ಕಲರ್ಸ್ ಕನ್ನಡ ಮನರಂಜನಾ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ ‘ಕನ್ನಡತಿ’ ಜನವರಿ ಅಂತ್ಯಕ್ಕೆ ಮುಕ್ತಾಯವಾಗುತ್ತಿದೆ. ಆ ಜಾಗದಲ್ಲಿ ಹೊಸ ಧಾರಾವಾಹಿ ‘ಪುಣ್ಯವತಿ’ ಅಥವಾ ‘ತ್ರಿಪುರ ಸುಂದರಿ’ ಪ್ರಸಾರಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ವಾಹಿನಿಯ ಮೂಲಗಳು ಖಚಿತಪಡಿಸಿವೆ.
‘ಪುಟ್ಟಗೌರಿ ಮದುವೆ’ ಖ್ಯಾತಿಯ ರಂಜನಿ ರಾಘವನ್ ಹಾಗೂ ನಟ ಕಿರಣ್ ರಾಜ್ ಅಭಿನಯದ ಈ ಧಾರಾವಾಹಿ ಕಲರ್ಸ್ ಕನ್ನಡದ ಮಟ್ಟಿಗೆ ಹೊಸದೊಂದು ಬ್ರ್ಯಾಂಡ್ ಸೃಷ್ಟಿಸಿತ್ತು ಎಂದರೆ ತಪ್ಪಾಗಲಾರದು. 2020 ಜನವರಿ 27ರಂದು ಆರಂಭವಾದ ಕನ್ನಡತಿಗೆ ವಾಹಿನಿ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಸ್ವತಃ ಕಥೆ ರಚಿಸಿದ್ದರು. ಕಥೆಗಾರ, ಪತ್ರಕರ್ತ ವಿಕಾಸ್ ನೇಗಿಲೋಣಿ ಅವರ ಚಿತ್ರಕಥೆಯಿತ್ತು. ಜೈಮಾತಾ ಕಂಬೈನ್ಸ್ ನಿರ್ಮಾಣದ ಈ ಧಾರಾವಾಹಿ ಒಟ್ಟಾರೆ ವಾಹಿನಿಯ ಟಿಆರ್‌ಪಿ ಕುಸಿದ ಸಮಯದಲ್ಲಿ ಅತ್ಯುತ್ತಮ ರೇಟಿಂಗ್ ನೀಡಿತ್ತು. ಜೊತೆಗೆ ಟಿ.ಎನ್.ಸೀತಾರಾಂ ಧಾರಾವಾಹಿಗಳ ಬಳಿಕ ವಾಹಿನಿಗೆ ದೊಡ್ಡ ಮಟ್ಟದಲ್ಲಿ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿತ್ತು. ಸಂಚಿಕೆಯ ಕೊನೆಗೊಂದು ಕನ್ನಡ ಪದ ಕಲಿಸುವ ಕನ್ನಡ ಕ್ಲಾಸ್ ಕೂಡ ಜನಮನ್ನಣೆ ಗಳಿಸಿತ್ತು.
ನಿಲ್ಲುತ್ತಿರುವುದು ಏಕೆ?
ಈಗಾಗಲೇ 700 ಕಂತುಗಳನ್ನು ಪೂರೈಸಿದ್ದು ನಡೆಯುತ್ತಿರುವ ಕಥೆ ಸತ್ವ ಕಳೆದುಕೊಂಡಿತ್ತು. ಒಂದು ಧಾರಾವಾಹಿ 600–700 ಸಂಚಿಕೆ ದಾಟಿದ ಮೇಲೆ ಜನಪ್ರಿಯತೆ, ರೇಟಿಂಗ್ ಉಳಿಸಿಕೊಳ್ಳುವುದು ಬಹಳ ಕಷ್ಟ. ಅಮ್ಮಮ್ಮನ ಪಾತ್ರದ ಸಾವಿನ ನಂತರ ಕಥೆ ಎಲ್ಲಿಗೋ ಸಾಗುತ್ತಿದೆ, ಜಾಳಾಗಿದೆ ಎಂಬ ಆರೋಪ ಹೊತ್ತ ಪ್ರತಿಕ್ರಿಯೆಗಳು ವಾಹಿನಿಯ ಸಾಮಾಜಿಕ ಜಾಲತಾಣ ಪುಟಗಳಲ್ಲೇ ಕಾಣಸಿಗುತ್ತಿತ್ತು. ವಾಹಿನಿಗಳ ವೀಕ್ಷಣೆ ಅಳತೆಗೋಲಾಗಿರುವ ಬಾರ್ಕ್ 48ನೇ ವಾರದ ರೇಟಿಂಗ್ ವರದಿಯಂತೆ ಕನ್ನಡತಿ 4.5 ಟಿಆರ್‌ಪಿ(ವಾಹಿನಿಯ ಒಂದು ನಿರ್ದಿಷ್ಟ ಕಾರ್ಯಕ್ರಮ/ಸ್ಲಾಟ್‌ನ ರೇಟಿಂಗ್) ಹೊಂದಿದ್ದರೆ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಇದರ ದುಪ್ಪಟ್ಟು ಅಂದರೆ, 9.6 ರೇಟಿಂಗ್ ನೀಡಿದೆ. ಹೊಸ ಧಾರಾವಾಹಿಗಳಾದ ಭಾಗ್ಯಲಕ್ಷ್ಮಿ, ಕೆಂಡಸಂಪಿಗೆ, ರಾಮಾಚಾರಿಗಳಿಗೆ ಹೋಲಿಸಿದರೂ ಟಿಆರ್‌ಪಿ ಕಡಿಮೆ ಇದೆ.
ಪ್ರಸ್ತುತ ನಂಬರ್ ಒನ್ ಸ್ಥಾನದಲ್ಲಿರುವ ಜೀ ಕನ್ನಡ ಸರಾಸರಿ 691 ಜಿಆರ್‌ಪಿ(ವಾಹಿನಿಯ ಎಲ್ಲ ಕಾರ್ಯಕ್ರಮ/ಸ್ಲಾಟ್‌ಗಳನ್ನು ಸೇರಿಸಿ ಒಟ್ಟೂ ರೇಟಿಂಗ್) ಹೊಂದಿದ್ದರೆ, ಒಂದು ಕಾಲದಲ್ಲಿ ನಂಬರ್ ಒನ್ ಆಗಿದ್ದ ಕಲರ್ಸ್ ಜಿಆರ್‌ಪಿ 435ರ ಗಡಿಯಲ್ಲಿದೆ. ಜೀ ಕನ್ನಡದ ಗಟ್ಟಿಮೇಳ, ಶ್ರೀರಸ್ತು, ಸತ್ಯ ಧಾರಾವಾಹಿಗಳ ಎದುರು ‘ಬಿಗ್‌ಬಾಸ್’ ಕೂಡ ಮಂಕಾಗಿದೆ. ವಾರದ ದಿನಗಳಲ್ಲಿ ಬಿಗ್‌ಬಾಸ್ ಟಿಆರ್‌ಪಿ 4ರ ಗೆರೆ ದಾಟಿಲ್ಲ. ಆದರೆ ಜೀ ಕನ್ನಡದ ಅರ್ಧ ಗಂಟೆ ಧಾರಾವಾಹಿಗಳು 7–10 ಟಿಆರ್‌ಪಿ ನೀಡುತ್ತಿವೆ. ಸ್ಪರ್ಧೆಯಲ್ಲಿ ಉಳಿಯಲು ಕಲರ್ಸ್ ಕನ್ನಡ ಹೊಸ ಕಥೆಗಳನ್ನು ಪ್ರಯತ್ನಿಸುವುದು ಅನಿವಾರ್ಯ ಎಂಬಂತಾಗಿದೆ.
ಮನರಂಜನೆ ವಾಹಿನಿಯ ಟ್ರೆಂಡ್ ನೋಡಿದರೆ ಈ ಏರಿಳಿತ ಸಾಮಾನ್ಯ. ಒಂದು ದಶಕದ ಕಾಲ ನಂಬರ್ ಒನ್ ಆಗಿದ್ದ ಉದಯ ವಾಹಿನಿಯನ್ನು ಏಷ್ಯಾನೆಟ್ ಸುವರ್ಣ ಹಿಂದಿಕ್ಕಿತ್ತು. 4–5 ವರ್ಷ ನಂಬರ್ ಒನ್ ಆಗಿದ್ದ ಸುವರ್ಣವನ್ನು ಕಲರ್ಸ್ ಕನ್ನಡ ಮೀರಿಸಿತ್ತು. ಇದೀಗ ಜೀ ಕನ್ನಡ ಅಗ್ರಸ್ಥಾನಕ್ಕೆ ಏರಿದೆ. ಮನರಂಜನೆ ಜಗತ್ತಿನಲ್ಲಿ ಒಂದಷ್ಟು ವರ್ಷಕ್ಕೊಮ್ಮೆ ಈ ಟ್ರೆಂಡ್ ಬದಲಾಗುವುದು, ಪ್ರೇಕ್ಷಕರು ವರ್ಗಾಂತರಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ.
ಕಥೆ ಏನು?
ಕಥೆಯ ನಾಯಕಿ ಮಲೆನಾಡಿನ ಹಸಿರುಪೇಟೆಯ ಭುವನೇಶ್ವರಿ. ಅಪ್ಪನಿಲ್ಲದ ಈಕೆ ವೃತ್ತಿಯಿಂದ ಕನ್ನಡ ಶಿಕ್ಷಕಿ. ಮನೆಯ ಜವಾಬ್ದಾರಿ ಹೊತ್ತು, ಹರ್ಷನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಹರ್ಷನನ್ನೇ ಪಡೆಯಬೇಕು ಎಂಬ ಹಠಕ್ಕೆ ಬೀಳುವ ಕಥೆಯ ವಿಲ್ಲನ್ ವರೂಧಿನಿ, ಆಸ್ತಿ ಬೇಕು ಎನ್ನುವ ಸಾನಿಯಾರ ನಡುವೆ ಭುವಿಯ ಬದುಕು. ಮನೆಯಲ್ಲಿ ಅಮ್ಮಮ್ಮನ ಸ್ಥಾನ ತುಂಬಿಕೊಂಡು ಈಕೆ ಹೇಗೆ ಕಾರ್ಯ ನಿರ್ವಹಿಸುತ್ತಾಳೆ ಎಂಬುದೇ ಕಥೆ. ಕಥೆಯನ್ನು ಪ್ರಾರಂಭದಲ್ಲಿ ಶಿವಮೊಗ್ಗ, ಸಾಗರದ ಸುತ್ತಮುತ್ತ ಚಿತ್ರಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.