ಭಾನುವಾರ, ಜೂನ್ 7, 2020
27 °C

ಟಿ.ವಿ.ಯಲ್ಲಿ ಕನ್ನಡ ಮಾಯ: ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮನರಂಜನಾ ವಾಹಿನಿಗಳಲ್ಲಿ ಡಬ್ಬಿಂಗ್‌ ಸಿನಿಮಾಗಳು ಪ್ರಸಾರವಾಗುವುದರಿಂದ ಕನ್ನಡದ ಅಸ್ತಿತ್ವ ಮತ್ತು ಸಂಸ್ಕೃತಿಗೆ ತೀವ್ರ ಪೆಟ್ಟು ಬೀಳಲಿದೆ. ಇದರ ಬಗ್ಗೆ ಕನ್ನಡ ಚಿತ್ರರಂಗ ಪ್ರತಿಭಟಿಸಬೇಕು’

–ಇವು ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ಎಸ್.ವಿ. ರಾಜೇಂದ್ರಸಿಂಗ್‌ ಬಾಬು ಅವರ ಆಕ್ರೋಶದ ನುಡಿಗಳು. ‘ಬದುಕಿನಲ್ಲಿ ಕೆಲವು ತಪ್ಪುಗಳು ನಮಗೆ ತಿಳಿಯದೆ ಅಥವಾ ದೂರದೃಷ್ಟಿ ಇಲ್ಲದೆಯೇ ನಡೆದುಹೋಗಿರುತ್ತವೆ. ನಾನೂ ಸೇರಿದಂತೆ ಎಲ್ಲರೂ ಅದರ ಭಾಗವಾಗಿರುತ್ತೇವೆ. ತಪ್ಪಾಗಿದೆಯೆಂದು ಸುಮ್ಮನೆ ಕೂರಲೂ ಆಗುವುದಿಲ್ಲ. ಕೊರೊನಾ, ಒಟಿಟಿ, ಥಿಯೇಟರ್‌ ಸಮಸ್ಯೆ –ಹೀಗೆ ಕನ್ನಡ ಇಂಡಸ್ಟ್ರಿಗೆ ಎಲ್ಲಾ ಕಡೆಯಿಂದಲೂ ಏಟು ಬೀಳುತ್ತಿದೆ’ ಎಂದು ಅವರು ‘ಪ್ರಜಾ ಪ್ಲಸ್‌’ ಜೊತೆಗೆ ಕಳವಳ ವ್ಯಕ್ತಪಡಿಸಿದರು.

‘ನಟ ಅಂಬರೀಷ್‌ಗೆ ಆತ್ಮೀಯ ಸ್ನೇಹಿತನೊಬ್ಬನಿದ್ದ. ಆತ ಗೌಡ್ರು ಬಿರಿಯಾನಿ ಹೋಟೆಲ್‌ ತೆರೆದಿದ್ದ. ಬಿಡುವು ಸಿಕ್ಕಿದಾಗಲೆಲ್ಲಾ ನಾನು ಮತ್ತು ಅಂಬಿ ಅಲ್ಲಿಗೆ ದೌಡಾಯಿಸುತ್ತಿದ್ದೆವು. ಒಮ್ಮೆ ಒಂದು ತಿಂಗಳ ಬಳಿಕ ಅಲ್ಲಿಗೆ ಹೋದಾಗ ‘ಪಂಜಾಬಿ ಡಾಬಾ’ ಎಂದು ಹೆಸರು ಬದಲಾಯಿಸಿದ್ದ. ಆ ಬೋರ್ಡ್‌ ನೋಡಿ ಅಂಬಿ ರೇಗಿದ. ‘ಗೌಡ್ರು ಬಿರಿಯಾನಿ ಹೋಟೆಲ್‌ ಅಂತಾ ಹೆಸರಿಟ್ಟರೆ ಜನರು ಬರಲ್ಲ; ಅದಕ್ಕಾಗಿ ಹೆಸರು ಬದಲಾಯಿಸಿದ್ದೇನೆ. ಈಗ ಜನರು ಹೆಚ್ಚು ಬರುತ್ತಾರೆ. ಲಾರಿಗಳೂ ನಿಲ್ಲುತ್ತವೆ ಎಂದು ಆತ ಉತ್ತರಿಸಿದ. ಈಗ ಕರ್ನಾಟಕದಲ್ಲಿ ಬಿರಿಯಾನಿಗಳೇ ಕನ್ನಡಿಗರನ್ನು ಒಡೆದಾಳುತ್ತಿವೆ. ಮಂಡ್ಯ, ಮೈಸೂರು ಬಿರಿಯಾನಿ ಹೆಚ್ಚು ಮಾರಾಟವಾಗಲ್ಲ. ಆಂಧ್ರ, ತಮಿಳುನಾಡಿನ ಬಿರಿಯಾನಿಯ ಮಾರಾಟವೇ ಹೆಚ್ಚು. ಇಂತಹ ದಾಳಿ ಸ್ಥಳೀಯ ಆಹಾರದ ಮೇಲಷ್ಟೇ ನಡೆದಿಲ್ಲ. ಕನ್ನಡ ಭಾಷೆ, ಸಂಸ್ಕೃತಿಯ ಮೇಲೂ ನಡೆಯುತ್ತಿದೆ. ಡಬ್ಬಿಂಗ್‌ ಹೆಸರಿನ ಈ ದಾಳಿಯು ಭವಿಷ್ಯದಲ್ಲಿ ಕನ್ನಡ ಚಿತ್ರರಂಗವನ್ನು ಆಪೋಶನ ತೆಗೆದುಕೊಂಡರೂ ಅಚ್ಚರಿಪಡಬೇಕಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಮನರಂಜನಾ ಟಿ.ವಿ ವಾಹಿನಿಗಳಲ್ಲಿನ ಹೊಸ ಬೆಳವಣಿಗೆ ನನ್ನ ಗಮನ ಸೆಳೆಯಿತು. ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರೈಮ್‌ ಟೈಮ್‌ನಲ್ಲಿ ಕನ್ನಡಕ್ಕೆ ಡಬ್‌ ಆದ ‘ವಿಜಿಲ್‌’, ‘ರಂಗಸ್ಥಳಂ’, ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾಗಳನ್ನು ಪ್ರಚಾರ ಮಾಡಲಾಯಿತು. ‘ವಿಜಿಲ್‌’ ಸಿನಿಮಾ ಪ್ರಚಾರದ ವೇಳೆಯೇ ಬೇರೊಂದು ವಾಹಿನಿಯಲ್ಲಿ ನಟ ಶಿವರಾಜ್‌ಕುಮಾರ್‌ ನಟನೆಯ ಚಿತ್ರ ಪ್ರಚಾರವಾಗುತ್ತಿತ್ತು. ಆದರೆ, ‘ವಿಜಿಲ್‌’ಗೆ ಹೆಚ್ಚು ರೇಟಿಂಗ್ ಸಿಕ್ಕಿತು’ ಎಂದರು.

‘ಈಗ ವಾಹಿನಿಗಳಿಗೆ ಡಬ್ಬಿಂಗ್‌ ರುಚಿ ಹತ್ತಿದೆ. ಕೆಲವರು ಡಬ್ಬಿಂಗ್‌ ಧಾರಾವಾಹಿಗಳನ್ನೂ ತಂದಿದ್ದಾರೆ. ಈ ಹಿಂದೆ‌ ಟಿ.ವಿ. ವಾಹಿನಿಗಳು ₹ 60 ಲಕ್ಷದಿಂದ ₹ 70 ಲಕ್ಷ ನೀಡಿ ಸಣ್ಣ ಸಿನಿಮಾಗಳನ್ನು ಖರೀದಿಸುತ್ತಿದ್ದವು. ಇದರಿಂದ ನಿರ್ಮಾಪಕರಿಗೆ ಅನುಕೂಲವಾಗುತ್ತಿತ್ತು. ಡಬ್ಬಿಂಗ್‌ ಸಿನಿಮಾಗಳ ಪ್ರಚಾರಕ್ಕೆ ಜೋತು ಬಿದ್ದರೆ ಕನ್ನಡ ನಿರ್ಮಾಪಕರ ಗತಿಯೇನು’ ಎಂದು ಪ್ರಶ್ನಿಸಿದರು.

‘ತಮಿಳು, ತೆಲುಗು, ಹಿಂದಿಯವರು ಕನ್ನಡ ಸಿನಿಮಾಗಳ ಟೆಲಿವಿಷನ್‌ ಹಕ್ಕುಗಳನ್ನು ಪಡೆಯುವಾಗ ಡಬ್ಬಿಂಗ್‌ ಹಕ್ಕನ್ನೂ ಬರೆಯಿಸಿಕೊಳ್ಳುತ್ತಾರೆ. ಧಾರಾವಾಹಿಯ ಒಂದು ಸಂಚಿಕೆ ನಿರ್ಮಾಣಕ್ಕೆ ₹ 1 ಲಕ್ಷದಿಂದ ₹ 1.50 ಲಕ್ಷ ವೆಚ್ಚವಾಗುತ್ತದೆ. ಆದರೆ, ಪರಭಾಷೆಯ ಒಂದು ಸಂಚಿಕೆಯ ಡಬ್ಬಿಂಗ್‌ಗೆ ₹ 20 ಸಾವಿರ ವೆಚ್ಚವಾಗುತ್ತದೆ. ₹ 7ರಿಂದ ₹ 8 ಲಕ್ಷದೊಳಗೆ ಸಿನಿಮಾವೊಂದು ಡಬ್‌ ಆಗುತ್ತದೆ. ಆಗ ಯಾವುದೇ ವಾಹಿನಿಯು ₹ 90 ಲಕ್ಷ ಕೊಟ್ಟು ಕನ್ನಡ ಸಿನಿಮಾದ ಟೆಲಿವಿಷನ್‌ ಹಕ್ಕನ್ನು ಪಡೆಯುವುದಿಲ್ಲ. ಈಗಾಗಲೇ, ಕನ್ನಡದ ಮಾರುಕಟ್ಟೆ ಬಿದ್ದುಹೋಗಿದೆ. ಪರಿಸ್ಥಿತಿಯೂ ಹೀಗೆಯೇ ಮುಂದುವರಿದರೆ ಇದನ್ನು ನಂಬಿರುವ ತಂತ್ರಜ್ಞರ ಬದುಕು ಅಕ್ಷರಶಃ ಬೀದಿಗೆ ಬೀಳುತ್ತದೆ’ ಎಂದು ವಿಷಾದಿಸಿದರು.

‘ಡಬ್ಬಿಂಗ್‌ ಸಿನಿಮಾಗಳ ಪ್ರಚಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕನ್ನಡಕ್ಕೆ ಮೀಸಲಿಟ್ಟ ಪ್ರೈಮ್‌ ಅವಧಿಯಲ್ಲಿ ಪ್ರಸಾರ ಮಾಡಬಾರದು ಎಂಬುದಷ್ಟೇ ನಮ್ಮ ಒತ್ತಾಯ. ರಾತ್ರಿ 11ಗಂಟೆಯ ಬಳಿಕ ಪ್ರಚಾರ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಭಾರತೀಯ ಸ್ಪರ್ಧಾ ಆಯೋಗದ ಆದೇಶದ ವಿರುದ್ಧ ಅಧಿಕೃತವಾಗಿ ಹೋರಾಟ ನಡೆಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಆದರೆ, ಸಮಾನ ಮನಸ್ಕರು ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ವಿವರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು