ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಪ್ರತಿಭೆಯ ಸಾಗರೋಲ್ಲಂಘನ: ಕಾಚನಹಳ್ಳಿಯಿಂದ ಸಿಂಗಪುರದವರೆಗೆ

Last Updated 7 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹಳ್ಳಿಯೊಂದರಲ್ಲಿ ರಾಮಾಯಣ, ಕುರುಕ್ಷೇತ್ರದಂತಹ ಪೌರಾಣಿಕ ನಾಟಕಗಳನ್ನ ನೋಡಿಕೊಂಡಿದ್ದ ಇವರು, ಮುಂದೆ ಅವ್ವ ಹೇಳುವ ಜನಪದ ಕಥೆ ಕೇಳುತ್ತಾ, ಶಾಲಾ–ಕಾಲೇಜುಗಳಲ್ಲಿ ನಾಟಕ ಅಭಿನಯಿಸುತ್ತಾ, ಹಾಡು ಹೇಳುತ್ತಾ ನಾಟಕ ಕಲಿಯುವ ತರಬೇತಿಗೆ ಸೇರಿದರು.

ವರ್ಷಗಳು ಕಳೆಯುವಷ್ಟರಲ್ಲಿ ನೂರಾರು ನಾಟಕಗಳಲ್ಲಿ ಅಭಿನಯಿಸಿದರು. ಹಲವು ನಾಟಕಗಳನ್ನು ನಿರ್ದೇಶಿಸಿದರು. ಸಂಗೀತ ಸಂಯೋಜನೆ, ವೇದಿಕೆ ವಿನ್ಯಾಸ, ನೃತ್ಯ ಹೀಗೆ ಅನೇಕ ಕಲಾ ಪ್ರಕಾರಗಳಲ್ಲಿ ಪರಿಣತಿ ಪಡೆದರು. ಈಗ ದೂರದ ದೇಶ ಸಿಂಗಪುರದ ರಂಗಭೂಮಿಯಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ, ಹಲವು ವಿದೇಶಿ ಕಲಾವಿದರಿಗೂ ರಂಗತರಬೇತಿ ನೀಡುವಷ್ಟರಮಟ್ಟಿಗೆ ಬೆಳೆದಿದ್ದಾರೆ.

ರಂಗಭೂಮಿ ಕ್ಷೇತ್ರದಲ್ಲಿ ಪ್ರಗತಿಯ ಮೆಟ್ಟಿಲುಗಳನ್ನು ಏರುತ್ತಾ, ವಿದೇಶಕ್ಕೂ ಹಾರಿರುವ ಯುವ ಪ್ರತಿಭೆಯ ಹೆಸರು ಕೆ.ಪಿ. ಲಕ್ಷ್ಮಣ್. ಇವರು ನೆಲಮಂಗಲ ಸಮೀಪದ ಕಾಚೇನಹಳ್ಳಿಯವರು.

ಡಿಪ್ಲೊಮಾ ಎಂಜಿನಿಯರಿಂಗ್ ಓದಿ ಕೆಲಸ ಮಾಡಿಕೊಂಡಿದ್ದ ಇವರು ಮೊದಲು ತಿಪಟೂರಿನಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಮುಂದೆ ಹೆಗ್ಗೋಡಿನ ನೀನಾಸಂನಲ್ಲಿ ನಾಟಕ ಅಭಿನಯದ ತರಬೇತಿ ಪಡೆದರು. ನೀನಾಸಂ ತಿರುಗಾಟದಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದರು.

‘ಒನ್ ಫೈನ್ ಡೇ’ ಅಂತಾರಲ್ಲಾ, ಹಾಗೆ, ಒಂದು ಒಳ್ಳೆಯ ದಿನ ಅವರಿಗೆ ಸಿಂಗಪುರದ ‘ಇಂಟರ್ ಕಲ್ಚರಲ್‌ ಥಿಯೇಟರ್ ಇನ್‌ಸ್ಟಿಟ್ಯೂಟ್‌’ ಇವರ ಪ್ರತಿಭೆಯನ್ನು ಗುರುತಿಸಿತು. ನಂತರ, ವಿಮಾನ ಏರಿ ಸಿಂಗಪುರಕ್ಕೆ ಹಾರಿಬಿಟ್ಟರು.

ಲಕ್ಷ್ಮಣ್‌ ಆ ಸಂಸ್ಥೆಗೆ ಆಯ್ಕೆಯಾಗಿದ್ದರ ಹಿಂದೆ ಒಂದು ಪುಟ್ಟ ಕಥೆ ಇದೆ. ಈ ಇನ್‌ಸ್ಟಿಟ್ಯೂಟ್‌‌ ಪ್ರತಿ ವರ್ಷ ಆಸಕ್ತ ಕಲಾವಿದರ ಆಯ್ಕೆಗಾಗಿ ಆಡಿಷನ್‌ ನಡೆಸುತ್ತದೆ. 2016ರಲ್ಲಿ ಭಾರತದಲ್ಲೂ ಅದೇ ರೀತಿಯ ಆಡಿಷನ್‌ ನಡೆಸಿತ್ತು. ಅದರಲ್ಲಿ ಇಬ್ಬರು ಆಯ್ಕೆಯಾಗಿದ್ದರು. ಅವರಲ್ಲಿ ಈ ಲಕ್ಷ್ಮಣ್‌ ಕೂಡ ಒಬ್ಬರು. ಹೀಗೆ ಇವರನ್ನು ಆಯ್ಕೆ ಮಾಡಿಕೊಂಡ ಸಂಸ್ಥೆ, ಸಿಂಗಪುರಕ್ಕೆ ಹಾರಿಸಿಕೊಂಡು ಹೋಯಿತು.

ಪಾಶ್ಚಾತ್ಯ ಕಲಾ ಪ್ರಕಾರಗಳಲ್ಲಿ ಪರಿಣತ

ಸಿಂಗಪುರದ ಇನ್‌ಸ್ಟಿಟ್ಯೂಟ್‌‌ನಲ್ಲಿ ವೈವಿಧ್ಯಮಯ ರಂಗ ಪ್ರಕಾರಗಳನ್ನು ಕಲಿತರು ಲಕ್ಷ್ಮಣ್‌. ಏಷ್ಯಾದ ನಾಲ್ಕು ಸಾಂಪ್ರದಾಯಿಕ ರಂಗ ಪ್ರಕಾರಗಳಾದ ಕೂಡಿಯಾಟ್ಟಂ, ನೋಹ್‌, ಬೀಜಿಂಗ್, ಒಪೆರಾ ವಯಾಂಗ್ ವಾಂಗ್ ತರಬೇತಿ ಪಡೆದರು. ಅಷ್ಟೇ ಅಲ್ಲ, ನಟನೆ, ನಿರ್ದೇಶನದಲ್ಲಿ ಪರಿಣತಿ ಹೊಂದಿದರು. ವಿದೇಶಗಳಲ್ಲಿ ವೇಟಿಂಗ್ ಫಾರ್ ಗುಡೋಟ್‌, ಬ್ಲಡ್ ವೆಡ್ಡಿಂಗ್, ಮಿಡ್ ಸಮ್ಮರ್ ನೈಟ್ ಡ್ರೀಮ್ಸ್, ಬಕೆಟ್ ಸ್ಮಾಲ್‌ ಪ್ಲೇಸ್‌, ವೆನ್ ವಿ ಡೆಡ್‌ ಅವ್‌ಕೆನ್‌, ಸೈಕ್ಲಿಸ್ಟ್, ಏಕ್ಸ್ಟ್ರೀಮಿಟಿಸ್‌ ಸೇರಿದಂತೆ ಅನೇಕ ನಾಟಕಗಳಲ್ಲಿ ನಟಿಸಿದರು. ನಟನೆಯ ಜತೆಗೆ ನಾಟಕ ನಿರ್ದೇಶನವನ್ನೂ ಮಾಡಿದ್ದಾರೆ. ಅದರಲ್ಲಿ ‘ಫೈರ್ ಫ್ಲೈಯ್ಸ್‌’, ‘ಕಕೇಶಿಯನ್ ಚಾಕ್ ಸರ್ಕಲ್‘ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ವಸ್ತ್ರ ವಿನ್ಯಾಸಕಾರರಾಗಿ, ಸಂಗೀತ ಸಂಯೋಜಕರಾಗಿ, ನೃತಗಾರರಾಗಿಯೂ ಖ್ಯಾತಿ ಪಡೆದಿದ್ದಾರೆ. ಇಷ್ಟೆಲ್ಲ ಬೆಳೆದು ನಿಂತರೂ ‘ರಂಗಭೂಮಿ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವಾಗಬೇಕು’ ಎಂದು ಆಶಿಸುತ್ತಾರೆ. ‘ಇದು ರಂಗಭೂಮಿಯಲ್ಲಿ ಕೆಲಸ ಮಾಡುವ ನನ್ನನ್ನು ಸೇರಿದಂತೆ ಎಲ್ಲರ ಜವಾಬ್ದಾರಿ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಭಿನ್ನ ಪ್ರಯೋಗ

ಲಕ್ಷ್ಮಣ್‌ಗೆ ಮೌಖಿಕ ಕಾವ್ಯಗಳನ್ನು ಭಿನ್ನವಾಗಿ ಪ್ರಯೋಗಿಸುವ ಬಯಕೆ. ಹೀಗಾಗಿ, ಮುಂದಿನ ದಿನಗಳಲ್ಲಿ ರಂಗಭೂಮಿ, ಶಿಕ್ಷಣ, ಸಾಹಿತ್ಯ, ಬರವಣಿಗೆ, ನಟನೆ, ನೃತ್ಯ ಇವೆಲ್ಲವೂ ಒಳಗೊಳ್ಳುವಂತಹ ಕೋರ್ಸ್‌ಗಳನ್ನು ಮಾಡಬೇಕೆಂಬ ಯೋಚನೆ ಇದೆ. ಈಗಾಗಲೇ ರಂಗಭೂಮಿಯ ಗೆಳೆಯರು ಸೇರಿಕೊಂಡು ‘ಜಂಗಮ ಕಲೆಕ್ಟಿವ್‌’ ಅನ್ನುವ ತಂಡ ಮಾಡಿಕೊಂಡಿದ್ದಾರೆ. ಅದರ ಮೂಲಕ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಗುರಿ ಇಟ್ಟುಕೊಂಡಿದ್ದಾರೆ.

ನಮ್ಮ ನಡುವಿರುವ ಈ ಪ್ರತಿಭಾನ್ವಿತ ಕಲಾವಿದ, ಸ್ಥಳೀಯವಾಗಿ ಅಷ್ಟು ಪರಿಚಯವಿಲ್ಲ. ಹಾಗೆ ಗುರುತಿಸುವ ಪ್ರಯತ್ನಗಳೂ ನಡೆದಂತೆ ಕಂಡಿಲ್ಲ. ‘ಆದರೆ, ವಿದೇಶಗಳಲ್ಲಿ ನಾಟಕ ಪ್ರದರ್ಶನದ ವೇಳೆ, ನನ್ನನ್ನು ಕಂಡ ಅಲ್ಲಿನ ಭಾರತೀಯರು, ಓಹೋ, ಇವ ನಮ್ಮ ಕಲಾವಿದ ಎಂದು ಗುರುತಿಸುತ್ತಾರೆ. ಆ ಕ್ಷಣದ ಖುಷಿಗೆ ಎಣೆಯೇ ಇಲ್ಲ’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ಲಕ್ಷ್ಮಣ್.

ಪ್ರಸ್ತುತ ಕೂಡಿಯಾಟ್ಟಂ ಪ್ರಸಿದ್ಧ ನಟಿ ಕಪಿಲ ವೇಣು, ಲಕ್ಷ್ಮಣ್ ಹಾಗೂ ಮತ್ತೊಬ್ಬ ಕಲಾವಿದರು ಸೇರಿಕೊಂಡು ಅರುಂಧತಿ ರಾಯ್‌ ಅವರ ‘ಗಾಡ್‌ ಆಫ್‌ ಸ್ಮಾಲ್ ತಿಂಗ್ಸ್’ ಹಾಗೂ ಪೆರುಮಾಳ್ ಮುರುಗನ್ ಅವರ ‘ಒನ್ ಪಾರ್ಟ್‌ ವುಮನ್’ ಕಥೆಯನ್ನು ಆಧರಿಸಿ ಪ್ರಯೋಗವೊಂದನ್ನು ಸಿದ್ಧಪಡಿಸುತ್ತಿದ್ದಾರೆ. ಇದನ್ನು ಮೆಕ್ಸಿಕೊದ ಬೆಟ್ಟೋ ಎನ್ನುವವರು ನಿರ್ದೇಶಿಸಲಿದ್ದಾರೆ. ಈ ನಾಟಕ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಭಾರತದಲ್ಲಿ ಹಾಗೂ ನವೆಂಬರ್‌ ಕೊನೆಯ ವಾರ ಮೆಕ್ಸಿಕೊದಲ್ಲಿ ಪ್ರದರ್ಶನಗೊಳ್ಳಲಿದೆ.

ನೀನಾಸಂ ತಿರುಗಾಟದಲ್ಲಿ...

2011 ರಲ್ಲಿ ನೀನಾಸಂ ಸೇರಿದ್ದು. ಕೋರ್ಸ್‌ ಮುಗಿದ ನಂತರ ಎರಡು ವರ್ಷ ‘ತಿರುಗಾಟ’ದಲ್ಲಿ ಭಾಗವಹಿಸಿದ್ದರು. ನಂತರ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಜನಮನದಾಟ, ಗಾಂಧಿ ವರ್ಸಸ್ ಗಾಂಧಿ, ವಿಗಡ ವಿಕ್ರಮ ರಾಯ, ಸೀಗಲ್, ಕಾಕನಕೋಟೆ, ಆನ್ ಫ್ರಾಂಕಳ ಡೈರಿ, ನುಲಿಯ ಚಂದಯ್ಯ, ಸೀತಾ ಸ್ವಯಂವರ, ಗಾಂಧಿ ಅಂಬೇಡ್ಕರ್‌, ಅಲೆಗಳಲ್ಲಿ ರಾಜಹಂಸ, ಬದುಕು ಬಯಲು, ಲೆಟ್‌ ಪಾಲಿಥ್ರೈವ್, ಮತ್ತೆ ಏಕಲವ್ಯ ಹಾಗೂ ಉತ್ತರ ರಾಮ ಚರಿತೆ ಜನಪ್ರಿಯವಾದವು.

ಬೆಂಗಳೂರಿನಲ್ಲಿ ‘ದ ಲೀಡರ್’

ಲಕ್ಷ್ಮಣ್ ಈ ವರ್ಷ ಫೆಬ್ರುವರಿಯಲ್ಲಿ ರಜೆ ಮೇಲೆ ಭಾರತಕ್ಕೆ ಬಂದಿದ್ದು. ಆಗ ಬದುಕು ಕಮ್ಯೂನಿಟಿ ಕಾಲೇಜು ವಿದ್ಯಾರ್ಥಿಗಳಿಗೆ ಯುಜೆನೊ ಐನೆಸ್ಕೊ ಅವರ ‘ದ ಲೀಡರ್’ ನಾಟಕವನ್ನು ಕನ್ನಡಕ್ಕೆ ಭಾಷಾಂತರ ಮಾಡಿ ನಿರ್ದೇಶನ ಮಾಡಿದ್ದರು. ಈ ನಾಟಕ ಎರಡು ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡರಲ್ಲೂ ಪ್ರಥಮ ಬಹುಮಾನ ಪಡೆಯಿತು. ಎಲ್ಲಾ ಕಾಲಕ್ಕೂ ಅನ್ವಯಿಸುವಂಥ ಈ ನಾಟಕವನ್ನು ನೋಡಿದ ಪ್ರೇಕ್ಷಕರು ಲಕ್ಷ್ಮಣ್‌ ಅವರನ್ನು ಹಾಡಿ ಹೊಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT