ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಿರುತೆರೆಯ ಈ ಆರತಿಗೆ ನಗುವೇ ಭೂಷಣ

Last Updated 26 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಪಾತ್ರ ಯಾವುದೇ ಇರಲಿ, ಜನರು ಗುರುತಿಸುವುದು ಬಹಳ ಮುಖ್ಯ ಎಂದು ದೇಸಿ ನಗುವಿನಿಂದಲೇ ಗಮನ ಸೆಳೆಯುವ ಆರತಿ ಕುಲಕರ್ಣಿ ಸದ್ಯ ‘ನಾನು ನನ್ನ ಕನಸು’ ಧಾರಾವಾಹಿಯ ಅಮ್ಮನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಅಪ್ಪ– ಮಗಳ ಬಾಂಧವ್ಯದ ಕಥಾಹಂದರ ಇರುವ ಧಾರಾವಾಹಿಯಲ್ಲಿ ಅಮ್ಮನಿಗೇನು ಕೆಲಸ ಎಂದರೆ ಅವರು ಹೇಳುವುದೇ ಬೇರೆ, ‘ಇದು ಅಪ್ಪ – ಮಗಳ ಕಥೆ ಇರಬಹುದು. ಅಡುಗೆ ಕೆಲಸದವನಾಗಿದ್ದರೂ ಮಗಳನ್ನು ಡಾಕ್ಟರ್‌ ಮಾಡಬೇಕೆಂಬ ಕನಸಿಗಾಗಿ ಮಗಳ ಬಳಿ ಡಾಕ್ಟರ್‌ ಎಂದು ಸುಳ್ಳು ಹೇಳಿಕೊಂಡ ಗಂಡ ಒಂದು ಕಡೆ, ಇವೆಲ್ಲ ಗೊತ್ತಿದ್ದರೂ ಪ್ರಬುದ್ಧತೆಯಿಂದ ವರ್ತಿಸುವ ಪುಟ್ಟ ಮಗಳು ಹೀಗೆ ಇವರ ನಡುವೆ ಅಮ್ಮನ ಪಾತ್ರಕ್ಕೆ ಇರುವ ಪ್ರಾಮುಖ್ಯ ದೊಡ್ಡದು. ಹಾಗಾಗಿ ಈ ಪಾತ್ರ ನನಗೆ ಬಹಳ ಖುಷಿ ನೀಡಿದೆ’ ಎಂದು ಅರುಹಿದ್ದಾರೆ.

‘ಗಂಡ ಸತ್ತ ಮೇಲೆ ಮಗಳನ್ನು ಡಾಕ್ಟರ್‌ ಮಾಡುವ ಜವಾಬ್ದಾರಿ ನನ್ನ ಪಾತ್ರದ ಮೇಲಿದೆ. ಮಧ್ಯಮವರ್ಗದ ಕುಟುಂಬದ ಎಲ್ಲ ಕಷ್ಟಗಳ ನಡುವೆಯೂ ಒಂಟಿ ಮಹಿಳೆಯಾಗಿ ಮಗಳನ್ನು ಬೆಳೆಸುವ ಈ ಪಾತ್ರ ವೀಕ್ಷಕರನ್ನು ಸೆಳೆಯುತ್ತಿದೆ’ ಎನ್ನುತ್ತಾರೆ.

ಪೋಷಕ ಪಾತ್ರಗಳಾ? ಎಂದು ನಾನು ಮೂಗು ಮುರಿದಿಲ್ಲ. ಪ್ರತಿ ಪಾತ್ರಕ್ಕೂ ತನ್ನದೇ ಆದ ಒಂದು ಮಹತ್ವ ಇದ್ದೇ ಇರುತ್ತದೆ. ಅದನ್ನು ಶ್ರದ್ಧೆಯಿಂದ ಮಾಡಿದರೆ, ಖಂಡಿತಾ ಜನರನ್ನು ಮುಟ್ಟುತ್ತದೆ ಎಂಬ ವಿಚಾರದಲ್ಲಿ ನಂಬಿಕೆ ಇಟ್ಟವಳು. ಹಾಗಾಗಿ ನಟನಾ ವೃತ್ತಿಯ ಆರಂಭದಿಂದಲೂ ಪೋಷಕ ಪಾತ್ರಗಳೇ ಬರುತ್ತಿದ್ದರೂ ನನಗೇನೂ ಬೇಸರವಿಲ್ಲ ಎಂಬ ಜಾಣ್ಮೆ ಅವರದ್ದು.

ಮಗಳ ಶ್ರೇಯಸ್ಸು ಬಯಸಿ ಸುಳ್ಳುಹೇಳುವ ಗಂಡನ ಕನಸನ್ನು ಪೂರೈಸುವ ದೊಡ್ಡ ಜವಾಬ್ದಾರಿ ಇರುವುದರಿಂದ ಈ ಪಾತ್ರ ದಿನ ದಿನಕ್ಕೂ ತಿರುವು ಪಡೆಯುತ್ತಿದೆ ಎಂದು ಖುಷಿ ವ್ಯಕ್ತಪಡಿಸುವ ಅವರು, ‘ಗಂಗಾ’, ‘ಅರಗಿಣಿ’, ‘ಸಿಂಧೂರ’ ಸೇರಿ ಎಂಟು ಧಾರಾವಾಹಿಗಳಲ್ಲಿ ಅಭಿಯಿಸಿದ್ದಾರೆ.

ಕಾಲೇಜಿನಲ್ಲಿ ಸ್ಥಳೀಯ ಚಾನೆಲ್‌ವೊಂದಕ್ಕೆ ವಾರ್ತಾ ವಾಚಕಿಯಾಗಿ ಕೆಲಸ ಮಾಡಿದ್ದೆ. ಅದಾದ ಮೇಲೆ ಕನ್ನಡದ ಹಲವು ನ್ಯೂಸ್‌ ಚಾನೆಲ್‌ಗಳಲ್ಲಿಯೂ ಕೆಲಸ ಮಾಡಿದೆ. ಇದೇ ಮುಂದೆ ಅಭಿನಯ ಕ್ಷೇತ್ರಕ್ಕೆ ಕರೆದುಕೊಂಡು ಹೋಗುತ್ತದೆ ಎಂಬ ಸಣ್ಣ ಸುಳಿವು ಇರಲಿಲ್ಲ. ನೃತ್ಯ, ಅಭಿನಯದಲ್ಲಿ ಸ್ವಲ್ಪ ಆಸಕ್ತಿ ಇತ್ತು. ಸ್ನೇಹಿತರು, ಮನೆಯವರ ಪ್ರೋತ್ಸಾಹದಿಂದ ಅರಗಿಣಿ ಧಾರಾವಾಹಿಯ ‘ಅಕ್ಷರ’ಳಾಗಿ ಅಭಿನಯಿಸಿದೆ. ಇದಾಗಿ ಒಂದೇ ತಿಂಗಳ ಅವಧಿಯಲ್ಲಿ ಹೊರಗೆ ಕಾಲಿಟ್ಟರೆ ಜನ ಅಕ್ಷರಳಾಗಿಯೇ ಗುರುತಿಸುತ್ತಿದ್ದರು. ಅಭಿನಯಕ್ಕಿರುವ ಶಕ್ತಿ ಅಂಥದ್ದು ಎಂದು ಅಭಿನಯ ಕ್ಷೇತ್ರಕ್ಕೆ ಬಂದ ಕತೆ ಬಿಚ್ಚಿಟ್ಟಿದ್ದಾರೆ.

ಹುಟ್ಟಿ, ಬೆಳೆದಿದ್ದೆಲ್ಲ ಬೆಳಗಾವಿಯ ಗೋಕಾಕ್‌ನಲ್ಲಿ. ಮೊದಲಿನಿಂದಲೂ ಪೂರ್ವ ಯೋಜನೆಯ ಬಗ್ಗೆ ತಲೆಕೆಡಿಸಿಕೊಂಡವಳೇ ಅಲ್ಲ. ಅಭಿನಯ ವಿಚಾರದಲ್ಲಿಯೂ ಹಾಗೆ. ಕ್ಯಾಮೆರಾ ಎದುರಿಸಲು ಯಾವುದೇ ಭಯವಿರಲಿಲ್ಲ. ಆದರೆ, ಸಂಭಾಷಣೆ ಒಪ್ಪಿಸುವ ಕ್ರಮದಲ್ಲಿ, ಭಾಷೆಯ ಏರಳಿತದಲ್ಲಿ ಸುದ್ದಿವಾಚಕಿಯ ಪ್ರಭಾವ ಹೆಚ್ಚಿರುತ್ತಿತ್ತು. ಇದನ್ನು ನಿರ್ದೇಶಕರು ಆರಂಭದಿಂದಲೇ ತಿದ್ದಿದರು. ಈಗ ನಟನೆ ಸುಧಾರಿಸಿದೆ ಎಂದುಕೊಂಡಿದ್ದೇನೆ ಎಂದು ವಿನ್ರಮವಾಗಿ ಹೇಳುತ್ತಾರೆ.

ಮುಖದಲ್ಲಿ ಸೌಮ್ಯತೆ ಇದೆ ಎಂದು ನನಗೆ ಸೌಮ್ಯ ಸ್ವಭಾವದ ಪಾತ್ರಗಳೇ ಸಿಗುತ್ತಿವೆ. ಇದರಿಂದ ಸಂಪ್ರದಾಯ ಕುಟುಂಬದಿಂದ ಬಂದಿರುವ ನನಗೆ ಅಭಿನಯಿಸಲು ಯಾವುದೇ ತೊಂದರೆಯಾಗುತ್ತಿಲ್ಲ. ಗಂಡ ಪವನ್‌, ಅತ್ತೆ, ಮಾವನ ಸಹಕಾರವು ದೊಡ್ಡದು. ಗಯ್ಯಾಳಿ, ಖಡಕ್‌ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆಯಿದೆ. ‘ಗಂಗಾ’ದಲ್ಲಿ ಬೆಸ್ಟ್‌ ಸೊಸೆ ಅವಾರ್ಡ್‌ ಸಿಕ್ಕಿತ್ತು. ನಿಜ ಜೀವನದಲ್ಲಿ ನಾನು ಒಳ್ಳೆಯ ಸೊಸೆಯೇ ಎಂದು ಬೀಗುತ್ತಾರೆಆರತಿ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT