ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ತುಪ್ಪಳದ ಲೀಮರ್

Last Updated 19 ಜನವರಿ 2020, 10:24 IST
ಅಕ್ಷರ ಗಾತ್ರ

ಲೀಮರ್‌ಗಳಲ್ಲಿಯೇ ಭಿನ್ನವಾಗಿ ಕಾಣಿಸುತ್ತದೆ ಕೆಂಪು ತುಪ್ಪಳ ಲೀಮರ್‌. ಇದರ ವೈಜ್ಞಾನಿಕ ಹೆಸರು ವರೇಸಿಯಾ (Varecia). ಇದುವರೇಸಿಯಾ ರುಬ್ರಾ(Varecia rubra) ಗುಂಪಿಗೆ ಸೇರಿದೆ. ಇದು ಲಿಮರಿಡಾ (Lemuridae) ಕುಟುಂಬದಲ್ಲಿ ಬರುತ್ತದೆ. ಇದರ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ಇನ್ನಷ್ಟು ಮಾಹಿತಿ ಪಡೆಯೋಣ.

ಎಲ್ಲಿರುತ್ತೆ?

ಮಡಗಾಸ್ಕರ್‌, ಮಸೋಲಾ ದ್ವೀಪಗಳಲ್ಲಿ ಹೆಚ್ಚಾಗಿ ಇದನ್ನು ನೋಡಬಹುದು. ಉಷ್ಣವಲಯದ ಕಾಡುಗಳೆಂದರೆ ಇದಕ್ಕಿಷ್ಟ.

ಹೇಗಿರುತ್ತೆ?

ಇದು ನೋಡಲು ವಿಶಿಷ್ಟವಾಗಿದ್ದು, ಮೈ ತುಂಬಾ ಕಂದು ಮಿಶ್ರಿತ ಕೆಂಬಣ್ಣದ ತುಪ್ಪಳವನ್ನು ಹೊಂದಿರುತ್ತದೆ. ಎಲ್ಲ ಲೀಮರ್‌ಗಳಿಗಿಂತಲೂ ಇದನ್ನು ನೋಡಲು ತುಸು ಭಿನ್ನವಾಗಿಯೇ ಇರುತ್ತದೆ. ಮುಖ ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿದ್ದು, ಬಾಲ ಮತ್ತು ಹೊಟ್ಟೆಯ ಭಾಗವು ಕಪ್ಪು ಬಣ್ಣದಿಂದ ಕೂಡಿರುತ್ತದೆ. ನೆತ್ತಿಯ ಸಮೀಪ ಬಿಳಿ ಬಣ್ಣದ ತುಪ್ಪಳವನ್ನು ಹೊಂದಿರುತ್ತದೆ. ಬಾಲವು ದೇಹದಷ್ಟೆ ಉದ್ದವಾಗಿರುತ್ತದೆ.

ಆಹಾರಪದ್ಧತಿ

ಇದು ಸಸ್ಯಾಹಾರಿಯಾಗಿದ್ದು, ತನ್ನ ಆಹಾರದ ಶೇ 75ರಷ್ಟು ಭಾಗ ಹಣ್ಣುಗಳಿಂದ ಕೂಡಿರುತ್ತದೆ. ಬಗೆ ಬಗೆ ಸಸ್ಯಗಳ ಬೀಜಗಳು, ಎಲೆಗಳು, ಹೂವುಗಳನ್ನು ತಿಂದು ಜೀವನ ನಡೆಸುತ್ತದೆ.

ಸಂತಾನೋತ್ಪತ್ತಿ

ಇದು ಬಹುಸಂಗಾತಿಯೊಂದಿಗೆ ಜೀವನ ನಡೆಸುತ್ತದೆ. ಆಯಾ ಗುಂಪಿನಲ್ಲಿಯೇ ಗಂಡು ಲೀಮರ್‌ ತನಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಬೇಸಿಗೆ ಕಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. 90ರಿಂದ 103 ದಿನಗಳ ಕಾಲ ಗರ್ಭಾವಸ್ಥೆಯಲ್ಲಿರುತ್ತದೆ. ಆರು ಮರಿಗಳಿಗೆ ಜನ್ಮ ನೀಡುತ್ತದೆ. ತಾನು ಮಾಡಿಕೊಂಡ ಬಿಲದಂತಹ ಪ್ರದೇಶದಲ್ಲಿ ತನ್ನ ಮರಿಗಳನ್ನು ಪೋಷಿಸುತ್ತದೆ. ಗುಂಪಿನಲ್ಲಿರುವ ಇತರ ಸದಸ್ಯರು ಮರಿಗಳ ಆರೈಕೆ ಮಾಡುತ್ತಾರೆ. ಮೂರರಿಂದ ಏಳು ವಾರಗಳ ನಂತರ ಮರಿಗಳು ಬಿಲದಿಂದ ಹೊರಬಂದು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳಲು ಆರಂಭಿಸುತ್ತದೆ. ನಾಲ್ಕು ತಿಂಗಳಿಗೆಲ್ಲ ತಾಯಿ ಲೀಮರ್‌ ಎದೆ ಹಾಲು ಕುಡಿಸುವುದನ್ನು ಬಿಡುತ್ತದ. ಮರಿಯು 1ರಿಂದ 2 ವರ್ಷ ತಲುಪುವುದರೊಳಗೆ ಪ್ರಾಯಕ್ಕೆ ಬರುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಸಂಘಜೀವಿಯಾಗಿದ್ದು, ಸದಾ ತನ್ನ ಗುಂಪಿನೊಂದಿಗೆ ಒಟ್ಟಾಗಿ ಇರಲು ಇಷ್ಟಪಡುತ್ತದೆ. ಒಂದು ಗುಂಪಿನಲ್ಲಿ 18 ರಿಂದ 32 ಲೀಮರ್‌ಗಳಿರುತ್ತವೆ. ಕೆಲವೊಮ್ಮೆ ಈ ಗುಂಪು ಚಿಕ್ಕದಾಗಿ 2 ರಿಂದ 5 ಲೀಮರ್‌ಗಳು ಇರಬಹುದು. ಆಹಾರ ಬೇಟೆಯಾಡುವ ಸಂದರ್ಭದಲ್ಲಿ ಇವು ಸಣ್ಣ ಗುಂಪುಗಳಾಗಿ ಚದುರಿ ಹೋಗುತ್ತವೆ. ಮಳೆಗಾಲದಲ್ಲಿ ಆಹಾರ ಹೇರಳವಾಗಿ ಸಿಗುತ್ತದೆ. ಈ ಸಂದರ್ಭದಲ್ಲಿ ಇದರ ಗುಂಪು ದೊಡ್ಡದಾಗಿಯೇ ಇರುತ್ತದೆ. ಆಹಾರ ಲಭ್ಯತೆ ಕಡಿಮೆಯಾದಂತೆ ಗುಂಪಿನ ಗಾತ್ರ ಕಡಿಮೆಯಾಗುತ್ತದೆ. ಇದು ಹಗಲಿನಲ್ಲಿ ಹೆಚ್ಚಾಗಿ ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಇದು ಬಹಳ ಸಂವಹನದಿಂದ ಕೂಡಿರುವ ಪ್ರಾಣಿಯಾಗಿದ್ದು, 12 ಬಗೆಯಲ್ಲಿ ದನಿ ಹೊರಡಿಸಿ ಸಂವಹನ ನಡೆಸುತ್ತದೆ.

ಸ್ವಾರಸ್ಯಕರ ಸಂಗತಿಗಳು

‌*ಲೀಮರ್‌ ಬೇಟೆಯಾಡುವಾಗೆಲ್ಲ ಚೂಪಾದ ಹಲ್ಲನ್ನು ಹೆಚ್ಚಾಗಿ ಬಳಸುತ್ತದೆ.

* ಹಿಂಗಾಲಿನ ಎರಡನೇ ಬೆರಳಿನ ವಿಶೇಷವಾದ ಉಗುರಿದ್ದು, ಬೇರೆ ಪ್ರಾಣಿಗಳ ತುಪ್ಪಳವನ್ನು ತೆಗೆಯುವಷ್ಟು ದೃಢವಾಗಿರುತ್ತದೆ.

* ಇದರ ದೃಷ್ಟಿ, ಆಘ್ರಾಣ ಶಕ್ತಿ ಬಹಳ ತೀಕ್ಷ್ಮವಾಗಿದ್ದು, ಪರಿಮಳ ಸೂಸುವ ಗ್ರಂಥಿಗಳ ಸಹಾಯದಿಂದಲೇ ತನ್ನ ಗುಂಪಿನ ಸದಸ್ಯರನ್ನು ಗುರುತಿಸುತ್ತದೆ.

* ತನ್ನ ಬಾಲದ ಸಹಾಯದಿಂದಲೇ ಅಪಾಯದ ಮುನ್ಸೂಚನೆಯನ್ನು ನೀಡುವಷ್ಟು ಚಾಕ್ಯತೆ ಹೊಂದಿರುತ್ತದೆ.

ಜೀವಿತಾವಧಿ-ಗಾತ್ರ

ತೂಕ -3 ರಿಂದ 3.6 ಕೆ.ಜಿ.

ಜೀವಿತಾವಧಿ -15 ರಿಂದ 20 ವರ್ಷ

ಎತ್ತರ -53 ಸೆಂ.ಮೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT