ಹೆಣ್ಮಕ್ಕಳಿಗೆ ಸ್ಫೂರ್ತಿ ಈ ಮೈತ್ರಿ! 

ಮಂಗಳವಾರ, ಏಪ್ರಿಲ್ 23, 2019
32 °C

ಹೆಣ್ಮಕ್ಕಳಿಗೆ ಸ್ಫೂರ್ತಿ ಈ ಮೈತ್ರಿ! 

Published:
Updated:

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಿ.ಎನ್‌.ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ' ಧಾರಾವಾಹಿ 200 ಎಪಿಸೋಡ್ ಪೂರ್ಣಗೊಳಿಸಿ ಮುನ್ನಡೆಯುತ್ತಿದೆ. ಈ ಧಾರಾವಾಹಿಯ ಜಾನಕಿ ಪಾತ್ರಕ್ಕಷ್ಟೇ ಅಲ್ಲ, ಹಲವಾರು ಹೆಣ್ಣುಮಕ್ಕಳಿಗೆ ಸ್ಫೂರ್ತಿ ತುಂಬುವಂತಹ ಐಪಿಎಸ್ ಅಧಿಕಾರಿ ಮೈತ್ರಿ ಮಹಾನಂದನ್ ಪಾತ್ರಕ್ಕೆ ಬಹುಮುಖ ಪ್ರತಿಭೆ ಹರ್ಷಿತಾ ಗೌಡ ಬಣ್ಣ ಹಚ್ಚಿದ್ದಾರೆ.

3ನೇ ತರಗತಿಯಲ್ಲಿರುವಾಗಲೇ ಬಾಲ ನಟಿಯಾಗಿ ಕಿರುತೆರೆಗೆ ಕಾಲಿಟ್ಟವರು ಈ ಹರ್ಷಿತಾ. ಹುಟ್ಟೂರು ಮಂಡ್ಯ ಜಿಲ್ಲೆಯ ಬಿದರಕೋಟೆ. ನೆಲೆ ನಿಂತಿರುವುದು ಬೆಂಗಳೂರಿನ ನಾಗರಬಾವಿಯಲ್ಲಿ. ಬಿ.ಕಾಂ ಪದವೀಧರೆ. ಭರತನಾಟ್ಯದ ವಿದ್ವತ್‌ ಪೂರ್ವ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಪ್ರತಿಭೆ.

ಬೆಳಕು, ಕರ್ಣಕುಂಡಲ ಧಾರಾವಾಹಿಗಳಲ್ಲಿ ತನ್ನ ಪ್ರತಿಭೆ ತೋರಿಸಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೆಗಾ ಧಾರಾವಾಹಿ ‘ಅರಸಿ’ಯ ಮುಗ್ಧೆ ಪಾತ್ರ ‘ಸೂಜಿ’ಯ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದವರು ಇವರು. ಸೂಜಿಗೆ ನೆಗೆಟಿವ್‌ ಪಾತ್ರ ‘ರಶ್ಮಿ’ಯಾಗಿ ಬಣ್ಣದ ಬದುಕಿಗೆ ಕಾಲಿಟ್ಟ ರಚಿತಾ ರಾಮ್‌ ಈಗಾಗಲೇ ಚಂದನವನದಲ್ಲಿ ಸ್ಟಾರ್‌ ನಟಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. 

ಕಿರುತೆರೆಗಷ್ಟೇ ಸೀಮಿತವಾಗದ ಹರ್ಷಿತಾ, ದಿಲ್‌ಖುಶ್‌, ಮೊಗ್ಗಿನ ಜಡೆ, ಪ್ರೀತಿಯಲ್ಲಿ ಸಹಜ ಮುಂತಾದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕಿಯರಿಗೆ ಕಂಠದಾನ ಕೂಡ ಮಾಡಿದ್ದಾರೆ. ಇದುವರೆಗೆ ದೇಶದಾದ್ಯಂತ 126 ಕಡೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.

ಕಲೆ, ಕಿರುತೆರೆ, ಹಿರಿತೆರೆಯಲ್ಲಿನ ತಮ್ಮ ಪಯಣದ ಕುರಿತು ‘ಸಿನಿಮಾ ಪುರವಣಿ’ಯೊಂದಿಗೆ ಮನಸು ಬಿಚ್ಚಿ ಮಾತನಾಡಿರುವ ಹರ್ಷಿತಾ, ಸೋದರ ಮಾವಂದಿರು ಸಿನಿಮಾ ಕ್ಷೇತ್ರದಲ್ಲಿದ್ದಾರೆ. ತಾತ ಬಿ.ಸಿ.ಶಾಮಣ್ಣ ಅವರು ಸಹ ಕಲಾವಿದರೇ ಆಗಿದ್ದರು. ಬಣ್ಣದ ಬದುಕಿನ ನಂಟು ಕೌಟುಂಬಿಕ ವಾತಾವರಣದ ಹಿನ್ನೆಲೆಯಿಂದಲೂ ನನಗೆ ದಕ್ಕಿರಬಹುದು. ಅಭಿನಯ, ನೃತ್ಯದ ಆಸಕ್ತಿ ಚಿಕ್ಕಂದಿನಿಂದಲೇ ಬೆಳೆದು ಬಂದಿದೆ ಎನ್ನುತ್ತಾರೆ. 

ಶಾಸ್ತ್ರೀಯ ನೃತ್ಯದಲ್ಲಿ ತುಂಬಾ ಆಸಕ್ತಿ. ಓದು ಮತ್ತು ನೃತ್ಯ ಕಲಿಕೆ ಎರಡನ್ನೂ ನಿಭಾಯಿಸಬೇಕಿದ್ದ ಕಾರಣಕ್ಕೆ ಮಧ್ಯೆ ಮಧ್ಯೆ ನಟನೆಯಿಂದ ಬಿಡುವು ತೆಗೆದುಕೊಂಡಿದ್ದೆ. ಈಗ ಟಿ.ಎನ್‌.ಸೀತಾರಾಮ್‌ ಸರ್‌ (ಟಿಎನ್‌ಎಸ್‌) ಆಫರ್‌ ನೀಡಿದಾಗ ಇಲ್ಲ ಎನ್ನುವ ಮಾತೇ ಇರಲಿಲ್ಲ. ಸ್ವಲ್ಪ ಬಿಡುವಿನ ನಂತರ ಕಿರುತೆರೆಗೆ ಮತ್ತೇ ಬಂದಿದ್ದೀನಿ ಎಂದು ಮಾತು ಸೇರಿಸಿದರು.

ಸಿನಿಮಾ ಕ್ಷೇತ್ರ ಕೈಹಿಡಿಯಲಿಲ್ಲವೇ? ಎಂದು ಕೇಳಿದರೆ, ‘ಹಾಗಂತೇನೂ ಇಲ್ಲ. ‘ಅರಸಿ’ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಚಿತ್ರರಂಗದಿಂದ ಬಹಳಷ್ಟು ಅವಕಾಶಗಳು ಅರಸಿ ಬಂದವು. ಆಗ ಜವಾಬ್ದಾರಿಯುತ ಪಾತ್ರ ಮತ್ತು ಒಳ್ಳೆಯ ಕಥೆಗಾಗಿ ಕಾದೆ. ಸಿಕ್ಕಿದ್ದೆಲ್ಲದರಲ್ಲೂ ಅಭಿನಯಿಸಲು ಹೋಗಲಿಲ್ಲ. ಈಗಲೂ ಒಳ್ಳೆಯ ಅವಕಾಶ ಸಿಕ್ಕಿದರೆ ಅದನ್ನು ಬಳಸಿಕೊಳ್ಳಲು ರೆಡಿ ಇದ್ದೇನೆ’ ಎನ್ನುವುದು ಅವರ ಉತ್ತರ.

‘ಮಗಳು ಜಾನಕಿ’ಯಲ್ಲಿ ಅಭಿನಯಿಸುತ್ತಿರುವ ಐಪಿಎಸ್‌ ಅಧಿಕಾರಿ ಪಾತ್ರದ ಬಗ್ಗೆ ಕೇಳಿದಾಗ, ‘ನನ್ನ ಅಮ್ಮ ನಮ್ಮನ್ನು ಮೋಟಿವೇಟ್‌ ಮಾಡಿ ಬೆಳೆಸಿದ್ದು ‘ಮೈತ್ರಿ’ ಪಾತ್ರದಂತೆಯೇ ಧೈರ್ಯಶಾಲಿ, ಸ್ವಾಭಿಮಾನದ ಹೆಣ್ಣು ಮಗಳಾಗಬೇಕೆಂದು. ಈ ಪಾತ್ರ ಜಾನಕಿಗಷ್ಟೇ ಸ್ಫೂರ್ತಿ ತುಂಬುತ್ತಿಲ್ಲ, ಆ ಪಾತ್ರದ ಮೂಲಕ ಸ್ವತಃ ನಾನೇ ಸ್ಫೂರ್ತಿ ಪಡೆಯುತ್ತಿದ್ದೇನೆ’ ಎಂದು ಹರುಷದಿಂದ ಹೇಳಿದರು.

‘ಮೈತ್ರಿ ಮಹಾನಂದನ್‌’ ಪಾತ್ರದಲ್ಲಿ ಬಾಡಿ ಲಾಂಗ್ವೇಜ್‌, ಡೈಲಾಗ್‌ ಡೆಲಿವರಿ ಬಗ್ಗೆ ವೀಕ್ಷಕರಿಂದಲೂ ಅಪಾರ ಮೆಚ್ಚುಗೆ ಬರುತ್ತಿದೆ. ಈ ಪಾತ್ರ ವೀಕ್ಷಕರ ಮನಸಿಗೆ ತುಂಬಾ ನಾಟಿದೆ. ಇದರ ಕ್ರೆಡಿಟ್ ಎಲ್ಲವೂ ಟಿಎನ್‌ಎಸ್‌ ಅವರಿಗೆ ಸಲ್ಲಬೇಕು ಎಂದು ಸೀತಾರಾಮ್‌ ಅವರಿಗೆ ಕೃತಜ್ಞತೆ ಹೇಳುವುದನ್ನು ಅವರು ಮರೆಯಲಿಲ್ಲ.

‘ಇಂದು ನಾನು ಏನಾಗಿದ್ದೇನೋ ಅದೆಲ್ಲವೂ ನನ್ನ ತಾಯಿ ಇಂದಿರಾ ಮತ್ತು ಅಕ್ಕ ಸೌಮ್ಯ ಅವರಿಂದ. ಅವರು ತೋರಿದ ದಾರಿಯಲ್ಲಿ ನಡೆಯುತ್ತಿದ್ದೇನೆ. ತಂದೆ ಮಧ್ಯದಲ್ಲಿ ನಮ್ಮಿಂದ ದೂರ ಹೋದರು. ನಮ್ಮ ಅಮ್ಮ ಸಿಂಗಲ್‌ ಪೇರೆಂಟ್‌ ಆಗಿಯೇ ನಮ್ಮನ್ನು ಬೆಳೆಸಿದರು. ಇದರ ಬಗ್ಗೆ ಹೇಳಿಕೊಳ್ಳಲು ಯಾವ ಅಂಜಿಕೆಯೂ ಇಲ್ಲ. ತಾಯಿ ಕೂಡ ಏನಕ್ಕೂ ಹಿಂಜರಿಯದೆ ನಮ್ಮನ್ನು ಸ್ವಾಭಿಮಾನದಿಂದ ಬೆಳೆಸಿದ್ದಾರೆ’ ಎಂದು ತಮ್ಮ ಖಾಸಗಿ ಬದುಕಿನ ಬಗ್ಗೆಯೂ ಒಂದಿಷ್ಟು ಮಾಹಿತಿ ತೆರೆದಿಟ್ಟಿದ್ದಾರೆ.

ಸದ್ಯ ಸಿದ್ಧಗಂಗಾ ಪಬ್ಲಿಕ್‌ ಶಾಲೆಯಲ್ಲಿ ಮಕ್ಕಳಿಗೆ ನಾಟ್ಯ ಕಲಿಸುವ ವೃತ್ತಿಯನ್ನೂ ಮಾಡುತ್ತಿದ್ದೇನೆ. ‘ಎಲ್ಲ ಭಾವಗಳ ದಾಟಿ, ಎಲ್ಲ ಮಾತುಗಳ ಮೀರಿ ಹೊಮ್ಮುವುದು ‘ಶಾಂತರಸ’ ಎಲ್ಲ ರಸಗಳ ಮೀರಿ’ ಎಂದು ನಂಬಿದವಳು ನಾನು. ಕಲಾವಿದೆಯಾಗಿಯೇ ಇರುತ್ತೇನೆ. ಅದು ಕನಸು ಕೂಡ ಎನ್ನುತ್ತಾರೆ ಹರ್ಷಿತಾ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !