ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಆಲೀವ್‌ ರಿಡ್ಲೆ ಮೊಟ್ಟೆ ಎಲ್ಲಿ ಇಡ್ಲೆ?

Last Updated 18 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಹೊನ್ನಾವರ ಬಳಿಯ ಟೊಂಕಾ ಬೀಚ್‌ನಲ್ಲಿ ಈಗ ಇನ್ನಿಲ್ಲದ ಗಡಿಬಿಡಿ. ಅಭಿವೃದ್ಧಿ ಚಟುವಟಿಕೆಗಳು ಅಲ್ಲಿ ಭರದಿಂದ ನಡೆಯುತ್ತಿವೆ. ಆಲೀವ್‌ ರಿಡ್ಲೆ ಆಮೆಗಳ ಮೊಟ್ಟೆ ಗೂಡುಗಳೂ ಅಲ್ಲಿ ಸಮಾಧಿಯಾಗುತ್ತಿವೆ. ‘ಮೊಟ್ಟೆ ಎಲ್ಲಿ ಇಡ್ಲೆ’ ಎಂಬ ಆಲೀವ್‌ ರಿಡ್ಲೆಗಳ ಪ್ರಶ್ನೆಗೆ ಯಾರ ಬಳಿ ಉತ್ತರವಿದೆ?

***

‘ಒಡೇರಾ ಇಲ್ಲಿ ಕಲ್ಲು, ಮಣ್ಣು ಹಾಕ್ಬೇಡಿ; ಆಮೆ ಮೊಟ್ಟೆ ಇಟ್ಟಿತ್ತು ಇಲ್ಲಿ’ ಎಂಬ ಪ್ರಾರ್ಥನೆಯನ್ನು ಕಿವಿಗೆ ಹಾಕಿಕೊಳ್ಳದೆ ಟಿಪ್ಪರ್‌ ಓಡಿಸಿಕೊಂಡು ಬಂದವರು ಅದೆಲ್ಲಿಂದಲೋ ಗುಡ್ಡ ಬಗೆದು ತಂದ ಮಣ್ಣನ್ನು ಆಮೆಯ ಗೂಡಿನ ಮೇಲೆ ಸುರುವಿದರು. ಅಲ್ಲೇ ಎರಡು ಅಡಿ ಆಳದಲ್ಲಿದ್ದ ಆಲೀವ್‌ ರಿಡ್ಲೆ ಆಮೆಯ ನೂರಾರು ಮೊಟ್ಟೆಗಳು ಎಂದೆಂದಿಗೂ ಮರಿಯಾಗಿ ಹೊರಗೆ ಬಾರದಂತೆ ಜೀವಂತ ಸಮಾಧಿಯಾದವು. ಹೀಗೆ ರಸ್ತೆ ನಿರ್ಮಿಸಿದ ಉದ್ದಕ್ಕೂ ಹತ್ತಾರು ಗೂಡುಗಳು ಮತ್ತದರ ಸಾವಿರಾರು ಮೊಟ್ಟೆಗಳು ಕಲ್ಲು ಮಣ್ಣಿನಡಿಯಲ್ಲಿ ಹೂತು ಹೋದವು. ಇದು ಹೊನ್ನಾವರದ ಟೊಂಕಾ ಬೀಚಿನ ಆಮೆಗಳಿಗೆ ಎದುರಾಗಿರುವ ಗಂಡಾಂತರದ ಕಥೆ.

ಸಮುದ್ರದೊಂದಿಗೆ ಶರಾವತಿ ನದಿ ಸಂಗಮವಾಗುವ ಮುಖಜ ಭೂಮಿಯ ಹತ್ತಿರದಲ್ಲೇ ಈ ಟೊಂಕಾ ಬೀಚ್‌ ಇದ್ದು, ಡಾಲ್ಫಿನ್ ಸೇರಿದಂತೆ ಸುಮಾರು ಐವತ್ತು ಜಾತಿ ಮೀನುಗಳ ಆವಾಸಸ್ಥಾನವಾಗಿದೆ. ಈ ಪ್ರದೇಶದ ಸಮೀಪದಲ್ಲಿ ಸಾವಿರಾರು ಬೆಸ್ತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಹಸಿಮೀನನ್ನು ಬಿಸಿಲಿನಲ್ಲಿ ಒಣಗಿಸಲು ಈ ಬೀಚ್‌ನ ಬಹುಭಾಗ ಬಳಕೆಯಾಗುತ್ತಿದೆ. ಮೀನು ತೊಳೆಯುವ ಮತ್ತು ಒಣಗಿಸುವ ಬೆಸ್ತರ ಶ್ರಮಜೀವನದ ಜಂಜಾಟಗಳು ಇರುಳಿನ ಹೊತ್ತಿಗೆ ಕೊನೆಗೊಳ್ಳುತ್ತವೆ. ಇಡೀ ಪ್ರದೇಶ ನಿರ್ಮಾನುಷವಾಗುತ್ತದೆ. ನದಿ ಮುಖಜ ಪ್ರದೇಶದಲ್ಲಿ ಶರಾವತಿ ನದಿಯ ನೀರಿಗೂ ಸಮುದ್ರದಲ್ಲಿ ಭರತವುಂಟಾಗಿ ನದಿಯೊಳಗೆ ನುಗ್ಗುವ ಸಮುದ್ರದ ನೀರಿಗೂ ಶರಂಪರ ಜಗಳ ನಡೆಯುತ್ತಿರುವ ಭೀಕರ ಸದ್ದು ಮಾತ್ರ ನೀರವ ರಾತ್ರಿಯಲ್ಲಿ ಕೇಳುತ್ತದೆ.

ನಿರ್ಜನವಾದ ಬೀಚ್‌ನ ಮರಳಿನಲ್ಲಿ ರಂಗೋಲಿಯಿಕ್ಕುತ್ತಾ, ಮೊಟ್ಟೆಯಿಡಲು ಸೂಕ್ತ ಸ್ಥಳಕ್ಕಾಗಿ ಪರಿಶೀಲನೆ ನಡೆಸುತ್ತಿರುವ ಹತ್ತಾರು ಆಲೀವ್‌ ರಿಡ್ಲೆ ಆಮೆಗಳು ನಿಶ್ಯಬ್ದವಾಗಿ ಬೀಚ್‌ನ ಕಡೆಗೆ ಬರುತ್ತವೆ. ಎಲ್ಲಿ ಮೊಟ್ಟೆಯಿಡಬೇಕೆಂದು ಗರ್ಭಿಣಿ ತಾಯಿಗೆ ಮೊದಲೇ ಗೊತ್ತಿರುವುದಿಲ್ಲ. ಸುಮಾರು 160 ಮೀಟರ್‌ ಸುತ್ತಳತೆಯ ಪ್ರದೇಶದಲ್ಲಿ ಸೂಕ್ತ ಜಾಗವನ್ನು ಹುಡುಕಿಕೊಳ್ಳುತ್ತದೆ. ಎರಡಡಿ ಆಳದ ಗುಂಡಿ ತೆಗೆದರೂ ಸಮುದ್ರದ ನೀರು ಆ ಗುಂಡಿಯಲ್ಲಿ ಒಸರುವ ಹಾಗಿಲ್ಲ. ಮೊಟ್ಟೆ ಮರಿಯಾಗಲೂ ಸೂಕ್ತ ಶಾಖ ಬೇಕಲ್ಲ.

ಹಾಗೆಯೇ ಇಟ್ಟ ಮೊಟ್ಟೆಗಳು ಪ್ರಾಣಿಗಳ ಪಾಲಾಗದಿರಲಿ ಎಂದು ಆಮೆ ತನ್ನ ಬುದ್ಧಿಯನ್ನು ಉಪಯೋಗಿಸುತ್ತದೆ. ಒಟ್ಟು ಮೂರು ಗುಂಡಿಗಳನ್ನು ತೆಗೆದು, ಒಂದರಲ್ಲಿ ಮಾತ್ರ ಮೊಟ್ಟೆಯಿಡುತ್ತದೆ. ಉಳಿದೆರಡು ಗುಂಡಿಗಳು ಡಮ್ಮಿ! ಒಂದು ಆಮೆ ಒಂದು ಬಾರಿಗೆ ಸುಮಾರು 100-150 ಮೊಟ್ಟೆಗಳನ್ನಿಡುತ್ತದೆ. ಹಾಗೆ ಮೊಟ್ಟೆಯಿಟ್ಟ ನಂತರದಲ್ಲಿ ಬೇರೊಂದು ದಿಕ್ಕಿನಿಂದ ಚಿತ್ತಾರದ ರಂಗೋಲಿಯಿಡುತ್ತಾ, ತೆವಳುತ್ತಾ ವಾಪಾಸ್‌ಸಮುದ್ರಕ್ಕೆ ಹೋಗುತ್ತದೆ.

ಸೂಕ್ತ ಶಾಖವನ್ನು ಬಳಸಿಕೊಂಡ ಮೊಟ್ಟೆಗಳು ಒಂದೂವರೆ ತಿಂಗಳಲ್ಲಿ ಮರಿಯಾಗಿ, ಮರಳಿನಿಂದೆದ್ದು ಮೇಲೆ ಬರುತ್ತವೆ; ಅನುಷಂಗಿಕ ತಿಳಿವಳಿಕೆಯಿಂದ ಮತ್ತೆ ಸಮುದ್ರ ಸೇರುತ್ತವೆ. ಇಡೀ ಪ್ರಕ್ರಿಯೆ ತುಂಬಾ ಕ್ಲಿಷ್ಟಕರವೂ ಮತ್ತು ಕಷ್ಟದಾಯಕವೂ ಆಗಿದೆ. ತಾಯಿ ಆಮೆ ಮತ್ತೆ ವಾಪಾಸ್‌ ಬಂದು ಮೊಟ್ಟೆಗಳ ದೇಖಿರೇಖಿ ನೋಡುವುದಿಲ್ಲ. ತಾಯಿ-ತಂದೆಗಳ ಆರೈಕೆಯಿಲ್ಲದೆ ಮರಿಯಾಗುವ ಆಲೀವ್‌ ರಿಡ್ಲೆಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಈಗ ಮಾನವನ ಮೇಲಿದೆ. ಬಹುಶಃ ಮನುಷ್ಯನೇ ತನ್ನ ಮುಂದಿನ ಸಂತತಿಯನ್ನು ಕಾಪಾಡಬಲ್ಲ ಹಾಗೂ ಉಳಿಸಬಲ್ಲ ಎಂಬ ನಂಬಿಕೆ ಅವುಗಳಿಗೂ ಇದೆಯೇನೋ?

ಟೊಂಕಾ ಬೀಚಿನ ಆಸುಪಾಸು ವಾಸಿಸುತ್ತಿರುವ ಬೆಸ್ತರಿಗೆ ಈ ಆಮೆಗಳು ಹೊಸತೇನಲ್ಲ. ಅವರಜ್ಜನ ಕಾಲದಿಂದಲೂ ಆಮೆಗಳು ಬರುತ್ತಿದ್ದವು, ಮೊಟ್ಟೆಯಿಟ್ಟು ತೆರಳುತ್ತಿದ್ದವು. ತಿಂಗಳ ನಂತರದಲ್ಲಿ ಮೊಟ್ಟೆಯೊಡೆದು ಹೊರಬರುವ ಮರಿಗಳು ತೆವಳುತ್ತಾ ಸಮುದ್ರ ಸೇರುತ್ತಿದ್ದವು. ಸುಮಾರು 40-50 ವರ್ಷಗಳ ಹಿಂದೆ ಈ ಆಮೆಗಳ ಮೊಟ್ಟೆಯನ್ನು ಕೆಲವು ಬೆಸ್ತರು ಬೇಯಿಸಿ ತಿನ್ನುವ ಪರಿಪಾಟವಿತ್ತು. ಕ್ರಮೇಣ ಜಾಗೃತಿ ಹಾಗೂ ಕಾನೂನಿನ ಭಯದಿಂದಾಗಿ ಬೆಸ್ತರ ಊಟದ ಮೆನುವಿನಿಂದ ಆಮೆಮೊಟ್ಟೆಗಳು ಹೊರಗುಳಿದವು. ಆದರೆ ನಾಯಿಗಳು ಮತ್ತು ಅಪರೂಪಕ್ಕೆ ನರಿಗಳು ಆಮೆಗಳ ಮೊಟ್ಟೆಗಳನ್ನು ಕದಿಯುತ್ತವೆ.

ಮೊಟ್ಟೆ ಇಡುವ ಕ್ಷಣ
ಮೊಟ್ಟೆ ಇಡುವ ಕ್ಷಣ

ಆಮೆ ಸಮುದ್ರದಿಂದ ತೀರಕ್ಕೆ ತೆವಳಿ ಬರುವಾಗ ಅದರ ಪಾದದ ಗುರುತು ಚಿತ್ತಾರದಂತೆ ಮೂಡಿರುತ್ತದೆ. ಮೊಟ್ಟೆಯಿಟ್ಟು ಬೇರೆ ದಾರಿಯಲ್ಲಿ ಹೋಗುವಾಗಲೂ ಚಿತ್ತಾರವಿರುತ್ತದೆ. ಮೊಟ್ಟೆಯಿಟ್ಟು ಹೋದ 2-3 ತಾಸುಗಳಲ್ಲಿ ಆಮೆಗಳ ಪಾದದ ಗುರುತು ಸಮುದ್ರದ ಗಾಳಿಯ ಹೊಡೆತಕ್ಕೆ ಅಳಿಸಿಹೋಗುತ್ತದೆ. ಆ ನಂತರದಲ್ಲಿ ಆಮೆ ಮೊಟ್ಟೆ ಇಟ್ಟ ಜಾಗವನ್ನು ಹುಡುಕುವುದು ಅಸಾಧ್ಯವೇ ಸರಿ. ಕೆಲವೇ ಕೆಲವು ನುರಿತ ಬೆಸ್ತರು ಮಾತ್ರ ತಮ್ಮ ಪಾರಂಪರಿಕ ಜ್ಞಾನದಿಂದ ಆಲೀವ್‌ ರಿಡ್ಲೆ ಆಮೆಗಳು ಮೊಟ್ಟೆಯಿಟ್ಟ ಜಾಗವನ್ನು ಪತ್ತೆ ಮಾಡಬಲ್ಲರು. ಮೊಟ್ಟೆಯಿಡುವ ಸಮಯದಲ್ಲಿ ಪಸರಿಸುವ ವಾಸನೆಯನ್ನು ಹಿಡಿಯುವ ನಾಯಿ-ನರಿಗಳು ಮೊಟ್ಟೆಗಳನ್ನು ಕಳುವು ಮಾಡುತ್ತವೆ. ಮೊಟ್ಟೆಗಳ ವಾಸನೆ ಮರಳಿನಲ್ಲಿ ಮುಚ್ಚಿ, ಗಾಳಿಯಲ್ಲಿ ಬೆರೆತು, ಮತ್ತೆರಡು ತಾಸು ಕಳೆಯಿತು ಅಂದರೆ, ಗೂಡನ್ನು ಹುಡುಕುವುದು ನಾಯಿ-ನರಿಗಳಿಗೂ ಸಾಧ್ಯವಿಲ್ಲ.

ಆಲೀವ್‌ ರಿಡ್ಲೆ ಆಮೆಗಳು ಸಾಗರಗಳ ಆರೋಗ್ಯವನ್ನು ಪ್ರತಿನಿಧಿಸುವ ಸೂಚಕ ಜೀವಿಗಳು. ಸೂಕ್ಷ್ಮಜೀವಿಗಳಾದ ಈ ಪ್ರಭೇದದ ಆಮೆಗಳು ಹೇರಳವಾಗಿವೆ ಎಂದರೆ ಅಲ್ಲಿನ ಸಮುದ್ರದ ಆರೋಗ್ಯ ಸುಸ್ಥಿರವಾಗಿದೆಯೆಂದು ಅರ್ಥ. ಜೊತೆಗೆ ಇವು ಬೆಸ್ತಸ್ನೇಹಿಗಳೂ ಆಗಿ ಆಹಾರಭದ್ರತೆ ಕಾಪಿಡುವ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತವೆ. ಬೆಸ್ತರು ಹಿಡಿಯುವ ಎಲ್ಲಾ ಜಾತಿಯ ಮೀನು ಮರಿಗಳನ್ನು ಕಬಳಿಸುವ ಜೆಲ್ಲಿ ಮೀನುಗಳನ್ನು ಭಕ್ಷಿಸುವ ಮೂಲಕ ಆಲೀವ್ ರಿಡ್ಲೆ ಆಮೆಗಳು ಬೆಸ್ತರ ನೆರವಿಗೆ ನಿಲ್ಲುತ್ತವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯ ಪರಿಚ್ಛೇದ 1ರಲ್ಲಿ ಆಮೆಗಳನ್ನು ಸೇರಿಸಿ ಅತಿಹೆಚ್ಚು ರಕ್ಷಣೆಯನ್ನು ನೀಡಲಾಗಿದೆ. ಆಲೀವ್ ರಿಡ್ಲೆ ಆಮೆಗಳನ್ನು ಕೊಲ್ಲುವುದು, ಅವುಗಳ ಆವಾಸಸ್ಥಾನಗಳನ್ನು ನಾಶಪಡಿಸುವುದು, ಮೊಟ್ಟೆಗಳನ್ನು ಕದಿಯುವುದು ಇತ್ಯಾದಿಗಳನ್ನು ಘನ ಅಪರಾಧಗಳು ಎಂದು ಪರಿಗಣಿಸಲಾಗಿದ್ದು, ಅತಿಹೆಚ್ಚು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಮೊಟ್ಟೆಯೊಡೆದು ಮರಿಗಳಾಗಿ, ಸಮುದ್ರಕ್ಕೆ ವಾಪಸ್‌ ಯಾತ್ರೆ ಹೊರಟಾಗ
ಮೊಟ್ಟೆಯೊಡೆದು ಮರಿಗಳಾಗಿ, ಸಮುದ್ರಕ್ಕೆ ವಾಪಸ್‌ ಯಾತ್ರೆ ಹೊರಟಾಗ

ಭಾರತದಲ್ಲಿ ಮುಖ್ಯವಾಗಿ ಒಡಿಶಾ ಕಡಲು ತೀರಗಳಲ್ಲಿ ಆಲೀವ್ ರಿಡ್ಲೆ ಆಮೆಗಳು ಸಾವಿರಾರು ಸಂಖ್ಯೆಯಲ್ಲಿ ಬಂದು ಮೊಟ್ಟೆಯಿಡುತ್ತವೆ. ಅಲ್ಲಿ ಸಾಮೂಹಿಕವಾಗಿ ಅವುಗಳ ಸಂತತಿಯನ್ನು ರಕ್ಷಣೆ ಮಾಡಲಾಗುತ್ತದೆ. ಇದೇ ಮಾದರಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಈ ಆಮೆಗಳ ರಕ್ಷಣೆಯ ಜವಾಬ್ದಾರಿ ಹೊತ್ತುಕೊಂಡಿದೆ. ಸಂರಕ್ಷಣೆಯನ್ನು ಉತ್ತೇಜಿಸುವ ಸಲುವಾಗಿ ಆಲೀವ್ ರಿಡ್ಲೆ ಆಮೆ ಮೊಟ್ಟೆಯಿಟ್ಟ ಜಾಗವನ್ನು ಪತ್ತೆ ಮಾಡಿ ಇಲಾಖೆಗೆ ತಿಳಿಸುವ ಬೆಸ್ತರಿಗೆ ಇಲಾಖೆ ವತಿಯಿಂದ ಒಂದು ಸಾವಿರ ರೂಪಾಯಿ ಭಕ್ಷಿಸನ್ನು ನೀಡುವ ಪರಿಪಾಟವಿದೆ.

ಅಪರೂಪದ ಆಲೀವ್ ರಿಡ್ಲೆ ಆಮೆಗಳ ಆಗಮನ, ಮೊಟ್ಟೆಯಿಟ್ಟ ದಿನಾಂಕ, ಇಟ್ಟ ಮೊಟ್ಟೆಗಳ ಸಂಖ್ಯೆ, ಮರಿಯಾದ ಮೊಟ್ಟೆಗಳೆಷ್ಟು? ಸಮುದ್ರ ಸೇರಿದ ಮರಿಗಳೆಷ್ಟು? ಇಂತಹ ಲೆಕ್ಕಗಳನ್ನು ಅರಣ್ಯ ಇಲಾಖೆಯ ರಿಜಿಸ್ಟ್ರಿಯಲ್ಲಿ ದಾಖಲಾಗುತ್ತದೆ. ಆಮೆ ಮೊಟ್ಟೆಯಿಟ್ಟ ಗೂಡುಗಳನ್ನು ಪತ್ತೆ ಹಚ್ಚಿ ಇಲಾಖೆಗೆ ತಿಳಿಸಿದ ಮೀನುಗಾರನ ಹೆಸರು, ಅವನ ವಿಳಾಸ, ದೂರವಾಣಿ ವಿಳಾಸ ಹಾಗೂ ಅವನಿಗೆ ನೀಡಿದ ಹಣದ ಬಾಬ್ತು ಇಂತಹ ವಿವರಗಳು ದಾಖಲಾಗುತ್ತವೆ. ಇಂತಹ ದಾಖಲೆಗಳು 1984 ಇಸವಿಯಿಂದಲೂ ಲಭ್ಯವಿವೆ. ಪ್ರತಿವರ್ಷ ಆಮೆಗಳ ಸಂರಕ್ಷಣೆಗಾಗಿ ಸರ್ಕಾರದಿಂದ ಬಂದಿರುವ ಹಣವೆಷ್ಟು? ಮುಂದಿನ ಸಾಲಿನಲ್ಲಿ ಎಷ್ಟು ಹಣ ಬೇಕಾಗಬಹುದು ಎಂಬುದನ್ನು ಕ್ರಿಯಾ ಯೋಜನೆಯಲ್ಲಿ ನಮೂದಿಸಲಾಗುತ್ತದೆ.

ಹೈದರಾಬಾದ್‌ನ ಖಾಸಗಿ ಕಂಪನಿಯೊಂದು 2010ರಲ್ಲಿ ಕಾಸರಕೋಡು ಬೀಚ್‌ ಅನ್ನು ಬಂದರನ್ನಾಗಿ ಪರಿವರ್ತಿಸಲು ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಈ ವಿಷಯ ಸ್ಥಳೀಯ ಮೀನುಗಾರರಿಗೆ ತಿಳಿದಿರಲಿಲ್ಲ. ಬಂದರನ್ನು ನಿರ್ಮಿಸಲು ಅನುಮತಿ ದೊರಕಿದೆ ಎಂದು 2018ರಲ್ಲಿ ಖಾಸಗಿ ಕಂಪನಿಯ ಮಾಲೀಕರು ಟೊಂಕಾ ಬೀಚಿನ ಹೊರವಲಯದಲ್ಲಿ ವಾಸಿಸುವ ಬೆಸ್ತರನ್ನು ಎತ್ತಂಗಡಿ ಮಾಡುವ ಯತ್ನ ನಡೆಸಿದರು.

ಮೊಟ್ಟೆಯಿಡಲು ಸೂಕ್ತ ಸ್ಥಳಕ್ಕಾಗಿ ಪರಿಶೀಲನೆ ನಡೆಸಲು ಬರುವಾಗ ಬೀಚ್‌ನ ಮರಳಿನಲ್ಲಿ ರಂಗೋಲಿಯಿಕ್ಕುವ ಆಮೆಗಳು
ಮೊಟ್ಟೆಯಿಡಲು ಸೂಕ್ತ ಸ್ಥಳಕ್ಕಾಗಿ ಪರಿಶೀಲನೆ ನಡೆಸಲು ಬರುವಾಗ ಬೀಚ್‌ನ ಮರಳಿನಲ್ಲಿ ರಂಗೋಲಿಯಿಕ್ಕುವ ಆಮೆಗಳು

ಆಲೀವ್ ರಿಡ್ಲೆ ಆಮೆಗಳು ಮೊಟ್ಟೆಯಿಡುವ ಜಾಗದಲ್ಲಿ ನಾಲ್ಕು ಪಥದ ರಸ್ತೆ ನಿರ್ಮಿಸುವ ಕಾರ್ಯವನ್ನು ಕೈಗೊಳ್ಳುವ ಪೂರ್ವದಲ್ಲಿ ಕರ್ನಾಟಕ ಕರಾವಳಿ ವಲಯ ವ್ಯವಸ್ಥಾಪನಾ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕೈಗೆತ್ತಿಕೊಳ್ಳಲಾಗಿತ್ತು. ಸರ್ಕಾರವೇ ಮುಂದೆ ನಿಂತುಕೊಂಡು ಸ್ಥಳೀಯರ ವಿರೋಧವನ್ನು ಹತ್ತಿಕ್ಕಿತು. ಟೊಂಕಾ-ಕಾಸರಕೋಡು ಬೀಚ್‌ ಪ್ರದೇಶದಲ್ಲಿ ಬಂದರು ಮತ್ತು ನಾಲ್ಕು ಪಥದ ರಸ್ತೆ ನಿರ್ಮಾಣದಿಂದ, ನಂತರ ಅದಿರು ಸಾಗಾಣಿಕೆ ಕಾರಣದಿಂದ ಮೀನು ಸಂಸ್ಕರಣೆಗೆ ತೊಂದರೆಯಾಗುತ್ತದೆ. ಮೀನಿನ ಮೇಲೆ ಅಪಾರ ಪ್ರಮಾಣದ ದೂಳು ಶೇಖರಣೆಯಾಗಿ ಅದು ತಿನ್ನಲು ಯೋಗ್ಯವಾಗಿ ಉಳಿಯುವುದಿಲ್ಲ ಎಂದು ಅರಿತ ಹೊನ್ನಾವರ ಹಸಿ ಮೀನು ಮಾರಾಟಗಾರರ ಸಂಘ ರಾಜ್ಯ ಹೈಕೋರ್ಟ್‌ ಮೆಟ್ಟಿಲೇರಿತು.

ಟೊಂಕಾ ಮತ್ತು ಕಾಸರಕೋಡು ಬೀಚ್‌ಗಳು ಆಲೀವ್ ರಿಡ್ಲೆ ಆಮೆಗಳ ವಂಶಾಭಿವೃದ್ಧಿ ತಾಣವೂ ಆಗಿವೆ ಎಂಬುದನ್ನು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್‌, ಯೋಜನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತು. ಆ ಪ್ರದೇಶವು ಆಲೀವ್ ರಿಡ್ಲೆ ಆಮೆಗಳ ವಂಶಾಭಿವೃದ್ಧಿ ತಾಣ ಹೌದೋ ಅಲ್ಲವೋ ಎಂದು ಪರಿಶೀಲಿಸಲು ಸಮುದ್ರಜೀವಿಗಳ ತಜ್ಞರ ಸಮಿತಿಯನ್ನು ನೇಮಕ ಮಾಡಿತು.

ವಾಡಿಕೆಯಾಗಿ ಆಲೀವ್ ರಿಡ್ಲೆ ಆಮೆಗಳು ವಂಶಾಭಿವೃದ್ಧಿಗೆ ಟೊಂಕಾ-ಕಾಸರಕೋಡು ಬೀಚ್‌ಗೆ ಬರುವುದು ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚಿನವರೆಗೆ ಆಗಿತ್ತು.

ನ್ಯಾಯಾಲಯದ ಆದೇಶವನ್ನು ಅರಿಯದ ಆಮೆಗಳು ಮುಂದಿನ ಋತುವಿನಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಬಂದು ಮೊಟ್ಟೆಗಳನ್ನು ಇಡುವ ಪ್ರಕ್ರಿಯೆ ಪ್ರಾರಂಭಿಸಿದವು. ತನ್ನ ಪರವಾಗಿ ಆದೇಶ ಬಂದಿದ್ದನ್ನು ಪರಿಗಣಿಸಿದ ಖಾಸಗಿ ಕಂಪನಿಯು ಆಮೆಗಳ ಮೊಟ್ಟೆಯಿಡುವ ಪ್ರದೇಶದಲ್ಲೇ ರಸ್ತೆಯನ್ನು ಮಾಡಿತು. ಈ ಸಂದರ್ಭದಲ್ಲಿ ಕೆಲವು ಆಮೆಗಳು ಸಾವನ್ನಪ್ಪಿದವು. ಆಮೆಯ ಗೂಡಿನ ಮೇಲೆ ಮಣ್ಣು ಸುರಿದು ರಸ್ತೆಯನ್ನು ನಿರ್ಮಿಸಲಾಯಿತು. ಆಲೀವ್ ರಿಡ್ಲೆಗಳ ಒದಗಿದ ಈ ಅಪಾಯವನ್ನು ಅರಣ್ಯ ಇಲಾಖೆ ನೋಡಿಯೂ ನೋಡದಂತೆ ಕಣ್ಮುಚ್ಚಿ ಕುಳಿತಿತು. ರಸ್ತೆಯ ಅಂಚಿನಿಂದ ಹಲವು ಮೀಟರುಗಳ ದೂರದಲ್ಲಿ ಮೊಟ್ಟೆಯಿಟ್ಟ ಜಾಗಗಳನ್ನು ಗುರುತಿಸಿ, ಇಲಾಖೆಯ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳಲಿಲ್ಲ.

ಕಾಸರಕೋಡು ಬೀಚ್‌ನ ವಿಹಂಗಮ ನೋಟ ಚಿತ್ರ: ತಾಜುದ್ದೀನ್‌ ಆಜಾದ್‌
ಕಾಸರಕೋಡು ಬೀಚ್‌ನ ವಿಹಂಗಮ ನೋಟ ಚಿತ್ರ: ತಾಜುದ್ದೀನ್‌ ಆಜಾದ್‌

ಲಾಗಾಯ್ತಿನಿಂದ ಬಳಕೆಯಾಗುತ್ತಿರುವ ತಮ್ಮ ವಂಶಾಭಿವೃದ್ಧಿ ತಾಣದ ಮೇಲೆ ಮಾನವರು ದಾಳಿ ಇಡುತ್ತಿದ್ದಾರೆ ಎನ್ನುವ ವಿಷಯ ಗೊತ್ತಿಲ್ಲದ ಆಲೀವ್ ರಿಡ್ಲೆ ಆಮೆಗಳು ಮತ್ತೆ ಮತ್ತೆ ಪ್ರತಿವರ್ಷ ಟೊಂಕಾ ಬೀಚ್‌ಗೆ ಬಂದು ಮೊಟ್ಟೆಯಿಡುತ್ತಿವೆ. ಕೆಲವು ದಿನಗಳ ಹಿಂದೆ ಸ್ಥಳೀಯ ಮೀನುಗಾರರು, ಹೊನ್ನಾವರ ಫೌಂಡೇಷನ್ ಮತ್ತು ಬೆಂಗಳೂರಿನ ವೃಕ್ಷ ಸಂಸ್ಥೆಯ ಪದಾಧಿಕಾರಿಗಳು ಟೊಂಕಾ ಬೀಚ್‌ಗೆ ತೆರಳಿ, ಆಮೆಗಳು ಮರಿಯಾಗುತ್ತಿರುವುದನ್ನು ಗಮನಿಸಿ, ಒತ್ತಾಯಪೂರ್ವಕವಾಗಿ ಅರಣ್ಯ ಇಲಾಖೆಯ ಸಹಕಾರವನ್ನು ಪಡೆದು ನೂರಾರು ಆಮೆ ಮರಿಗಳನ್ನು ಸಮುದ್ರಕ್ಕೆ ಬಿಡುವ ಪ್ರಯತ್ನದಲ್ಲಿ ಯಶಸ್ವಿಯಾದರು. ಸಮುದ್ರದಲ್ಲಿ ವಾಸಿಸುವ, ಬೆಸ್ತಸ್ನೇಹಿಯಾದ ಒಂದು ಪ್ರಭೇದವನ್ನೇ ಇಲ್ಲವೆಂದು ಪರಿಗಣಿಸುವ ವರದಿಯನ್ನು ಅದು ಹೇಗೆ ಅರಣ್ಯ ಇಲಾಖೆ ಮಾನ್ಯ ಮಾಡಿತು ಮತ್ತು ತನ್ನ ಹೊಣೆಗಾರಿಕೆಯಿಂದ ಹೇಗೆ ನುಣುಚಿಕೊಳ್ಳುತ್ತಿದೆ ಎಂಬ ಪ್ರಶ್ನೆ ಅಲ್ಲಿಗೆ ಹೋದವರನ್ನು ಕಾಡಿತು.

ಆಮೆಗಳ ವಂಶಾಭಿವೃದ್ಧಿ ಪ್ರದೇಶವನ್ನು ರಕ್ಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದ ಬೆಸ್ತರ ಬದುಕು ದುಸ್ತರವಾಗಲಿದೆ ಮತ್ತು ಸಂರಕ್ಷಣೆಗೆ ಬೆನ್ನು ತೋರುವ ಅರಣ್ಯ ಇಲಾಖೆಯ ನಡೆ ಮಾನವೀಯತೆಗೆ ಬಗೆದ ಅಪಚಾರವಾಗಿದೆ ಎನ್ನುತ್ತಾರೆ ಆಲೀವ್ ರಿಡ್ಲೆ ಆಮೆಗಳ ಕುರಿತಾಗಿ ಕಳೆದ ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿರುವ ಸ್ಥಳೀಯ ಜೀವವಿಜ್ಞಾನಿ ಪ್ರಕಾಶ್ ಮೇಸ್ತರ. ಇದೇ ಪ್ರದೇಶದಲ್ಲಿ 1960ರಲ್ಲಿ ಚಿಕ್ಕ ಪ್ರಮಾಣದ ಬಂದರನ್ನು ನಿರ್ಮಿಸಲಾಗಿತ್ತು. ತೀವ್ರವಾದ ಕಡಲು ಕೊರೆತ ಹಾಗೂ ಸವಕಳಿಯಿಂದಾಗಿ 1980ರ ಹೊತ್ತಿಗೆ ಇಡೀ ಬಂದರು ಕೊಚ್ಚಿಕೊಂಡು ಹೋಗಿತ್ತು ಎಂದು ನೆನಪಿಸುತ್ತಾರೆ ಕರಾವಳಿ ಮೀನುಗಾರರ ಸಂಘದ ಕಾರ್ಯದರ್ಶಿಯಾದ ರಾಜೇಶ್ ಈಶ್ವರ್ ತಂಡೇಲ ಹಾಗೂ ಸದಸ್ಯರಾದ ರಮೇಶ್ ತಂಡೇಲ. ಇವರ ಮಾತುಗಳು ಅರಣ್ಯ ಇಲಾಖೆಯ ಕೆಪ್ಪ ಕಿವಿಗೆ ತಲುಪುವುದಾದರೂ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT