ಬುಧವಾರ, ಅಕ್ಟೋಬರ್ 21, 2020
26 °C
ಕೇವಲ ತಾಂತ್ರಿಕ ಪರಿಣತಿಯೇ ಕಲೆಯಲ್ಲ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿರುವ ಮೊಸಳೆ

PV Web Exclusive| ವನ್ಯಜೀವಿ ಛಾಯಾಗ್ರಹಣದ ಸ್ವರೂಪ ಬದಲಾಗಿದೆ: ಲೋಕೇಶ್ ಮೊಸಳೆ

ಸಂದರ್ಶನ : ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

Prajavani

ವನ್ಯಜೀವಿ ಛಾಯಾಗ್ರಹಣದಲ್ಲಿ ಸುಮಾರು ಕಾಲುಶತಮಾನದಿಂದ ತೊಡಗಿಸಿಕೊಂಡಿರುವ ಮೈಸೂರಿನ ಲೋಕೇಶ್‌ ಮೊಸಳೆ ಕಾಡಿನ ಜೀವಿಗಳನ್ನು ನೋಡುವ ಕ್ರಮವನ್ನೇ ಬದಲಿಸಿದ ಅಪರೂಪದ ಛಾಯಾಗ್ರಾಹಕ. ಅವರ ಚಿತ್ರಗಳು ಕಾಡಿನ ಜೀವಿಗಳ ಹೊರ ರೂಪವನ್ನು ಚಿತ್ರಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಚಿತ್ರಗಳಲ್ಲಿ ಆ ಜೀವಿಗಳ ಹೋರಾಟವಿದೆ, ಕತೆಯಿದೆ, ಭಾಷೆಯಿದೆ. ಅದಕ್ಕೂ ಮಿಗಿಲಾಗಿ ಆ ಜೀವಿಗಳ ಸೌಂದರ್ಯ ಅವುಗಳಲ್ಲಿ ಬಿಂಬಿತವಾಗಿದೆ. ಅದರ ಜೊತೆಗೆ ಅವರ ಚಿತ್ರಗಳಲ್ಲಿ ಅವರದೇ ಆದ ‘ಮೊಸಳೆ ಛಾಪ’ನ್ನು ನೋಡುಗರು ಗುರುತಿಸಬಹುದು. ಫಿಲ್ಮಂ ಛಾಯಾಗ್ರಹಣದಿಂದ ಡಿಜಿಟಲ್‌ ಛಾಯಾಗ್ರಹಣದ ವರೆಗೆ ಸಾಗಿಬಂದ ಅವರ ನೆರಳು–ಬೆಳಕಿನ ಪಯಣ ವಿಶಿಷ್ಟವಾದದ್ದು. ವನ್ಯಜೀವಿ ಛಾಯಾಗ್ರಹಣ, ಛಾಯಾಗ್ರಹಣದಲ್ಲಿ ಡಿಜಿಟಲ್‌ ತಂತ್ರಜ್ಞಾನದ ಬಳಕೆ ಮತ್ತಿತರ ವಿಷಯಗಳ ಕುರಿತು ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ಈಗ ವನ್ಯಜೀವಿ ಛಾಯಾಗ್ರಹಣ ಯಾವ ಸ್ವರೂಪದಲ್ಲಿದೆ?  

ಈ ಹಿಂದೆ ಛಾಯಾಗ್ರಹಣ ಎಂಬುದು ಕಷ್ಟಸಾಧ್ಯವಾದ ಒಂದು ಹವ್ಯಾಸವಾಗಿತ್ತು. ಆಗ ಅದು ದಾಖಲೆ ಮಾಡುವುದಕಷ್ಟೇ ಸೀಮಿತವಾಗಿತ್ತು. ಈಗ ಛಾಯಾಗ್ರಹಣ ಎಂಬುದು ದಾಖಲೆಯೂ ಆಗಿಲ್ಲ, ಕಲೆಯೂ ಆಗಿಲ್ಲ. ಜನರೀಗ ವನ್ಯಜೀವಿ ಛಾಯಾಗ್ರಹಣವನ್ನು ಮನರಂಜನೆಗಾಗಿ, ವಿರಾಮ ಕಾಲದ ಆರಾಮಕ್ಕಾಗಿ ಮಾಡುತ್ತಿದ್ದಾರೆ. ಛಾಯಾಗ್ರಹಣದ ವೈವಿಧ್ಯಗಳೇ ಕಡಿಮೆಯಾಗುತ್ತಿವೆ. ಈಗ ಛಾಯಾಗ್ರಹಣ ಎಂದರೆ ವನ್ಯಜೀವಿ ಛಾಯಾಗ್ರಹಣ ಎನ್ನುವಂತಾಗಿದೆ. ಇದು ಸರಿಯಲ್ಲ; ವನ್ಯಜೀವಿ ಛಾಯಾಗ್ರಹಣ ಬಿಟ್ಟು ಬೇರೆ ಬಗೆಯ ಛಾಯಾಗ್ರಹಣಗಳನ್ನೂ ನಮ್ಮ ಯುವಸಮುದಾಯ ಮಾಡುವಂತಾಗಬೇಕು.

ವನ್ಯಜೀವಿ ಛಾಯಾಗ್ರಹಣ ಈಗ ‘ಸ್ಟುಡಿಯೊ’ ಸ್ವರೂಪವನ್ನು ಕೂಡ ಪಡೆದುಕೊಂಡಿದೆ. ಇದು ಹೇಗೆ ಅಂದರೆ ಹಕ್ಕಿಗಳಿಗೆ ಬೇಕಾದ ಆಹಾರ, ನೀರನ್ನು ಒಂದು ಜಾಗದಲ್ಲಿಟ್ಟು ಅವನ್ನು ಅಲ್ಲಿಗೆ ಆಕರ್ಷಿಸಲಾಗುತ್ತದೆ. ಹಾಗೆ ಬಂದ ಹಕ್ಕಿಗಳ ಚಿತ್ರಗಳನ್ನು ಮರೆಗಳಲ್ಲಿ ಕೂತವರು ಯಾವುದೇ ಶ್ರಮವಿಲ್ಲದೇ ತೆಗೆಯುತ್ತಾರೆ. ಹಕ್ಕಿಗಳನ್ನು ಹುಡುಕುವ, ಅವುಗಳ ಜೀವನ ಕ್ರಮವನ್ನು ಅಭ್ಯಾಸ ಮಾಡುವುದಕ್ಕೆ ಅಗತ್ಯವಾದ ಶ್ರಮ, ಸಮಯ ಎರಡೂ ಇದಕ್ಕೆ ಬೇಕಾಗಿಲ್ಲ. ಇದು ಒಂದು ಬಗೆಯಲ್ಲಿ ರೂಪದರ್ಶಿಗಳನ್ನು ಸ್ಟುಡಿಯೊಗೆ ಕರೆಸಿ ಮಾಡುವ ಛಾಯಾಗ್ರಹಣದ ತರಹದ್ದು. ಇದು ಕೆಲವರಿಗೆ ಹಣ ಗಳಿಕೆಗೆ ದಾರಿಯೂ ಆಗಿದೆ.

ಇಲ್ಲಿ ಮುಖ್ಯವಾದ ಮಾತೆಂದರೆ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಛಾಯಾಗ್ರಹಕರಿಗೆ ಬದ್ಧತೆ ಇರಬೇಕಾದದ್ದು ಬಹಳ ಮುಖ್ಯ. ಬದ್ಧತೆ ಇಲ್ಲದಿದ್ದರೆ ಪರಿಸರಕ್ಕೆ ಹಾನಿಯಾಗುತ್ತದೆ.

ಯಾಕೆ ಈ ಬಗೆಯ ಆಕರ್ಷಣೆ ವನ್ಯಜೀವಿ ಛಾಯಾಗ್ರಹಣಕ್ಕೆ ಇದೆ?

ಈಗ ತುಂಬಾ ಜನರಿಗೆ ಕಾಡು ಎನ್ನುವುದು ಪ್ರವಾಸಕ್ಕೆ ಹೋಗುವ ಮತ್ತು ಮೋಜಿಗಾಗಿ ಇರುವ ತಾಣವಾಗಿದೆ. ಬಹುತೇಕರು ಛಾಯಾಗ್ರಹಣದ ನೆಪದಲ್ಲಿ ಮನರಂಜನೆಗಾಗಿ ಬರುತ್ತಾರೆ. ಅಲ್ಲಿ ಗಂಭೀರ ಛಾಯಾಗ್ರಾಹಕರು ಕಡಿಮೆ. ವನ್ಯಜೀವಿ ಛಾಯಾಗ್ರಹಣ ಎನ್ನುವುದೂ ಈಗ ಉದ್ದಿಮೆ ಆಗಿದೆ. ಕಾಡಿನಲ್ಲಿರುವ ವಿಶ್ರಾಂತಿಧಾಮಗಳಿಗೆ ಬರುವವರು ದಿನವೊಂದಕ್ಕೆ ತಲಾ 10 ಸಾವಿರ ರೂಪಾಯಿಗಿಂತಲೂ ಹೆಚ್ಚು ಶುಲ್ಕ ಕೊಟ್ಟರೆ ಕಾಡಿನಲ್ಲಿ ಸುತ್ತಾಡಬಹುದು. ಅಲ್ಲೇ ಸಿಗುವ ಬಾಡಿಗೆ ಕ್ಯಾಮೆರಾದಲ್ಲಿ ಛಾಯಾಗ್ರಹಣವನ್ನೂ ಮಾಡಬಹುದು. ಇದೆಲ್ಲ ಸರ್ಕಾರಿ ವ್ಯವಸ್ಥೆಯಲ್ಲೇ ಆಗುತ್ತದೆ. ಸರ್ಕಾರಿ ಅಧಿಕಾರಿಗಳು ಉಳ್ಳವರನ್ನು ತೃಪ್ತಿಪಡಿಸಲು ಇದ್ದಾರೆ. ಮೊದಲು ಇದನ್ನು ಖಾಸಗಿಯವರು ಮಾಡುತ್ತಿದ್ದರು; ಈಗ ಸರ್ಕಾರ ಇದನ್ನು ಮಾಡುತ್ತಿದೆ. 

ನೀವು ಫಿಲ್ಮಂ ಛಾಯಾಗ್ರಹಣ, ಡಿಜಿಟಲ್‌ ಛಾಯಾಗ್ರಹಣ ಎರಡನ್ನೂ ಮಾಡಿದವರು. ಡಿಜಿಟಲ್‌ ಛಾಯಾಗ್ರಹಣದಿಂದ ಯಾವ ಬಗೆಯ ಉಪಯೋಗಗಳು ಆಗಿವೆ? ಅದನ್ನು ಬಳಸಿಕೊಳ್ಳಬೇಕಾದ ಬಗೆ ಹೇಗೆ?

ಈ ಕಾಲದಲ್ಲಿ ಡಿಜಿಟಲ್‌ ಛಾಯಾಗ್ರಹಣ ಎನ್ನುವುದು ಜನಸಾಮಾನ್ಯರ ಬದುಕಿನ ಭಾಗವಾಗಿದೆ. ಡಿಜಿಟಲ್‌ ಛಾಯಾಗ್ರಹಣ ಮೊಬೈಲ್‌ನಿಂದ ಶುರುವಾಗಿ ಸಿನಿಮಾ ತೆಗೆಯುವ ವರೆಗೆ ವಿಸ್ತಾರವಾಗಿ ಹರಡಿಕೊಂಡಿದೆ. ನಮ್ಮ ಊಹೆಗೂ ನಿಲುಕದ ವೇಗದಲ್ಲಿ ಡಿಜಿಟಲ್‌ ಜಗತ್ತು ಬದಲಾಗುತ್ತಿದೆ. ಇದು ತಾಂತ್ರಿಕ ಬದಲಾವಣೆಯಷ್ಟೆ.

ಬೇಡದ ವಿಚಾರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ, ಟೀವಿ ವಾಹಿನಿಗಳಲ್ಲಿ ಮೊಬೈಲ್‌ ವಿಡಿಯೊಗಳನ್ನು ಬಳಸುವುದನ್ನು ನಾವು ನೋಡಿದ್ದೇವೆ. ಕೇವಲ ದಾಖಲೆ ಮಾಡುವುದಕಷ್ಟೆ ಅದು ಸೀಮಿತವಾಗುತ್ತಿದೆ. ಅದನ್ನು ದಾಟಿ ಮುಂದಕ್ಕೆ ಹೋಗುತ್ತಿಲ್ಲ. ಅದು ನಮ್ಮ ಬೌದ್ಧಿಕ ಬೆಳವಣಿಯ ಭಾಗವಾಗಿಲ್ಲ ಮತ್ತು ನಮ್ಮ ಚಿಂತನೆಯ ಹೊಳಹುಗಳನ್ನು ದಾಖಲಿಸುತ್ತಿಲ್ಲ. ಡಿಜಿಟಲ್‌ ಛಾಯಾಗ್ರಹಣ ಹೀಗೆ ಸೀಮಿತ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ತಂತ್ರಜ್ಞಾನವನ್ನು ಬೌದ್ಧಿಕ ಎತ್ತರವನ್ನು ಮುಟ್ಟಲು ಬಳಸಬೇಕು. ಜನಸಾಮಾನ್ಯರನ್ನೂ ಮುಟ್ಟಿದೆ ಎನ್ನುವುದಷ್ಟೆ ಡಿಜಿಟಲ್‌ ಕ್ಯಾಮೆರಾಗಳ ಸಾಧನೆಯಾಗಿದೆ.

ಇನ್ನು ಡಿಜಿಟಲ್‌ ತಂತ್ರಜ್ಞಾನವು ವಿವಿಧ ಬಗೆಯ ಬೆಳಕಿನಲ್ಲಿ ಚಿತ್ರಗಳನ್ನು ತೆಗೆಯಲು ಅವಕಾಶ ಮಾಡಿಕೊಟ್ಟಿದೆ. ಎಲ್ಲ ಬೆಳಕಿಗೂ ಪೂರಕವಾಗಿ ಸ್ಪಂದಿಸುವ ತಂತ್ರಜ್ಞಾನ ಅದು. ಆದರೆ, ಈಗಿನ ಹುಡುಗರು ಡಿಜಿಟಲ್‌ ತಂತ್ರಜ್ಞಾನವೇ ಕಲೆ ಎಂದುಕೊಂಡಿದ್ದಾರೆ. ತಂತ್ರಜ್ಞಾನವೇ ಕಲೆ ಅಲ್ಲ. ಅದು ಕಲೆಗೆ ಪೂರಕ ಅಷ್ಟೇ. ತಾಂತ್ರಿಕವಾಗಿ ಕಂಪ್ಯೂಟರ್‌ನಲ್ಲಿ ಕಸರತ್ತು ಮಾಡಿ ಚಿತ್ರಗಳನ್ನು ತಿದ್ದಿದರೆ ಅದು ಕಲೆ ಆಗುವುದಿಲ್ಲ. ಈಗಿನವರು ಒಂದು ಚಿತ್ರ ತೆಗೆದು ಅದನ್ನು ಕಂಪ್ಯೂಟರ್‌ನಲ್ಲಿ ತಿದ್ದಿ ಸರಿ ಮಾಡುತ್ತೇನೆ ಎಂಬ ಹುಂಬ ವಿಚಾರವನ್ನು ತಲೆಯಲ್ಲಿಟ್ಟುಕೊಂಡಿರುತ್ತಾರೆ. ಅದು ಸರಿಯಲ್ಲ. ಛಾಯಾಗ್ರಾಹಕನೊಬ್ಬ ನೆರಳು–ಬೆಳಕಿನ ಬಗ್ಗೆ, ಚಿತ್ರದ ಚೌಕಟ್ಟಿನ ಬಗ್ಗೆ, ವಸ್ತುವಿನ ಬಗ್ಗೆ ಚಿಂತಿಸಿ ನಿಂತನಿಲುವಿನಲ್ಲಿ ತೆಗೆಯುವ ಉತ್ತಮ ಫೋಟೊಗಳನ್ನು ಮಾತ್ರ ಕಲಾತ್ಮಕ ಎನ್ನಬಹುದು. ಬದಲಾಗಿ ಸಾಫ್ಟ್‌ವೇರುಗಳ ಸಹಾಯದಿಂದ ಕಂಪ್ಯೂಟರ್‌ನಲ್ಲಿ ಉತ್ತಮಗೊಳಿಸಿದ ಚಿತ್ರಗಳು ಕಲಾತ್ಮಕವಾಗಲಾರವು. ಹಾಗೆ ಮಾಡುವವರನ್ನು ತಾಂತ್ರಿಕ ನಿಪುಣರೆನ್ನಬಹುದೇ ಹೊರತು ಕಲಾವಿದರೆನ್ನಲಾಗದು.

ಇನ್ನು ಕೆಲವು ಛಾಯಾಗ್ರಾಹಕರು ಪ್ರಶಸ್ತಿಯ ಮಾನದಂಡಗಳಿಗೆ ಅನುಗುಣವಾಗಿ ಚಿತ್ರಗಳನ್ನು ತೆಗೆಯುವವರಾಗಿದ್ದಾರೆ. ಹಾಗೆ ತೆಗೆದ ಚಿತ್ರಗಳಲ್ಲಿ ಕ್ರಿಯಾಶೀಲತೆಯೊಂದನ್ನು ಬಿಟ್ಟು ಉಳಿದೆಲ್ಲವೂ ಇರುತ್ತವೆ. ಆ ಚಿತ್ರಗಳಲ್ಲಿ ಭಾವನೆಗಳು ಗೈರುಹಾಜರಾಗಿರುತ್ತವೆ.

ವನ್ಯಜೀವಿ ಛಾಯಾಗ್ರಹಣದ ಹೊರತಾಗಿ ನಮ್ಮ ಹುಡುಗ ಹುಡುಗಿಯರು ಬೇರೆ ಏನು ಮಾಡಬಹುದು?

ವನ್ಯಜೀವಿ ಛಾಯಾಗ್ರಹಣದ ಹುಚ್ಚಿನಿಂದಾಗಿ ಅನಾಹುತವೇ ಆಗಿದೆ. ಈಗ ಕಾಡು ಎನ್ನುವುದು ಪ್ರವಾಸೋದ್ಯಮದ ತಾಣವಾಗಿದೆ. ಇದರಿಂದಾಗಿ ಕಾಡು ಮತ್ತು ಕಾಡಿನ ಜೀವಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇಂತಹ ಉದ್ಯಮಗಳಿಂದ ಅವುಗಳಿಗೆ ಯಾವ ಪ್ರಯೋಜನವೂ ಇಲ್ಲ. ಇವೆಲ್ಲವೂ ಕೇವಲ ತನಗಾಗಿ ಇವೆ ಎಂಬ ಯೋಚನೆಯನ್ನು ಮನುಷ್ಯ ಮೊದಲು ಬಿಡಬೇಕು.

ಈಗಿನ ಹುಡುಗರ ಮತ್ತೊಂದು ಸಮಸ್ಯೆ ಎಂದರೆ ಇನ್ನೊಂದು ಪರಿಸರ, ಜನರನ್ನೇ ಅವರು ನೋಡುತ್ತಿಲ್ಲ. ಕರ್ನಾಟಕದಲ್ಲಿ ಸಾಕಷ್ಟು ವೈವಿಧ್ಯಮಯ ಊರುಗಳಿವೆ. ಹತ್ತಾರು ಬಗೆಯ ಸಮುದಾಯಗಳು ಕರ್ನಾಟಕದಾದ್ಯಂತ ಇವೆ. ಕಾಡುಪ್ರಾಣಿಗಳ ಹೊರತಾಗಿ ಭಿನ್ನ ಸಮುದಾಯದ ಜನರನ್ನು ನೋಡಿ ಅವರ ಬದುಕಿನ ಕ್ರಮವನ್ನು ಬಿಂಬಿಸುವ ಚಿತ್ರಗಳನ್ನು ನಮ್ಮ ಯುವಸಮುದಾಯ ಸೆರೆಹಿಡಿಯಬಹುದು. ನಮ್ಮ ಲಂಬಾಣಿಗರ, ಹಾಲಕ್ಕಿ ಒಕ್ಕಲಿಗರ ಬದುಕನ್ನು ಚಿತ್ರಿಸುವುದು ಕಾಡಿನ ಜೀವಿಗಳನ್ನು ಚಿತ್ರಿಸುವುದಕ್ಕಿಂತ ಹೆಚ್ಚು ಕುತೂಹಲಕರ ಮತ್ತು ಸವಾಲಿನದು. ಒಂದು ಸಂಸ್ಕೃತಿಯ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವುದು, ಚಿತ್ರಿಸುವುದು ದೊಡ್ಡ ಅನುಭವಲೋಕವನ್ನೇ ನಿಮಗೆ ಕೊಡಬಲ್ಲದು. ಅದು ನಿಮ್ಮನ್ನು ಯಾವತ್ತಿಗೂ ಬೆಳೆಸುತ್ತದೆ, ಭಾವನಾತ್ಮಕವಾಗಿ ಶ್ರೀಮಂತರನ್ನಾಗಿಸುತ್ತದೆ; ಸಂವೇದನೆಗಳನ್ನು ಮೊನಚಾಗಿಸುತ್ತದೆ. ಅಂತಹಕಡೆಗಳಲ್ಲಿ ನೀವು ಹೆಚ್ಚಿನದನ್ನು ಕಲಿಯುತ್ತೀರಿ ಮತ್ತು ಪಡೆಯುತ್ತೀರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು