ಬೆಂಗಳೂರು: ಆಗಸ್ಟ್ 10 ಅನ್ನು ‘ವಿಶ್ವ ಸಿಂಹಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಈ ದಿನವನ್ನು ಜಾಗೃತಿ ದಿನವನ್ನಾಗಿ ಬಳಸಿಕೊಳ್ಳಲಾಗುತ್ತದೆ.
ವಿಶ್ವ ಸಿಂಹಗಳ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಗಿರ್ ಸಿಂಹಗಳ ಆಕರ್ಷಕ ಫೋಟೊಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಜಗತ್ತಿನಾದ್ಯಂತ ಸಿಂಹ ಸಂಕುಲದ ಸಂರಕ್ಷಣೆಯಲ್ಲಿ ತೊಡಗಿಕೊಂಡವರಿಗೆ ಪ್ರತಿಯೊಬ್ಬರಿಗೂ ಧನ್ಯವಾದ. ಗಿರ್ ಸಿಂಹಗಳಿಗೆ ಭಾರತವೇ ನೈಸರ್ಗಿಕ ಆವಾಸಸ್ಥಾನ. ಭಾರತದಲ್ಲಿ ಸಿಂಹಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಗ್ಲೋಬಲ್ ಲಯನ್ ಡೇ ಎಂದು ಜಾಗತಿಕವಾಗಿ ಈ ದಿನವನ್ನು ಆಚರಿಸಲಾಗುತ್ತಿದ್ದು ಪ್ರಸ್ತುತ Union for Conservation of Nature (IUCN) ಪ್ರಕಾರ ಜಗತ್ತಿನಲ್ಲಿ 29 ಸಾವಿರ ಸಿಂಹಗಳಿವೆ.
ಭಾರತದಲ್ಲಿ ಸುಮಾರು 600 ಸಿಂಹಗಳಿವೆ.
On World Lion Day 🦁, I compliment all those working on Lion conservation and reiterate our commitment to protecting these majestic big cats. India, as we all know, is home to a large Lion population in Gir, Gujarat. Over the years, their numbers have increased significantly,… pic.twitter.com/PbnlhBlj71
— Narendra Modi (@narendramodi) August 10, 2024
ಸಿಂಹಗಳ ವಿಶೇಷತೆ?
ಹಲವು ಅಚ್ಚರಿ ಹಾಗೂ ಕೌತುಕಗಳನ್ನು ಒಡಲಲ್ಲಿಟ್ಟುಕೊಂಡು ಕುರುಚಲು ಕಾಡಿನಲ್ಲಿ ಒಂಟಿಯಾಗಿ ಅಲೆಯುವ ಸಿಂಹಗಳ ಘರ್ಜನೆ ಕ್ರಮೇಣ ಕ್ಷೀಣಿಸುತ್ತಿದೆ. ಕಾಡಿನ ಅತಿಕ್ರಮಣ, ಸಿಂಹಗಳ ಆವಾಸಸ್ಥಾನ ನಾಶದಿಂದಾಗಿ ಅವುಗಳ ಸಂತತಿ ನಶಿಸುತ್ತಿದೆ.
ಸಿಂಹ ಒಂಟಿಯಾಗಿ ಅಡ್ಡಾಡುವ ಜಾಯಮಾನದ ಪ್ರಾಣಿ. ಸಂತಾನೋತ್ಪತ್ತಿ ಸಂದರ್ಭದಲ್ಲಿ ಮಾತ್ರ ಸಂಗಾತಿ ಜತೆಗೆ ಕಾಣಿಸಿಕೊಳ್ಳುತ್ತದೆ. ಗುಜರಾತ್ ಗಿರ್ ಅರಣ್ಯದಲ್ಲಿ ಅತಿಹೆಚ್ಚು ಸಿಂಹಗಳಿವೆ. ಹಾಗಾಗಿ, ಸಿಂಹ ಗುಜರಾತ್ ರಾಜ್ಯದ ಹೆಮ್ಮೆ. ಸಿಂಹಗಳಿಗೆ ದಟ್ಟವಾದ ಅರಣ್ಯ ಪ್ರದೇಶ ಇಷ್ಟವಾಗುವುದಿಲ್ಲ. ಕಲ್ಲು ಬಂಡೆಗಳು, ಕುರುಚಲು ಗಿಡಗಳಿರುವ ಕಾಡುಗಳೆಂದರೆ ಅಚ್ಚುಮೆಚ್ಚು.
ಒಂಟಿಯಾಗಿ ಅಡ್ಡಾಡುವ ಸಿಂಹ ತನ್ನ ಆವಾಸ ಅಥವಾ ಗಡಿಯನ್ನು ಗುರುತು ಮಾಡಿಕೊಳ್ಳುತ್ತದೆ. ಅಲ್ಲಿಗೆ ಬರುವ ಇತರ ಸಿಂಹಗಳೊದಿಂಗೆ ಪ್ರಾಣವನ್ನೂ ಲೆಕ್ಕಿಸದೆ ಕಾದಾಡುತ್ತವೆ.
ಸಿಂಹಗಳು ಹಸಿವಾದಾಗಲಷ್ಟೇ ಬೇಟೆಗಿಳಿಯುತ್ತದೆ. ಶೇ 90ರಷ್ಟು ಸಿಂಹಗಳಲ್ಲಿ ಹೆಣ್ಣು ಸಿಂಹಗಳೇ ಬೇಟೆಯಾಡುತ್ತವೆ. ಹೆಣ್ಣು ಬೇಟೆ ಆಡಿದ ಪ್ರಾಣಿಯನ್ನು ತಿನ್ನಲು ಗಂಡು ಹಾಜರಿರುತ್ತದೆ! ಅಂದಹಾಗೆ, ಸಿಂಹ ತುಂಬಾ ಸೋಮಾರಿ. ದಿನದ 24 ಗಂಟೆಗಳಲ್ಲಿ 15ರಿಂದ 16 ಗಂಟೆಗಳ ಕಾಲ ಮಲಗಿಯೇ ಇರುತ್ತದೆ.
ಒಂಟಿ ಸ್ವಭಾದ ಸಿಂಹ ಸಂತಾನಾಭಿವೃದ್ಧಿ ಸಂದರ್ಭದಲ್ಲಿ ಮಾತ್ರ ಸಂಗಾತಿ ಜತೆ ಇರುತ್ತದೆ. ಹೆಣ್ಣು ಸಿಂಹ ಗರ್ಭಧರಿಸಿದ 90 ದಿನಗಳಲ್ಲಿ ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತದೆ. ಕಾಡಿನಲ್ಲಿರುವ ಸಿಂಹಗಳ ಜೀವಿತಾವಧಿ 15ರಿಂದ 16 ವರ್ಷಗಳು ಮಾತ್ರ. ಸಿಂಹ 13–14ನೇ ವರ್ಷಕ್ಕೆ ಕಾಲಿಡುವ ಸಂದರ್ಭದಿಂದ ಹಲ್ಲುಗಳು ಬೀಳಲು ಶುರುವಾಗುತ್ತದೆ. ಬೇಟೆ ಆಡಲು ಕಷ್ಟ. ಈ ಕಾರಣದಿಂದ ಸಾಯುತ್ತವೆ.
ಆದರೆ, ಮೃಗಾಲಯದಲ್ಲಿರುವ ಸಿಂಹ ಗರಿಷ್ಠ 20 ವರ್ಷಗಳ ಕಾಲ ಬದುಕುತ್ತದೆ. 25 ವರ್ಷಗಳ ಬದುಕಿದ ದಾಖಲೆ ಕೂಡ ಇದೆ. ಮೃಗಾಲಯದಲ್ಲಿರುವ ಸಿಂಹಗಳಿಗೆ ರೆಡಿ ಫುಡ್ ಕೊಡುವುದರಿಂದ ಹೆಚ್ಚು ವರ್ಷಗಳ ಕಾಲ ಬದುಕುತ್ತವೆ. ಹಲ್ಲು ಉದುರಿದ ನಂತರ ಬೋನ್‌ಲೆಸ್ ಮಾಂಸ, ಕೈಮಾ ಕೊಡಲಾಗುತ್ತದೆ. ಹಾಗಾಗಿ, ಮೃಗಾಲಯದ ಸಿಂಹಗಳು ಹೆಚ್ಚು ವರ್ಷಗಳ ಕಾಲ ಬದುಕುತ್ತವೆ.
ಸಿಂಹಗಳ ಸಂತತಿಯನ್ನು ನಾಶಮಾಡಲು ಅವುಗಳನ್ನು ಬೇಟೆ ಆಡುವುದೇ ಬೇಕಿಲ್ಲ. ಆವಾಸಸ್ಥಾನವನ್ನು ನಾಶ ಮಾಡಿದರೆ ಸಿಂಹಗಳ ಸಂತತಿ ತಂತಾನೇ ಅವನತಿಯ ಹಾದಿ ಹಿಡಿಯುತ್ತದೆ. ಈ ಕಾರಣದಿಂದಲೇ ಯಾವುದೇ ಒಂದು ಪ್ರಾಣಿ ಬದುಕಲು ಬೇಕಿರುವ ಕನಿಷ್ಠ ಸ್ಥಳಾವಕಾಶವನ್ನು ನಾವು ಒದಗಿಸಿಕೊಡಬೇಕು. ಸಿಂಹಗಳ ಸಂತತಿ ಉಳಿಸಲು ಅಗತ್ಯವಿರುವ ನಿಸರ್ಗದತ್ತ ಆವಾಸಸ್ಥಾನವನ್ನು ಹಾಳುಮಾಡಬಾರದು ಎನ್ನುತ್ತಾರೆ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.