ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಾ ರಾಣಿ’ ಸೆಲೆಬ್ರಿಟಿಗಳ ದಾಂಪತ್ಯ ದರ್ಶನ

Last Updated 15 ಜುಲೈ 2021, 19:30 IST
ಅಕ್ಷರ ಗಾತ್ರ

ಖ್ಯಾತನಾಮರು ದಂಪತಿಯಾದರೆ ಹೇಗಿರುತ್ತದೆ? ಇಂಥದ್ದೊಂದು ಕುತೂಹಲ ಹುಟ್ಟಿಸಿ ವೀಕ್ಷಕರನ್ನು ತಲುಪಲು ಮುಂದಾಗಿದೆ ಕಲರ್ಸ್‌ ಕನ್ನಡ ವಾಹಿನಿ. ಜುಲೈ 10ರಿಂದ ಪ್ರತಿ ಶನಿವಾರ ಸಂಜೆ 7.30ಕ್ಕೆ ‘ರಾಜಾ ರಾಣಿ’ ಕಾರ್ಯಕ್ರಮ ಪ್ರಸಾರ ಶುರುವಾಗಿದೆ.

ಖ್ಯಾತನಾಮರ ದಾಂಪತ್ಯ ಹೇಗಿರುತ್ತದೆ? ಅಲ್ಲಿ ಭಿನ್ನಾಭಿಪ್ರಾಯಗಳು ಬಂದರೆ ಅದನ್ನು ಹೇಗೆ ಅವರು ನಿಭಾಯಿಸುತ್ತಾರೆ? ಬೇರೆ ಮನಃಸ್ಥಿತಿಯ ವ್ಯಕ್ತಿಗಳು ಮದುವೆಯಾದಾಗ ಅವರ ಬದುಕು ಹೇಗಿರುತ್ತದೆ? ಹತ್ತು ಹಲವು ಸಮಸ್ಯೆಗಳ ಮಧ್ಯೆಯೂ ದಾಂಪತ್ಯವನ್ನು ಹೇಗೆ ಸಂಭ್ರಮಿಸಬಹುದು ಎನ್ನುವುದು ಇಲ್ಲಿನ ಥೀಮ್‌ ಎನ್ನುತ್ತಿದೆ ಕಲರ್ಸ್‌ ಕನ್ನಡ ವಾಹಿನಿಯ ತಂಡ.

ಸೆಲೆಬ್ರಿಟಿಗಳ ಸಂಸಾರ ತಾಪತ್ರಯಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಮನರಂಜನಾತ್ಮಕ ಅಂಶದ ಸ್ಪರ್ಶ ಕೊಟ್ಟು ಆಟ ನಡೆಸಲಾಗುತ್ತಿದೆ. ಆಟದ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗವೂ ಇರಲಿದೆ ಎಂದಿದೆ ವಾಹಿನಿಯ ಕಾರ್ಯಕ್ರಮ ತಂಡ. ಈ ಕಾರ್ಯಕ್ರಮದ ಪ್ರೋಮೊ, ವಿಡಿಯೊ ಟ್ರೈಲರ್‌ ಸಾಕಷ್ಟು ಕುತೂಹಲ ಹುಟ್ಟಿಸಿತ್ತು.

12 ಜೋಡಿ: ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ನೇಹಾ ಗೌಡ ಮತ್ತು ಚಂದನ್, ಡ್ಯಾನ್ಸ್ ಮಾಸ್ಟರ್ ಮುರುಗಾನಂದ್ ಮತ್ತು ಅಗ್ನಿಸಾಕ್ಷಿಯ ‘ಮಾಯಾ’ ಇಶಿತಾ ವರ್ಷಾ, ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಶ್ರಾವಣಿ ದಂಪತಿ, ಮಜಾಭಾರತ ಖ್ಯಾತಿಯ ಸೌಮ್ಯಾ ಮತ್ತು ಪ್ರವೀಣ್, ಸಿಲ್ಲಿ ಲಲ್ಲಿಯ ನಟ ಪ್ರಶಾಂತ್ ಮತ್ತು ನಟಿ ರೂಪಾ ಪ್ರಭಾಕರ್, ಹಾಸ್ಯ ಮಾತುಗಾರ ಪವನ್ ವೇಣುಗೋಪಾಲ್ ಮತ್ತು ಸುಮನ್, ನಟ ಸುಜಯ್ ಶಾಸ್ತ್ರಿ ಮತ್ತು ಸಿಂಚನಾ, ಕ್ರಿಕೆಟಿಗ ಎನ್.ಸಿ. ಅಯ್ಯಪ್ಪ ಮತ್ತು ಅನು ಪೂವಮ್ಮ, ‘ಕುಲವಧು’ ಧಾರಾವಾಹಿಯ ದೀಪಿಕಾ ಮತ್ತು ಆಕರ್ಷ್ ಹಿರಿಯ ಹಾಸ್ಯನಟ ರಾಜು ತಾಳಿಕೋಟೆ ಮತ್ತು ಅವರ ಇಬ್ಬರು ಪತ್ನಿಯರಾದ ಪ್ರೇಮಾ ಕಲ್ಲೂರು ಹಾಗೂ ಪ್ರೇಮಾ ಸಿಂಧನೂರು ಭಾಗವಹಿಸಿದ್ದಾರೆ.

ನಟಿ ಅನುಪಮಾ ಗೌಡ ಈ ಕಾರ್ಯಕ್ರಮದ ನಿರೂಪಕಿ. ತೀರ್ಪುಗಾರರಾಗಿ ನಟಿ ತಾರಾ ಅನುರಾಧಾ ಹಾಗೂ ನಟ ಸೃಜನ್ ಲೋಕೇಶ್ ಇದ್ದಾರೆ.

ಈ ಕಾರ್ಯಕ್ರಮದ ಕೇಂದ್ರದಲ್ಲಿರುವುದು ಭಾವನೆಗಳೇ. ಲೋಡುಗಟ್ಟಲೆ ಮಜಾವನ್ನು ಹೊತ್ತು ತರುವ ಈ ಕೌಟುಂಬಿಕ ಕಾರ್ಯಕ್ರಮ, ವೀಕ್ಷಕರಿಗೆ ಬೇರೆಯವರ ಬೆಡ್‌ರೂಮಿನೊಳಗೆ ಇಣುಕುವ ಸುಖವನ್ನೂ, ತಂತಮ್ಮ ಸಂಸಾರ ತಾಪತ್ರಯವನ್ನು ಪರಿಹರಿಸಿಕೊಳ್ಳುವ ಉಪಾಯಗಳನ್ನೂ ಏಕಕಾಲಕ್ಕೆ ಒದಗಿಸಲಿದೆ ಎಂದು ಎಂದು ಕಲರ್ಸ್ ಕನ್ನಡದ ಪ್ರೊಗ್ರಾಮಿಂಗ್ ಮುಖ್ಯಸ್ಥ ಪ್ರಕಾಶ್ ಗೋಪಾಲಕೃಷ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT