ಭಾನುವಾರ, ಆಗಸ್ಟ್ 14, 2022
25 °C

ರಾಮಾನಂದ ಸಾಗರ್ ರಾಮಾಯಣ ಕನ್ನಡದಲ್ಲಿ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಸೀತೆಯ ಪಾತ್ರದಲ್ಲಿ ದೀಪಿಕಾ ಚಿಖಾಲಿಯಾ (ಸಂಗ್ರಹ ಚಿತ್ರ)

ರಾಮಾನಂದ್ ಸಾಗರ್ ನಿರ್ಮಾಣದ ‘ರಾಮಾಯಣ’ ಧಾರಾವಾಹಿಯನ್ನು ಲಾಕ್‌ಡೌನ್‌ ಅವಧಿಯಲ್ಲಿ ದೂರದರ್ಶನ ವಾಹಿನಿ ಮರುಪ್ರಸಾರ ಮಾಡಿತು. ಇದು ದೂರದರ್ಶನ ವಾಹಿನಿಯ ಟಿಆರ್‌ಪಿಯನ್ನು ಬಹಳ ಎತ್ತರಕ್ಕೆ ಒಯ್ದಿತ್ತು. ರಾಮಾಯಣ ಪ್ರಸಾರ ಆಗುತ್ತಿದ್ದ ಸಂದರ್ಭದಲ್ಲಿ ದೂರದರ್ಶನವು ಮೊದಲ ಸ್ಥಾನ ತಲುಪಿದ್ದೂ ವರದಿಯಾಗಿತ್ತು.

ಇಷ್ಟೆಲ್ಲ ಪೀಠಿಕೆ ಹಾಕುತ್ತಿರುವುದಕ್ಕೆ ಇರುವ ಕಾರಣ: ಈ ರಾಮಾಯಣ ಕನ್ನಡದಲ್ಲಿ ಪ್ರಸಾರ ಆಗುತ್ತಿರುವುದು! ಹೌದು, ಇದು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ರಾಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿಯನ್ನು ವಾಹಿನಿಯು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲಿದೆ.

ಕನ್ನಡದಲ್ಲಿ ಡಬ್ ಆಗಿ ಪ್ರಸಾರ ಆಗುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ‘ಮಾಲ್ಗುಡಿ ಡೇಸ್‌’, ‘ಮಹಾಭಾರತ’, ‘ರಾಧಾಕೃಷ್ಣ’ ಸಾಲಿಗೆ ‘ರಾಮಾಯಣ’ ಕೂಡ ಸೇರಿಕೊಳ್ಳಲಿದೆ.

‘ಇದು ನಿರ್ದಿಷ್ಟವಾಗಿ ಯಾವತ್ತಿನಿಂದ ಪ್ರಸಾರ ಆಗಲಿದೆ ಹಾಗೂ ಯಾವ ಸಮಯಕ್ಕೆ ವೀಕ್ಷಕರ ಎದುರು ಬರಲಿದೆ ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಇದನ್ನು ವಾರಾಂತ್ಯದಲ್ಲಿ ಮಾತ್ರ ಪ್ರಸಾರ ಮಾಡಬೇಕೋ ಅಥವಾ ಪ್ರೈಂ ಟೈಮ್‌ನಲ್ಲಿ ವಾರವಿಡೀ ಪ್ರಸಾರ ಮಾಡಬೇಕೋ ಎಂಬುದು ಇನ್ನಷ್ಟೇ ತೀರ್ಮಾನ ಆಗಬೇಕಿದೆ’ ಎಂದು ಸ್ಟಾರ್ ಸುವರ್ಣ ವಾಹಿನಿಯ ಮೂಲಗಳು ತಿಳಿಸಿವೆ.

ಈ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುವ ತೀರ್ಮಾನ ಕೈಗೊಳ್ಳುವುದಕ್ಕೆ ಕಾರಣ ‘ಮಹಾಭಾರತ’ದ ಕನ್ನಡ ಡಬ್ ಅವತರಣಿಕೆಗೆ ಸಿಕ್ಕ ಬೆಂಬಲ, ಪ್ರೋತ್ಸಾಹ ಎನ್ನುತ್ತವೆ ವಾಹಿನಿಯ ಮೂಲಗಳು. ‘ರಾಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿಯನ್ನು ಕನ್ನಡ ಭಾಷೆಯಲ್ಲಿ ವೀಕ್ಷಿಸುವ ಅವಕಾಶ ಕನ್ನಡಿಗರಿಗೆ ಯಾವತ್ತೂ ಸಿಕ್ಕಿರಲಿಲ್ಲ. ಇದು ಕೂಡ ಈ ಧಾರಾವಾಹಿಯನ್ನು ಡಬ್ ಮಾಡುವ ತೀರ್ಮಾನಕ್ಕೆ ಒಂದು ಕಾರಣ’ ಎಂದು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಸ್ಟಾರ್‌ ಸುವರ್ಣ ವಾಹಿನಿಯ ಪ್ರತಿನಿಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡುವ ವಾಹಿನಿಯ ತೀರ್ಮಾನವನ್ನು ಹಲವರು ಸ್ವಾಗತಿಸಿದ್ದಾರೆ. ‘ಇದು 1987ರಲ್ಲಿ ಪ್ರಸಾರವಾದ ಸಂದರ್ಭದಲ್ಲಿ ಹಿಂದಿ ಬಾರದ ನನ್ನಮ್ಮನಿಗೆ ಇದನ್ನು ಕನ್ನಡದಲ್ಲಿ ತೋರಿಸಲು ಸಾಧ್ಯವಾದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡು ಮರುಗಿದ್ದೆ... ಈಗ 90ರ ಹರೆಯದ ಅಮ್ಮ, ಇದನ್ನು ಕನ್ನಡದಲ್ಲಿ ನೋಡಲು ಸಾಧ್ಯವಾಗಲಿದೆ ಎನ್ನುವ ಸಂಗತಿಯೇ ಅಪಾರವಾದ ತೃಪ್ತಿ ಹಾಗೂ ಧನ್ಯತೆ ತಂದುಕೊಡುತ್ತಿದೆ’ ಎಂದು ಆನಂದ್‌ ಎನ್ನುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಡಬ್ಬಿಂಗ್ ಎಂಬುದು ಕನ್ನಡಪರ ಎಂದೂ ಅವರು ಹೇಳಿಕೊಂಡಿದ್ದಾರೆ.

‘ರಾಮಾಯಣ’ವು ಕನ್ನಡಕ್ಕೆ ಡಬ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು, ‘ಡಬ್ ಆಗಿರುವ ಕಾರ್ಯಕ್ರಮಗಳು ಕನ್ನಡಕ್ಕೆ ಬರುವುದನ್ನು ನಾವು ಬೇಡ ಎನ್ನುತ್ತಿಲ್ಲ. ಆದರೆ ಪ್ರೈಮ್‌ ಟೈಮ್‌ನಲ್ಲಿ ಅವುಗಳ ಪ್ರಸಾರ ಬೇಡ ಎನ್ನುವುದು ನಮ್ಮ ಆಗ್ರಹ’ ಎಂದರು. 

‘ನಮ್ಮ ಜನರಿಗೆ ಬೇಕಿರುವುದು ಕನ್ನಡದ ಸಂಸ್ಕೃತಿ. ಡಬ್ ಆಗಿರುವ ಕಾರ್ಯಕ್ರಮಗಳನ್ನು ಕೊಡುತ್ತ ಬಂದರೆ, ಕನ್ನಡ ಮನರಂಜನಾ ಉದ್ಯಮಕ್ಕೂ ಜನರಿಗೂ ಕನ್ನಡ ಭಾಷೆಗೂ ಏಟು ಬೀಳುತ್ತದೆ’ ಎಂಬ ಆತಂಕ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು