ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್‌ ನಿಧನ

Published 27 ಜೂನ್ 2023, 17:59 IST
Last Updated 27 ಜೂನ್ 2023, 17:59 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ, ಗೀತಸಾಹಿತಿ ಸಿ.ವಿ.ಶಿವಶಂಕರ್‌(90) ಅವರು ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. 

ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ ಇವರು ಬಾಲ್ಯದಲ್ಲೇ ನಾಟಕದ ಆಸಕ್ತಿ ಹುಟ್ಟಿಸಿಕೊಂಡವರು. ರಂಗಭೂಮಿಗೆ ಪ್ರವೇಶಿಸಿ, 1954ರಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರ ಜೊತೆಗೇ ಚಿತ್ರರಂಗಕ್ಕೆ ಹೆಜ್ಜೆ ಇಟ್ಟವರು ಶಿವಶಂಕರ್‌. ರಾಜ್‌ಕುಮಾರ್‌ ಅವರ ಜೊತೆ ರಂಗಭೂಮಿಯಿಂದಲೇ ಇವರ ಒಡನಾಟವಿತ್ತು. ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶಿಸಿದ್ದ ಶ್ರೀಕೃಷ್ಣಗಾರುಡಿ ಸಿನಿಮಾದಲ್ಲಿ ರಾಜ್‌ಕುಮಾರ್‌ ಅವರ ಜೊತೆ ತೆರೆಹಂಚಿಕೊಂಡು, ‘ಘಟಾಸುರ’ ಎಂಬ ಪಾತ್ರದ ಮುಖಾಂತರ ಸಿನಿಮಾ ಪಯಣವನ್ನು ಶಿವಶಂಕರ್‌ ಆರಂಭಿಸಿದ್ದರು. 

‘ಸ್ಕೂಲ್‌ ಮಾಸ್ಟರ್‌’, ‘ರತ್ನಗಿರಿ ರಹಸ್ಯ’, ‘ಶ್ರೀ ಕೃಷ್ಣಗಾರುಡಿ’, ‘ಧರ್ಮವಿಜಯ’, ‘ಭಕ್ತವಿಜಯ’, ‘ರತ್ನಮಂಜರಿ’, ‘ವೀರಸಂಕಲ್ಪ’, ‘ಆಶಾಸುಂದರಿ’ ಹೀಗೆ ಹಲವು ಚಿತ್ರಗಳಲ್ಲಿ ಇವರು ಪಾತ್ರನಿರ್ವಹಿಸಿದ್ದಾರೆ. ಜೊತೆಗೆ ಹಲವು ಸಿನಿಮಾ ಗೀತೆಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. ‌ತಾಯಿಯ ಮಡಿಲಲ್ಲಿ ಚಿತ್ರದ ‘ಕನ್ನಡದ ರವಿ ಮೂಡಿ ಬಂದ..’, ‘ಸಿರಿವಂತನಾದರೂ ಕನ್ನಡನಾಡಲ್ಲೆ ಮೆರೆವೆ..’, ‘ಬೆಳೆದಿದೆ ನೋಡ ಬೆಂಗಳೂರು ನಗರ..’ ಇವು ಅವರು ಬರೆದ ಕೆಲ ಖ್ಯಾತ ಹಾಡುಗಳು. 

ಹಿರಿಯ ನಿರ್ದೇಶಕರ ಬಳಿ ಸಹನಿರ್ದೇಶಕನಾಗಿ ದುಡಿದಿದ್ದ ಶಿವಶಂಕರ್‌ ಅವರು ‘ಮನೆ ಕಟ್ಟಿ ನೋಡು’ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ‘ಪದವೀಧರ’, ‘ನಮ್ಮ ಊರು’, ‘ಮಹಡಿಯ ಮನೆ’, ‘ಹೊಯ್ಸಳ’, ‘ಮಹಾತಪಸ್ವಿ’, ‘ವೀರಮಹಾದೇವ’, ‘ಕನ್ನಡ ಕುವರ’ ಮುಂತಾದ ಚಿತ್ರಗಳನ್ನು ಇವರು ನಿರ್ದೇಶಿಸಿದ್ದಾರೆ. 1991ರಲ್ಲಿ ಕರ್ನಾಟಕ ರಾಜ್ಯಪ್ರಶಸ್ತಿ ಹಾಗೂ 1994ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT