ಗುರುವಾರ , ಏಪ್ರಿಲ್ 15, 2021
23 °C

ಹಾವಿಗೆ ಹಾಯ್‌ ಹೇಳಿ

ಡಾ. ಶ್ರೇಷಾದ್ರಿ ಕೆ.ಎಸ್. Updated:

ಅಕ್ಷರ ಗಾತ್ರ : | |

ಅಂದು ಸಂಜೆ. ಸೋಮೇಶ್ವರ ಅಭಯಾರಣ್ಯದಲ್ಲಿರುವ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಜಗಲಿ ಮೇಲೆ ಕಾಫಿ ಹೀರುತ್ತಾ ಕುಳಿತಿದ್ದೆ. ಸಹಪಾಠಿ ಅಜಯ್ ಗಿರಿ ಓಡಿ ಬಂದು ‘ಪಕ್ಕದ ಊರಿನಲ್ಲಿ ಮನೆಯೊಳಗೆ ಕಾಳಿಂಗ ಸರ್ಪ ಸೇರಿಕೊಂಡಿದೆಯಂತೆ. ಅದನ್ನು ಹಿಡಿಯಬೇಕು, ಬನ್ನಿ’ ಎಂದರು. ತಕ್ಷಣವೇ ಅಗತ್ಯ ಪರಿಕರಗಳೊಂದಿಗೆ ಜೀಪ್‌ ಏರಿ ಹೊರಟೆವು. ದಾರಿ ಉದ್ದಕ್ಕೂ ಅಜಯ್‌ ಮನೆಯ ಮಾಲೀಕರಿಗೆ ಫೋನ್‌ ಮೂಲಕ ಸಲಹೆ ನೀಡುತ್ತಿದ್ದರು. ಸ್ವಲ್ಪ ಹೊತ್ತಲ್ಲೇ ಅವರ ಮನೆ ತಲುಪಿದೆವು.

ಮನೆಯಂಗಳದಲ್ಲಿ ಜನ ಜಮಾಯಿಸಿದ್ದರು. ಎಲ್ಲರ ಮುಖದಲ್ಲೂ ಭಯ. ಟಾರ್ಚ್‌ ಬೆಳಕಲ್ಲಿ ಮನೆ ಪ್ರವೇಶಿಸಿದೆವು. ಮೂಲೆಯ ಅಲ್ಮೇರಾ ಕೆಳಗೆ ಕಾಳಿಂಗ ಸರ್ಪ ಕಂಡಿತು. ಅಜಯ್ ಅದನ್ನು ಕೊಕ್ಕೆಯ ಕೋಲಿನಲ್ಲಿ ಹೊರಕ್ಕೆ ಎಳೆದು, ಅದರ ಬಾಲ ಹಿಡಿದುಕೊಂಡರು. ಒಂದು ಚೀಲ ತೆಗೆದುಕೊಂಡು, ಅದರ ಬಾಯಿಗೆ ಒಂದು ಪ್ಲಾಸ್ಟಿಕ್ ಪೈಪ್ ಸಿಕ್ಕಿಸಿದ್ದರು. ಅದರೊಳಗೆ ಹಾವು ಹೋಗುವಂತೆ ಮಾಡಿದರು. ಚೀಲದೊಳಗಿದ್ದ ಕತ್ತಲೆ ಕಂಡ ಹಾವು ಸಲೀಸಾಗಿ ಒಳಗೆ ಸೇರಿತು. ಚೀಲದ ಬಾಯಿ ಕಟ್ಟಿ, ಮನೆಯಿಂದಾಚೆ ಅಂಗಳದಲ್ಲಿಟ್ಟರು. ಹಾವು ಹಿಡಿಯುವುದನ್ನೇ ಬೆರಗಿನಿಂದ ನೋಡುತ್ತಿದ್ದವರನ್ನೆಲ್ಲ ಒಂದೆಡೆ ಸೇರಿಸಿದೆವು. ಹಾವು ಹೇಗೆ ಸೇರಿಕೊಂಡಿತು ಎಂಬುದರ ಬಗ್ಗೆ ಮನೆಯವರನ್ನು ವಿಚಾರಿಸಿದೆವು. ನಾಲ್ಕು ವರ್ಷದ ಹುಡುಗ ಮೊದಲು ಹಾವು ನೋಡಿದನಂತೆ. ಮನೆ ಬಾಗಿಲು ತೆರೆದಿದ್ದರಿಂದ ಕಾಳಿಂಗ ಮನೆಯೊಳಗೆ ಸೇರಿತು.

‘ಈ ಹಾವುಗಳು ಕಾಡಿನಲ್ಲಿರಬೇಕು. ಮನೆಗಳಿಗೆ ಏಕೆ ಬರುತ್ತವೆ’ – ಜನರ ಪ್ರಶ್ನೆ.

‘ಸಾಮಾನ್ಯವಾಗಿ ಹಾವುಗಳು ಮನೆಯೊಳಗೆ ಹೋಗುವುದಿಲ್ಲ. ಈ ಕಾಳಿಂಗ ಸರ್ಪ ಬೇರೆ ಯಾವುದೋ ಆಹಾರ ಹುಡುಕಿಕೊಂಡು ಮನೆಯೊಳಕ್ಕೆ ಹೋಗಿರಬಹುದು’ ಎಂದು ಅಜಯ್ ಅಂದಾಜಿಸಿದರು. ಇದಕ್ಕೆ ಪೂರಕ ಎನ್ನುವಂತೆ ಮನೆ ಮಾಲೀಕರು, ‘ನಿನ್ನೆ ಇಲ್ಲೇ ಕೇರೆ ಹಾವನ್ನು ಕಂಡಿದ್ದೆ’ ಎಂದು ಮಾತು ಜೋಡಿಸಿದರು.

‘ನೋಡಿದ್ರಾ, ಅದಕ್ಕೆ ಈ ಕಾಳಿಂಗ ಆ ಹಾವನ್ನು ಹುಡುಕಿಕೊಂಡು ಬಂದುಬಿಟ್ಟಿದೆ. ಕೇರೆಹಾವು, ನಾಗರಹಾವು ಇವೆಲ್ಲ ಕಾಳಿಂಗನ ಆಹಾರ. ಇಲಿಗಳನ್ನು ಹುಡುಕಿಕೊಂಡು ಆ ಹಾವುಗಳು ಮನೆಯೊಳಗೆ ಬರುತ್ತವೆ. ಇವುಗಳನ್ನು ಹುಡುಕಿಕೊಂಡು ಕಾಳಿಂಗ ಸರ್ಪ ಬಂದಿದೆ’ – ಹಾವುಗಳ ಜೀವನ ಚಕ್ರವನ್ನು ಜನರಿಗೆ ವಿವರಿಸಿ ಜಾಗೃತಿ ಮೂಡಿಸಿದೆವು.

ನಂತರ ಚೀಲದಲ್ಲಿದ್ದ ಕಾಳಿಂಗನನ್ನು, ಹಳ್ಳಿಯ ಸಮೀಪದಲ್ಲೇ ಇದ್ದ ಬಯಲಿನಾಚೆಗೆ ಬಿಟ್ಟೆವು. ‘ಅರೆ, ಹಾವನ್ನು ದೂರದ ಕಾಡಿಗೇಕೆ ಬಿಡಲಿಲ್ಲ’ – ಜನರು ಗಾಬರಿಯಿಂದ ಪ್ರಶ್ನಿಸಿದರು.

‘ಹಾವುಗಳಿಗೆ ನಮ್ಮ ಹಾಗೆ ಒಂದು ಸರಹದ್ದು ಇರುತ್ತದೆ. ಅದರಿಂದಾಚೆಗೆ ಬಿಟ್ಟರೆ, ಅವು ದಾರಿತಪ್ಪಿ, ತಮ್ಮ ಜಾಗವನ್ನು ಹುಡುಕುತ್ತಾ ಸಾಯುತ್ತವೆ. ಹೀಗಾಗಿ, ಹಾವನ್ನು ಹಿಡಿದ ಜಾಗದಿಂದ ಸರಾಸರಿ ಒಂದು ಕಿ.ಮೀ ಆಸುಪಾಸಿನಲ್ಲಿ ಬಿಡಬೇಕು’ – ಮತ್ತೆ ನಮ್ಮದು ಜಾಗೃತಿಯ ಮಾತು.

ಆದರೂ ಜನರ ಭಯ ತಣಿಯಲಿಲ್ಲ. ‘ಅವು ಮತ್ತೆ ವಾಪಸ್ ಬರಲ್ಲವೇ’ – ಅವರ ಪ್ರಶ್ನೆ ಮುಂದುವರಿಯಿತು.

‘ಬರಬಹುದು. ಹಾಗೆಯೇ ಅವುಗಳನ್ನು ಬರದಂತೆಯೂ ತಡೆಯಲೂ ಸಾಧ್ಯವಿದೆ. ಉದಾಹರಣೆಗೆ; ಮನೆಯ ಅಂಗಳದಲ್ಲಿ ಕಾಂಪೌಂಡ್‌ಗೆ ಅಂಟಿಕೊಂಡಂತೆ ಕುಂಡಗಳನ್ನಿಟ್ಟು ಗಿಡಗಳನ್ನು ಇಟ್ಟರೆ, ಅದರೊಳಗಿನ ತೇವಾಂಶ ಹಾವುಗಳಿಗೆ ಆಸರೆ ನೀಡುತ್ತದೆ. ಕುಂಡಗಳನ್ನು ಗೋಡೆಯಿಂದ ದೂರವಿಟ್ಟರೆ, ಹಾವುಗಳು ಮನೆಯೊಳಗೆ ಬರುವುದನ್ನು ತಡೆಯಬಹುದು. ನಮ್ಮ ಮಾತುಗಳಿಂದ ಜನರಿಗೆ ಹಾವುಗಳ ಬಗ್ಗೆ ತಕ್ಕಮಟ್ಟಿಗೆ ಅರಿವು ಮೂಡಿದಂತೆ ಕಂಡಿತು. 

ನಿಜ, ಹಾವುಗಳ ವಿಸ್ಮಯ ಲೋಕ ಬಹಳ ದೊಡ್ಡದು. ಎಷ್ಟು ದೊಡ್ಡದೆಂದರೆ ಈ ಸರೀಸೃಪದ ಸುತ್ತಲೂ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಸಂಶೋಧಕರೂ ಉತ್ತರ ಕೊಡುವುದು ಕಷ್ಟ. ಆದರೆ ಒಂದಂತೂ ನಿಜ. ಹಾವುಗಳು ವಿಶ್ವದಾದ್ಯಂತ ಅಳಿವಿನಂಚಿನಲ್ಲಿವೆ. ಇದಕ್ಕೆ ಮನುಷ್ಯ ಹಾಗೂ ಅವನ ದುರಾಸೆಯೇ ಕಾರಣ. ಇದರ ಪರಿಣಾಮ ಎಲ್ಲಾ ಜೀವಿಗಳ ಮೇಲಾಗುತ್ತಿದೆ. ಹಾವುಗಳಿಲ್ಲದಿದ್ದರೆ ಪರಿಸರ ವ್ಯವಸ್ಥೆ ಏರುಪೇರಾಗುತ್ತದೆ. ಹಾಗಾಗಿ ಹಾವುಗಳ ರಕ್ಷಣೆ ನಮ್ಮೆಲ್ಲರ ಹೊಣೆ.

ಹಾವುಗಳ ಬಗ್ಗೆ ಅರಿತುಕೊಳ್ಳಿ...

ಕರ್ನಾಟಕದಲ್ಲಿ ಸುಮಾರು 40 ಪ್ರಭೇದದ ಹಾವುಗಳಿವೆ. ಕಾಳಿಂಗ ಸರ್ಪ ಅತಿದೊಡ್ಡದು ಹಾಗು ಬ್ರಾಹ್ಮಿನಿ ಕ್ರಿಮಿ ಹಾವು ಅತೀ ಸಣ್ಣದು. ಭಾರತದ ನಾಲ್ಕು ಅತ್ಯಂತ ವಿಷಪೂರಿತ ಹಾವುಗಳೆಂದರೆ ನಾಗರಹಾವು, ಮಂಡಳ ಹಾವು, ಗರಗಸ ಮಂಡಳ ಹಾವು ಹಾಗೂ ಕಟ್ಟಿಗೆ ಹಾವು. ಇವೆಲ್ಲವೂ ಕರ್ನಾಟಕದಲ್ಲಿವೆ. ಕಾಳಿಂಗ ಸರ್ಪ, ವಿಶ್ವದಲ್ಲೇ ಅತೀ ಉದ್ದದ ವಿಷಸರ್ಪವಾಗಿದೆ. ಇದು ಬೇರೆ ಹಾವುಗಳನ್ನ ಹಿಡಿದು ತಿನ್ನುತ್ತದೆ.

 ಕಾಳಿಂಗ ಸರ್ಪಗಳು ಭಯಂಕರ ರೂಪದಲ್ಲಿ ಕಂಡರೂ ಮನುಷ್ಯನನ್ನು ಕಚ್ಚಿರುವ ಉದಾಹರಣೆಗಳು ತುಂಬಾ ಕಡಿಮೆ. ಹಾಗಾಗಿ ಅದು ಮನೆಯೊಳಗೆ ಸೇರಿದಾಗ ಗಾಬರಿಯಾಗುವ ಅಗತ್ಯವಿಲ್ಲ. ಬದಲಿಗೆ, ಹಾವು ಹಿಡಿಯುವರನ್ನು ಕರೆದು, ಅವರು ಬರುವವರೆಗೂ, ಆ ಹಾವು ಮನೆಯೊಳಗೆ ಎಲ್ಲಿ ಸೇರಿಕೊಂಡಿದೆ ಎಂದು ನಿಗಾ ಇಡಬೇಕು. ಅವರು ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಇದರಿಂದ ಹಾವು ಹಿಡಿಯುವವರಿಗೂ ಸುಲಭವಾದೀತು.

‘ಹಾವಿನ ದ್ವೇಷ ಹನ್ನೆರಡು ವರುಷ’ –ಎನ್ನುವುದಿಲ್ಲ. ಹಾವುಗಳಿಗೆ ಮನುಷ್ಯನನ್ನು ಕಂಡರೆ ಭಯ. ದೂರವಿರಲು ಪ್ರಯತ್ನಿಸುತ್ತವೆ. ಅವು ಎಂದೂ ಮನುಷ್ಯನಿಗೆ ಕೇಡು ಬಯಸುವುದಿಲ್ಲ. ನಾವು ಅವುಗಳ ದಾರಿಗೆ ಅಡ್ಡವಾದರೆ ಗಾಬರಿಯಾಗಿ ನಮ್ಮನ್ನು ಕಚ್ಚುತ್ತವೆ, ಅಷ್ಟೇ.

ಕಾಳಿಂಗ ಸರ್ಪದಲ್ಲಿ ಗಂಡು–ಹೆಣ್ಣು ಹಾವುಗಳು ಮಿಲನದ ನಂತರ ಹೆಣ್ಣು ಮೊಟ್ಟೆ ಇಡಲು ಎಲೆಗಳನ್ನು ರಾಶಿ ಮಾಡುತ್ತದೆ. ಆ ಎಲೆಗಳ ರಾಶಿ ಎಷ್ಟು ಒತ್ತೊತ್ತಾಗಿರುತ್ತದೆ ಎಂದರೆ, ಭಾರಿ ಮಳೆ ಸುರಿದರೂ ಒಂದು ಹನಿ ನೀರು ಅದರೊಳಗೆ ಹೋಗುವುದಿಲ್ಲ.

‘ಕಾಳಿಂಗ ಸರ್ಪ–ಸಂಶೋಧನೆ’

ಕಾಳಿಂಗ ಸರ್ಪ ಹಲವು ಕಾರಣಗಳಿಂದ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಗಳಿಸಿದೆ. ಕಾಳಿಂಗ ಸರ್ಪದ ಕುರಿತು ಇಂಥ ಅಪರೂಪದ ಮಾಹಿತಿ ಸಂಗ್ರಹಿಸುವುದಕ್ಕಾಗಿಯೇ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಿಂದ ‘ರೇಡಿಯೊ ಟೆಲಿಮೆಟ್ರಿ’ ಎಂಬ ತಾಂತ್ರಿಕ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈ ವಿಧಾನದಲ್ಲಿ ಹಾವಿನ ದೇಹವನ್ನು ಸರ್ಜರಿ ಮಾಡಿ, ಅದರೊಳಗೆ ಒಂದು ಸಣ್ಣ ಯಂತ್ರವನ್ನು ಇಡಲಾಗುತ್ತದೆ. ಆ ಯಂತ್ರದ ರೇಡಿಯೊ ಫ್ರೀಕ್ವೆನ್ಸಿ ಮುಖಾಂತರ ಆಂಟೆನಾ ಹಿಡಿದು ಅದನ್ನು ಹಿಂಬಾಲಿಸಿದಲ್ಲಿ ಹಾವು ಎಲ್ಲಿದೆ, ಏನು ಚಟುವಟಿಕೆಗೆ ಮಾಡುತ್ತಿದೆ ಎಂದು ತಿಳಿಯಬಹುದು.

ಈವರೆಗೆ ಆರು ಗಂಡು ಹಾವು ಹಾಗೂ ಎರಡು ಹೆಣ್ಣು ಹಾವುಗಳ ಚಲನವಲನಗಳನ್ನು ದಾಖಲಿಸಿದ್ದೇವೆ. ಆ ಪ್ರಕಾರ ಒಂದು ಕಾಳಿಂಗ ಸರ್ಪ ದಿನಕ್ಕೆ ಸುಮಾರು 5 ಕಿ.ಮೀ. ದೂರ ಚಲಿಸಬಲ್ಲದು. ಒಂದು ವರ್ಷದಲ್ಲಿ ಸುಮಾರು 130 ಚ.ಕಿ.ಮೀ.ಕ್ಕೂ ಹೆಚ್ಚು ವ್ಯಾಪ್ತಿಯಲ್ಲಿ ಚಲಿಸುತ್ತದೆ.‌

ತರಬೇತಿ ಶಿಬಿರ

ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಹಾವುಗಳನ್ನು ವೈಜ್ಞಾನಿಕವಾಗಿ ಹಿಡಿಯುವ ಕುರಿತು ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಕಾಳಿಂಗ ಸರ್ಪಗಳ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸ್ವಯಂಸೇವಕರನ್ನೂ ಆಹ್ವಾನಿಸುತ್ತೇವೆ. ಇಂಥವರಿಗೆ ಒಂದು ತಿಂಗಳು ಅವಧಿಯ ತರಬೇತಿ ನೀಡಲಾಗುತ್ತದೆ. ಆಸಕ್ತರು ಮಾಹಿತಿಗೆ www.agumberainforest.org ಜಾಲತಾಣ ನೋಡಬಹುದು.

ಲೇಖಕರು: ಜೀವಶಾಸ್ತ್ರಜ್ಞರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು