ಬುಧವಾರ, ಮೇ 12, 2021
18 °C

ಮುರಿದು ಕಟ್ಟೋಣ ರಂಗದ ಶಿಲ್ಪ

ಜಿ.ಎಂ ಶಿರಹಟ್ಟಿ Updated:

ಅಕ್ಷರ ಗಾತ್ರ : | |

Prajavani

ಎಲೆಕ್ಟ್ರಾನಿಕ್‌ ದೃಶ್ಯ ಮಾಧ್ಯಮದ ವಿರಾಟ ಸ್ವರೂಪ ಪ್ರೇಕ್ಷಕರ ಎದುರು ಇರುವಾಗ, ಟಿ.ವಿ, ಮೊಬೈಲ್‌ನಂತಹ ಚಿಕ್ಕ ಪರದೆ ನಾವಿರುವ ಸ್ಥಳಗಳನ್ನೆಲ್ಲ ಪ್ರವೇಶಿಸಿರುವಾಗ ಅವುಗಳ ನಡುವೆ ವೃತ್ತಿರಂಗಭೂಮಿಯು ಯಶಸ್ಸನ್ನು ಗಳಿಸಲು ಅದು ಹೊಸ ಶೈಲಿಯ ದೃಶ್ಯ ಮಾಧ್ಯಮ ಆಗಿರಬೇಕಾದುದು ಅತ್ಯವಶ್ಯ. ನಾಟಕ ಎನ್ನುವುದು ಯಾವಾಗಲೂ ಸಮಾಜದ ಕನ್ನಡಿ ಎನ್ನುವಾಗ, ವೃತ್ತಿರಂಗಭೂಮಿ ಈಗಿನ ಪ್ರೇಕ್ಷಕರಿಗಾಗಿ ಪ್ರಸ್ತುತ ಸಮಾಜದ ಓರೆಕೋರೆಗಳನ್ನು ಪ್ರಸ್ತುತಪಡಿಸುವ ನೂತನ ಪ್ರಯೋಗಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯ ಇದೆ. ಈ ಬದಲಾವಣೆಗೆ ಬೇಕಾಗಿರುವುದು ಹೊಸ ಹೊದಿಕೆಯ ಭಿನ್ನವಾದ ನಾಟಕಗಳ ರಚನೆ.

ನೆನಪಿನಲ್ಲಿ ಉಳಿಯುವ ಸಾಮಾಜಿಕ ಸಂದೇಶದೊಡನೆ ನಮ್ಮ ಬುದ್ಧಿಯನ್ನು ಚಿವುಟುವ ನಾಟಕಗಳ ರಚನೆ ಅಗತ್ಯವಾಗಿದೆ. ಈಗಿನ ಎಲೆಕ್ಟ್ರಾನಿಕ್‌ ಉಪಕರಣಗಳ ಯುಗದಲ್ಲಿ ವೃತ್ತಿರಂಗಭೂಮಿ ತನ್ನ ರೂಪವನ್ನು ಬದಲಿಸಿಕೊಳ್ಳುವ ಅನಿವಾರ್ಯವೂ
ಎದುರಾಗಿದೆ. ನಮ್ಮೆಲ್ಲರಿಗೂ ಗೊತ್ತಿರುವಂತೆ ವೃತ್ತಿರಂಗಭೂಮಿಯ ಪ್ರತಿಯೊಂದು ಪ್ರದರ್ಶನವನ್ನೂ ಪ್ರಯೋಗವೆಂದೇ ಕರೆಯಲಾಗುತ್ತದೆ. ಈ ಪ್ರಯೋಗವನ್ನು ಯಶಸ್ವಿಗೊಳಿಸಲು ‘ನಾಂದಿ’ ಮತ್ತು ‘ಮಂಗಳಾರತಿ’ಯ ನಡುವಿನ ಅಂತರವನ್ನು ಕಾಪಾಡಲು ಈ ವೃತ್ತಿಪರರು ಪಡುವ ಪಾಡು ಹೇಳತೀರದು. ಅಂತಹ ಹೋರಾಟದಲ್ಲಿಯೂ 50-60 ಜನರು ತಮ್ಮ ದೈನಂದಿನ ಸಮಸ್ಯೆಗಳನ್ನು ಮರೆತು ರಂಗಭೂಮಿಯ ಮೇಲೆ ಬಂದು ಪಾತ್ರಗಳಿಗೆ ಪ್ರಾಣತುಂಬಿ ಪ್ರೇಕ್ಷಕರಿಗೆ ಮುದ ನೀಡುತ್ತಿರುವ ಕೆಲಸ ಶ್ಲಾಘನೀಯವಾದುದು. ಇಂತಹ ರಂಗಭೂಮಿಗೆ ಇದೀಗ ನವ್ಯ ಹೊದಿಕೆಯನ್ನು ಹೆಣೆಯಬೇಕಾಗಿದೆ.

ಈ ನಾಟಕಗಳ ಕಥಾವಸ್ತು ಸಂಪೂರ್ಣವಾಗಿ ಸಮಾಜಕ್ಕೆ ಹಿಡಿದ ಕೈಗನ್ನಡಿ ಆಗಿದ್ದರೂ ಅವುಗಳ ರಚನೆ, ನಿರ್ಮಾಣ ಪ್ರಯೋಗಿಸುವ ವಿಧಾನ ಇವು ಈಗಿನ ಬದಲಾದ ಪ್ರೇಕ್ಷಕರ ರುಚಿಗೆ ಅನುಗುಣವಾಗಿವೆಯೇ ಎನ್ನುವುದು ಇಲ್ಲಿನ ಪ್ರಮುಖ ಪ್ರಶ್ನೆ.  ವೃತ್ತಿರಂಗಭೂಮಿಯ ಪ್ರತಿಯೊಂದು ಪ್ರಯೋಗ ಒಂದು ಆಹ್ವಾನದಂತಿರುವಾಗ ನಾಟಕ ರಚನೆಗೆ ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ.

ಸಮಕಾಲೀನ ವಿಷಯ ಕುರಿತಾದ ಉತ್ತಮ ಕಥಾವಸ್ತು, ಪರಿಣಾಮಕಾರಿಯಾದ ಉಪಕಥೆ, ನಾಟಕದ ಸೂಕ್ತ ವಿನ್ಯಾಸ, ಪ್ರೇಕ್ಷಕ ಕೇಂದ್ರಿತವಾದ ಸಂಭಾಷಣೆ, ಸಮಾಜದಲ್ಲಿ ಪರಿಚಿತ ಪಾತ್ರಗಳ ರಚನೆ, ಆಡು ಭಾಷೆಯ ಬಳಕೆ, ಸಹನೆಯನ್ನು ಪರೀಕ್ಷಿಸದ ದೃಶ್ಯ ಹಾಗೂ ಮಿತವಾದ ಪ್ರಯೋಗಾವಧಿ ಈ ಅಂಶಗಳು ತುಂಬಾ ಮುಖ್ಯವಾದವು.

ನಂಬಲು ಸಾಧ್ಯವಾಗುವಂತಹ ಕಥೆ ಇರದಿದ್ದರೆ ನಾಟಕವೇ ಅನಿಸುವುದಿಲ್ಲ. ಕವಿಗಳ ಕಲ್ಪನೆ (ವೃತ್ತಿರಂಗಭೂಮಿಯ ನಾಟಕ ಬರೆಯುವವರಿಗೆ ಕವಿ ಎನ್ನುತ್ತಾರೆ) ಎಲ್ಲವೂ ನಾಟಕವಾಗುವುದಿಲ್ಲ. ಸಾಮಾಜಿಕ ಸಮಸ್ಯೆಗಳು ಈಗಿನ ನಾಟಕಗಳಲ್ಲಿ ಇದ್ದರೂ ಭರ್ಜರಿ ಪ್ರಯೋಗಗಳ ನಡುವೆ ನಾಟಕದ ಮುಖ್ಯ ಸಂದೇಶವೇ ಮರೆಯಾಗಿ ಬಿಡುತ್ತದೆ (ಈಗಿನ ಹಲವು ನಾಟಕಗಳ ಹೆಸರೇ ಬೇರೆ... ನಾಟಕದ ಕಥಾವಸ್ತುವೇ ಬೇರೆ).

ಪೌರಾಣಿಕ, ಐತಿಹಾಸಿಕ ನಾಟಕಗಳು ಈಗೀಗ ಕಲ್ಪನಾತೀತವಾಗಿ ಅವುಗಳ ಮೇಲಿನ ವಿಶ್ವಾಸ ಕಡಿಮೆ ಆಗುತ್ತಿದೆ. ನಾಟಕ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನ ಭಾವನೆಗಳಿಗೆ ಎಲ್ಲಿಯೋ ಒಂದೆಡೆ ಅವನ ಮನ ಮುಟ್ಟುವಂತಹ ಕಥಾನಕ ಅವಶ್ಯ. ನೈತಿಕತೆಯ ಪಾಠ ಹೇಳುವುದಕ್ಕಿಂತ ಸಾಮಾಜಿಕ ಜೀವನದ ಮಾರ್ಗ ಅನುಸರಿಸುವ ರೀತಿನೀತಿ ಹೇಳುವ ನಾಟಕಗಳ ಕಥಾವಸ್ತು ಎಲ್ಲರಿಗೂ ಗ್ರಹ್ಯವಾಗುತ್ತದೆ. ಇಂತಹ ಕಥಾವಸ್ತು ಅಥವಾ ನೈಜ ಘಟನೆಗಳತ್ತ ಗಮನ ಹರಿಸಬೇಕು (ವೃತ್ತಿರಂಗ ಭೂಮಿಯ ನಾಟಕಗಳಲ್ಲಿ ನೈಜ ಘಟನೆಗಳನ್ನು ಒಳಗೊಂಡ ಕಥಾನಕಗಳು ಕಡಿಮೆ). ಸಮಾಜದಲ್ಲಿ ಈಗಿರುವ ಆದರ್ಶ ವ್ಯಕ್ತಿಯೊಬ್ಬ ನಮ್ಮ ನಾಟಕದ ಕಥಾವಸ್ತು ಆಗಬೇಕು. ಈಗಿನ ಘಟನೆಗಳು ನಮ್ಮ ಚಿಂತನೆಗೆ ಒಳಪಡಬೇಕು. ಇದು ನಮ್ಮ ಕಥೆಯಾಗಬೇಕು.

ಕಥಾವಸ್ತುವಿನಲ್ಲಿ ಬರುವ ಪಾತ್ರಗಳಿಗೆ ಸಂಬಂಧಿಸಿ ಉಪಕಥೆಗಳನ್ನು ಸೇರಿಸುವುದು ಅತಿಮುಖ್ಯ. ಕುಟುಂಬದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ತನ್ನ ವ್ಯವಹಾರದಲ್ಲಿ, ಸಂಬಂಧಗಳಲ್ಲಿ ಒಂದಿಲ್ಲ ಒಂದು ರೀತಿಯ ಭಾಗವಾಗಿರುತ್ತಾನೆ. ಅಂತಹ ಭಾಗಗಳ ಉಪಕಥೆಗಳು ಕಥೆಯ ಹಂದರಕ್ಕೆ ಮತ್ತಷ್ಟು ನೈಜತೆಯನ್ನು ತರಬಲ್ಲವು.

ಪ್ರಯೋಗಕ್ಕೆ ಹೋಗುವ ಮುನ್ನ ನಾಟಕದ ಹಂದರವನ್ನು ಹಾಕಬೇಕು (ಡಿಸೈನಿಂಗ್‌). ಇದನ್ನು ಒಟ್ಟಾಗಿ ಓದಿದಾಗ ನಾವು ನೋಡುವ ನಾಟಕ ಸಂಪೂರ್ಣವಾಗಿ ಹೇಗೆ ಕಾಣಬಹುದು ಎಂಬುದರ ಅರಿವಾಗುತ್ತದೆ. ಆದ್ದರಿಂದ ಬರೆದುದನ್ನು ಹಲವು ಬಾರಿ ಓದಬೇಕು. ಬೇರೆಯವರಿಗೆ ಕೇಳಿಸಬೇಕು. ಆಗ ನಾಟಕದ ಒಂದು ವಿನ್ಯಾಸ ಕೊನೆಗೆ ರೂಪುಗೊಳ್ಳುತ್ತದೆ. ನೋಡುತ್ತಾ ಬರೆದು, ನಂತರ ಬರೆದಂತೆ ನೋಡಬೇಕಾದುದು ನಾಟಕದ ವಿನ್ಯಾಸಕ್ಕೆ ಅತ್ಯವಶ್ಯ.

ಪ್ರೇಕ್ಷಕನಾಗಿ ಬರೆದಾಗ ನೋಡಿ ತಿಳಿದುಕೊಳ್ಳುವ ಸಹಜಸ್ಥಿತಿ ಉಂಟಾಗುತ್ತದೆ. ಹೇಳುವವನು ಮೊದಲು ಕೇಳುವವನಾಗಬೇಕು ಎಂಬಂತೆ ಈ ನಾಟಕಗಳನ್ನು ಬರೆಯುವವನು ಕೊನೆಯ ಸಾಲಿನ ಪ್ರೇಕ್ಷಕನಾಗಬೇಕು. ಕಥಾವಸ್ತು ಆಯ್ಕೆ ಮಾಡುವಾಗ, ಪಾತ್ರಗಳನ್ನು ನಿರ್ಮಿಸುವಾಗ, ಭಾಷೆಯನ್ನು ಬಳಸುವಾಗ, ಪಾತ್ರಗಳ ಚಲನವಲನ ನಿರ್ಧರಿಸುವಾಗ ಹಾಗೂ ದೃಶ್ಯಗಳನ್ನು ಚಿತ್ರಿಸುವಾಗ ಇವೆಲ್ಲ ಯಾರಿಗಾಗಿ? ಯಾರ ಎದುರು? ಇವುಗಳನ್ನು ನೋಡುವವರ‍್ಯಾರು? ಇವುಗಳನ್ನು ನೋಡಿ ಅವರು ಅರ್ಥೈಸಿಕೊಳ್ಳಲು ಸಾಧ್ಯವೇ? ತನಗಾದ ಅನುಭವ, ಪ್ರೇಕ್ಷಕನಿಗೆ ಆದೀತೆ? ಈ ಪ್ರಶ್ನೆಗಳಿಗೆ ಬರೆಯುವವನು ಸರಿಯಾದ ಉತ್ತರ ಪಡೆದರೆ ಆಗ ಯಶಸ್ಸಿನ ಮೊದಲ ಮೆಟ್ಟಲು ಹತ್ತಿದಂತೆ.


ನಾಟಕಗಳಿಗೆ ಜೀವ ತುಂಬಿದ್ದ ಶಾಂತರೆಡ್ಡಿ, ಬನಪ್ಪ ಮತ್ತಿತರ ಕಲಾವಿದರು

ನಾವು ದಿನವೂ ನೋಡುವ, ಭೇಟಿ ಆಗುವ ಸಂಬಂಧಗಳ, ವ್ಯವಹಾರಗಳ ಪಾತ್ರಗಳು ಪರಿಚಿತವಾಗಿರಬೇಕು. ಇವರ‍್ಯಾರು ಎಂಬ ಪ್ರಶ್ನೆ ಉದ್ಭವಿಸದೆ ಇವರು ನಮ್ಮವರು ಎಂಬ ಉದ್ಗಾರ ನೋಡುವವನಿಂದ ಹೊರಡಬೇಕು. ಇಂತಹ ಪಾತ್ರಗಳು ನೋಡುವವನಿಗೆ ಬಹಳ ಹತ್ತಿರವಾಗುತ್ತವೆ.

ಆಡು ಭಾಷೆಯ ಉಪಯೋಗ ಅತ್ಯಂತ ಅವಶ್ಯ. ದಿನವೂ ನಮ್ಮ ದೈನಂದಿನ ಜೀವನದಲ್ಲಿ ಆಡಿ, ಕೇಳಿದ ಭಾಷೆ ನಾಟಕದಲ್ಲಿನ ಪಾತ್ರಗಳ ಭಾಷೆಯಾಗಿರಬೇಕು. ಶಬ್ದಗಳು ಪರಿಚಿತವಾಗಿರಬೇಕು. ದ್ವಂದ್ವಾರ್ಥಗಳುಳ್ಳ ಶಬ್ದಗಳನ್ನು ಪ್ರಯೋಗಿಸಲೇಬಾರದು. ಅಶ್ಲೀಲ ಉಚ್ಚಾರಣೆಯ ಶಬ್ದಗಳುಳ್ಳ ವಾಕ್ಯಗಳನ್ನು ರಚಿಸಲೇಬಾರದು. ಪಾತ್ರಗಳ ಗಾಂಭೀರ್ಯಕ್ಕೆ ತಕ್ಕಂತೆ ಭಾಷೆಯ ಪ್ರಯೋಗ ಆಗಬೇಕು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಯಾವುದೇ ನಾಟಕವಾಗಲಿ, ಯಾವುದೇ ಪಾತ್ರವಾಗಲಿ ಅವುಗಳ ವ್ಯಕ್ತಿತ್ವವನ್ನು ಕಾಯ್ದುಕೊಳ್ಳುವ ಭಾಷೆ ಉಪಯೋಗಿಸಬೇಕು.

ರಂಗದ ಮೇಲೆ ಎಷ್ಟೇ ಸಹಜತೆ ತರಲು ಪ್ರಯತ್ನಿಸಿದರೂ, ಆ ದೃಶ್ಯದ ನಂತರ ಅದು ನಾಟಕವೆಂಬ ಮಾತು ಆ ನೈಜತೆಯನ್ನು  ಮರೆಮಾಚುತ್ತದೆ. ಅಸಾಧ್ಯವಾದ ದೃಶ್ಯಗಳಿಂದ ನಾಟಕವನ್ನು ತುಂಬಬಾರದು. ದೃಶ್ಯಗಳು ಪಾತ್ರಗಳ ಸುತ್ತಮುತ್ತಲಿನ ಪರಿಸರವನ್ನು ಚಿತ್ರಿಸುವಂತಿರಬೇಕೇ ಹೊರತು ಕಲ್ಪನಾತೀತವಾಗಿರಬಾರದು.

ನಾಟಕ ಬರೆಯುವಾಗ ಅದರ ಅವಧಿಯನ್ನು ಮುಂದಿಟ್ಟುಕೊಂಡು ಅದನ್ನು ರಚಿಸುವ ಅವಶ್ಯಕತೆಯಿಲ್ಲ. ಕಥಾವಸ್ತುವಿನ ವಿವರಣೆ, ಅದರ ಪ್ರಾರಂಭ, ಅಂತ್ಯದವರೆಗೆ ಅದರ ಕಥನ ನಡೆಯಬೇಕು. ನಾಟಕದ ವಸ್ತುವನ್ನು ಅನವಶ್ಯಕವಾಗಿ ವಿಸ್ತರಿಸಬಾರದು. ಹೆಚ್ಚಿನ ಅವಧಿಯ ನಾಟಕಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತವೆ. ಆದ್ದರಿಂದ ಕಥೆಯ ವಿಸ್ತಾರಕ್ಕೆ ಅನುಗುಣವಾದ ಅವಧಿಯನ್ನು ಅನುಸರಿಸುವುದು ಉತ್ತಮ. ಇಂತಹ ಹಲವು ಅಂಶಗಳು ನಾಟಕ ರಚನೆಯಲ್ಲಿ ಇದ್ದರೂ ಇನ್ನೂ ಒಂದೆರಡು ಅಂಶಗಳನ್ನು ಸೇರಿಸಬಹುದು.

ನಾಟಕವನ್ನು ಬರೆದ ಮೇಲೆ ಕಂಪನಿ ನಾಟಕದ ಮಾಲೀಕ, ಮುಖ್ಯ ಪಾತ್ರಧಾರಿ, ಸಂಗೀತ ನಿರ್ದೇಶಕ ಹಾಗೂ ಸ್ನೇಹಿತರ ಎದುರಿಗೆ ಓದಬೇಕು (ಟೇಬಲ್ ರೀಡಿಂಗ್‌). ಆಗ ಈ ನಾಟಕ ಜನರಿಗೆ ಎಷ್ಟರ ಮಟ್ಟಿಗೆ ತಲುಪಬಹುದೆಂಬ ಮನವರಿಕೆಯಾಗುತ್ತದೆ. ಒಂದು ನಾಟಕ, ಅದರ ಕಂಪನಿಯ ಹೆಸರು, ಅದರಲ್ಲಿ ಅಭಿನಯಿಸುವ ನಟ ನಟಿಯರು ಬಹಳಷ್ಟು ದಿನ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಬೇಕಾದರೆ ನಾಟಕದ ಕಥಾವಸ್ತು ಮುಖ್ಯ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನೂರೈವತ್ತು ವರ್ಷಗಳಷ್ಟು ಇತಿಹಾಸ ಹೊಂದಿರುವ ವೃತ್ತಿರಂಗಭೂಮಿ ಜೀವಂತವಾಗಿ ಉಸಿರಾಡಬೇಕಾದರೆ ಅದರ ಶಿಲ್ಪವನ್ನು ಮುರಿದು ಕಟ್ಟುವುದು ಇಂದಿನ ತುರ್ತು ಎಂಬುದನ್ನೂ ಮರೆಯಬಾರದು.


ನಾಟಕದ ಆರಂಭಕ್ಕೂ ಮುನ್ನ ಗಜಾನನ ಸ್ತುತಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು