿ ಹೆಚ್ಚೇನೂ ತೆರೆಮೇಲೆ ಕಾಣಿಸಿಕೊಳ್ಳದಿದ್ದರೂ ಕಥೆಯ ಮುನ್ನುಡಿ ಅವರಿಂದಲೇ ಶುರುವಾಗುವುದು. ಜಯರಾಂ ರವಿ ದ್ವಿತೀಯಾರ್ಧದಲ್ಲಿ ಕೋರೈಸುತ್ತಾರೆ.

ಎ.ಆರ್. ರೆಹಮಾನ್ ಸಂಗೀತ ಕಥಾವಸ್ತುವಿಗೆ ಪೂರಕವಾದ ಹದವನ್ನು ಘನೀರ್ಭವಿಸಿಕೊಂಡಿದೆ. ರವಿವರ್ಮನ್ ಕ್ಯಾಮೆರಾ ಕೈಚಳಕದಲ್ಲಿರುವುದು ‘ದರ್ಶನ ನಿಷ್ಠೆ’.

ಸಪಾಟದ ಹೆದ್ದಾರಿಯಲ್ಲಿನ ಪಯಣದಂತೆ ಸಾಗುವ ಚಲನಚಿತ್ರವು ನವರಸಗಳನ್ನೂ ತುಳುಕಿಸುತ್ತದೆ. ನಡುಘಟ್ಟದ ಕುತೂಹಲ, ಅಂತ್ಯದ ಕೋಲಾಹಲ ಎರಡೂ ಇರುವುದು ಹಾಗೂ ಮುಂದಿನ ಭಾಗದಲ್ಲಿ ಇನ್ನೂ ಏನೇನೆಲ್ಲ ಆಗಬಹುದು ಎಂಬ ಲೆಕ್ಕಾಚಾರ ಉಳಿಸುವುದು ಕೂಡ ಕಟ್ಟುವಿಕೆಯ ಮರ್ಮವೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT