ಚಿತ್ರ: ಪಾಪ್ಕಾರ್ನ್ ಮಂಕಿ ಟೈಗರ್ (ಕನ್ನಡ)
ನಿರ್ಮಾಣ: ಸುಧೀರ್ ಕೆ.ಎಂ.
ನಿರ್ದೇಶನ: ದುನಿಯಾ ಸೂರಿ
ತಾರಾಗಣ: ಧನಂಜಯ್, ನಿವೇದಿತಾ, ಸುಧಿ, ನವೀನ್, ಅಮೃತಾ ಅಯ್ಯಂಗಾರ್, ಮೋನಿಷಾ ನಾಡ್ಗಿರ್, ಸಪ್ತಮಿ ಗೌಡ

ಹರಿಯುವ ನೀರನ್ನು ಬೊಗಸೆಗೆ ತುಂಬಿಕೊಳ್ಳುವ ನಾಯಕ. ನೀರಿನ ಜತೆಗೇ ಅಲ್ಲೊಂದು ಬಣ್ಣದ ಚಿಟ್ಟೆ. ನೋಡಲೇನೋ ಚೆಂದ; ಜೀವವಿಲ್ಲ. ಚಿಟ್ಟೆಯ ಬದುಕಿನ ವೃತ್ತ ಎಷ್ಟು ಆಸಕ್ತಿಕರವೋ ಅಷ್ಟೇ ಅಲ್ಪಾವಧಿಯದ್ದೂ ಹೌದು. ಸಿನಿಮಾದ ಮೊದಲಲ್ಲೇ ಅನಾವರಣಗೊಳ್ಳುವ ಈ ದೃಶ್ಯದಲ್ಲಿ ನಿರ್ದೇಶಕ ಸೂರಿ ಒಬ್ಬ ಸಂವೇದನಾಶೀಲ ಪೇಂಟರ್ನಂತೆಯೇ ವ್ಯಕ್ತಗೊಳ್ಳುತ್ತಾರೆ. ನಾಯಕನೂ ಆ ಚಿಟ್ಟೆಯಂತೆಯೇ.

ಹಾರುವ ಪಕ್ಷಿಗಳು, ಅಪಹರಣಕ್ಕೆ ಒಳಗಾಗಿ ಯಾರಿಗೋ ಮಾರಾಟವಾದರೂ ಹೊತ್ತೊಯ್ದವನಿಗೆ ಮುಗ್ಧತೆಯಿಂದ ಕೈಯೆತ್ತಿ ‘ಬಾಯ್’ ಎನ್ನುವಂತೆ ಸಂಜ್ಞೆ ಮಾಡುವ ಮುಗ್ಧ ಮಗು, ನಗರದ ದೊಡ್ಡ ಸಂತೆಯಂತಹ ಬದುಕಿನಲ್ಲಿ ಆ ಮಗುವಿಗಾಗಿ ಹುಡುಕಿ ತಹತಹಿಸುವ ತಾಯಿ ಆಮೇಲೆ ಏನೇನೋ ಆಗಿಬಿಡುವ ಕೌತುಕ, ಬಿಲ್ಡಪ್ಗಳೇ ಇಲ್ಲದ–ಗೊಂದಲಕಾರಿ ಚಾರಿತ್ರ್ಯದ–ಮಂಕಿಯೂ ಟೈಗರ್ರೂ ಎರಡೂ ಆಗಿಯೂ ಏನೂ ಆಗದ ನಾಯಕ, ಅವನ ಸುತ್ತ ಜೀರುಜಿಂಬೆಗಳಂತೆ ಸದ್ದು ಮಾಡುತ್ತಾ ತಾವೂ ಎಂದೋ ಒಮ್ಮೆ ಅಂಗಾತ ಹೆಣವಾಗಿಬಿಡುವಂಥ ವಿಲಕ್ಷಣ ಜೀವಗಳು, ಢಾಳು ರಕ್ತತರ್ಪಣ, ಬಾಯಿಯ ತುಂಬಾ ‘ಆಧುನಿಕ ಸಂಸ್ಕೃತ’ದ ಕಚ್ಚಾ ಪದಗಳನ್ನು ಉದುರಿಸುವ; ಸೆನ್ಸಾರ್ ಬೋರ್ಡ್ನ ಆತಂಕವೇ ಇಲ್ಲದ ಪಾತ್ರಗಳು (ಅವುಗಳಿಗೆ ಮೂಗ, ಗಲೀಜು, ಹಾವ್ ರಾಣಿ, ಪಾಪ್ಕಾರ್ನ್ ದೇವಿ ತರಹದ ಹೆಸರುಗಳು)... ಹೀಗೆ ನಿರ್ದೇಶಕ ಸೂರಿ ತಮ್ಮದೇ ಶೈಲಿಯ ‘ಹಿಂಸಾತ್ಮಕ ಸತ್ಯದ ಕೊಲಾಜ’ನ್ನು ಪ್ರೇಕ್ಷಕರ ಎದುರಲ್ಲಿ ಇಟ್ಟಿದ್ದಾರೆ.

ಇಲ್ಲೂ ನಾಯಕ ಪರಿಸ್ಥಿತಿಯ ಕೈಗೊಂಬೆಯೇ. ಸೂರಿ ಅವರ ಕೈಗೆ ಸಿಕ್ಕಿದ ಮೇಲೆ ಒರಟ ಆಗಲೇಬೇಕಲ್ಲ? ಅಂಥ ಪಾತ್ರವನ್ನು ಅವರು ಕೆಡುಕಿನಲ್ಲೇ ಅದ್ದಿ ತೆಗೆದಂತಹ, ಪ್ರೀತಿಯ ಕಕ್ಕುಲತೆಯ ನಡುವೆಯೂ ಆಗೀಗ ಕೆಮ್ಮು ತರಿಸುವಂತಹ ಇನ್ನಷ್ಟು ಜೀವಗಳಿಗೆ ಮುಖಾಮುಖಿಯಾಗಿಸುತ್ತಾರೆ. ಖಳರು, ಸುಂದರಿಯರು, ಕಳೆದುಕೊಂಡವರು, ಪ್ರೀತಿ ಬಯಸುವವರು, ಏನೋ ಹುಡುಕಾಟದಲ್ಲಿರುವವರು ಎಲ್ಲರೂ ಅಲ್ಲುಂಟು.

ಪಾತಕಲೋಕದ ನಾಯಕನ ಪಯಣದ ನಿರೂಪಣೆಯಲ್ಲಿ ಸೂರಿ ಅನೇಕ ಕಡೆ ಆಟವಾಡಿದ್ದಾರೆ. ಯಾವುದೋ ಬಿಂದುವನ್ನು ಎಲ್ಲಿಗೋ ತಂದು ತೋರಿಸುವ ಅವರು ನೋಡುಗನ ತಲೆಯಲ್ಲಿ ಹುಳುಗಳನ್ನೂ ಬಿಡುತ್ತಾರೆ. ಸ್ವತಃ ಅವರ ತಲೆಯಲ್ಲೂ ಹುಳುಗಳ ಸದ್ದು ಇನ್ನೂ ಉಳಿದಿರುವುದಕ್ಕೂ ಸಾಕ್ಷ್ಯಗಳು ಸಿಗುತ್ತವೆ. ಸಿನಿಮಾದ ತುಂಬ ಫಿಲ್ಟರ್ ಇಲ್ಲದ ಮಾತು.

ಶೇಖರ್ ಎಸ್. ಸಿನಿಮಾಟೊಗ್ರಫಿಯು ನಿರ್ದೇಶಕರ ಪ್ರಯೋಗಕ್ಕೆ ಅಗತ್ಯವಿರುವ ಇನ್ನೊಂದು ಕಣ್ಣೇ ಆಗಿದೆ. ಹಿನ್ನೆಲೆಯಲ್ಲಿ ಪ್ರವಹಿಸುವ ಚರಣ್ರಾಜ್ ಸಂಗೀತ ಚಿತ್ರದ ಪ್ರಮುಖ ಪಾತ್ರವಾಗಿರುವುದು ಉಲ್ಲೇಖನೀಯ. ಧನಂಜಯ್ ಅವರದ್ದು ಭಯ ಬೀಳಿಸುವಷ್ಟು ಸಹಜಾಭಿನಯ. ನಿವೇದಿತಾ ಕೆನ್ನೆ ಮೇಲಿನ ಮಚ್ಚೆ ಕಾಡುವಷ್ಟೇ ಅವರ ಪಾತ್ರವೂ ಆವರಿಸಿಕೊಳ್ಳುತ್ತದೆ. ಸುಧಿ, ಅಮೃತಾ ಅಯ್ಯಂಗಾರ್ ಅವರಿಗೂ ಅನುಭವಿಸುವಂತಹ ಪಾತ್ರಗಳು ಸಿಕ್ಕಿವೆ.

ನಾಯಕನ ಬೊಗಸೆಯಲ್ಲಿನ ನೀರ ಮೇಲಿನ ಸತ್ತ ಚಿಟ್ಟೆಯ ದರ್ಶನವೂ ಕ್ರೌರ್ಯವೇ ಅಲ್ಲವೇ? ಅಹುದಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.