ಸೋಮವಾರ, 29 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

Published 3 ಏಪ್ರಿಲ್ 2024, 13:24 IST
Last Updated 3 ಏಪ್ರಿಲ್ 2024, 13:24 IST
ಅಕ್ಷರ ಗಾತ್ರ

ಸಿಡ್ನಿ: ಪ್ರತಿ ಜೀವಿಗಳ ದೇಹದೊಳಗಿನ ಅನುವಂಶಿಕ ವಸ್ತುವಾಗಿರುವ ಜಿನೋಮ್‌ ಆಧರಿಸಿ ಸುಮಾರು 360 ಪಕ್ಷಿ ಪ್ರಭೇದಗಳ ವಿಶ್ಲೇಷಣೆ ನಡೆಸಿರುವ ವಿಜ್ಞಾನಿಗಳ ತಂಡವು, ಅಂತಿಮವಾಗಿ ಇವು ಪ್ರಮುಖ ಮೂರು ಬಗೆಯ ವಂಶವೃಕ್ಷಗಳನ್ನು ಹೊಂದಿವೆ ಎಂಬ ವರದಿಯೊಂದು ಈಗ ಸುದ್ದಿಯಲ್ಲಿದೆ.

ಈ ಕುರಿತ ಲೇಖನವೊಂದನ್ನು ನೇಚರ್ ನಿಯತಕಾಲಿಕೆ ಪ್ರಕಟಿಸಿದೆ. ಡೈನಾಸರ್‌ಗಳು ನಶಿಸಿದ ನಂತರ ಅಂದರೆ 50 ಲಕ್ಷ ವರ್ಷಗಳ ಹಿಂದೆ ‍ಆಧುನಿಕ ಸ್ವರೂಪದ ಪಕ್ಷಿಗಳು ಮೊದಲ ಬಾರಿಗೆ ಗೋಚರಿಸಿದವು.

ಜೀವ ವೈವಿಧ್ಯದಲ್ಲಿ ಬಹುದೊಡ್ಡ ಪಾಲು ಹೊಂದಿರುವ ಹಕ್ಕಿಗಳು, ನಿಸರ್ಗದೊಳಗೂ ಮತ್ತು ನಗರ ಪ್ರದೇಶಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿವೆ. ಪ್ರತಿಯೊಂದು ಹಕ್ಕಿಯ ಪ್ರಭೇದಗಳ ವಂಶವಾಹಿ ಮತ್ತು ಗುಣಲಕ್ಷಣಗಳನ್ನು ವಿಶ್ಲೇಷಿಸಿ ಒಂದು ವಂಶವೃಕ್ಷ ಸಿದ್ಧಪಡಿಸುವುದು ಸವಾಲಿನ ಕೆಲಸ. ಹೀಗೆ 360 ಪಕ್ಷಿ ಸಂಕುಲಗಳ ಅಧ್ಯಯನ ನಡೆಸಿದ ವಿಜ್ಞಾನಿಗಳ ಗುಂಪು, ಅವುಗಳಲ್ಲಿರುವ ಮೂಲ ಸಂಬಂಧಗಳನ್ನು ವಿಶ್ಲೇಷಿಸಿ ಪ್ರಮುಖ ಮೂರು ಗುಂಪುಗಳನ್ನಾಗಿ ವಿಂಗಡಿಸಿದೆ. ಈ ಹೊಸ ವಂಶವೃಕ್ಷವು ಪಕ್ಷಿಗಳ ನಡುವಿನ ಸಂಬಂಧಗಳ ಹೊಸ ಭಾಷ್ಯ ಬರೆದಿದೆ. ಜತೆಗೆ ಹೊಸ ಗುಂಪುಗಳ ಸೃಷ್ಟಿಗೂ ಕಾರಣವಾಗಿದೆ.

ಫ್ಲೆಮಿಂಗೊ ಪಕ್ಷಿಗಳ ಮನೋಹರ ದೃಶ್ಯ

ಫ್ಲೆಮಿಂಗೊ ಪಕ್ಷಿಗಳ ಮನೋಹರ ದೃಶ್ಯ

ಪಿಟಿಐ ಚಿತ್ರ

ಮೂರನೇ ಪ್ರಭೇದದಲ್ಲಿವೆ ಶೇ 95ಕ್ಕೂ ಹೆಚ್ಚು ಪಕ್ಷಿಗಳ ಕುಟುಂಬಗಳು

ಹಿಂದೆ ಅಧ್ಯಯನದಲ್ಲಿ ಹಕ್ಕಿಗಳ ವಂಶವೃಕ್ಷದಲ್ಲಿ ಕೇವಲ ಮೂರು ಟಿಸಿಲುಗಳು ಮಾತ್ರ ಇದ್ದವು. ಮೊದಲ ಟಿಸಿಲಿನಲ್ಲಿ ಹಾರಲಾಗದ ಎಮು, ಕಿವಿ ಹಾಗೂ ಉಷ್ಟ್ರಪಕ್ಷಿ ಸೇರಿವೆ.

ಎರಡನೇ ಟಿಸಿಲಿನಲ್ಲಿ ನೆಲ ಹಾಗೂ ನೀರಿನಲ್ಲಿ ಓಡಾಡಬಲ್ಲ ನೆಲಕೋಳಿ ಹಾಗೂ ಜಲಪಕ್ಷಿಗಳು ಸೇರುತ್ತವೆ. ಇದರಲ್ಲಿ ಪ್ರಮುಖವಾಗಿ ಕೋಳಿಗಳು, ಬಾತು ಇತ್ಯಾದಿಗಳಿವೆ.

ಮೇಲಿನ ಎರಡು ಪ್ರಭೇದಗಳನ್ನು ಹೊರತುಪಡಿಸಿದರೆ ಉಳಿದವುಗಳು ಮೂರನೇ ಟಿಸಿಲಿಗೆ ಸೇರುತ್ತವೆ. ನಿಯೋವ್ಸ್‌ ಎಂದು ಕರೆಯುವ ಈ ಪ್ರಬೇಧದಲ್ಲಿ ಸುಮಾರು ಶೇ 95ರಷ್ಟು ಪಕ್ಷಿಗಳು ಸೇರುತ್ತವೆ. ಈ ನಿಯೋವ್ಸ್‌ನಲ್ಲೂ ಸುಮಾರು ಹತ್ತು ಗುಂಪುಗಳಿವೆ. ನೆಲಕೋಳಿಗಳು, ಜಲಪಕ್ಷಿಗಳು, ಕೋಗಿಲೆ, ರಾತ್ರಿ ಜಾರ್ಗಿಗಳು, ಪಾರಿವಾಳ ಹಾಗೂ ಫ್ಲೆಮಿಂಗೊಗಳು ಸೇರಿವೆ. ಇನ್ನುಳಿದ ಮೂರು ಗುಂಪುಗಳನ್ನು ಆರ್ಫನ್ಸ್‌ ಗುಂಪುಗಳು ಎಂದು ಕರೆಯಲಾಗಿದೆ. ಇವುಗಳಲ್ಲಿ ಕಡಲತೀರದ ಪಕ್ಷಿಗಳು, ಕೊಕ್ಕರೆ ಹಾಗೂ ಹೋಟ್ಜೆನ್‌ ಎಂಬ ದಕ್ಷಿಣ ಆಫ್ರಿಕಾದ ಪಕ್ಷಿ ಸೇರಿದೆ.

ಅದರಲ್ಲೂ ಆರ್ಫನ್ಸ್‌ ಗುಂಪಿನ ಪ್ರಬೇಧಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವುದು ತೀರಾ ಕಷ್ಟ ಎಂದು ಸಂಶೋಧಕರು ಹೇಳಿದ್ದಾರೆ.

ಪಿಟಿಐ ಚಿತ್ರ

ಪಿಟಿಐ ಚಿತ್ರ

ಜಿನೋಮ್ ಅಧ್ಯಯನಕ್ಕೆ ಹೊಸ ಹೆಸರು ‘ಎಲಿಮೆಂಟೇವ್ಸ್’

ಭೂಮಿ, ಗಾಳಿ, ನೀರು ಮತ್ತು ಬೆಂಕಿಯನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಎಲೆಮೆಂಟೀವ್ಸ್‌ ಎಂಬ ಹೊಸ ಗುಂಪನ್ನು ರಚಿಸಲಾಗಿದೆ. ಈ ಗುಂಪಿನಲ್ಲಿರುವ ಪಕ್ಷಿಗಳು ನೆಲ, ಜಲ ಮತ್ತು ಆಕಾಶದ ವಾತಾವರಣದಲ್ಲಿ ಯಶಸ್ವಿಯಾಗಿ ಹೊಂದಿಕೊಂಡಿರುವಂತದ್ದು. ಈ ಗುಂಪಿನ ಪಕ್ಷಿಗಳ ಹೆಸರುಗಳು ಸೂರ್ಯನ ಹೆಸರಿನೊಂದಿಗೆ ಹೊಂದಾಣಿಕೆಯಾಗುತ್ತವೆ. ಅದು ಬೆಂಕಿಯನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಹಮ್ಮಿಂಗ್‌ಬರ್ಡ್‌, ಕಡಲ ತೀರದ ಹಕ್ಕಿಗಳು, ಕೊಕ್ಕರೆಗಳು, ಪೆಂಗ್ವಿನ್ಸ್‌ ಹಾಗೂ ಪೆಲಿಕನ್ಸ್‌ಗಳು ಸೇರಿವೆ.

ಆಸ್ಟ್ರೇಲಿಯಾದಲ್ಲಿ ಎರಡು ಗುಂಪುಗಳ ಹಕ್ಕಿಗಳ ನಡುವಿನ ಸಂಬಂಧವನ್ನು ತಜ್ಞರ ತಂಡ ಪತ್ತೆ ಮಾಡಿದೆ. ಪ್ಯಾಸರಿನ್‌ ಹಾಗೂ ಗಿಳಿ ಪ್ರಭೇದಕ್ಕೆ ಸೇರುತ್ತದೆ. ಈ ಹಕ್ಕಿಗಳು ಆಸ್ಟ್ರೇಲಿಯಾದ ಪಕ್ಷಿಗಳಲ್ಲೇ ಅತ್ಯಂತ ಪ್ರಭಾವಿ.

ಪಿಟಿಐ ಚಿತ್ರ

ಪಿಟಿಐ ಚಿತ್ರ

ಹಾಗಿದ್ದರೆ ಹಕ್ಕಿಗಳು ಹೊರಹೊಮ್ಮಿದ್ದು ಎಂದು?

ಹಕ್ಕಿಗಳ ಈ ವಂಶವೃಕ್ಷದ ಆಧಾರದಲ್ಲಿ ಅವುಗಳ ಉಗಮ ಯಾವಾಗ ಆಯಿತು ಎಂಬುದನ್ನು ಪತ್ತೆ ಮಾಡಲು ‘ಆಣ್ವಿಕ ಗಡಿಯಾರ’ ಎಂಬ ಸಾಧನವನ್ನು ಬಳಸಲಾಗುತ್ತಿದೆ. ಇದಕ್ಕೆ ಸುಮಾರು 200ಕ್ಕೂ ಹೆಚ್ಚು ಪಳಿಯುಳಿಕೆಗಳ ಮಾಹಿತಿ ಕಲೆ ಹಾಕಲಾಯಿತು. ಈ ಎಲ್ಲಾ ಪಕ್ಷಿಗಳಿಗೂ 9 ಕೋಟಿ ವರ್ಷಗಳ ಹಿಂದೆ ಇದ್ದ ಜೀವಿಗಳೇ ಪೂರ್ವಿಕರು. ಆದರೆ ಆಧುನಿಕ ಪಕ್ಷಿಗಳ ಉಗಮವು 2.5 ಕೋಟಿ ವರ್ಷಗಳ ಹಿಂದೆಯಷ್ಟೇ ಆಗಿದೆ.

ಡೈನಾಸಾರ್‌ಗಳಿದ್ದ ಯುಗದ ನಂತರ ಬಂದ 6.6 ಕೋಟಿ ವರ್ಷಗಳ ಕ್ರಿಟೇಷಿಯಸ್‌ ಯುಗದ ನಂತರ ಪಕ್ಷಿಗಳ ಈ ಬೆಳವಣಿಗೆ ನಡೆಯಿತು. ಆ ಅವಧಿಯಲ್ಲಿ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹದಿಂದಾಗಿ ಡೈನಾಸಾರ್‌ಗಳು ಅವಸಾನಗೊಂಡವು. ದೈತ್ಯ ಜೀವಿಗಳ ಅವಸಾನದ ಅವಕಾಶವನ್ನೇ ಇಂಥ ಚಿಕ್ಕ ಜೀವಿಗಳು ಲಾಭ ಮಾಡಿಕೊಂಡವು.

ಪಿಟಿಐ ಚಿತ್ರ

ಪಿಟಿಐ ಚಿತ್ರ

ಇಷ್ಟಾದರೂ ಉತ್ತರ ಸಿಗದ ಒಂದು ಅಂಶ...

ಸುಮಾರು ಹತ್ತು ವರ್ಷಗಳ ಕಾಲ ನಡೆಸಿದ ಈ ಸುದೀರ್ಘ ಸಂಶೋಧನೆಯಲ್ಲಿ 10 ಸಾವಿರ ಜಿನೋಮ್‌ಗಳ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಅಂತರರಾಷ್ಟ್ರೀಯ ಸಂಶೋಧಕರ ತಂಡವೇ ಕಾರ್ಯ ನಿರ್ವಹಿಸಿದೆ. ಕೋಪೆನ್‌ಹಗೆನ್‌ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೊ ವಿಶ್ವವಿದ್ಯಾಲಯ ಹಾಗೂ ಚೀನಾದ ಝೇಜಿಯಾಂಗ್ ವಿಶ್ವವಿದ್ಯಾಲಯದ ಸಂಶೋಧಕರು ಪಾಲ್ಗೊಂಡಿದ್ದರು.

ಇಷ್ಟೆಲ್ಲಾ ಮಾಹಿತಿ ಕಲೆ ಹಾಕಿದರೂ ಒಂದು ಹಕ್ಕಿಯ ಕುಟುಂಬದ ಜಿನೋಮ್ ಮಾಹಿತಿ ಮಾತ್ರ ನಿಗೂಡವಾಗಿಯೇ ಉಳಿಯಿತು. ದಕ್ಷಿಣ ಆಫ್ರಿಕಾದಲ್ಲಿ ಕಾಣಸಿಗುವ ಅತ್ಯಂತ ಪ್ರಾಚೀನ ಹಕ್ಕಿಗಳಲ್ಲಿ ಒಂದಾದ ಹೋಟ್ಜೆನ್‌, ತನ್ನ ಪ್ರಭೇದದಲ್ಲಿ ನಶಿಸದೇ ಬದುಕುಳಿದಿರುವ ಏಕೈಕ ಪಕ್ಷಿ ಸಂಕುಲವಾಗಿದೆ ಎಂದು ವಿಜ್ಞಾನಿಗಳು ಹೇಳಿರುವುದಾಗಿ ನೇಚರ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT