ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮಿಲಿಪಾಲ್‌ನಲ್ಲಿ ಮಾತ್ರವೇ ಕಂಡುಬರುವ ಅಪರೂಪದ ವರ್ಗ - ಕರಿಬಣ್ಣದ ಹುಲಿಗಳು

Published 1 ಫೆಬ್ರುವರಿ 2024, 1:29 IST
Last Updated 1 ಫೆಬ್ರುವರಿ 2024, 1:29 IST
ಅಕ್ಷರ ಗಾತ್ರ

ಕಪ್ಪು ಬಣ್ಣದ ಆಥವಾ ಕೃಷ್ಣವರ್ಣದ ಹುಲಿ (Melanistic tigers)ಗಳು ಒಡಿಶಾದ ಸಿಮಿಲಿಪಾಲ್ ಹುಲಿ ಸಂರಕ್ಷಣಾ ಮೀಸಲು ಅರಣ್ಯದಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತವೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಇತ್ತೀಚೆಗೆ ತಿಳಿಸಿದ್ದಾರೆ. 2022ರ ಆವೃತ್ತಿಯ ಅಖಿಲ ಭಾರತ ಹುಲಿ ಗಣತಿಯ ಪ್ರಕಾರ ಅಲ್ಲಿ ಒಟ್ಟು 16 ಹುಲಿಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ 10 ಕರಿಬಣ್ಣದ ಹುಲಿಗಳಾಗಿವೆ. 

ಕರಿಬಣ್ಣದ ಹುಲಿಗಳು

ಕಪ್ಪು ಬಣ್ಣದ ಹುಲಿಗಳು ಬಂಗಾಳ ಹುಲಿಗಳ (Panthera tigris tigris)ಲ್ಲಿಯೇ ಕಂಡುಬರುವ ಒಂದು ಪ್ರಭೇದವಾಗಿದೆ. ಇವುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಪ್ಪು ಪಟ್ಟಿಯ ಕಿತ್ತಳೆ ಚರ್ಮದ ಬದಲಾಗಿ ದಟ್ಟವಾದ, ಬಹುತೇಕ ಕರಿವರ್ಣವೇ ಇರುತ್ತದೆ.  

ತಳಿಶಾಸ್ತ್ರ

ಕರಿಬಣ್ಣದ ಗುಣಲಕ್ಷಣಗಳು ಒಂದು ಅಪಸರಣದ (recessive) ವಂಶವಾಹಿಯ ಕಾರಣದಿಂದ ಉಂಟಾಗುತ್ತಿದ್ದು, ತಂದೆ-ತಾಯಿ ಹುಲಿಗಳೆರಡೂ ಕಪ್ಪು ಬಣ್ಣದವುಗಳಾಗಿದ್ದಾಗ ಮಾತ್ರವೇ ಕಪ್ಪು ಬಣ್ಣದ ಸಂತಾನ ಹುಟ್ಟುತ್ತವೆ. ಈ ವಂಶವಾಹಿ ವೈವಿಧ್ಯ ಕೇವಲ ಹುಲಿಗಳಿಗೆ ಮಾತ್ರವೇ ಸೀಮಿತವಾಗಿರದೆ, ಚಿರತೆಗಳು ಮತ್ತು ಜಾಗ್ವಾರ್‌ನಂತಹ ದೊಡ್ಡ ಜಾತಿಯ ಹುಲಿ ಪ್ರಭೇದದ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಬಣ್ಣಗಳ ಮೇಲೆ ಪರಿಣಾಮ ಬೀರುವ ವಂಶವಾಹಿಗಳ ಪರಿವರ್ತನೆ ಮತ್ತು ಗಾಢ ಬಣ್ಣಗಳಿಗೆ ಕಾರಣವಾಗುವ ಮೆಲಾನಿನ್ ಉತ್ಪಾದನೆ ಹೆಚ್ಚಾಗುವುದರಿಂದ ಈ ಬಣ್ಣಕ್ಕೆ ಕಾರಣವಾಗುತ್ತದೆ.

ದೈಹಿಕ ಗುಣಲಕ್ಷಣಗಳು

  • ಕಪ್ಪು ಬಣ್ಣದ ಹುಲಿಗಳು ಎದ್ದುಕಾಣುವ ಗಾಢವಾದ ಚಾಕಲೇಟ್ ಕಂದು ಬಣ್ಣದಿಂದ ಹಿಡಿದು ಹೆಚ್ಚು ಕಡಿಮೆ ಸಂಪೂರ್ಣ ಕಪ್ಪಾದ ತೊಗಲಿನ ತನಕ ವರ್ಣ ವೈವಿಧ್ಯ ಹೊಂದಿವೆ. ಕೃಷ್ಣವರ್ಣದ ಹುಲಿಗಳ ಕಣ್ಣುಗಳು ಸಾಮಾನ್ಯವಾಗಿ ಉಜ್ವಲ ಹಳದಿ ಅಥವಾ ಚಿನ್ನದ ಬಣ್ಣದ್ದಾಗಿದ್ದು, ಪ್ರಖರವಾಗಿರುತ್ತದೆ. 

  • ಕಪ್ಪು ಬಣ್ಣದ ಹುಲಿಗಳನ್ನು ಅರಣ್ಯಗಳು, ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳ ಮ್ಯಾಂಗ್ರೋವ್ ದಟ್ಟಣೆ ಸೇರಿ ವಿವಿಧ ವಾಸಸ್ಥಾನಗಳಲ್ಲಿ ಕಾಣಬಹುದು.

ಸ್ವಭಾವ ಮತ್ತು ಹೊಂದಾಣಿಕೆ

  • ಇವು ಏಕಾಂಗಿ ಜೀವಿಗಳಾಗಿದ್ದು, ಸ್ವಭಾವದಲ್ಲಿ ಒಂದೇ ಪ್ರದೇಶಕ್ಕೇ ಸೀಮಿತವಾಗಿದ್ದು (territorial), ರಾತ್ರಿ ಹೊತ್ತು ಬೇಟೆಯಾಡುತ್ತವೆ.

  • ಕರಿಬಣ್ಣದ ಕಾರಣಕ್ಕಾಗಿ ಬೇಟೆ ಆಡುವುದನ್ನು ಸುಲಭವಾಗಿದ್ದರಿಂದ ಕಡಿಮೆ ಬೆಳಕಿರುವ ಪ್ರದೇಶಗಳಲ್ಲಿ ಹೊಂಚುಹಾಕಿ ಬೇಟೆಯಾಡುತ್ತವೆ. 

ಜಾಗತಿಕ ಹುಲಿಗಳ ಸಂಖ್ಯೆಯು ವಾಸಸ್ಥಳಗಳ ನಾಶ, ಅತಿಕ್ರಮಣ, ಬೇಟೆ ಮತ್ತು ಮಾನವ-ವನ್ಯಜೀವಿ ಸಂಘರ್ಷಗಳ ಕಾರಣಗಳಿಂದ ಇವು ಅಪಾಯಕ್ಕೆ ಸಿಲುಕಿವೆ.

ಸಿಮಿಲಿಪಾಲ್

  • ಒಡಿಶಾದ ಸಿಮಿಲಿಪಾಲ್ ಬೆಟ್ಟಗಳು ಅಲ್ಲಿನ ಆದಿವಾಸಿ ಸಮುದಾಯಗಳು ಮತ್ತು ಹುಲಿಗಳೆರಡಕ್ಕೂ ಬಹುಮುಖ್ಯವಾದ ಜೀವಾಧಾರಕ ವ್ಯವಸ್ಥೆಯಾಗಿದೆ. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಮಧ್ಯಭಾಗದಲ್ಲಿರುವ ಸಿಮಿಲಿಪಾಲ್‌ನ ಬೆಟ್ಟಗಳು, ಅರಣ್ಯಗಳು, ನದಿಗಳು ಮತ್ತು ವನ್ಯಜೀವಿಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ. ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಮೀಸಲು ಅರಣ್ಯವಾಗಿರುವ ಸಿಮಿಲಿಪಾಲ್ ತನ್ನ ಹೆಸರನ್ನು ಇಲ್ಲಿ ಹೇರಳವಾಗಿ ಬೆಳೆಯುವ ಸಿಮುಲ್ (red silk cotton) ಎಂದು ಕರೆಯಲಾಗುವ ಮರಗಳಿಂದ ಪಡೆದುಕೊಂಡಿದೆ. ಕೋಲ್ಹಾ, ಸಂತಾಲ್, ಭೂಮಿಜ, ಗೊಂಡ್ ಮತ್ತು ಹೋ ಮುಂತಾದ ವಿವಿಧ ಬುಡಕಟ್ಟುಗಳ ಜನರು ಸಿಮಿಲಿಪಾಲ್ ಮತ್ತು ಸುತ್ತಮುತ್ತಲಿನ ಭೂಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಹೆಚ್ಚುವರಿಯಾಗಿ, ವಿಶೇಷವಾಗಿ ಅಪಾಯ ಎದುರಿಸುತ್ತಿರುವ ಬುಡಕಟ್ಟು ಗುಂಪುಗಳಿಗೆ ಸೇರಿದ ಖಡಿಯಾ, ಮಾಂಕಿಡಿಯಾ ಮತ್ತು ಲೋಧಾಗಳು ಕೂಡಾ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಬಹುತೇಕ ಅರಣ್ಯಾಧಾರಿತ ಜೀವನೋಪಾಯಗಳನ್ನು ಅವಲಂಬಿಸಿದ್ದಾರೆ.

  • ಈ ರಕ್ಷಿತ ಪ್ರದೇಶವು 2009ರಿಂದ ಯುನೆಸ್ಕೋ ವಿಶ್ವ ಜೈವಿಕ ವಲಯಗಳ ಮೀಸಲು ನೆಟ್ವರ್ಕ್‌ನ (UNESCO World Network of Biosphere Reserves) ಭಾಗವಾಗಿದೆ.

  • ಸಿಮಿಲಿಪಾಲ್ ಪ್ರದೇಶವು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಪತ್ತಿನ ಆಗರವಾಗಿದೆ. ಇದು ಭಾರತದ ಎರಡು ಜೀವವೈವಿಧ್ಯ ಸೂಕ್ಷ್ಮತಾಣಗಳಾದ ಈಶಾನ್ಯದ ಸಬ್ ಹಿಮಾಲಯನ್ ಮತ್ತು ದಕ್ಷಿಣದ ಪಶ್ಚಿಮ ಘಟ್ಟ ಪ್ರದೇಶಗಳ ನಡುವಿನ ಕೊಂಡಿಯಾಗಿದೆ. ಈ ಪ್ರದೇಶವು ಭಾರತದ ಹೂ ಬಿಡುವ ಸಸ್ಯಗಳಲ್ಲಿ 7 ಶೇಕಡಾ, ಆರ್ಕಿಡ್‌ಗಳಲ್ಲಿ 8 ಶೇಕಡಾ, ಸರೀಸೃಪಗಳಲ್ಲಿ 7 ಶೇಕಡಾ, ಪಕ್ಷಿಗಳಲ್ಲಿ 20 ಶೇಕಡಾ, ಸಸ್ತನಿಗಳಲ್ಲಿ 11 ಶೇಕಡಾದಷ್ಟನ್ನು ಹೊಂದಿದೆ. ಸಿಮಿಲಿಪಾಲ್ ಪ್ರದೇಶದಲ್ಲಿ 1,253ಕ್ಕೂ ಹೆಚ್ಚು ಪ್ರಭೇದಗಳ ಹೂ ಬಿಡುವ ಸಸ್ಯಗಳು, 99 ಪ್ರಭೇದಗಳ ಹೂ ಬಿಡದ ಸಸ್ಯಗಳು, 21 ಪ್ರಭೇದಗಳ ಉಭಯಜೀವಿಗಳು (amphibians ಅಂದರೆ, ನೆಲ ಜಲ ಎರಡರಲ್ಲೂ ವಾಸಿಸುವ ಜೀವಿಗಳು), 62 ಪ್ರಭೇದಗಳ ಸರೀಸೃಪಗಳು (reptiles ಅಂದರೆ, ಹಾವು, ಹಲ್ಲಿ ಜಾತಿಗೆ ಸೇರಿದ ಹರಿದಾಡುವ ಜೀವಿಗಳು), 361ಪ್ರಭೇದಗಳ ಹಕ್ಕಿಗಳು ಮತ್ತು 55 ಪ್ರಭೇದಗಳ ಸಸ್ತನಿಗಳನ್ನು (mammals ಅಂದರೆ, ಮೊಲೆಯೂಡುವ ಪ್ರಾಣಿಗಳು) ಇಲ್ಲಿ ಗುರುತಿಸಲಾಗಿದೆ.

  • ಈ ಪ್ರದೇಶವು 104 ಆರ್ಕಿಡ್ ಪ್ರಭೇದಗಳ ನೆಲೆಯಾಗಿದ್ದು ಇವುಗಳಲ್ಲಿ ಕೆಲವು ಅಳಿವಿನಂಚಿನಲ್ಲಿವೆ. 72 ಹಿಮಾಲಯದ ಆರ್ಕಿಡ್ ಪ್ರಭೇದಗಳೂ ಇಲ್ಲಿವೆ. ನೂರಾರು ವಿಧಗಳ ಕೀಟಗಳು, ಜರಿಗಿಡಗಳು (ferns) ಮತ್ತು ಔಷಧೀಯ ಸಸ್ಯಗಳೂ ಇಲ್ಲಿವೆ. ಮಹಾಶೀರ್, ಗೊರವಂಕ (Hornbill), ಔಸಿಂಘ, ಮೌಸ್ ಡಿಯರ್ (ಪುಟ್ಟ ಜಾತಿಯ ಜಿಂಕೆ), ಹೆಬ್ಬಳಿಲು (Giant squirrel), ಹಾರುವ ಅಳಿಲು, ರೂಡಿ ಮಂಗೂಸ್ (ಒಂದು ರೀತಿಯ ಮುಂಗುಸಿ), ಉದ್ದ ಮೂತಿಯ ಮೊಸಳೆ (mugger crocodile) ಮತ್ತು ರೂಫಸ್ ಟೈಲ್ಡ್ ಹೇರ್ (ಒಂದು ಜಾತಿಯ ಮೊಲ) ಮುಂತಾದ ಅಪರೂಪದ, ವಿನಾಶದ ಅಂಚಿನಲ್ಲಿರುವ, ಅಪಾಯಕ್ಕೆ ಒಳಗಾಗಿರುವ ಪ್ರಾಣಿ ಮತ್ತು ಸಸ್ಯ ಪ್ರಭೇದಗಳಿಗೆ ಸಿಮಿಲಿಪಾಲ್ ನೆಲೆಯಾಗಿದೆ. ಅಲ್ಲಿ ಹುಲಿ, ಚಿರತೆ ಮುಂತಾದ ದೊಡ್ಡ ಗಾತ್ರದ ಮಾಂಸಾಹಾರಿ ಪ್ರಾಣಿಗಳಲ್ಲದೇ ಆನೆ, ಕಾಡುಕೋಣ (Indian Gaur) ಮುಂತಾದ ಭಾರೀ ಗಾತ್ರದ ಸಸ್ಯಾಹಾರಿ ಪ್ರಾಣಿಗಳೂ ಇವೆ.

  • ಸಿಮಿಲಿಪಾಲ್‌ನ ಹುಲಿಗಳು ಮಧ್ಯ ಭಾರತದ ಹುಲಿಗಳ ವಿಶಿಷ್ಟವಾದ ನಿರ್ದಿಷ್ಟ ಸಂತತಿಯನ್ನು ಪ್ರತಿನಿಧಿಸುತ್ತವೆ. ಆಗಾಗ ಕಂಡುಬರುವ ಕಪ್ಪು ಬಣ್ಣದ ಹುಲಿಗಳು ಈ ಪ್ರದೇಶವನ್ನು ಇನ್ನಷ್ಟು ವಿಶೇಷವನ್ನಾಗಿ ಮಾಡಿದ್ದು, ಇದು ಇಡೀ ಜಗತ್ತಿನಲ್ಲೇ ಇಂತಹ ಹುಲಿಗಳ ಏಕೈಕ ವಾಸಸ್ಥಾನವಾಗಿದೆ.

  • ಕೃಷ್ಣವರ್ಣದ ಹುಲಿಗಳು ಬಂಗಾಳ ಹುಲಿಗಳ ಅಪರೂಪದ ವೈವಿಧ್ಯವಾಗಿದ್ದು, ಸಿಮಿಲಿಪಾಲ್‌ನಲ್ಲಿ ಮಾತ್ರ ಕಂಡುಬರುತ್ತವೆ. ಇವು ಒಂದು ಪ್ರಮುಖ ಪ್ರಭೇದದ ಒಳಗೆಯೇ ಇರುವ ವೈವಿಧ್ಯವನ್ನು ತೋರಿಸಿಕೊಡುತ್ತದೆ. ಅವುಗಳ ವಿಶಿಷ್ಟ ರೂಪಲಕ್ಷಣಗಳು ಮತ್ತು ಸಾಂಸ್ಕೃತಿಕ ಮಹತ್ವವು ಅವುಗಳನ್ನು ನೈಸರ್ಗಿಕ ಪ್ರಪಂಚದಲ್ಲಿ ಕುತೂಹಲಕಾರಿ ಮತ್ತು ಸೌಂದರ್ಯ ಹಾಗೂ ನಿಗೂಢತೆಯ ಸಂಕೇತವನ್ನಾಗಿ ಮಾಡಿವೆ. ಹುಲಿಗಳ ವಾಸಸ್ಥಾನಗಳನ್ನು ರಕ್ಷಿಸುವ
    ಮತ್ತು ಹುಲಿಗಳನ್ನು ಉಳಿಸುವ ಗುರಿಹೊಂದಿರುವ ವಿವಿಧ ರೀತಿಯ ಸಂರಕ್ಷಣಾ ಪ್ರಯತ್ನಗಳು ಈ ಕೃಷ್ಣವರ್ಣದ ಅದ್ಭುತವಾದ ಹುಲಿಗಳ ವಂಶವಾಹಿ ವೈವಿಧ್ಯವನ್ನು ಉಳಿಸಿಕೊಳ್ಳುವುದಕ್ಕೂ ನಿರ್ಣಾಯಕ ಅಂಶಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT