ಬುಧವಾರ, ಜೂನ್ 3, 2020
27 °C

ಅವನೀ ಈಗ ಆರತಿ: ಈ ನಟಿಗೆ ಪೌರಾಣಿಕ ಪಾತ್ರಗಳಿಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಅಶ್ವಿನಿ ಚಿತ್ರಗಾರ್ತಿಯೂ ಹೌದು. ನಟನೆಯಿಂದ ಬಿಡುವು ಸಿಕ್ಕಾಗ ಕುಂಚ ಕೈಗೆತ್ತಿಕೊಂಡು ಚಿತ್ರ ಬಿಡಿಸುತ್ತಾರೆ. ಪ್ರತಿವರ್ಷ ಶಿವರಾತ್ರಿಯಂದು ಶಿವನ ಚಿತ್ರ ರಚಿಸುತ್ತಾ ಜಾಗರಣೆ ಮಾಡುತ್ತೇನೆ ಎಂದು ನಸು ನಗುತ್ತಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ದೊಡ್ಡಕ್ಕ ಆರತಿ ಪಾತ್ರವನ್ನು ನೋಡುತ್ತಿರುವ ವೀಕ್ಷಕರು, ‘ನಮಗೂ ಇಂತಹ ಒಬ್ಬ ಮಗಳಿರಬಾರದಿತ್ತಾ?’ ಎಂದು ಹಂಬಲಿಸುತ್ತಾರಂತೆ. ಈ ವಿಚಾರ ಹೇಳಿಕೊಂಡಿದ್ದು ಆರತಿ ಪಾತ್ರ ನಿರ್ವಹಿಸುತ್ತಿರುವ ನಟಿ ಅಶ್ವಿನಿ. 

‘ರಾಧಾರಮಣ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟವರು ಅಶ್ವಿನಿ. ಈಗ ‘ಗಟ್ಟಿಮೇಳ’ದಲ್ಲಿ ಎರಡನೇ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಲಿನ ಕೆನೆಯಂಥ ಮೈ ಬಣ್ಣ, ದುಂಡುಗೆನ್ನೆ, ಮೃದು ಮಾತು, ಹಾಗೇ ತಂಗಿಯರ ಪಾಲಿನ ಮುದ್ದು ಅಕ್ಕನ ಪಾತ್ರ ನಿರ್ವಹಿಸುತ್ತಿರುವ ಅಶ್ವಿನಿಯ ನಟನೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. 

‘ಸೀರಿಯಲ್‌ ಜಾತ್ರೆ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಜನ ಗುರುತಿಸಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆರತಿಯಂಥ ಅಕ್ಕ, ಮಗಳು ನಮಗೂ ಇರಬೇಕಿತ್ತು ಎನ್ನುತ್ತಾರೆ. ಅದೇ ನನಗೆ ಸಿಕ್ಕ ಬಹುಮಾನ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ. ಹಾಗೇ ಸಿನಿಮಾ, ಕಿರುತೆರೆ ಎರಡೂ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇರಿಸಿಕೊಂಡಿದ್ದಾರೆ. 

ದಾವಣಗೆರೆಯ ಅಶ್ವಿನಿ ಕಿರುತೆರೆಗೆ ಪ್ರವೇಶಿಸಿದ ಹಾದಿ ಸುಗಮವಾಗಿಯೇನೂ ಇಲ್ಲ. ನಟಿಯಾಗಬೇಕೆಂದು ಬೆಂಗಳೂರಿಗೆ ಬಂದ ಅಶ್ವಿನಿಗೆ ಮೊದಮೊದಲು ಯಾವುದೇ ಅವಕಾಶಗಳು ಸಿಗಲಿಲ್ಲ. ಸ್ಥಳೀಯ ಚಾನೆಲ್‌ನಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದರು. ಇದು ಅವರಿಗೆ ವೇದಿಕೆ ಭಯ ಕಡಿಮೆಯಾಗಿ, ಸರಾಗವಾಗಿ ಮಾತನಾಡಲು ಕಲಿಯಲು ನೆರವಾಯಿತಂತೆ. ಆಗ ಬಿಡುವಿನ ಅವಧಿಯಲ್ಲಿ ಧಾರಾವಾಹಿ ಆಡಿಶನ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರು ಭಾಗವಹಿಸಿದ ಆಡಿಶನ್‌ ಸಂಖ್ಯೆ 150ಕ್ಕೂ ಹೆಚ್ಚು.

ಕೊನೆಗೂ ‘ರಾಧಾರಮಣ’ ಧಾರಾವಾಹಿಯಲ್ಲಿ ಅವನೀ ಪಾತ್ರಕ್ಕೆ ಆಯ್ಕೆಯಾದರು. ಆದರೆ ಅದು ಅವರಿಗೆ ಮತ್ತೊಂದು ಫಜೀತಿ ತಂದಿಟ್ಟಿತು. ‘ಆ ಧಾರಾವಾಹಿಯಲ್ಲಿ ನನಗೆ ಸಿಕ್ಕಿದ್ದು ಸವಾಲಿನ ಪಾತ್ರವೇ. ಅವನಿಯೇ ಆ ಧಾರಾವಾಹಿಯ ಕೇಂದ್ರ. ಆದರೆ ಅವನಿಯ ಮುಖವನ್ನು ಒಂದು ವರ್ಷದವರೆಗೆ ಧಾರಾವಾಹಿಯಲ್ಲಿ ತೋರಿಸಿರಲಿಲ್ಲ. ನನ್ನ ಸಂಬಂಧಿಕರು, ಸ್ನೇಹಿತರು ಯಾವ ಧಾರಾವಾಹಿ ಮಾಡುತ್ತಿದ್ದೀಯಾ ಎಂದು ಕೇಳುತ್ತಿದ್ದರು. ಆದರೆ ನಾನು ಹೇಳಿಕೊಳ್ಳುವಂತಿರಲಿಲ್ಲ. ಪಾತ್ರ ಸವಾಲಿನಿಂದ ಕೂಡಿದ್ದರೂ, ಮುಖ ಮುಚ್ಚಿಕೊಂಡೇ ಇರಬೇಕಿತ್ತು. ಮೊದಮೊದಲು ಬೇಸರವಾಗುತ್ತಿತ್ತು. ಆದರೆ ಸಿಕ್ಕಿದ ಮೊದಲ ಅವಕಾಶ. ಹಿಂದೆ ಸರಿಯಬಾರದು ಎಂದು ನಿರ್ಧಾರ ಮಾಡಿದ್ದೆ. ಆದರೆ ಮುಂದೆ ಅವನಿ ಪಾತ್ರ ವೀಕ್ಷಕರಿಗೆ ಇಷ್ಟವಾಯಿತು. ಈಗಲೂ ಅವನಿ ಪಾತ್ರವನ್ನು ಜನ ನೆನಪಿಸಿಕೊಳ್ಳುತ್ತಾರೆ’ ಎಂಬ ಧನ್ಯತೆ ಅವರದು. ‘ಅದಾದ ನಂತರ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ಸಿಕ್ಕಿತು. ಎಲ್ಲರೂ ನನ್ನನ್ನು ಮನೆಮಗಳಾಗಿ ಗುರುತಿಸುತ್ತಾರೆ’ ಎನ್ನುತ್ತಾರೆ. 

ಅಶ್ವಿನಿಗೆ ಪೌರಾಣಿಕ ಪಾತ್ರಗಳಲ್ಲಿ ಮಿಂಚಬೇಕು ಎಂಬ ಆಸೆಯಿದೆ. ‘ಪ್ರತಿಭೆಗೆ ಸವಾಲಾಗುವಂಥ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನಾಸೆ. ಮಹಾಕಾಳಿ ಎಂಬ ಧಾರಾವಾಹಿಗೆ ಕಾಳಿ ಪಾತ್ರ ನಾನು ಮಾಡಬೇಕಿತ್ತು. ಆದರೆ ಅವನಿ ಪಾತ್ರದಿಂದಾಗಿ ಅದು ತಪ್ಪಿ ಹೋಯಿತು. ಭವಿಷ್ಯದಲ್ಲಿ ಐತಿಹಾಸಿಕ, ಪೌರಾಣಿಕ ಹಾಗೂ ಮಹಿಳಾ ಪ್ರಧಾನ ಪಾತ್ರಗಳನ್ನು ನಿರ್ವಹಿಸಬೇಕು. ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು. ಉತ್ತಮ ಪಾತ್ರದ ಜೊತೆಗೆ ಒಳ್ಳೆಯ ಧಾರಾವಾಹಿ, ಸಿನಿಮಾ ತಂಡವೂ ಆಗಿರಬೇಕು’ ಎಂದು ಕನಸುಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು