ಭಾನುವಾರ, ಆಗಸ್ಟ್ 14, 2022
21 °C

ಮಾನವ– ಚಿರತೆ ಏನೀ ಸ್ನೇಹಸಂಬಂಧ!

ಅಖಿಲೇಶ್‌ ಚಿಪ್ಲಿ Updated:

ಅಕ್ಷರ ಗಾತ್ರ : | |

ರಾಜಸ್ಥಾನದ ಜವಾಯಿ ಬೆಟ್ಟದ ವಿಶೇಷವೇ ಹಾಗೆ. ಮಾನವ–ಚಿರತೆಗಳ ಸಹಬಾಳ್ವೆಯನ್ನು ನೋಡಲು ನೀವು ಇಲ್ಲಿಗೇ ಬರಬೇಕು. ಹಗಲಿನ ಸಮಯ ಆದಿವಾಸಿಗಳಿಗೆ ಮತ್ತು ರಾತ್ರಿಯ ಸಮಯ ಚಿರತೆಗಳಿಗೆ ಎನ್ನುವುದು ಇಲ್ಲಿನ ಹೊಂದಾಣಿಕೆ.

ಸೂರ್ಯಾಸ್ತವಾಗುತ್ತಿದ್ದಂತೆ ಜವಾಯಿ ಬೆಟ್ಟದ ಮೇಲಿನ ಗುಹೆಯಲ್ಲಿರುವ ಆಶಾ ಮಾತಾಜಿಗೊಂದು ಆ ದಿನದ ಕೊನೆಯ ಪೂಜೆ ಮಾಡಿ, ಗುಹೆಯ ಬಾಗಿಲಿನ ಚಿಲಕ ಹಾಕಿ, ಬೆಟ್ಟ ಇಳಿಯುವ ಪೂಜಾರಿಗೆ ಅನತಿ ದೂರದಲ್ಲೇ ಚಿರತೆಯೊಂದು ತನ್ನ ಮರಿಗೆ ಚಿನ್ನಾಟವಾಡಿಸುವ ದೃಶ್ಯ ಕಂಡು ಬರುತ್ತದೆ. ತಲೆಗಿಂತ ದೊಡ್ಡದಾದ ಕೆಂಪುಬಣ್ಣದ ಭಾರಿ ಮುಂಡಾಸು ಸುತ್ತಿದ ಪೂಜಾರಿಗೆ ಇದು ಅತ್ಯಂತ ಸಹಜ ನೋಟ. ಮತ್ತಿಪ್ಪತ್ತು ಮೆಟ್ಟಿಲು ಇಳಿಯುತ್ತಿದ್ದಂತೆ, ಪಕ್ಕದ ಬಂಡೆಯ ಮೇಲೆ ಮತ್ತೊಂದು ಚಿರತೆ ಕುಳಿತಿರುವುದು ಕಾಣುತ್ತದೆ! ಅದು ಇನ್ನೇನು ಬೇಟೆಯನ್ನರಸಿ ಹೊರಡುವ ಸಮಯ. ಆದರೆ, ಆ ಚಿರತೆಗೆ ಬಲಿಪ್ರಾಣಿ ಪೂಜಾರಿಯಲ್ಲ. ಇದು ಯಾವುದೋ ಚಿತ್ರದ ದೃಶ್ಯವಲ್ಲ; ನಿಸರ್ಗ ಸಹಜವಾದ ಈ ಪರಿಪಾಟಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.

‘ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ’, ‘ಭದ್ರಾವತಿಯ ಕೊಕ್ಕಡಾಂಬ ದೇವಸ್ಥಾನದ ಬಳಿ ಕಂಡ ಚಿರತೆ’, ‘ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ’ ಎಂಬ ವರದಿಗಳ ಜೊತೆಯಲ್ಲಿ ‘ಊರಿಗೆ ಬಂದ ಚಿರತೆಯನ್ನು ದೊಣ್ಣೆಯಲ್ಲಿ ಹೊಡೆದು ಕೊಂದ ಗ್ರಾಮಸ್ಥರು’, ‘ಆತಂಕ ಮೂಡಿಸಿದ ಚಿರತೆಯ ಸೆರೆ’ – ಇಂತಹ ತಲೆಬರಹಗಳಿರುವ ವರದಿಗಳು ಇತ್ತೀಚಿಗೆ ಹೆಚ್ಚಾಗಿವೆ. ಮಾನವ–ವನ್ಯಜೀವಿ ಸಂಘರ್ಷ ಎಂಬ ಹೊಸ ನುಡಿಗಟ್ಟು ಟಂಕಿಸಿ ಬಹಳ ಸಮಯವೇನೂ ಆಗಿಲ್ಲ.

ಸಾಮಾನ್ಯವಾಗಿ ಕಾಡಿನ ಪ್ರಾಣಿಗಳು ಮಾನವನಿಂದ ಸಾಧ್ಯವಾದಷ್ಟು ಅಂತರ ಕಾಪಾಡಿಕೊಳ್ಳಲು ಹೆಣಗುತ್ತಲೇ ಇರುತ್ತವೆ. ತೀರಾ ಅನಿವಾರ್ಯ ಸ್ಥಿತಿಯಲ್ಲಿ ಜನವಸತಿ ಪ್ರದೇಶಗಳಿಗೆ ಬರುತ್ತವೆ. ಇದಕ್ಕೆ ಹೊರತಾದ ವಿದ್ಯಮಾನವೊಂದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಕಂಡುಬರುತ್ತದೆ. ಚಿರತೆಯೆಂಬ ಹಿಂಸ್ರ ಪಶುವಿನ ಸನ್ನಡತೆಯ ಸೋಜಿಗದ ಸನ್ನಿವೇಶವಿದು.

ಸಾವಿರಾರು ವರ್ಷಗಳ ಹಿಂದೆ ಉಕ್ಕಿ ಮೇಲೆದ್ದ ಲಾವಾದಿಂದ ಸೃಷ್ಟಿಯಾದ ಬೆಟ್ಟಗಳು ಪಾಲಿ ಜಿಲ್ಲೆಯ ಜವಾಯಿ ಎಂಬ ಪ್ರದೇಶದಲ್ಲಿವೆ ಮತ್ತು ಆ ಬೆಟ್ಟಗಳಲ್ಲಿ ಅನೇಕ ಗುಹೆಗಳೂ ಇವೆ. ಪ್ರಪಂಚದಲ್ಲಿ ಎಲ್ಲೂ ಕಂಡುಬರದ ಚಿರತೆಯ ದಟ್ಟಣೆ ಇಲ್ಲಿದೆ. ಈ ಬೆಟ್ಟದಲ್ಲಿ ದೇವಸ್ಥಾನವಿದೆ; ತೀರಾ ಹತ್ತಿರದಲ್ಲೆ ಜನವಸತಿಯಿದೆ. ಕಳೆದ ನೂರೈವತ್ತು ವರ್ಷಗಳ ಇತಿಹಾಸದಲ್ಲಿ ಒಂದು ಚಿರತೆಯೂ ಮನುಷ್ಯನನ್ನು ಕೊಂದು ಹಾಕಿದ ಉದಾಹರಣೆ ನಿಮಗಿಲ್ಲಿ ಸಿಗುವುದಿಲ್ಲ. ಕುರಿ ಮತ್ತು ಜಾನುವಾರು ಸಾಕಣೆಯೇ ಇಲ್ಲಿನ ಜನರ ಮುಖ್ಯ ಕಸುಬು. ನೂರಾರು ಗುಹೆಗಳ ಪೈಕಿ ಒಂದು ಗುಹೆಯಲ್ಲಿ ದೇವಗಿರಿ ದೇವಸ್ಥಾನವಿದೆ. ಇಲ್ಲಿನ ದೇವತೆ ಆಶಾ ಮಾತಾಜಿ ಇಡೀ ಹಳ್ಳಿಯನ್ನು ಅಪಾಯದಿಂದ ಕಾಪಾಡುತ್ತಾಳೆ ಎಂಬ ಗಾಢ ನಂಬಿಕೆ ಇಲ್ಲಿದೆ.

ಮಾನವರ ಜೊತೆ ಯಾವುದೇ ಸಂಘರ್ಷವಿಲ್ಲದೆ ಬದುಕುತ್ತಿರುವ ಚಿರತೆಗಳ ಸಂತತಿ ಬೆಳೆಯುತ್ತಲೇ ಇದೆ. ಇದೀಗ ಅವುಗಳ ಸಂಖ್ಯೆ 83! ಸಾಮಾನ್ಯವಾಗಿ ಚಿರತೆಗಳು ನಿಶಾಚರಿಗಳು; ಹಗಲು ಹೊತ್ತಿನಲ್ಲಿ ಅವುಗಳ ದರ್ಶನವಾಗುವುದು ದುರ್ಲಭ. ಆದರೆ, ಜವಾಯಿ ಬೆಟ್ಟದಲ್ಲಿ ಹಗಲು ಹೊತ್ತಿನಲ್ಲೂ ಚುಕ್ಕೆ ಚಂದ್ರಿತ ಸುಂದರಿಯರು ನಿಮಗೆ ಕಾಣಲು ಲಭ್ಯ.

ಜವಾಯಿ ಮತ್ತು ಬೇರಾ ಎಂಬ ಎರಡು ಪ್ರದೇಶಗಳಲ್ಲಿ ಒಟ್ಟು ಇಪ್ಪತ್ತೊಂದು ಹಳ್ಳಿಗಳಿದ್ದು, ಸ್ಥಳೀಯ ಜನಸಂಖ್ಯೆ ಸುಮಾರು ಮೂವತ್ತು ಸಾವಿರದಷ್ಟಿದೆ. ಇದರಲ್ಲಿ ಹೆಚ್ಚಿನ ಪಾಲು ಸ್ಥಳೀಯರ ಮುಖ್ಯ ಕಸುಬು ಕುರಿ ಮತ್ತು ದನ ಕಾಯುವುದು; ಈ ಸಮುದಾಯದವರು ಇರಾನಿನಿಂದ ಅಫ್ಗಾನಿಸ್ತಾನದ ಮೂಲಕ ಸಾವಿರಾರು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆ ನಿಂತಿದ್ದಾರೆ ಎಂದು ಹೇಳಲಾಗುತ್ತದೆ.

ಲಾಗಾಯ್ತಿನಿಂದಲೂ ಇವರು ಶಿವನ ಆರಾಧಕರು; ಶಿವನ ಎದೆಯ ಮೇಲೆ ಚಿರತೆಯ ಚರ್ಮವಿದೆ. ಶಿವ ಕುಳಿತುಕೊಳ್ಳುವುದು ಹುಲಿಯ ಚರ್ಮದ ಮೇಲೆ. ಆದ್ದರಿಂದ ಇಲ್ಲಿನ ನಿವಾಸಿಗಳ ದೃಷ್ಟಿಯಲ್ಲಿ ಹುಲಿಗಿಂತ ಚಿರತೆಯೇ ಹೆಚ್ಚು ಶ್ರೇಷ್ಠ. ಚಿರತೆಯೊಂದು ಬಂದು ಕುರಿಯನ್ನು ಎತ್ತಿಕೊಂಡು ಹೋದರೆ ಅವರು ಚಿಂತಿಸುವುದಿಲ್ಲ. ಕುರಿಯು ಶಿವನಿಗೆ ಅರ್ಪಿತವಾಯಿತು ಎಂದೇ ತಿಳಿಯುತ್ತಾರೆ. ಬಲಿಯನ್ನು ಸ್ವೀಕರಿಸಿದ ಶಿವ ತಮ್ಮ ಕುರಿ ಸಂತತಿಯನ್ನು ಹೆಚ್ಚು ಮಾಡುತ್ತಾನೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ಸುಮಾರು 20 ಚದರ ಕಿ.ಮೀ. ವ್ಯಾಪ್ತಿಯನ್ನು ಜವಾಯಿ ಸಮುದಾಯ ಮೀಸಲು ಸಂರಕ್ಷಣಾ ಪ್ರದೇಶವೆಂದು ಘೋಷಿಸಲಾಗಿದೆ. ಪಕ್ಕದ ಬೇರಾ ಪ್ರದೇಶವನ್ನೂ ಸಮುದಾಯ ಮೀಸಲು ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡುವಂತೆ ಸ್ಥಳೀಯರು 2015ರಲ್ಲೇ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಚಿರತೆಗಳಿರುವ ಪ್ರದೇಶ ಒಂದೊಮ್ಮೆ ಸಮುದಾಯದ ಆಸ್ತಿಯೆಂದು ಪರಿಗಣಿತವಾದಲ್ಲಿ ಅಲ್ಲಿನ ಆಡಳಿತದ ಜವಾಬ್ದಾರಿ ಸ್ಥಳೀಯರದೇ ಆಗಿರುತ್ತದೆ. ಪ್ರವಾಸೋದ್ಯಮದ ಮೇಲೂ ಮಿತಿ ಹಾಕಬಹುದಾಗಿದೆ. ಸದ್ಯ ಬಂಡವಾಳಶಾಹಿಗಳು ಇಲ್ಲಿ ಸ್ಟಾರ್ ಹೋಟೆಲುಗಳನ್ನು ಕಟ್ಟಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ. ಚಿರತೆಗಳ ಆವಾಸಸ್ಥಾನ ನಿಧಾನವಾಗಿ ಕುಗ್ಗುತ್ತಿದೆ; ಸ್ಥಳೀಯ ಆದಿವಾಸಿಗಳಾದ ರಬರಿ ಜನಾಂಗ ಮತ್ತು ಚಿರತೆ ಸಂತತಿಯ ಮಧ್ಯೆ ಒಂದು ರೀತಿಯಲ್ಲಿ ಹೊಂದಾಣಿಕೆ ಇದೆ. ಹಗಲಿನ ಸಮಯ ಆದಿವಾಸಿಗಳಿಗೆ ಮತ್ತು ರಾತ್ರಿಯ ಸಮಯ ಚಿರತೆಗಳಿಗೆ ಎನ್ನುವುದೇ ಆ ಹೊಂದಾಣಿಕೆ.

ಐಷಾರಾಮಿ ಹೋಟೆಲ್ಲುಗಳಲ್ಲಿ ಉಳಿದುಕೊಳ್ಳಲು ಬರುವ ಶ್ರೀಮಂತ ಪ್ರವಾಸಿಗರಿಗೆ, ಮಾಲೀಕರು ಅನಿವಾರ್ಯವಾಗಿ ಚಿರತೆಗಳ ದರ್ಶನ ಮಾಡಿಸಲೇಬೇಕು. ಇದಕ್ಕಾಗಿ ಪ್ರಖರ ದೀಪಗಳಿಂದ ಕೂಡಿದ ದುಬಾರಿ ಜೀಪುಗಳನ್ನು ಬಳಕೆ ಮಾಡಲಾಗುತ್ತದೆ. ಸ್ಥಳೀಯರಿಂದ ಮೇಕೆಗಳನ್ನು ಖರೀದಿಸಿ, ಅದನ್ನು ಅರ್ಧಂಬರ್ಧ ಕೊಂದು ಬೆಟ್ಟದಲ್ಲಿ ಎಸೆಯುವ ಪ್ರವೃತ್ತಿ ಪ್ರಾರಂಭವಾಗಿದೆ. ಮೇಕೆಯನ್ನು ತಿನ್ನಲು ಬರುವ ಚಿರತೆಯ ಫೋಟೊ ತೆಗೆಯುವ, ವಿಡಿಯೊ ಮಾಡಿಕೊಳ್ಳುವ ಹಪಹಪಿ ಪ್ರವಾಸಿಗರದ್ದು. ಒತ್ತುವರಿ ಸಮಸ್ಯೆ ಈ ಪ್ರದೇಶವನ್ನೂ ಕಾಡುತ್ತಿದ್ದು, ಅವರು ಹಾಕಿರುವ ತಂತಿಬೇಲಿ ಚಿರತೆಗಳಿಗೆ ಕಂಟಕವಾಗಿ ಪರಿಣಮಿಸೀತು ಎಂಬ ಆತಂಕವೂ ಇದೆ.

ಚಿರತೆಗಳು ದನವನ್ನೋ ಕುರಿಯನ್ನೋ ತಿಂದು ಹಾಕಿದರೆ ದನಕ್ಕೆ ಹದಿನೈದು ಸಾವಿರ ಮತ್ತು ಕುರಿಗೆ ನಾಲ್ಕು ಸಾವಿರ ರೂಪಾಯಿ ಪರಿಹಾರವನ್ನು ಅರಣ್ಯ ಇಲಾಖೆ ನೀಡುತ್ತದೆ. ಆದರೆ, ಬಹುತೇಕರು ಚಿರತೆ ತಮ್ಮ ಕುರಿಯನ್ನೋ ದನವನ್ನೋ ತಿಂದುಹೋದ ಕುರಿತು ಅರಣ್ಯ ಇಲಾಖೆಗೆ ಮಾಹಿತಿಯನ್ನೇ ನೀಡುವುದಿಲ್ಲ. ತಮ್ಮ ಸ್ವತ್ತು ಶಿವನಿಗೆ ಸಲ್ಲಿಕೆಯಾಯಿತು; ಅಷ್ಟು ಸಾಕು ಎಂಬ ಭಾವದಲ್ಲಿ ಇರುತ್ತಾರೆ. ಚಿರತೆಗಳೊಂದಿಗಿನ ತಮ್ಮ ಜೀವನವನ್ನು ಆದಿವಾಸಿಗಳು ಯಾವತ್ತೂ ವ್ಯಾವಹಾರಿಕ ದೃಷ್ಟಿಯಿಂದ ನೋಡಿಲ್ಲ. ಜವಾಯಿ ಮತ್ತು ಬೇರಾ ಪ್ರದೇಶಗಳಲ್ಲಿ ಹೊಸ ಹೊಸ ಹೋಮ್‌ಸ್ಟೇಗಳು, ರೆಸ್ಟೋರೆಂಟುಗಳು ಬರುತ್ತಿವೆ. ಇಲ್ಲಿನ ಯುವಕರು ಚಿರತೆಯ ಜಾಡನ್ನು ಹಿಡಿಯುವ ಕೆಲಸವನ್ನು ಮಾಡಿದರೆ ಯುವತಿಯರು ಐಷಾರಾಮಿ ಹೋಟೆಲ್ಲುಗಳಲ್ಲಿ ಚಾಕರಿ ಮಾಡುತ್ತಿದ್ದಾರೆ.

ಭಾರತದ ಕಾಡುಗಳಲ್ಲಿ ಹಾಲಿ ಸುಮಾರು ಹದಿನಾಲ್ಕು ಸಾವಿರ ಚಿರತೆಗಳು ಇವೆಯೆಂಬುದು ತಜ್ಞರ ಅಂದಾಜು. ಮಾನವ–ಸಂಘರ್ಷ ಹಾಗೂ ಚಿರತೆಗಳ ಚರ್ಮ, ಮಾಂಸ, ಮತ್ತಿತರ ಕಾರಣಕ್ಕಾಗಿ 1994ರಿಂದ 2019ರ ಅವಧಿಯಲ್ಲಿ 4,373 ಚಿರತೆಗಳನ್ನು ಹತ್ಯೆ ಮಾಡಲಾಗಿದೆ. ಹಾಗೆಯೇ ಚಿರತೆ ದಾಳಿಯಿಂದ ಪ್ರತಿವರ್ಷ ಭಾರತದಲ್ಲಿ ಸುಮಾರು 90 ಜನರು ಅಸುನೀಗುತ್ತಾರೆ ಎನ್ನುತ್ತವೆ ಅಂಕಿ-ಅಂಶಗಳು. ಚಿರತೆ ಸಂತತಿಯ ಅತಿದಟ್ಟಣೆಯಿರುವ ಜವಾಯಿ ಮತ್ತು ಬೇರಾ ಭಾಗಗಳಲ್ಲಿ ಒಂದೇ ಒಂದು ನಿರ್ಲಕ್ಷ್ಯದ ದುರ್ಘಟನೆ ಬಿಟ್ಟರೆ ಕಳೆದ ನೂರೈವತ್ತು ವರ್ಷಗಳಲ್ಲಿ ಮಾನವನನ್ನು ಕೊಂದ ಒಂದೂ ಉದಾಹರಣೆಯಿಲ್ಲ.

ಈಗ ಇಪ್ಪತ್ತು ವರ್ಷಗಳ ಹಿಂದೆ ಚಿರತೆಯೊಂದು ಒಂದು ವರ್ಷದ ಹೆಣ್ಣು ಮಗುವನ್ನು ಹೊತ್ತೊಯ್ಯುವ ಪ್ರಯತ್ನ ಮಾಡಿತ್ತು. ಆದರೆ, ತಮ್ಮದೇ ತಪ್ಪಿತ್ತು ಎಂದು ಆ ಮಗುವಿನ ಪೋಷಕರು ಈಗಲೂ ನೆನಪಿಸಿಕೊಳ್ಳುತ್ತಾರೆ. ಆ ಇಪ್ಪತ್ತೊಂದು ಹಳ್ಳಿಗಳ ಪೈಕಿ ಒಂದು ಹಳ್ಳಿಯ ಹೆಸರು ವೆಲ್ಲಾರ್. ಮಗುವನ್ನು ಒಂದು ಬಟ್ಟೆಯಲ್ಲಿ ಸುತ್ತಿ ಕೊಟ್ಟಿಗೆಯ ಹೊರಗೆ ಇಳಿಸಂಜೆಯ ಹೊತ್ತಿನಲ್ಲಿ ಮಲಗಿಸಿದ್ದರು. ಕುರಿಯನ್ನೋ ಕರುವನ್ನೋ ಹೊತ್ತೊಯ್ಯಲು ಬಂದ ಚಿರತೆಯ ಬಾಯಿಗೆ ಈ ಮಗು ಸಿಕ್ಕಿತು. ಅಲ್ಲೇ ಕೆಲಸ ಮಾಡುತ್ತಿದ್ದ ಪೋಷಕರು ಕೂಗಿ ಗಲಾಟೆ ಮಾಡಿದಾಗ ಚಿರತೆ ಮಗುವನ್ನು ಹಾಗೆಯೇ ಬಿಟ್ಟು ಹೋಯಿತು.

ಸಂತೋಷಿ ಕುನ್ವರ್ ಎಂಬ ಆ ಮಗುವೀಗ 21ರ ಹರೆಯದ ಯುವತಿ. ಚಿರತೆ ಕತ್ತಿಗೆ ಬಾಯಿ ಹಾಕಿದಾಗ ಚಿಕ್ಕದೊಂದು ಗಾಯವಾಗಿತ್ತು. ಅದರ ಕಲೆ ಇನ್ನೂ ಹಾಗೆಯೇ ಇದೆ. ಅದೇ ಕಾರಣಕ್ಕೆ ಅವಳಿಗೆ ‘ಸಿತ್ರಿ’ ಎಂಬ ಕಿರುನಾಮ ತಳುಕು ಹಾಕಿಕೊಂಡಿದೆ. ಸಿತ್ರಿ ಎಂದರೆ ಹೆಣ್ಣು ಚಿರತೆ. ಈ ಘಟನೆಯಿಂದ ಅಲ್ಲಿನ ಜನ ಭಯಭೀತರಾಗಿಲ್ಲ. ಚಿರತೆ ತನ್ನ ಊಟಕ್ಕೆ ಬರುವ ಸಮಯದಲ್ಲಿ ಮಗುವನ್ನು ಮಲಗಿಸಿದ್ದು ತಮ್ಮ ತಪ್ಪು ಎಂದುಕೊಂಡಿದ್ದಾರೆ. ಈಗಲೂ ಸಂಜೆಯವರೆಗೂ ಚಿಕ್ಕ ಮಕ್ಕಳು ಭೀತಿಯಿಲ್ಲದೇ ಬೀದಿಯಲ್ಲಿ ಆಟವಾಡುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು