ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತಿ ಪುಟ್ಟ ಮಂಗ ‘‍ಪಿಗ್ಮಿ ಮಾರ್ಮೊಸೆಟ್‌’

Last Updated 13 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ವಿಶ್ವದ ಬಹುತೇಕ ಭೂಭಾಗಳಲ್ಲಿ ಕಾಣಸಿಗುವ ಮತ್ತು ಹೆಚ್ಚು ಜನರಿಗೆ ಗೊತ್ತಿರುವ ಪ್ರಾಣಿ ಮಂಗ. ಕೆಲವು ದಶಕಗಳ ಹಿಂದಷ್ಟೇ ವಿಶ್ವಕ್ಕೆ ಪರಿಚಯವಾದ ಮಂಗಗಳು ದಕ್ಷಿಣ ಅಮೆರಿಕ ಖಂಡದಲ್ಲಿವೆ. ಅವುಗಳ ಪೈಕಿ ವಿಶ್ವದ ಅತಿಪುಟ್ಟ ಮಂಗ ಪಿಗ್ಮಿ ಮಾರ್ಮೊಸೆಟ್‌ (Pygmy Marmoset) ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿಯೋಣ.

ಹೇಗಿರುತ್ತದೆ?

ಕಂದು ಮತ್ತು ಕಪ್ಪು ಬಣ್ಣದ ನೀಳವಾದ ಕೂದಲು ಬೆಳೆದಿರುವ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಮುಖ, ತಲೆ, ಕೆನ್ನೆಯ ಮೇಲೆಲ್ಲಾ ದಟ್ಟವಾಗಿ ಕೂದಲು ಬೆಳದಿರುತ್ತವೆ. ತಲೆ ದೊಡ್ಡದಾಗಿ ಕಾಣುತ್ತದೆ. ಮೂತಿ ಮಾತ್ರ ತಕ್ಷಣಕ್ಕೆ ಮುಂಗಿಸಿಯಂತೆಯೇ ಕಾಣುತ್ತದೆ. ಉಳಿದಂತೆ ದೇಹರಚನೆಯೆಲ್ಲಾ ಕೋತಿಗಳನ್ನೇ ಹೋಲುತ್ತದೆ. ಬಾಲ ಅಳಿಲಿನ ಬಾಲದಂತೆ ದಟ್ಟವಾದ ಕೂದಲಿನಿಂದ ಕೂಡಿದ್ದು, ನೀಳವಾಗಿ ಬೆಳೆದಿರುತ್ತದೆ. ಕಾಲುಗಳಲ್ಲಿ ಐದು ಬೆರಳುಗಳಿದ್ದು, ಮರಗಳನ್ನು ಹಿಡಿದಿಟ್ಟುಕೊಳ್ಳಲು ನೆರವಾಗುವಂತೆ ಬೆರಳುಗಳು ದೃಢವಾಗಿರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಹಳದಿ ಮತ್ತು ಕಪ್ಪು ಬಣ್ಣದಲ್ಲಿರುತ್ತವೆ. ಮೂತಿ ಕೆಂಪಗಿರುತ್ತದೆ. ಎದೆ ಮತ್ತು ಉದರ ಭಾಗದಲ್ಲಿ ಕಂದು ಬಣ್ಣದ ಕೂದಲು ಹೆಚ್ಚಾಗಿರುತ್ತವೆ.

ಎಲ್ಲಿದೆ?

ದಕ್ಷಿಣ ಅಮೆರಿಕ ಖಂಡದಲ್ಲಿ ಮಾತ್ರ ಕಾಣಸಿಗುವ ಮಂಗ ಇದು. ಬೊಲಿವಿಯಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್ ಮತ್ತು ಪೆರು ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಅಮೆಜಾನ್ ನದಿಯ ಪಶ್ಚಿಮ ಭಾಗದಲ್ಲಿ ಮತ್ತು ಅಮೆಜಾನ್ ದಟ್ಟ ಅರಣ್ಯಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಸದಾ ಮರಗಳ ಮೇಲೆ ವಾಸಿಸುವ ಹಾಗೂ ಹಗಲಿನಲ್ಲಿ ಹೆಚ್ಚು ಚುರುಕಾಗಿರುವ ಮಂಗ. ಮುಂಜಾನೆ ಮತ್ತು ಸಂಜೆ ಹೆಚ್ಚು ಚುರುಕಾಗಿರುತ್ತದೆ. ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತದೆ. ಒಂದು ಗುಂಪಿನಲ್ಲಿ 2ರಿಂದ 15 ಪಿಗ್ಮಿಗಳು ಇರುತ್ತವೆ. ಪ್ರತಿ ಪಿಗ್ಮಿ ಕುಟುಂಬ ರಚಿಸಿಕೊಂಡಿದ್ದು, ಸದಾ ಮರಿಗಳು ಮತ್ತು ಸಂಗಾತಿಯೊಂದಿಗೆ ಅಲೆಯುತ್ತಿರುತ್ತದೆ. ರಾತ್ರಿ ಮಲಗುವಾಗ, ವಿಶ್ರಾಂತಿ ಪಡೆಯುವಾಗ ಒಂದಕ್ಕೊಂದು ಪರಸ್ಪರ ಅಂಟಿಕೊಂಡೇ ನಿದ್ರಿಸುತ್ತವೆ. ಪ್ರತಿ ಗುಂಪು ಸರಾಸರಿ 100 ಎಕರೆ ಪ್ರದೇಶದಲ್ಲಿ ರಾಸಾಯನಿಕಗಳನ್ನು ಸ್ರವಿಸಿ ಗಡಿ ಗುರುತಿಸಿಕೊಂಡಿರುತ್ತವೆ. ವಿವಿಧ ಶಬ್ದಗಳನ್ನು ಹೊರಡಿಸುವ ಮೂಲಕ ಸಂಹನ ನಡೆಸುತ್ತದೆ. ಅಪಾಯ ಎದುರಾದಾಗ ಮತ್ತು ಸಂಗಾತಿಯನ್ನು ಆಕರ್ಷಿಸಲು ಜೋರಾಗಿ ಕಿರುಚುತ್ತವೆ.

ಆಹಾರ

ಇದು ಸರ್ವಭಕ್ಷಕ ಮಂಗ. ಹೂಗಳ ಮಕರಂದ, ವಿವಿಧ ಬಗೆಯ ಹಣ್ಣುಗಳು, ವಿವಿಧ ಬಗೆಯ ಗಿಡಗಳ ಎಲೆಗಳು ಸೇವಿಸುತ್ತದೆ. ವಿವಿಧ ಬಗೆಯ ಕೀಟಗಳನ್ನು ಭಕ್ಷಿಸುತ್ತದೆ. ಮರಗಳ ಜಿಗುರೂ ಇದರ ಆಹಾರ ಭಾಗ.

ಸಂತಾನೋತ್ಪತ್ತಿ

ಇದರ ಸಂತಾನೋತ್ಪತ್ತಿಗೆ ನಿರ್ದಿಷ್ಟ ಅವಧಿ ಇಲ್ಲ. ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ಸಂತಾನೋತ್ಪತ್ತಿ ನಡೆಸುತ್ತದೆ. ಗುಂಪಿನ ಪ್ರಬಲ ಮಂಗ ಇತರೆ ಗುಂಪುಗಳ ಮಂಗಗಳು ತಮ್ಮ ಗುಂಪು ಸೇರದಂತೆ ಪ್ರತಿರೋಧ ಒಡ್ಡುತ್ತದೆ. ತನ್ನ ಗುಂಪಿನಲ್ಲಿರುವ ಹಲವು ಹೆಣ್ಣು ಪಿಗ್ಮಿ ಮಂಗಗಳ ಮೇಲೆ ಪಾರಮ್ಯ ಮೆರೆಯುತ್ತದೆ.

ಹೆಣ್ಣು ಮಂಗ ಸುಮಾರು 4 ತಿಂಗಳು ಗರ್ಭಧರಿಸಿ 1ರಿಂದ 3 ಮರಿಗಳಿಗೆ ಜನ್ಮ ನೀಡುತ್ತದೆ. ಮರಿಗಳನ್ನು ಗಂಡು ಮಂಗವೇ ಹೊತ್ತು ತಿರುಗುತ್ತದೆ. ಹೆಣ್ಣು ಮಂಗ ಹಾಲುಣಿಸಿ ಬೆಳೆಸುತ್ತದೆ. ಮೂರು ತಿಂಗಳ ವರೆಗೆ ಮರಿಗಳು ಪೋಷಕ ಮಂಗಗಳ ಆರೈಕೆಯಲ್ಲೇ ಬೆಳೆಯುತ್ತವೆ. ಒಂದು ವರ್ಷದ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಫ್ರೆಂಚ್ ಭಾಷೆಯ ಕುರೂಪಿ, ಕುಬ್ಜ ಎಂದು ಅರ್ಥ ನೀಡುವ ಮರ್ಮೌಸೆಟ್ ಎಂಬ ಪದದಿಂದ ಇದಕ್ಕೆ ಮರ್ಮೊಸೆಟ್ ಎಂದು ಹೆಸರಿಡಲಾಗಿದೆ.

* ಇದರ ದೇಹ ವಿಶಿಷ್ಟವಾಗಿ ರಚನೆಯಾಗಿದ್ದು, ಪುಟ್ಟಗಾತ್ರ ಮಂಗವಾದರೂ 15 ಅಡಿ ದೂರದ ವರೆಗೆ ಜಿಗಿಯುವ ಸಾಮರ್ಥ್ಯ ಹೊಂದಿದೆ.

* ಕತ್ತನ್ನು ಸುಮಾರು 180 ಡಿಗ್ರಿವರೆಗೆ ತಿರುಗಿಸಬಲ್ಲದು.

* ಮರದ ಜಿಗುರನ್ನು ಇದು ಹೆಚ್ಚು ಇಷ್ಟಪಡುತ್ತದೆ. ಹೀಗಾಗಿ ಕೋರೆಹಲ್ಲುಗಳಿಂದ ಮರವನ್ನು ಕೆರೆದು ಜಿಗಿರನ್ನು ಸವಿಯುತ್ತದೆ.

* ಅಗತ್ಯ ಸಂದರ್ಭಗಳಲ್ಲಿ ಮಾತ್ರ ಇದು ಸದ್ದು ಮಾಡಿ ಸಂವಹನ ನಡೆಸುತ್ತದೆ. ಸದಾ ನಿಶ್ಶಬ್ದವಾಗಿರುವುದಕ್ಕೇ ಪ್ರಯತ್ನಿಸುತ್ತದೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ-100 ರಿಂದ 125 ಗ್ರಾಂ, ದೇಹದ ಉದ್ದ -12 ರಿಂದ15 ಸೆಂ.ಮೀ,ಓಡುವ ವೇಗ- 40 ಕಿ.ಮೀ/ಗಂಟೆಗೆ

ಜೀವಿತಾವಧಿ -11ರಿಂದ 18 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT