ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಕಿರಣ್ ರಾಜ್ ಸಂದರ್ಶನ: ನೊಂದವರಿಗೆ ಆಶಾ‘ಕಿರಣ’

Last Updated 27 ಮೇ 2021, 19:30 IST
ಅಕ್ಷರ ಗಾತ್ರ

‘ಕನ್ನಡತಿ’ ಧಾರಾವಾಹಿಯ ನಾಯಕ ಹರ್ಷ ಇನ್ನೊಬ್ಬರ ನೋವಿಗೆ ಮಿಡಿಯುವವನು. ಬೇರೆಯವರ ಕಷ್ಟಕ್ಕೆ ಹೆಗಲಾಗುವ ಮನೋಭಾವದವನು. ಅಂತಹ ಪಾತ್ರಕ್ಕೆ ಜೀವ ತುಂಬಿದವರು ಕಿರಣ್‌ರಾಜ್‌. ಅವರು ನಿಜ ಜೀವನದಲ್ಲೂ ಜನಾನುರಾಗಿ. ಜನರ ಕಷ್ಟಕ್ಕೆ ಸ್ಪಂದಿಸುವ ಇವರು ಕೊರೊನಾ ಸಂದರ್ಭದಲ್ಲಿ ಬಡವರು, ನಿರ್ಗತಿಕರು ಹಾಗೂ ಸ್ಲಮ್‌ಗಳಲ್ಲಿ ವಾಸಿಸುವವರಿಗೆ ಊಟ ನೀಡುವ ಜೊತೆಗೆ ಅನಿವಾರ್ಯತೆ ಇರುವವರಿಗೆ ಫುಡ್‌ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಕಿರಣ್‌ರಾಜ್ ಫೌಂಡೇಶನ್‌ ಮೂಲಕ 2016ರಿಂದ ನೊಂದವರಿಗೆ ನೆರವಾಗುತ್ತಿದ್ದಾರೆ.

***

ಸಮಾಜಸೇವೆಗೆ ಸ್ಫೂರ್ತಿ

‘ಅಸಹಾಯಕರಿಗೆ ನನ್ನಿಂದಾಗುವ ಸಹಾಯ ಮಾಡಬೇಕು ಎನ್ನುವ ಮನಸ್ಸು ಮೊದಲಿನಿಂದಲೂ ನನ್ನಲ್ಲಿತ್ತು. ಆದರೆ ಇನ್ನೊಬ್ಬರಿಗೆ ಸಹಾಯ ಮಾಡುವ ಮೊದಲು ನಾವು ಸಮರ್ಥರಾಗಿರಬೇಕು. ಹಾಗಾಗಿ ನಾನು ಸಮರ್ಥವಾಗಿ ದುಡಿಯಲು ಆರಂಭಿಸಿದ ಮೇಲೆ ಜನರಿಗೆ ಸಹಾಯ ಮಾಡಲು ಆರಂಭಿಸಿದೆ. ನನ್ನ ನಟನೆಯ ಆರಂಭದ ದಿನಗಳಿಂದಲೂ ದುಡಿಮೆಯ ಶೇ 40 ರಷ್ಟು ಭಾಗವನ್ನು ಕಿರಣ್‌ರಾಜ್‌ ಫೌಂಡೇಶನ್‌ಗೆ ನೀಡಿ ಅದರ ಮೂಲಕ ಜನರಿಗೆ ನೆರವು ಒದಗಿಸುತ್ತಿದ್ದೇನೆ. ಹಾಗೆ ನೆರವು ನೀಡುವಾಗ ಫೌಂಡೇಶನ್‌ ಮಾನಸಿಕ ಅಸ್ವಸ್ಥರು, ಅನಾಥಶ್ರಮ, ವೃದ್ಧಾಶ್ರಮ ಹಾಗೂ ಸರ್ಕಾರಿ ಶಾಲೆ ಮಕ್ಕಳಿಗೆ ಆದ್ಯತೆ ನೀಡುತ್ತದೆ’ ಎಂದು ಹೇಳುತ್ತಾರೆ.

ಅಯ್ಯೋ ಪಾಪ ಅನ್ನಬೇಡಿ

‘ನಮ್ಮ ತಂದೆ ಮಿಲಿಟರಿಯಲ್ಲಿದ್ದರು. ನಾವು ಚಿಕ್ಕ ವಯಸ್ಸಿನಿಂದಲೂ ಬೇರೆಯವರ ಕಷ್ಟಗಳನ್ನು ನೋಡಿದಾಗ ಮನಸ್ಸು ಮರುಗುತಿತ್ತು. ಸಹಾಯ ಮಾಡಬೇಕು ಎಂಬ ಹಂಬಲ ಮೂಡುತ್ತಿತ್ತು. ನಮ್ಮ ತಂದೆಯವರು ಕೂಡ ಚಿಕ್ಕಂದಿನಿಂದಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂಬ ಮಾತು ಹೇಳುತ್ತಿದ್ದರು. ಜನರ ಕಷ್ಟವನ್ನು ನೋಡಿ ಅಯ್ಯೋ ಪಾಪ ಎನ್ನುವುದಕ್ಕಿಂತ ನಮ್ಮಿಂದಾದಷ್ಟು ಸಹಾಯ ಮಾಡಬೇಕು’ ಎಂಬ ಕಿವಿಮಾತು ಹೇಳುತ್ತಾರೆ.

ಕೊರೊನಾ ಸಮಯದಲ್ಲಿ ನೆರವು

ಕಳೆದ ವರ್ಷದ ಕೊರೊನಾ ಸಮಯದಿಂದ ನಿತ್ಯ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ ಕಿರಣ್‌. ಬೆಂಗಳೂರಿನ ನಾಗರಬಾವಿ, ಉಲ್ಲಾಳ, ಸಿರ್ಸಿ ಸರ್ಕಲ್‌ ಮುಂತಾದ ಕಡೆ ಇರುವ ಸ್ಲಮ್‌ಗಳ ಜನರಿಗೆ ಊಟ ಹಾಗೂ ರೇಷನ್‌ ಕಿಟ್‌ಗಳನ್ನು ನೀಡುವ ಮೂಲಕ ನೆರವಾಗುತ್ತಿದ್ದಾರೆ. ಅಲ್ಲದೇ, ಕಿರುತೆರೆ ಹಾಗೂ ಹಿರಿತೆರೆ ಕ್ಷೇತ್ರದಲ್ಲಿ ಪರದೆ ಹಿಂದೆ ದುಡಿಯುವ ಕೈಗಳಿಗೆ, ಕೊರೊನಾದಿಂದ ಹೋಂ ಕ್ವಾರಂಟೈನ್ ಆದವರಿಗೆ ರೇಷನ್ ಕಿಟ್ ನೀಡುವ ವ್ಯವಸ್ಥೆ ಮಾಡುತ್ತಿದ್ದಾರೆ.

ಕಿರಣ್‌ರಾಜ್‌ ಫೌಂಡೇಶನ್ ಭವಿಷ್ಯದ ಕನಸು

‘ನಮ್ಮ ಫೌಂಡೇಶನ್‌ ವತಿಯಿಂದ ಒಂದಷ್ಟು ಜನರಿಗೆ ಉದ್ಯೋಗ ಸಿಗುವಂತೆ ಮಾಡಬೇಕು, ಸ್ವಯಂ ಉದ್ಯಮ ರೂಪಿಸಲು ಸಹಾಯ ಮಾಡಬೇಕು. ಒಂದು ಕುಟುಂಬದಲ್ಲಿ ಒಬ್ಬ ಸ್ವತಂತ್ರನಾದರೂ ಅವನಿಂದ 10 ಜನರಿಗೆ ಸಹಾಯವಾಗುತ್ತದೆ. ಈ ರೀತಿಯ ಯೋಚನೆಗಳೆಲ್ಲಾ ನನ್ನ ತಲೆಯಲ್ಲಿವೆ. ಮುಂದೆ ನೋಡಬೇಕು ಏನೆಲ್ಲಾ ಆಗುತ್ತದೆ’ ಎನ್ನುತ್ತಾ ಭವಿಷ್ಯದ ಯೋಜನೆಗಳನ್ನು ಹಂಚಿಕೊಳ್ಳುತ್ತಾರೆ.

ಆತ್ಮತೃಪ್ತಿ ಇದೆ

‘ನಾನು ಮಾಡಿದ ಸಹಾಯದಿಂದ ನಾಲ್ಕಾರು ಮಂದಿ ಚೆನ್ನಾಗಿದ್ದಾರೆ ಎಂದು ತಿಳಿದಾಗ ಖುಷಿ ಆಗುತ್ತದೆ. ಅಲ್ಲದೇ ಸಹಾಯ ಪಡೆದು ಯಾರೋ ನನಗೆ ಕರೆ ಮಾಡಿ ಕೃತಜ್ಞತೆ ತಿಳಿಸಿದಾಗ ಆತ್ಮತೃಪ್ತಿ ಸಿಗುತ್ತದೆ’ ಎನ್ನುತ್ತಾ ಮಾತು ಮುಗಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT