ಭಾನುವಾರ, ಜೂನ್ 7, 2020
28 °C

ವಚನಗಳ ದೃಶ್ಯಕಾವ್ಯ ಲಾಕ್‌ಡೌನ್‌ನಲ್ಲಿ ಸಂಗೀತ ಥೆರಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಚನಗಳಿಗೆ ಫ್ಯೂಜನ್‌ ಟಚ್‌, ಜನಪದ ಗೀತೆಗಳನ್ನು ಕತೆಯ ರೂಪದಲ್ಲಿ ಹೇಳುವುದು, ನೃತ್ಯದ ಮೂಲಕ ಹಾಡುಗಳನ್ನು ಪ್ರಸ್ತುತಪಡಿಸುವುದು... ಇವು ಗಾಯಕಿ ರೂಪಾ ಕೊತ್ವಾಲ್‌ ಹಾಗೂ ಅವರ ತಂಡ ಕೈ ಹಾಕಿರುವ ಹೊಸ ಪ್ರಯೋಗಗಳು. ಈ ತಂಡದ ಸದಸ್ಯರು ಹಾಡಿರುವ ಮಲೆಮಹದೇಶ್ವರ, ಮಂಟೇಸ್ವಾಮಿ ಕುರಿತಾದ ಹಾಡು, ಬಸವಣ್ಣನ ವಚನಗಳು ಯೂಟ್ಯೂಬ್‌ ಮೂಲಕ ಸಾವಿರಾರು ಸಂಗೀತಪ್ರಿಯರನ್ನು ತಲುಪಿವೆ. 

ಲಾಕ್‌ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಂಡ ಗಾಯಕಿ ರೂಪಾ ಕೊತ್ವಾಲ್‌ ಹಾಗೂ ಅವರ ತಂಡವು, ವಚನಗಳು ಹಾಗೂ ಜನಪದ ಗೀತೆಗಳಿಗೆ ಫ್ಯೂಜನ್ ಟಚ್ ನೀಡುವ ಹೊಸ ಪ್ರಯೋಗ ಮಾಡಿದೆ. ಇವರು ಹಾಡಿರುವ ‘ಸೂಜುಗಾದ ಸೂಜಿ ಮಲ್ಲಿಗೆ’ ಹಾಡು ವೈರಲ್‌ ಆಗಿದೆ. ರೂಪಾ ಕೊತ್ವಾಲ್‌ ಅವರ ಗಾಯನ ಹಾಗೂ ಅದರ ಜೊತೆಗೆ ಕಾಣಿಸಿಕೊಳ್ಳುವ ದೃಶ್ಯ ವೈಭವ ಹಾಡನ್ನು ಆಪ್ತವಾಗಿಸುತ್ತವೆ.

ಈ ಹಾಡುಗಳಿಗೆ ಸಂಗೀತ ಸಂಯೋಜನೆ ಅನಿಲೇಶ್ ಮ್ಯಾಥ್ಯೂ, ನೃತ್ಯ ಮತ್ತು ಸಂಯೋಜನೆ ಮಂಜುಶ್ರೀ ಸಂತೋಷ್, ಸಂಕಲನ ಅಶ್ರಿತ್ ಬಿ.ಆರ್. ಮಾಡುತ್ತಿದ್ದಾರೆ. ‘ಜನಪದ ಗೀತೆ, ವಚನಗಳನ್ನು ಕೇಳುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಅದರಲ್ಲಿನ ಸ್ವಾದ ತಿಳಿದರೆ ಯುವಜನರೂ ಅವುಗಳಿಗೆ ಮನಸೋಲುತ್ತಾರೆ’ ಎಂಬುದು ಈ ತಂಡದ ಮಾತು. 

‘ಉಳ್ಳವರು ಶಿವಾಲಯ ಮಾಡುವರು...’ ಹಾಡು ಭರತನಾಟ್ಯ ಕಲಾವಿದೆ ಮಂಜುಶ್ರೀ ಸಂತೋಷ್ ಅವರು ಮೇಲುಕೋಟೆಯ ದೇವಸ್ಥಾನದ ಮೇಲೆ ಕೂತು ಅಲಂಕಾರ ಮಾಡಿಕೊಳ್ಳುವ ದೃಶ್ಯದಿಂದ ಆರಂಭವಾಗುತ್ತದೆ. ಅಲ್ಲಿನ ಪ್ರಕೃತಿಯ ಸೊಬಗಿನ ದೃಶ್ಯವೈಭವವನ್ನು ಈ ಹಾಡಿನಲ್ಲಿ ಕಾಣಬಹುದು. ನೃತ್ಯ, ಸಂಗೀತವು  ಕಣ್ಮನ ತಣಿಸುತ್ತದೆ.

‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’, ‘ವಚನದಲ್ಲಿ ನಾಮಾಮೃತ ತುಂಬಿ...’ ಹೀಗೆ ಈ ತಂಡದಿಂದ ಹೊರಹೊಮ್ಮಿರುವ ಅನೇಕ ಹಾಡುಗಳು ಯೂಟ್ಯೂಬ್‌ನಲ್ಲಿ ಲಭ್ಯ. ಅಮೆರಿಕದಲ್ಲಿ ನೆಲೆಸಿರುವ ಕಮಲ್ ರಾಜೀವ್ ಪುರಂದರೆ ಬರೆದು ಸಂಯೋಜನೆ ಮಾಡಿರುವ ‘ಭಗವತಿ ಸರಸತಿ’ ದೃಶ್ಯಗೀತೆಯನ್ನು ಅನೇಕರು ಮೆಚ್ಚಿದ್ದಾರೆ.

ಈ ತಂಡದ ನೇತೃತ್ವ ವಹಿಸಿಕೊಂಡಿರುವ ಹುಬ್ಬಳ್ಳಿಯ ರೂಪಾ ಮದುವೆಯಾದ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದರು. ಹಿಂದೂಸ್ತಾನಿ ಸಂಗೀತದಲ್ಲಿ ಪದವಿ ಪಡೆದುಕೊಂಡ ಬಳಿಕ, ವಿವಿಧ ಚಾನೆಲ್‌ಗಳಲ್ಲಿ ಕೆಲಸ ಮಾಡಿದರು. ಆರ್.ಜೆ.ಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಉದ್ಯೋಗ ತೊರೆದ ನಂತರ ಅವರು ಸಮಾನ ಮನಸ್ಕರಾದ ಅನಿಲೇಶ್ ಮ್ಯಾಥ್ಯೂ, ಮಂಜುಶ್ರೀ ಸಂತೋಷ್, ಅಶ್ರಿತ್ ಬಿ.ಆರ್ ಅವರ ಜೊತೆಗೂಡಿ ಸಂಗೀತದ ಹಾದಿಯಲ್ಲಿ ಭಿನ್ನ ಪ್ರಯತ್ನಕ್ಕೆ ಕೈ ಹಾಕಿದರು.

ಕೊರೊನಾ ಲಾಕ್‌ಡೌನ್‌ನಿಂದಾಗಿ ನಿರಾಶ್ರಿತರಾಗಿರುವ ಸಾವಿರಾರು ಕಾರ್ಮಿಕರು, ಕೆಲಸಗಾರರಿಗಾಗಿ ಧೈರ್ಯ ತುಂಬಲು ‘ಸಾಂಗ್‌ ಆನ್‌ ಹೋಪ್‌’ ಎಂಬ ಗೀತೆಯನ್ನು ಈ ತಂಡ ರಚಿಸಿದೆ. ‘ಭಯ ಬೇಡ ಓ ನನ್ನ ಜಗವೆ’ ಹಾಡಿನ ಮೂಲಕ ಜನರಲ್ಲಿ ಭರವಸೆ ತುಂಬುವ ಕೆಲಸ ಮಾಡಿದೆ. ‘ಲಾಕ್‌ಡೌನ್ ಸಮಯದಲ್ಲಿನ ಮೊದಲ ಪ್ರಯತ್ನ ಇದಾಗಿದೆ. ಇದಾದ ನಂತರ ಮತ್ತಷ್ಟು ಹಾಡುಗಳನ್ನು ನಾವು ರಚಿಸಿ, ಸಂಗೀತ ನೀಡಲಿದ್ದೇವೆ’ ಎನ್ನುತ್ತಾರೆ ರೂಪಾ.

ತೆರೆಮರೆಗೆ ಸರಿದ ವಚನ, ಜನಪದ ಹಾಡುಗಳಿಗೆ ಆಧುನಿಕ ಸಂಗೀತದ ಲೇಪ ಹಚ್ಚಿ ಜನರಿಗೆ ತಲುಪಿಸುವ ಈ ತಂಡದ ಪ್ರಯತ್ನ ನಿರಂತರವಾಗಿ ಸಾಗಿದೆ.

ಈ ತಂಡದ ಹಾಡುಗಳನ್ನು ಕೇಳಲು– https://youtu.be/6wW94aWBcZ4

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು