ಜಾತಿ ಸಂಘರ್ಷ, ಮೂಢನಂಬಿಕೆ, ಪುರುಷ ಪ್ರಾಬಲ್ಯ, ಮಹಿಳಾ ದೌರ್ಜನ್ಯಗಳ ವಿರುದ್ಧ ಒಂದೇ ಕಥೆಯಲ್ಲಿ ಅರಿವು ಮೂಡಿಸುವ ನಿರ್ದೇಶಕರ ಯತ್ನ ಕಥೆಗೆ ಬಲವಂತವಾಗಿ ಒಂದಷ್ಟನ್ನು ತುರುಕಿದ ಭಾವನೆ ಮೂಡಿಸುತ್ತದೆ. ಕೆಳಜಾತಿಯವರ ಕೇರಿಗೆ ಬೆಂಕಿ ಇಟ್ಟಾಗ ರಸ್ತೆಯಲ್ಲಿ ಸುರಿದು ಬಿದ್ದ ಅಕ್ಕಿಯನ್ನು ಹೆಕ್ಕುವ ಅಜ್ಜಿ, ಹೆಣ್ಣಿನ ಮುಟ್ಟಿನ ಕುರಿತಾದ ದೃಶ್ಯಗಳಂತಹ ಕೆಲವಷ್ಟು ಕೃತಕವೆನಿಸುತ್ತವೆ. ಜೊತೆಗೆ ಈ ರೀತಿಯ ಸಾಕಷ್ಟು ಸಿನಿಮಾಗಳು ಈಗಾಗಲೇ ಬಂದಿರುವುದರಿಂದ ಹೊಸತೇನು ಕಾಣಿಸುವುದಿಲ್ಲ. ಆದರೆ ನಿರ್ದೇಶಕ ಶ್ರೀಲೇಶ್ ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಅನನ್ಯವಾಗಿದೆ. ಮಲಯಾಳದ ‘ಅಂಗಮಾಲಿ ಡೈರೀಸ್’, ‘ಕಮ್ಮಾಟಿಪಾಡಂ’ ಮೊದಲಾದ ಚಿತ್ರಗಳ ರೀತಿಯಲ್ಲಿ ನಿರ್ದೇಶಕರು ‘ಪೆಪೆ’ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಛಾಯಾಚಿತ್ರಗ್ರಹಣ, ಸಂಕಲನ ಕೂಡ ಇದಕ್ಕೆ ಪೂರಕವಾಗಿದೆ.