ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗಳಿ ದೋಸ್ತರು ಗೂಡು ಕಟ್ಟಿದ ಕಥೆ

Last Updated 27 ಫೆಬ್ರುವರಿ 2019, 5:55 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ನಾನೊಬ್ಬ ರೈತ. ಪಶ್ಚಿಮಘಟ್ಟದ ಅತಿ ಮಳೆ ಬೀಳುವ ಕೊಡಚಾದ್ರಿ ತಪ್ಪಲಲ್ಲಿ ಅಡಿಕೆ, ಮೆಣಸು ಮುಂತಾದವುಗಳನ್ನು ಬೆಳೆಯುವುದು ನನ್ನ ಕಾಯಕ. ಛಾಯಾಗ್ರಹಣ ನನ್ನ ಹವ್ಯಾಸ. ಕೇವಲ ಹವ್ಯಾಸವಷ್ಟೇ ಅಲ್ಲ; ಛಾಯಾಗ್ರಹಣ ನನ್ನ ಬದುಕನ್ನು ನೋಡುವ ರೀತಿ ಮತ್ತು ಸುತ್ತಲಿನ ಪ್ರಕೃತಿಯೊಂದಿಗೆ ಅನುಸಂಧಾನ ಮಾಡಿಕೊಳ್ಳುವ ಬಗೆ.

ಪಶ್ಚಿಮ ಘಟ್ಟಗಳು ಪ್ರಪಂಚದ ಬಯೋಹಾಟ್‌ ಸ್ಪಾಟ್‌ಗಳಲ್ಲಿ ಒಂದು. ಇಲ್ಲಿಯ ಕಾಡುಗಳು ಜಗತ್ತಿನ ವಿರಳಾತಿ ವಿರಳ ಸಸ್ಯ ಸಂಕುಲಗಳ ಆಗರ. ಇಲ್ಲಿಯ ಹಲವು ಸೋಜಿಗಗಳೊಂದಿಗೆ ‘ವೀವರ್ ರೆಡ್’ ಎನ್ನುವ ಪುಟ್ಟ ಇರುವೆಗಳು ಸದಾ ನನ್ನ ಕುತೂಹಲವನ್ನು ಕೆರಳಿಸುತ್ತವೆ. ಕನ್ನಡದಲ್ಲಿ ಇವಕ್ಕೆ ಚಿಗಳಿ, ಚವುಳಿ ಎಂದು ಕರೆಯುತ್ತಾರೆ. ಮರಗಳಲ್ಲಿ ಗೂಡು ಕಟ್ಟಿ ವಾಸ ಮಾಡುವ ಇವು ನಮ್ಮಲ್ಲಿ ಮಾತ್ರವಲ್ಲದೆ ಶ್ರೀಲಂಕಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌, ಆಸ್ಟ್ರೇಲಿಯಾಗಳಲ್ಲೂ ಕಂಡುಬರುತ್ತವೆ.

ಚಿಗಳಿಗಳು ಗೂಡು ಕಟ್ಟುವ ಬಗೆ ಕುತೂಹಲಕರ. ತಮ್ಮ ದೇಹದಿಂದ ಉತ್ಪತ್ತಿಯಾಗುವ ಒಂದು ಬಗೆಯ ರೇಷ್ಮೆಯನ್ನು ಉಪಯೋಗಿಸಿ, ಎಲೆಗಳನ್ನು ಎಳೆದು ಅಂಟು ಹಾಕಿ ಇವು ಗೂಡು ಕಟ್ಟುತ್ತವೆ. ಇಡಿ ಕಾಲೊನಿಗೆ ಒಂದೇ ಗೂಡು ಕಟ್ಟಿಕೊಂಡು ಬದುಕುವುದು ಇವುಗಳ ಜಾಯಮಾನ ಅಲ್ಲ. ಬದಲಿಗೆ ಒಂದೇ ಮರದಲ್ಲಿ ಹಲವು ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ಕೆಲವೊಮ್ಮೆ ಅಕ್ಕಪಕ್ಕದ ಹಲವು ಮರಗಳಲ್ಲಿ ಒಂದೇ ಗುಂಪಿನ ಹಲವು ಗೂಡುಗಳಿರುತ್ತವೆ. ರಾಣಿ‌ ಇರುವೆ ಇಡೀ ಗುಂಪನ್ನು ನಿಯಂತ್ರಿಸುತ್ತದೆ. ಅದರ ಸೂಚನೆಯಂತೆ ಉಳಿದ ಇರುವೆಗಳು ಕೆಲಸ ಮಾಡುತ್ತವೆ. ಸಣ್ಣ ಸಣ್ಣ ಉಪದ್ರವಕಾರಿ ಕೀಟಗಳನ್ನು ತಿನ್ನುವ ಮೂಲಕ ರೈತರಿಗಿವು ಸಹಾಯ ಮಾಡುತ್ತವೆ.

ಸರಿಯಾಗಿ ಗಮನ ಹರಿಸದೆ ಸುಮ್ಮನೆ ಕಣ್ಣು ಹಾಯಿಸಿ ಅವುಗಳನ್ನು ದಾಟಿ ಸಾಗಿದರೆ ಇವು ಬೇರೆ ಇರುವೆಗಳಂತೆ ಇನ್ನೊಂದು ಜಾತಿಯ ಇರುವೆಗಳಷ್ಟೆ. ಅವುಗಳ ಬಳಿ ನಿಂತು ಸೂಕ್ಷ್ಮವಾಗಿ ತುಸು ಹೊತ್ತು ಗಮನಿಸಿ ನೋಡಿದರೆ ನುರಿತ ಎಂಜಿನಿಯರ್‌ಗಳಂತೆ ಕಾಣುತ್ತವೆ.

ಒಂದು ದಿನ ನಾನು ತೋಟದಲ್ಲಿ ಯಾವುದೋ ಕೆಲಸ ಮಾಡುತ್ತಿರುವಾಗ ದಿಢೀರನೆ ಇವುಗಳು ಗೂಡು ಕಟ್ಟುತ್ತಿರುವುದು ಕಾಣಿಸಿತು. ಈ ಇರುವೆಗಳು ಎಲ್ಲೆಡೆ ಯಾವಾಗಲೂ ಕಾಣಸಿಗುತ್ತದೆಯಾದರೂ ಅವು ಗೂಡು ಕಟ್ಟುತ್ತಿರುವಾಗ ಕಾಣುವುದು ಬಲು ಅಪರೂಪ. ತಕ್ಷಣ ಮನೆಗೆ ಹೋಗಿ ಕ್ಯಾಮೆರಾ ತಂದೆ.

ಚಿಗಳಿಗಳು ಮೊದಲು ಎಲ್ಲಿ ಗೂಡುಕಟ್ಟಬೇಕೋ ಅಲ್ಲಿಯ ಜಾಗವನ್ನು, ಎಲೆಗಳನ್ನು ಕೂಲಂಕಷವಾಗಿ ಪರೀಕ್ಷಿಸುತ್ತವೆ. ಆ ಪರೀಕ್ಷೆಯಲ್ಲಿ ಪಾಸಾದರೆ ಅಲ್ಲಿ ಗೂಡನ್ನು ನಿರ್ಮಿಸಲು ಆರಂಭಿಸುತ್ತವೆ. ಒಂದೊಂದೇ ಇರುವೆಗಳು ತಮ್ಮ ಶಕ್ತಿಯನ್ನು ಪೂರ್ತಿ ಉಪಯೋಗಿಸಿ ಎಲೆಗಳನ್ನು ಎಳೆಯತೊಡಗುತ್ತವೆ.

ಒಂದಿಷ್ಟು ಕೆಲಸಗಾರ ಇರುವೆಗಳು ಒಂದು ತುದಿಯನ್ನು ಬಲವಾಗಿ ಹಿಡಿದೆಳೆದುಕೊಳ್ಳುತ್ತವೆ. ಉಳಿದವು ಅವುಗಳನ್ನು ಹಿಂಬಾಲಿಸಿ ಬಲವಾಗಿ ಎಳೆಯುತ್ತವೆ.

ಅವುಗಳನ್ನು ಹತ್ತಿರದಿಂದ ಫೋಟೊ ತೆಗೆಯಲು ಹೋದಾಗ ನನ್ನ ಕ್ಯಾಮೆರಾ ಅವುಗಳ ಗೂಡಿಗೆ ತುಸು ಹೆಚ್ಚೇ ಹತ್ತಿರ ಹೋಯಿತು. ಕೆಲವು ಇರುವೆಗಳು ತಕ್ಷಣ ನನ್ನತ್ತ ತಿರುಗಿ ಕ್ಯಾಮೆರಾವನ್ನೇ ಗಮನಿಸತೊಡಗಿದವು. ಬಹುಶಃ ಅವು ತಮ್ಮ ಗೂಡಿನ ಮೇಲೆ ಆಗಬಹುದಾದ ಸಂಭವನೀಯ ದಾಳಿಯನ್ನು ಗಮನಿಸುವ ಕಾವಲುಗಾರ ಇರುವೆಗಳಿರಬೇಕು. ಈ ವಿಚಿತ್ರ ಕಪ್ಪುಪ್ರಾಣಿ ಅಪಾಯ ಉಂಟುಮಾಡುವಂತಹದ್ದೆಂದು ಅವಕ್ಕೆ ಗಾಬರಿಯಾಗಿರಬೇಕು. ನನ್ನ ಕ್ಯಾಮೆರಾ ತಿರುಗಿದ ಕಡೆಯೇ ಅವು ತಿರುಗಿದವು. ನನ್ನನ್ನು ಹೆದರಿಸುವ ಪ್ರಯತ್ನವೂ ಆಗಿದ್ದೀತು ಅದು. ಉಳಿದ ಇರುವೆಗಳು ಎಲೆಯನ್ನು ಎಳೆಯುವಲ್ಲಿ ಮಗ್ನವಾಗಿದ್ದವು; ಹನಿ ಹಂದಾಡುವ ಪ್ರಯತ್ನ ಮಾಡದೆ ತಮ್ಮ ಕೆಲಸದಲ್ಲೇ ತಲ್ಲೀನವಾಗಿದ್ದವು.

ಅಲ್ಲಿ ಕೆಲವು ಸೂಪರ್‌ವೈಸರ್‌ಗಳೂ ಇದ್ದವು. ಅವು ಎಲೆಗಳನ್ನು ಎಳೆಯುವ ಅಥವಾ ಗೂಡು ಕಟ್ಟುವ ಯಾವುದೇ ಕ್ರಿಯೆಯಲ್ಲಿ ನೇರವಾಗಿ ಭಾಗವಹಿಸುವುದಿಲ್ಲ. ಬದಲು ಗೂಡು ಕಟ್ಟುವ ಪ್ರಕ್ರಿಯೆಯನ್ನು ಪರೀಕ್ಷಿಸುತ್ತವೆ. ಒಂದಿಷ್ಟು ಸಲಹೆಗಳನ್ನು ಕೊಡುತ್ತವೆ.

ಬೇರೊಂದು ಸಂದರ್ಭದಲ್ಲಿ ಅವು ತಮ್ಮ ದೇಹವನ್ನೇ ಸೇತುವೆಯಾಗಿಸಿ ದಾರಿಯಲ್ಲಿನ ಸಣ್ಣ ಸಣ್ಣ ಗ್ಯಾಪುಗಳನ್ನು ದಾಟುವುದನ್ನು ನೋಡಿದ್ದೇನೆ. ಒಮ್ಮೆ ಬೇಲಿ ಮಧ್ಯದ ಗೇಟಿನ ಮಿಡ (latch)ವನ್ನು ಹೀಗೆ ದಾಟಿದ್ದವು.

ಇರುವೆಗಳು ಅವುಗಳ ದೇಹದ ತೂಕಕ್ಕೆ ಹೋಲಿಸಿದರೆ ಇರುವ ಅಗಾಧ ಶಕ್ತಿಗೆ ಪ್ರಸಿದ್ಧ. ಚಿಗಳಿಗಳು ಕೂಡ ತಮ್ಮ ದೇಹದ ಹಲವಾರು ಪಟ್ಟು ತೂಕವನ್ನು ಎತ್ತುತ್ತವೆ. ಕೆಲವೊಮ್ಮೆ ಈ ಕಾರ್ಯಗಳಲ್ಲಿ ಅವು ತೋರುವ ಸಂಘಟಿತ ಶಕ್ತಿ ಮತ್ತು ಯುಕ್ತಿ ಅಚ್ಚರಿಯುಂಟುಮಾಡುತ್ತದೆ. ಒಮ್ಮೆ ಒಂದಿಷ್ಟು ಚಿಗಳಿಗಳು ಅದಕ್ಕಿಂತ ಎಷ್ಟೋ ದೊಡ್ಡ ಜೆನ್ನೋಣವನ್ನು ಎಳೆದುಕೊಂಡು ಹೋಗುತ್ತಿದ್ದವು.

ಆಗಲೇ ಒಂದು ಇರುವೆ ಅರ್ಧಗಾಳಿಯಲ್ಲಿ ತೇಲುತ್ತ ಬೀಳಲಿರುವ ಜೆನ್ನೋಣವನ್ನು ಹಿಡಿದು ಮೇಲೆಳೆಯುತ್ತಿತ್ತು.

ಈ ಚಿಗಳಿಗಳು ಅಫಿಡ್ (aphid) ಎಂಬ ಸಣ್ಣ ಜೀವಿಗಳೊಂದಿಗೆ ಸಿಂಬಾಯಸಿಸ್ (symbiosis) ಸಂಬಂಧವಿಟ್ಟುಕೊಳ್ಳುತ್ತವೆ. ಇವು ಅಫಿಡ್‌ಗಳು ಸ್ರವಿಸುವ ‘ಹನಿಡ್ಯೂ’ ಎಂಬ ಸಿಹಿರಸವನ್ನು ತೆಗೆದುಕೊಳ್ಳುತ್ತವೆ. ಪ್ರತಿಯಾಗಿ ಅವುಗಳ ಬೇಟೆಗಾರರಿಂದ ಅವನ್ನು ರಕ್ಷಿಸುತ್ತವೆ.

ಇರುವೆಗಳು ದಾರಿಯ ಮೇಲೆ ಭೇಟಿಯಾದಾಗ ಬಾಯಿಯ ಮೂಲಕ ಆಹಾರ ಅಥವಾ ರಸಗಳನ್ನು ಬದಲಿಸಿಕೊಳ್ಳುತ್ತವೆ. ಇದನ್ನು ‘ಟ್ರೊಫಲಾಕ್ಸಿಸ್’ (trophallaxis) ಎನ್ನುತ್ತಾರೆ. ಈ ಇರುವೆಗಳು ತಮ್ಮ ಪುಟ್ಟ ಸಮಾಜದಲ್ಲಿ ಅತ್ಯಂತ ವಿಭಿನ್ನ ಮತ್ತು ಸಂಕೀರ್ಣವಾದ ಪರಸ್ಪರ ಹೊಂದಾಣಿಕೆಯ ಸಾಮಾಜಿಕ ರಚನೆಯನ್ನು ಹೊಂದಿವೆ. ಮನುಷ್ಯರಾದ, ಅತ್ಯಂತ ಮುಂದುವರಿದ ಪ್ರಾಣಿಗಳೆಂದು ಹೇಳಿಕೊಳ್ಳುವ ನಾವು ಇವುಗಳಿಂದ ಕಲಿಯುವುದು ಬೇಕಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT