ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಲಿಟಿ ಶೋ.. ಹೊರಳು, ಮರುಳು!

ಸುಮಾ ಬಿ ಅವರ ಲೇಖನ
Published 25 ನವೆಂಬರ್ 2023, 21:22 IST
Last Updated 25 ನವೆಂಬರ್ 2023, 21:22 IST
ಅಕ್ಷರ ಗಾತ್ರ

‘ರಿಯಾಲಿಟಿ ಶೋ..’

ಬಹುತೇಕರ ಕಣ್ಣರಳಿಸುವಂತೆ, ಕಿವಿ ನಿಮಿರಿಸುವಂತೆ ಮಾಡುವ ಪದಪುಂಜ. ಪ್ರತಿಭೆಯನ್ನು ಒರೆಗೆ ಹಚ್ಚಿ, ಸಾಣೆ ಹಿಡಿದು ಹೊರಜಗತ್ತಿಗೆ ಪರಿಚಯಿಸುವ ವೇದಿಕೆ. ಪುಟ್ಟ ಪರದೆ ಮೇಲೆ ಪ್ರೇಕ್ಷಕರಿಗೆ ಬಹುದೊಡ್ಡ ಮನರಂಜನೆ ನೀಡುವ ಉಮ್ಮೇದು. ಇಲ್ಲಿ ಬೆಳಕು ಕಂಡ ಅನೇಕ ಪ್ರತಿಭೆಗಳ ಭವಿತವ್ಯವೂ ಹಸನಾಗಿದೆ. ಹಲವರು ಈ ವೇದಿಕೆ ಮೂಲಕವೇ ಬದುಕಿನ ಪಯಣದ ದಿಕ್ಕನ್ನೂ ಬದಲಿಸಿಕೊಂಡಿದ್ದಾರೆ. 

ನಗರದ ನಂಟು ಇರದ, ಸಂಗೀತದ ತಾಳ– ಲಯದ ಅರಿವಿರದ, ತನ್ನಷ್ಟಕ್ಕೆ ತಾನು ಹಾಡಿಕೊಳ್ಳುತ್ತಿದ್ದ ಕುಗ್ರಾಮದ ಪ್ರತಿಭೆಯೊಂದು ಟಿ.ವಿ ಪರದೆ ಮೇಲೆ ಇನ್ನಿಲ್ಲದ ಹೆಸರು ಮಾಡಿತು. ಶಾಲಾ ವಾರ್ಷಿಕೋತ್ಸವಕ್ಕೆ ಸೀಮಿತವಾಗಬೇಕಿದ್ದ ಹಲವು ಮಕ್ಕಳ ಕಲಾವಂತಿಕೆ ದೊಡ್ಡ ವೇದಿಕೆಯಲ್ಲಿ ಮಿನುಗುವಂತೆ ಮಾಡಿದ ಹೆಗ್ಗಳಿಕೆಯೂ ರಿಯಾಲಿಟಿ ಶೋಗಳದ್ದು. ಇಂತಹ ಹಲವು ಹೊಳಹುಗಳ ನಡುವೆಯೂ ಅನೇಕರಲ್ಲಿ ಬೇಸರ ತುಂಬಿದ, ಹಿಂಸೆ ಉಣಿಸಿದ ಕುಖ್ಯಾತಿಯನ್ನೂ ರಿಯಾಲಿಟಿ ಶೋಗಳು ಅಂಟಿಸಿಕೊಂಡಿವೆ.

ಮೆಲ್ಲಗೆ ಮಗ್ಗಲು ಹೊರಳಿಸುವ ರಿಯಾಲಿಟಿ ಶೋಗಳು ಸ್ಪರ್ಧಿಗಳಲ್ಲಿ ಕಣ್ಣೀರಿನ ಕಥೆಗಳನ್ನು ಹುಡುಕುತ್ತಿವೆ ಎನ್ನುವ ಭಾವವೊಂದು ವ್ಯಕ್ತವಾಗುತ್ತಿದೆ. ವೀಕ್ಷಕರು ಬಯಸುವುದೂ ಅದನ್ನೇ ಆಲ್ಲವೇ ಎನ್ನುವ ಧ್ವನಿಯೂ ಕಿವಿಗಪ್ಪಳಿಸುತ್ತದೆ. ಸಂಗೀತ ಪ್ರತಿಭೆಯನ್ನು ಹುಡುಕುವ ರಿಯಾಲಿಟಿ ಶೋಗಳಲ್ಲಿ ಈಗ ಹಿನ್ನೆಲೆಯ ಕಥೆಯೊಂದು ಇರಲೇಬೇಕು. ಸ್ಪರ್ಧಿಯ ವೈಯಕ್ತಿಕ ಬದುಕು ಮುನ್ನೆಲೆಗೆ ಬಂದಾಗಲೇ ಆ ಕಾರ್ಯಕ್ರಮಕ್ಕೊಂದು ವೀಕ್ಷಕ ವಲಯ ಸೃಷ್ಟಿಯಾಗುತ್ತದೆ. ಭಾವೋದ್ವೇಗದ, ಕಣ್ಣೀರಿನ, ಅಸಹಾಯಕತೆಯ ಕಥೆ ಇದ್ದರೆ ಆ ಶೋ ಅತಿ ಹೆಚ್ಚು ವೀಕ್ಷಕರನ್ನು ಪಡೆಯುತ್ತದೆ.

‘ಬಿಗ್‌ ಬಾಸ್‌’ 10ನೇ ಆವೃತ್ತಿಯಲ್ಲಿ ಸ್ಪರ್ಧಿಯೊಬ್ಬರಿಗೆ ಶಿಕ್ಷೆಯ ರೂಪದಲ್ಲಿ ಸಗಣಿ ನೀರನ್ನು ಎರಚಲಾಯಿತು. ಅದನ್ನು ಉಳಿದ ಸ್ಪರ್ಧಿಗಳು ಆಡಿಕೊಂಡು ಖುಷಿಪಟ್ಟರು. ಈ ಎಪಿಸೋಡ್‌ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಯಿತು. ಮತ್ತೊಬ್ಬರಿಗೆ ಹಿಂಸೆ ಕೊಡುತ್ತಲೇ, ಮನರಂಜನೆಯ ಭಾಗವಾಗಿ ಆ ಎಪಿಸೋಡ್‌ ವಿಜೃಂಭಿಸಿತು. ‘ಹುಲಿ ಉಗುರು’, ‘ಜಾತಿ ನಿಂದನೆ’ಯ ಕಾರಣಕ್ಕೆ ಎರಡು ಪ್ರಕರಣಗಳು ಈ ಬಾರಿಯ ‘ಬಿಗ್‌ ಬಾಸ್‌’ ಸ್ಪರ್ಧಿಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನ್ನೂ ಕಂಡೆವು. ಇಂತಹ ಹಲವು ವಿವಾದಗಳನ್ನು ಹೊತ್ತಿರುವ ‘ಬಿಗ್‌ ಬಾಸ್‌’ ತನ್ನ ಹಿಂದಿನ ಎಲ್ಲ ಆವೃತ್ತಿಗಳಿಗಿಂತಲೂ ಅತಿ ಹೆಚ್ಚು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಮುನ್ನುಗ್ಗುತ್ತಿದೆ. ವಾರಾಂತ್ಯವಲ್ಲದೇ, ವಾರದ ದಿನಗಳಲ್ಲೂ ಟಿಆರ್‌ಪಿಯಲ್ಲಿ (ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌) ಮೇಲ್ಮುಖ ಚಲನೆ ಕಾಣುತ್ತಿರುವುದು ಗಮನಾರ್ಹ. ಹಾಗಾದರೆ ವೀಕ್ಷಕರೂ ಇಂತಹದ್ದನ್ನೇ ಕಣ್ತುಂಬಿಕೊಳ್ಳಲು ಬಯಸುತ್ತಿದ್ದಾರೆಯೇ ಎನ್ನುವ ಪ್ರಶ್ನೆಯೊಂದು ಮೊಳಕೆಯೊಡೆಯುತ್ತದೆ.

ಜಿಯೋ ಸಿನಿಮಾದಲ್ಲಿ ಇದೇ ನವೆಂಬರ್‌ನಿಂದ ‘ಟೆಂಪ್ಟೇಶನ್‌ ಐಲ್ಯಾಂಡ್‌’ ರಿಯಾಲಿಟಿ ಶೋ ಆರಂಭವಾಗಿದೆ. ‘ಪ್ಯಾರ್‌ ಕಿ ಪರೀಕ್ಷಾ’ ಎನ್ನುವ ಟ್ಯಾಗ್‌ಲೈನ್‌ ಅಂಟಿಸಿಕೊಂಡಿರುವ ಈ ಶೋ, ಪ್ರೇಮಿಗಳ ನಡುವೆ ವ್ಯಕ್ತಿಯೊಬ್ಬರನ್ನು ಬಿಟ್ಟು ಪ್ರೀತಿಯನ್ನು ಪರೀಕ್ಷೆಗೊಳಪಡಿಸುತ್ತದೆ. ಶೋ ಆರಂಭವಾದ ಮೂರ್ನಾಲ್ಕು ವಾರಗಳಲ್ಲೇ ಹಲವು ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಅನುಮಾನಗೊಂಡು ಕುಸಿದಿದ್ದಾರೆ. ನಿರ್ಮಲ ಪ್ರೀತಿಯನ್ನು ಪಣಕ್ಕೊಡ್ಡುವ ಇಂತಹ ರಿಯಾಲಿಟಿ ಶೋಗಳು ಸಮಾಜಕ್ಕೆ ನೀಡುವ ಸಂದೇಶವಾದರೂ ಏನು ಎನ್ನುವ ಪ್ರಶ್ನೆಯೂ ಈಗ ಎದ್ದಿದೆ.

1972ರಲ್ಲಿ ಬೋರ್ನ್‌ವೀಟಾ ರಸಪ್ರಶ್ನೆ ಸ್ಪರ್ಧೆಯೊಂದನ್ನು ಡೆರೆಕ್‌ ಒಬ್ರಿಯಾನ್‌ ನಡೆಸಿದರು. ಝೀ ವಾಹಿನಿ ಹಾಗೂ ದೂರದರ್ಶನದಲ್ಲಿ ಪ್ರಸಾರಗೊಂಡ ಇದು ಭಾರತದ ಮೊದಲ ರಿಯಾಲಿಟಿ ಶೋ ಎಂದೆನಿಸಿಕೊಂಡಿದೆ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವುದರ ಭಾಗವಾಗಿ ಆರಂಭವಾದ ರಿಯಾಲಿಟಿ ಶೋಗಳು ಈಗ ಬೇರೊಬ್ಬರ ಖಾಸಗೀತನವನ್ನು ಬಹಿರಂಗಗೊಳಿಸಲು ಸ್ಪರ್ಧೆಗಿಳಿದಂತೆ ಭಾಸವಾಗುತ್ತಿವೆ. ಇದನ್ನೇ ವೀಕ್ಷಕ ವಲಯ ಒಪ್ಪಿಕೊಳ್ಳುತ್ತಿದೆ, ಅಪ್ಪಿಕೊಳ್ಳುತ್ತಿದೆ.  

–ಕಾವ್ಯಾ ಶಾಸ್ತ್ರಿ, ನಟಿ, ಬಿಗ್‌ಬಾಸ್‌ 4ನೇ ಆವೃತ್ತಿಯ ಸ್ಪರ್ಧಿ

–ಕಾವ್ಯಾ ಶಾಸ್ತ್ರಿ, ನಟಿ, ಬಿಗ್‌ಬಾಸ್‌ 4ನೇ ಆವೃತ್ತಿಯ ಸ್ಪರ್ಧಿ

ಈಗಿನ ಯಾವುದೇ ರಿಯಾಲಿಟಿ ಶೋ ಇರಲಿ, ಅದು ಕಥೆಯೊಂದನ್ನು ಹುಡುಕುತ್ತದೆ. ಸ್ಪರ್ಧಿಯ ಅಸಹಾಯಕತೆಯನ್ನೇ ಬಂಡವಾಳವಾಗಿಸಿಕೊಳ್ಳುತ್ತದೆ. ಅಪ್ಪಟ ಪ್ರತಿಭೆ ಬೆಳಕಿಗೆ ಬರುವುದು ಇತ್ತೀಚೆಗೆ ಕಡಿಮೆಯಾಗುತ್ತಿದೆ. ಒಂದು ಉತ್ಪನ್ನ ಮಾರಾಟ ಮಾಡಬೇಕೆಂದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪಾದಿಸುವುದು ಅನಿವಾರ್ಯ. ಅದೇ ರೀತಿ ವೀಕ್ಷಕ ವಲಯ ಬಯಸೋದನ್ನೇ ಶೋಗಳು ನೀಡುತ್ತಿವೆ. ಪರಿಣಾಮ ಕಂಟೆಂಟ್‌ ಕಡಿಮೆ; ಮಸಾಲ ಜಾಸ್ತಿ ಆಗುತ್ತಿದೆ. ಮೊದಲು ನಾವು ನಮ್ಮ ಜವಾಬ್ದಾರಿಯನ್ನು ಮೆರೆಯಬೇಕು. ಯಾವುದನ್ನು ಮಕ್ಕಳ ಜತೆ ಕೂತು ನೋಡುತ್ತಿದ್ದೇವೆ, ಅದು ಮಕ್ಕಳ ಮೇಲೆ ಬೀರುವ ಪರಿಣಾಮ ಏನು? ಅನ್ನುವುದರ ಅರಿವಿರಬೇಕು. ಈ ಕಾರಣಕ್ಕೇ ಈಚೆಗೆ ‘ಮಕ್ಕಳೊಂದಿಗೆ ಬಿಗ್‌ ಬಾಸ್‌ ನೋಡಬೇಡಿ’ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ವಯಸ್ಸಿನ ಮಿತಿ ಎನ್ನುವುದು ಪ್ರತಿ ಶೋಗೂ ಇರುತ್ತದೆ. ಟಿ.ವಿ.ಗಳಲ್ಲಿ ಹಾಗಲ್ಲ. ಯಾರು ಬೇಕಾದರೂ ನೋಡಬಹುದು. ಹಾಗಾಗಿ, ಪೋಷಕರಾದ ನಾವು ಮಕ್ಕಳ ಬೆಳವಣಿಗೆಗೆ, ನನ್ನ ಮನೆಯ ಸ್ವಾಸ್ಥ್ಯಕ್ಕೆ ಯಾವುದು ಮುಖ್ಯ, ಯಾವುದು ಅಲ್ಲ ಎನ್ನುವುದನ್ನು ನಿರ್ಧರಿಸಬೇಕು. ಈಗೀಗ ‘ಎನಿ ಪಬ್ಲಿಸಿಟಿ ಈಸ್‌ ಗುಡ್‌ ಪಬ್ಲಿಸಿಟಿ’ ಎನ್ನುವ ಭಾವನೆ ಅನೇಕರಲ್ಲಿ ಅವಿತಿದೆ. ಸಕಾರಾತ್ಮಕ ಅಂಶಗಳಿಂದಲೇ ಪ್ರಚಾರ ಸಿಗಬೇಕೆಂದೇನೂ ಇಲ್ಲ. ಒಟ್ಟಿನಲ್ಲಿ ಪ್ರಚಾರ ಸಿಕ್ಕರೆ ಸಾಕು ಎನ್ನುವ ಭಾವ ಬಹುತೇಕರದ್ದು. ಈ ಕಾರಣಕ್ಕೇ ರಿಯಾಲಿಟಿ ಶೋಗಳಲ್ಲಿ ಡಬಲ್‌ ಮೀನಿಂಗ್‌ ಪದ ಬಳಕೆ, ಪರಸ್ಪರ ಬೈದುಕೊಳ್ಳುವುದು, ಹೊಡೆದಾಡಿಕೊಳ್ಳುವುದು ಹೆಚ್ಚಾಗುತ್ತಿದೆ.
–ಕಾವ್ಯಾ ಶಾಸ್ತ್ರಿ, ನಟಿ, ಬಿಗ್‌ಬಾಸ್‌ 4ನೇ ಆವೃತ್ತಿಯ ಸ್ಪರ್ಧಿ
ವಿಜಯ್‌ ರಾಘವೇಂದ್ರ

ವಿಜಯ್‌ ರಾಘವೇಂದ್ರ

ಟಿ.ವಿ ಶೋ, ಒಟಿಟಿಯಲ್ಲಿನ ವೆಬ್‌ ಸರಣಿಗಳಿಗೆ ಸೆನ್ಸಾರ್‌ ಇಲ್ಲ. ಆದರೆ ಸಿನಿಮಾಗಳಿಗೆ ಮಾತ್ರ ಸೆನ್ಸಾರ್‌ ಇದೆ. ಹಲವು ವಿಷಯ– ವಸ್ತುಗಳನ್ನು ತೋರಿಸದಿರುವುದರ ನಡುವೆ ನಾವು ಸಿನಿಮಾ ಮಾಡಬೇಕು. ಟಿ.ವಿ. ಶೋಗಳಿಗೆ ಇದಾವುದರ ಕಟ್ಟುಪಾಡು ಇಲ್ಲ. ಕಟ್ಟುಪಾಡುಗಳು ಇರುವುದರಿಂದಲೇ ಸಿನಿಮಾಗಳು ಮೌಲ್ಯಗಳನ್ನು ಉಳಿಸಿಕೊಂಡಿವೆ. ಬದಲಾವಣೆ ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಿದೆ. ಈಗಿನ ವೀಕ್ಷಕ ಬಯಸಿದ್ದನ್ನು ಟಿ.ವಿ. ಶೋಗಳು ನೀಡುತ್ತಿವೆ. ನೋಡುಗರಾದ ನಾವು ನಮ್ಮ ಪ್ರಜ್ಞೆ ಮರೆಯಬಾರದು. ಇಂಥದ್ದು ಬೇಕು, ಬೇಡ ಎನ್ನುವುದು ಆಯಾ ವ್ಯಕ್ತಿಯ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆ ಮನಃಸ್ಥಿತಿ ಬಯಸೋದನ್ನೇ ಪುಟ್ಟ ಪರದೆ ತೋರಿಸುತ್ತದೆ ಅಷ್ಟೇ. ನಾನು ಸ್ಪರ್ಧಿಸಿದ ‘ಬಿಗ್‌ ಬಾಸ್‌’ ಮೊದಲ ಸರಣಿಗೂ ಈಗಿನದ್ದಕ್ಕೂ ಬಹಳ ವ್ಯತ್ಯಾಸವಿದೆ. ಹಾಗೆಯೇ ಆಗಿನ ವೀಕ್ಷಕ ವಲಯಕ್ಕೂ ಈಗಿನದ್ದಕ್ಕೂ ತುಂಬಾ ಭಿನ್ನತೆ ಇದೆ. ಮನೋರಂಜನೆ ಈಗ ದೊಡ್ಡ ಪರದೆಯಿಂದ ಅಂಗೈಗೆ ಬಂದು ಕುಳಿತಿದೆ. ಆ ಅಂಗೈ ಈಗ ಕಂಟೆಟ್‌ ಕ್ರಿಯೇಟ್‌ ಮಾಡುತ್ತದೆ. ಅದರಲ್ಲಿ ಉತ್ತಮ ಅಂಶಗಳೂ ಇವೆ. ಕೆಟ್ಟ ಅಂಶಗಳು ಇರುತ್ತವೆ. ಯಾವುದನ್ನು ಆಯ್ದುಕೊಳ್ಳಬೇಕು ಎಂದು ನಾವು ನಿರ್ಧರಿಸಬೇಕು. ಇರೋದನ್ನು ಇದ್ದ ಹಾಗೇ ಹೇಳುವ ಮನಃಸ್ಥಿತಿ ಎಷ್ಟು ಬೇಗ ಶುರುವಾಗುತ್ತೋ ಅಷ್ಟು ಬೇಗ ಎಲ್ಲರೂ ಸುಧಾರಿಸುತ್ತಾರೆ.
–ವಿಜಯ್‌ ರಾಘವೇಂದ್ರ, ನಟ, ರಿಯಾಲಿಟಿ ಶೋ ತೀರ್ಪುಗಾರ
ಮಂಜುನಾಥ್‌ ಎಲ್‌. ಬಡಿಗೇರ್‌

ಮಂಜುನಾಥ್‌ ಎಲ್‌. ಬಡಿಗೇರ್‌

ಜನರ ಭಾವನೆಗಳನ್ನು ರಿಯಾಲಿಟಿ ಶೋಗಳು ಬಂಡವಾಳವನ್ನಾಗಿಸಿಕೊಂಡಿವೆ. ಸೋತ ಸ್ಪರ್ಧಿಗಳು ಖಿನ್ನತೆಗೆ ಒಳಗಾಗುವುದು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಮ್ಮ ಎದುರಿಗಿವೆ. ಇದರ ಬೆನ್ನಲ್ಲೇ ಶೋಗಳಲ್ಲಿ ಎಲೆಮರೆ ಕಾಯಿಯಂತಿದ್ದ ಸ್ಪರ್ಧಿಗಳಿಗೆ ದೊಡ್ಡ ವೇದಿಕೆಯನ್ನೂ ಒದಗಿಸುತ್ತಿವೆ, ಅವರ ಬದುಕಿಗೆ ದಾರಿ ತೋರಿಸುತ್ತಿವೆ ಎನ್ನುವುದೂ ಸತ್ಯ. ಇಂತಹದ್ದರ ನಡುವೆ ಇದನ್ನು ಬಿಡಬೇಕೋ, ಬೇಡವೋ ಎನ್ನುವ ಜಿಜ್ಞಾಸೆ ಶುರುವಾಗುತ್ತದೆ. ಈಗ ಪ್ರತಿಭೆಗಿಂತ ಪ್ರಚಾರ ಮುಖ್ಯ. ಆ ಪ್ರಚಾರಕ್ಕೆ ಎಲ್ಲರೂ ಹಪಹಪಿಸುತ್ತಿದ್ದಾರೆ. ಮಾಡಿದ್ದು ಸಣ್ಣದೇ ಆದರೂ ಪ್ರಚಾರ ದೊಡ್ಡದಾಗಿ ಕೊಡುತ್ತಾರೆ. ಸಮಾಜದ ಎಲ್ಲ ಬಗೆಯ, ಎಲ್ಲ ವಯೋಮಾನದ ವೀಕ್ಷಕರನ್ನೂ ಸೆಳೆಯುವ ಅನಿವಾರ್ಯ ಟಿ.ವಿ. ಶೋಗಳದ್ದು. ಹಾಡಿನ ರಿಯಾಲಿಟಿ ಶೋನಲ್ಲಿ ಈಗ ಸ್ಪರ್ಧಿಯ ಹಿನ್ನೆಲೆ ಮುಖ್ಯವಾದರೂ ಅಳಿವಿನ ಅಂಚಿನಲ್ಲಿರುವ ಜೋಗಿ ಪದಗಳು, ಗೀಗಿ ಪದಗಳಿಗೂ ಇಲ್ಲಿ ವೇದಿಕೆ ಒದಗಿಸಲಾಗುತ್ತಿದೆ. ಮರೆಯಾಗುತ್ತಿರುವ ಜನಪದ ಕಲೆಯನ್ನು ಯುವ ಮನಸಿಗೆ ದಾಟಿಸುವ ಕಾರ್ಯವೂ ಇಲ್ಲಿ ನಡೆಯುತ್ತಿದೆ. ಇಂಥವು ಸಮಾಧಾನದ ಸಂಗತಿಗಳು. ‘ಡ್ರಾಮಾ ಜೂನಿಯರ್ಸ್‌’ ರಿಯಾಲಿಟಿ ಶೋ ಶುರುವಾದ ಬಳಿಕ ನಾಟಕ ತರಬೇತಿಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ‘ನಾಟಕ’ದಲ್ಲೂ ಭವಿಷ್ಯವಿದೆ ಎನ್ನುವುದು ಪೋಷಕರ ಅರಿವಿಗೆ ಬಂದಿದೆ. ಇದು ಸಹ ಆಶಾದಾಯಕ ಬೆಳವಣಿಗೆ.  
–ಮಂಜುನಾಥ್‌ ಎಲ್‌. ಬಡಿಗೇರ್‌, ರಂಗಕರ್ಮಿ, ‘ಡ್ರಾಮಾ ಜೂನಿಯರ್ಸ್‌’ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ರಂಗ ತರಬೇತಿ ನೀಡುವವರು
ಪ್ರಶಾಂತ್‌ ನಾಯಕ್‌

ಪ್ರಶಾಂತ್‌ ನಾಯಕ್‌

ಜನರ ಅಭಿರುಚಿಗೆ ಕನೆಕ್ಟ್‌ ಆದಾಗ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಅದೇ ರೀತಿ 10ನೇ ಆವೃತ್ತಿ ‘ಹ್ಯಾಪಿ ಬಿಗ್‌ ಬಾಸ್‌’ ಎನ್ನುವ ಥೀಮ್‌ ಅನ್ನು ಜನ ಸ್ವೀಕರಿಸಿದ್ದಾರೆ. ಈ ಬಾರಿ ಸೆಲೆಬ್ರಿಟಿಗಳಿಗಿಂತ ಭಿನ್ನ ವ್ಯಕ್ತಿತ್ವ ಹೊಂದಿರುವ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದು ಕೂಡ ದೊಡ್ಡ ಯಶಸ್ಸಿಗೆ ಕಾರಣವಾಗಿದೆ. ‘ಹುಲಿ ಉಗುರು’ ಧರಿಸುವುದು ತಪ್ಪು ಎಂಬ ಜಾಗೃತಿಯನ್ನು ಈ ಬಾರಿಯ ‘ಬಿಗ್‌ ಬಾಸ್‌’ ಮನೆ ಮೂಡಿಸಿದೆ.
-ಪ್ರಶಾಂತ್‌ ನಾಯಕ್‌,  ಬಿಸಿನೆಸ್‌ ಹೆಡ್‌ ಕಲರ್ಸ್‌ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT