ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘SSE–ಸೈಡ್‌ ಬಿ’ ಸಿನಿಮಾ ವಿಮರ್ಶೆ: ರಕ್ತವರ್ಣದಲ್ಲಿ ನೀಲಿ ಸಮುದ್ರದ ಮರುಹೆಣಿಗೆ

Published 17 ನವೆಂಬರ್ 2023, 12:39 IST
Last Updated 17 ನವೆಂಬರ್ 2023, 12:39 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಸಪ್ತ ಸಾಗರದಾಚೆ ಎಲ್ಲೋ (Side B)
ನಿರ್ದೇಶಕ:ಹೇಮಂತ್‌ ಎಂ. ರಾವ್‌   
ಪಾತ್ರವರ್ಗ:ರಕ್ಷಿತ್‌ ಶೆಟ್ಟಿ, ಚೈತ್ರಾ ಜೆ. ಆಚಾರ್‌, ರುಕ್ಮಿಣಿ ವಸಂತ್‌, ರಮೇಶ್‌ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್​ ಕುಮಾರ್​ ಮತ್ತಿತರರು.

ನಿರ್ಮಾಣ: ಪರಂವಃ ಪಿಕ್ಚರ್ಸ್‌   

ನಿಶ್ಶಬ್ದ ನದಿಯಂತೆ ಹರಿದು ಪ್ರಕ್ಷುಬ್ಧ ಗಮ್ಯ ಸೇರಿದ್ದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೊದಲ ಭಾಗದ ಕಥೆಯ ಮುಂದುವರಿದ ಭಾಗವಿದು; ಕ್ಯಾಸೆಟ್‌ನ ‘ಸೈಡ್‌–ಬಿ’ಯಂತೆ ಹೊಸ ತಿರುವು. ಇಲ್ಲಿಯೂ ಮೊದಲ ಅರ್ಧ ನಿಶ್ಶಬ್ದವೇ. ರಕ್ತವರ್ಣದಲ್ಲಿ ಕಳೆದುಹೋದ ನೀಲಿ ಬಣ್ಣವನ್ನು ಮರುಹೆಣಿಯುವ ನಾಯಕನ ತವಕ, ತುಡಿತವೇ ಈ ಭಾಗದ ಜೀವಾಳ. ಈ ದಾರಿಯಲ್ಲಿ ಪ್ರೀತಿಗೆ ಹಲವು ರೂಪ. ಅವನ್ನೆಲ್ಲ ಕಾಣಿಸುವಲ್ಲಿ ಗಟ್ಟಿಯಾಗಿ ವ್ಯಕ್ತಗೊಳ್ಳುವ ನಿರ್ದೇಶಕನ ಸಾವಧಾನ. 

ಇಡೀ ಸಿನಿಮಾದ ದೃಶ್ಯಗಳ ಹೆಣಿಗೆಯಲ್ಲಿ ನಿರ್ದೇಶಕ ಹೇಮಂತ್‌ ಎಂ.ರಾವ್‌ ಅವರು ಎಲ್ಲಿಯೂ ಅವಸರ ತೋರಿಲ್ಲ. ಏಕಕಾಲದಲ್ಲಿ ಎರಡೂ ಭಾಗಗಳ ಚಿತ್ರೀಕರಣ ನಡೆಸಿರುವುದರಿಂದ ಮೊದಲ ಭಾಗದ ವೇಗದಲ್ಲೇ ಎರಡನೇ ಭಾಗವೂ ಸಾಗುತ್ತದೆ. ಕಥೆ 10 ವರ್ಷ ಮುಂದೆ ಸಾಗಿದ ನಂತರದ ಸಂದರ್ಭವೇ ಎರಡನೇ ಭಾಗದ ಆರಂಭ.

‘ಮನು’(ರಕ್ಷಿತ್‌ ಶೆಟ್ಟಿ) ಸಣ್ಣ ಜೈಲಿನಿಂದ ಹೊರಜಗತ್ತೆಂಬ ದೊಡ್ಡ ಜೈಲು ಸೇರಿದ್ದಾನೆ, ದೈತ್ಯನಾಗಿದ್ದಾನೆ. ಆದರೆ ‘ಪ್ರಿಯಾ’ಳ(ರುಕ್ಮಿಣಿ ವಸಂತ್‌) ಪ್ರೀತಿಯ ಬಂಧನದಿಂದ ಬಿಡುಗಡೆಯಾಗಿಲ್ಲ! ಆಕೆಯ ಧ್ವನಿ ಕೇಳುವ ತುಡಿತ; ನೋಡುವ ಹಂಬಲ. ಬೇರೊಬ್ಬನೊಂದಿಗೆ ‘ಪ್ರಿಯಾ’ ಮದುವೆಯಾಗಿದ್ದರೂ ಆಕೆಯ ಕನಸಿನ ಗೋಪುರವನ್ನು ನಿರ್ಮಾಣ ಮಾಡುವ ‘ಮನು’ವಿನ ಪಯಣವೇ ಎರಡನೇ ಭಾಗದ ಕಥೆ. ಕೆಂಪು ದೀಪದಡಿ ಸಿಗುವ ‘ಸುರಭಿ’ಯಲ್ಲೇ(ಚೈತ್ರಾ ಜೆ.ಆಚಾರ್‌) ‘ಪ್ರಿಯಾ’ಳನ್ನು ಕಾಣುವ ‘ಮನು’ವಿನ ಪ್ರೀತಿಯ ರೂಪ ಭಿನ್ನ. ಈ ದಾರಿಗಳಲ್ಲೇ ‘ಮನು’ವಿಗೆ ‘ಸೋಮ’(ರಮೇಶ್‌ ಇಂದಿರಾ) ಮತ್ತೆ ಎದುರಾದಾಗ ಕಥೆಗೊಂದಿಷ್ಟು ವೇಗ, ಅಂತ್ಯ. 

ಸಿನಿಮಾದ ಎರಡನೇ ಭಾಗವನ್ನು ವೀಕ್ಷಿಸುವಾಗ ಇಡೀ ಕಥೆಯ ಬರವಣಿಗೆಯನ್ನು ಉಲ್ಲೇಖಿಸಲೇಬೇಕು. ಪ್ರೀತಿಯೆಂಬ ವಿಷಯವನ್ನಿಟ್ಟುಕೊಂಡು ಬಹಳ ಗಾಢವಾಗಿ ಬರೆದ ಕಥೆ ಇದು. ಪ್ರೀತಿಯ ಉತ್ಕಟತೆಯನ್ನು ಇಲ್ಲಿ ಕಾಣಬಹುದು. ಜೈಲಿನಿಂದ ಹೊರಬಂದ ಬಳಿಕ ‘ಮನು’ವನ್ನು ಕಾಡುವ ‘ಪ್ರಿಯಾ’ಳ ನೆನಪು, ಪ್ರೀತಿಯನ್ನು ಬರೆದ, ತೆರೆಗಿಳಿಸಿದ ರೀತಿ ಅದ್ಭುತ. ಗಾಜಿನ ತುಣುಕುಗಳಲ್ಲೇ ಹಲವು ರೂಪಕಗಳನ್ನು ನಿರ್ದೇಶಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ನೀರಿನ ಹನಿ ಹನಿಯಲ್ಲಿ ‘ಮನು’ವಿನ ಏಕಾಂತವನ್ನು ಮತ್ತು ವರ್ತಮಾನದ ಪರಿಸ್ಥಿತಿಯನ್ನು ಸಮೀಕರಿಸಿದಂತಹ ಬರವಣಿಗೆ ಉಲ್ಲೇಖಾರ್ಹ. ಬೆಳಕು–ಶಬ್ದದ ವಿನ್ಯಾಸ, ಅದ್ವೈತ ಗುರುಮೂರ್ತಿ ಅವರ ಛಾಯಾಚಿತ್ರಗ್ರಹಣಕ್ಕೆ ಈ ಭಾಗದಲ್ಲಿ ಹೆಚ್ಚು ಅಂಕ ಸಲ್ಲಬೇಕು. ತಾಂತ್ರಿಕವಾಗಿ ಎರಡನೇ ಭಾಗವು ಮೊದಲಿನದಕ್ಕಿಂತ ಮೇಲೇಳುತ್ತದೆ.

ರಕ್ಷಿತ್‌ ಅವರಿಗೆ ಇಲ್ಲಿ ತೆರೆ ದರ್ಶನದ ಅವಧಿ(ಸ್ಕ್ರೀನ್‌ಸ್ಪೇಸ್‌) ಹೆಚ್ಚು. ‘ಮನು’ವಿನ ಪಾತ್ರದ ಭಾವನೆ, ಗುಣಗಳು ಬದಲಾಗಿವೆ. ಇವುಗಳನ್ನು ರಕ್ಷಿತ್‌ ಸಮರ್ಥವಾಗಿ ನಿಭಾಯಿಸಿದ್ದಾರೆ. ಜೊತೆಗೆ ‘ಸಿಂಪಲ್‌’ ಸ್ಟಾರ್‌ ಮಚ್ಚು ಹಿಡಿದಿದ್ದಾರೆ! ರಕ್ಷಿತ್‌, ‘ಚಾರ್ಲಿ’ಯಲ್ಲಿ ತೋರ್ಪಡಿಸಿದ್ದ ತಮ್ಮ ನಟನಾ ಸಾಮರ್ಥ್ಯವನ್ನು ಸಿನಿಮಾದ ಈ ಭಾಗದಲ್ಲಿ ಮತ್ತೊಮ್ಮೆ ತೆರೆದಿಟ್ಟಿದ್ದಾರೆ. ರುಕ್ಮಿಣಿ ಪಾತ್ರಕ್ಕೆ ಈ ಭಾಗದಲ್ಲಿ ಮಾತು ಕಡಿಮೆ, ಭಾವನೆಗಳು ಹೆಚ್ಚು. ಮೌನದಲ್ಲೂ ರುಕ್ಮಿಣಿ ಅಂಕ ಗಿಟ್ಟಿಸುತ್ತಾರೆ. ಸಹಜ ನಟನೆಯಿಂದ ಚೈತ್ರಾ ಗಮನಸೆಳೆಯುತ್ತಾರೆ. ನಟನೆಯಲ್ಲಿ ಸಿನಿಮಾದಿಂದ ಸಿನಿಮಾಗೆ ಅವರು ಪಳಗುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆಗೆ ‘ಮನು’ವನ್ನು ನಡೆಸುವ, ನಗಿಸುವ ಜವಾಬ್ದಾರಿ ಇಲ್ಲಿ ದೊರಕಿದೆ. ಅದನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಖಳನಟನಾಗಿ ರಮೇಶ್‌ ಇಂದಿರಾ ಅವರ ಭಿನ್ನ ಹಾವಭಾವ ಗಮನ ಸೆಳೆಯುತ್ತದೆ. 

ಮೊದಲ ಭಾಗದಂತೇ(142.22 ನಿಮಿಷ) ಎರಡನೇ ಭಾಗವೂ ಸುದೀರ್ಘವಾಗಿದೆ(147.38 ನಿಮಿಷ). ಎರಡೂ ಭಾಗಗಳಲ್ಲಿ ಕೆಲ ದೃಶ್ಯಗಳ ಬರವಣಿಗೆಯನ್ನು ಕಡಿಮೆ ಮಾಡಬಹುದಿತ್ತು ಎನಿಸುತ್ತದೆ. ಒಟ್ಟಿನಲ್ಲಿ ಇಡೀ ಕಥೆಯಾಗಿ ಭಿನ್ನ ಅನುಭವವೊಂದನ್ನು ಸಿನಿಮಾ ನೀಡಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT