ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುನಾಡ ವನ್ಯಜೀವಿಗಳ ‘ವೈಲ್ಡ್‌ ಕರ್ನಾಟಕ’

ಭಾರತೀಯ ಚಿತ್ರರಂಗದಲ್ಲಿ ಹೊಸ ಪ್ರಯತ್ನ
Last Updated 10 ಜನವರಿ 2020, 19:31 IST
ಅಕ್ಷರ ಗಾತ್ರ
ADVERTISEMENT
""
""
""

ಡಿಸ್ಕವರಿ, ಬಿಬಿಸಿ ಹಾಗೂ ಇನ್ನಿತರ ಚಾನೆಲ್‌ಗಳಲ್ಲಿ ವಿಶ್ವದ ಜೀವವೈವಿಧ್ಯತೆ ಕುರಿತಾದ ಸಾಕ್ಷ್ಯಚಿತ್ರಗಳು ಪ್ರಸಾರವಾಗುತ್ತಿರುತ್ತವೆ. ಈ ಕಾರ್ಯಕ್ರಮಗಳು ಪ್ರಾಣಿ, ಪಕ್ಷಿಗಳ ಸ್ವಭಾವ, ಜೀವನಕ್ರಮಗಳ ಬಗ್ಗೆ ಮಾಹಿತಿ ನೀಡಿ, ಆಸಕ್ತಿಯನ್ನು ಕೆರಳಿಸುತ್ತವೆ. ಈಗ
ಕನ್ನಡನಾಡಿನ ಜೀವವೈವಿಧ್ಯತೆ, ಅರಣ್ಯ ಸಂಪತ್ತು ಹಾಗೂ ಅಪರೂಪದ ಪ್ರಾಣಿ, ಪಕ್ಷಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಅಪರೂಪದ ಕಿರುಚಿತ್ರವೊಂದು ಥಿಯೇಟರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ವನ್ಯಜೀವಿ ಪ್ರೇಮಿಗಳಾದ ಅಮೋಘವರ್ಷ, ಕಲ್ಯಾಣ್‌ರಾಮ್‌ ತಂಡವುರಾಜ್ಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕನ್ನಡ ನಾಡಿನ ವನ್ಯಜೀವಿಗಳ ಕುರಿತು ‘ವೈಲ್ಡ್‌ ಕರ್ನಾಟಕ’ ಎಂಬ ಸಿನಿಮಾ (ಕಿರುಚಿತ್ರ) ತಯಾರಿಸಿದೆ.

ಜ.17ರಂದು 8 ನಗರಗಳಲ್ಲಿನ ಎಲ್ಲಾ ಪಿವಿಆರ್‌ ಸಿನಿಮಾಸ್‌ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ನಗರದಲ್ಲಿ ಒರಾಯನ್‌, ಪಿವಿಆರ್‌ ಮಾರ್ಕೆಟ್‌ಸಿಟಿ, ಮಹದೇವಪುರದ ವಿಆರ್‌ ಬೆಂಗಳೂರು, ವೇಗಾ ಸಿಟಿ ಸೇರಿದಂತೆ ಪಿವಿಆರ್‌ ಸಿನಿಮಾಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಭಾರತೀಯ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವನ್ಯಜೀವಿಗಳ ಸಿನಿಮಾವೊಂದುಕಮರ್ಷಿಯಲ್‌ ಸಿನಿಮಾಗಳಂತೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದುಈ ಸಿನಿಮಾದ ವಿಶೇಷ.52 ನಿಮಿಷಗಳ ಸಿನಿಮಾದಲ್ಲಿ ಪಶ್ಚಿಮ ಘಟ್ಟ, ಕಬಿನಿ, ಬಳ್ಳಾರಿ, ಕೊಪ್ಪಳ, ಅರಬ್ಬಿ ಸಮುದ್ರ, ನೇತ್ರಾಣಿ ದ್ವೀಪದ ಅಪರೂಪದ ಪ್ರಾಣಿ, ಪಕ್ಷಿಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ.

ಇಂತಹ ಅಪರೂಪದ ಪ್ರಯತ್ನಕ್ಕೆ ಕೈಹಾಕಿದ ಅಮೋಘವರ್ಷ ಅವರಿಗೆ ಸಾಥ್‌ ನೀಡಿದವರು ವನ್ಯಜೀವಿ ಛಾಯಾಗ್ರಾಹಕರು, ಪರಿಸರವಾದಿಗಳಾದ ಕಲ್ಯಾಣ್‌ ವರ್ಷ, ವಿಜಯ್‌ ಮೋಹನ್‌ರಾಜ್‌, ಶರತ್‌ ಚಂಪಾತಿ. ಹಾಗೇ ಈ ಸಿನಿಮಾಕ್ಕೆ ಖ್ಯಾತ ಪರಿಸರವಾದಿ ಸರ್‌ ಡೇವಿಡ್‌ ಅಟೆನ್‌ಬರ್ಗ್‌ ಅವರ ಹಿನ್ನೆಲೆ ಧ್ವನಿ, ಸಿನಿಮಾಟೋಗ್ರಾಫಿ ಇದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್‌ ಅವರು ಹಿನ್ನಲೆ ಸಂಗೀತ ನೀಡಿದ್ದಾರೆ. ಮಡ್‌ಸ್ಕಿಪ್ಪರ್‌ ಹಾಗೂ ಐಕಾನ್‌ ಫಿಲ್ಮ್ಸ್‌ ಈ ಚಿತ್ರಕ್ಕೆ ಬಂಡವಾಳ ಹೂಡಿವೆ.

ಸಿನಿಮಾದ ವಿಶೇಷತೆ
ಈ ಚಿತ್ರದಲ್ಲಿ ಕರ್ನಾಟಕದ ಬೇರೆ ಬೇರೆ ಕಾಡು, ಪ್ರದೇಶಗಳ 400ಕ್ಕೂ ಹೆಚ್ಚು ಅಪರೂಪದ ಜೀವಿಗಳ ವಿಡಿಯೊ ದೃಶ್ಯಗಳಿವೆ. ಸಿನಿಮಾದಲ್ಲಿ ಪ್ರಾಣಿಗಳ ಅಪರೂಪದ ಸ್ವಭಾವ, ಜೀವನಕ್ರಮ ಹಾಗೂ ಇಲ್ಲಿತನಕ ಆ ಜೀವಿಗಳ ಬಗ್ಗೆ ಯಾರಿಗೂ ಗೊತ್ತಿರದ ಕೆಲ ಸಂಗತಿಗಳನ್ನು ತೋರಿಸಲಾಗಿದೆ. ದೃಶ್ಯಗಳು ಸಾಗುತ್ತಿದ್ದಂತೆ ಹಿನ್ನೆಲೆಯಲ್ಲಿ ಆ ಪ್ರಾಣಿಗಳ ಪರಿಚಯ ಹಾಗೂ ಸಂಗತಿಗಳ ಬಗ್ಗೆ ಮಾಹಿತಿಯನ್ನು ಅಟೆನ್‌ಬರ್ಗ್‌ ಧ್ವನಿಯಲ್ಲಿ ಕೇಳಬಹುದು.

ನಾಲ್ಕು ವರ್ಷಗಳ ಶ್ರಮ
ಈ ಸುಂದರ ಸಿನಿಮಾದ ಹಿಂದೆ ಅಮೋಘವರ್ಷ ಹಾಗೂ ಅವರ ತಂಡ, 15 ಕ್ಯಾಮೆರಾಮನ್‌ಗಳ ನಾಲ್ಕು ವರ್ಷಗಳ ಶ್ರಮವಿದೆ. ಜಲಚರಗಳನ್ನು ಸೆರೆ ಹಿಡಿಯಲು ಸಮುದ್ರ ಹಾಗೂ ನದಿಯೊಳಗೆ ಚಿತ್ರೀಕರಣ ಮಾಡಲಾಗಿದೆ. ಹಾಗೇ ಕಾಡಿನಲ್ಲಿ ಏರಿಯಲ್‌, ಹಿಡನ್‌ ಕ್ಯಾಮೆರಾ, ಕೆಲವೊಂದು ಕಡೆ ಪ್ರಾಣಿಗಳಿಗೆ ಅರಿವಿಗೆ ಬರದಂತೆ ಅಡಗಿ ಕುಳಿತು ಪ್ರಾಣಿಗಳ ಚಲನ ವಲನ, ಸ್ವಭಾವವನ್ನು ಚಿತ್ರೀಕರಣ ಮಾಡಲಾಗಿದೆ.

‘ಪಶ್ಚಿಮ ಘಟ್ಟದಲ್ಲಿ ಕುಂಬಾರ ಕಪ್ಪೆ ಎಂಬ ಜಾತಿಯ ಕಪ್ಪೆಗಳು ರಾತ್ರಿ 9 ಗಂಟೆ ನಂತರ ಹೊರಬರುತ್ತವೆ. ಆದರೆ ನಾವು ಅಧ್ಯಯನ ಮಾಡುವ ವರ್ಷ ಮಳೆಯೇ ಬರಲಿಲ್ಲ. ಹಾಗಾಗಿ ಅದಕ್ಕಾಗಿ 1 ವರ್ಷ ಕಾದಿದ್ದೇವೆ. ಆನೆಗಳ ಬಗ್ಗೆ ತಿಳಿದುಕೊಳ್ಳಲು ಸುಮಾರು 3–4 ತಿಂಗಳು ಕಾದಿದ್ದೇವೆ. ಹೀಗೆ ಕೆಲವು ಪ್ರಾಣಿಗಳಿಗಾಗಿ ವಾರಗಟ್ಟಲೆ ಕಾದಿದ್ದೇವೆ’ ಎಂದು ಅಮೋಘವರ್ಷ ತಮ್ಮ ವಿಶಿಷ್ಟ ಅನುಭವ ಹಂಚಿಕೊಂಡರು.

‘ನಮಗೆ ಎದುರಾದ ದೊಡ್ಡ ಸಮಸ್ಯೆ ಹವಾಮಾನ ವೈಪರೀತ್ಯದ್ದು. ಚಳಿಗಾಲ ಆರಂಭವಾದರೂ ಮಳೆ ನಿಂತಿರಲಿಲ್ಲ. ಬೆಟ್ಟ, ಕಾಡಿನೊಳಗೆ ಹೋದಾಗ ಮಳೆ, ಜಿಗಣೆ ಕಾಟ, ಭೂಕುಸಿತ ಆಗುತ್ತಿತ್ತು. 10–20 ಕೆ.ಜಿ ಕ್ಯಾಮೆರಾಗಳನ್ನು ಬೆನ್ನಿಗೆ ಕಟ್ಟಿಕೊಂಡು ಹೋಗಬೇಕಾಗಿತ್ತು’ ಎಂದು ಚಿತ್ರೀಕರಣ ಸಂದರ್ಭದಲ್ಲಿ ಎದುರಾದ ಕಷ್ಟಗಳನ್ನು ಹೇಳಿಕೊಂಡರು.

ವನ್ಯಜೀವಿ ಚಿತ್ರೀಕರಣ, ಫೋಟೊಗ್ರಫಿ ಮಾಡುವಾಗ ಪ್ರಾಣಿಗಳ ಸ್ವಭಾವದ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕು. ಅವುಗಳ ವಾಸಸ್ಥಾನಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು ಹಾಗೇ ಅವುಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ವ್ರತದಂತೆ ಪಾಲಿಸಿದ್ದಾರೆ.

ವೈಲ್ಡ್‌ ಲೈಫ್‌ ಪೋಸ್ಟರ್‌

ಸಿನಿಮಾ ಮಾಡಲು ಹೊರಟಾಗ ಈ ಪ್ರಯತ್ನ ಸಫಲ ಆಗುತ್ತಾ ಎಂಬ ಪ್ರಶ್ನೆ ಕಾಡುತ್ತಿತ್ತು. ನಿರೀಕ್ಷಿಸಿದಂತೆ ಕೆಲಸ ಸಾಗುತ್ತಿರಲಿಲ್ಲ.
ಕೆಲ ಪ್ರಾಣಿಗಳಿಗೆ ಕಾಯುವ ಸಂದರ್ಭದಲ್ಲಿ ತಂಡದ ಸದಸ್ಯರ ಹುರುಪು, ಉತ್ಸಾಹ ಕಡಿಮೆಯಾಗುತ್ತಿತ್ತು. ಆದರೆ ಇದೆಲ್ಲವನ್ನೂ
ಮೀರಿ ಈಗ 52 ನಿಮಿಷದ ಸುಂದರ ಸಿನಿಮಾ ತಯಾರಾಗಿದೆ ಎನ್ನುವಾಗ ಅವರ ಮೊಗದಲ್ಲಿ ಸಂತಸ ಮತ್ತು ಸಾರ್ಥಕತೆ ಕಂಡುಬಂತು.

‘ಸಿನಿಮಾದ ಹಿಂದೆ ದುಡ್ಡು ಮಾಡುವ ಉದ್ದೇಶವಿಲ್ಲ. ವನ್ಯಜೀವಿ ಶ್ರೀಮಂತಿಕೆ ತೋರಿಸುವ ಜೊತೆಗೆ ಅವುಗಳ ಬಗ್ಗೆ ತಿಳಿವಳಿಕೆ, ಜ್ಞಾನ ಹೆಚ್ಚಿಸುವುದು ನಮ್ಮ ಉದ್ದೇಶ. ವಿದೇಶಗಳಲ್ಲಿ ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ಇದೆ. ಆದರೆ ನಮ್ಮಲ್ಲಿ ಅಂತಹ ಸಿನಿಮಾಗಳಿಗೆ ಪ್ರೋತ್ಸಾಹವಿಲ್ಲ’ ಎಂಬುದು ಅಮೋಘವರ್ಷ ಅವರ ಬೇಸರದ ಮಾತು.

ಈ ಸಿನಿಮಾವನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮಾತ್ರವಲ್ಲದೇ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌, ಕೋಲ್ಕತ್ತ, ಕೊಚ್ಚಿ, ಪುಣೆ, ನಾಗಪುರ, ಚಂಡೀಗಡ ಸೇರಿದಂತೆ ನಾನಾ ಭಾಗಗಳಲ್ಲಿ ಪ್ರದರ್ಶನ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಕಂಪ್ಯೂಟರ್‌ ಬಿಟ್ಟು ಕ್ಯಾಮೆರಾ ಹಿಡಿದ ಅಮೋಘ
ಪ್ಯೂಟರ್‌ ಸೈನ್ಸ್‌ ಎಂಜಿನಿಯರ್‌ ಆಗಿದ್ದ ಅಮೋಘವರ್ಷ ಅವರಿಗೆ ವನ್ಯಜೀವಿ ಫೋಟೊಗ್ರಫಿ ಪ್ರವೃತ್ತಿಯಾಗಿತ್ತು. ಕೆಲಸದ ಏಕತಾನತೆಯಿಂದ ಹೊರಬಂದು ಅವರು, ಫೋಟೊಗ್ರಫಿಯನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು. ನ್ಯಾಷನಲ್‌ ಜಿಯೋಗ್ರಫಿ ಹಾಗೂ ಬಿಬಿಸಿಯಲ್ಲಿ ಕೆಲಸ ಮಾಡಿದ ಅವರು ವನ್ಯಜೀವಿ ಕುರಿತು 10ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.

ಕರ್ನಾಟಕದ ಕಾಡಿನಲ್ಲಿರುವ ಹುಲಿಗಳ ಬಗ್ಗೆ ‘ಹುಲಿ’, ದಾಂಡೇಲಿ ಕಾಳಿ ನದಿ, ಭದ್ರಾ ನದಿ ದಂಡೆಯಲ್ಲಿರುವ ಪಕ್ಷಿಗಳ ಬಗ್ಗೆ ಹೀಗೆ ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರು ಹವಾಮಾನ ವೈಪರೀತ್ಯ ಬಗ್ಗೆ ತಯಾರಿಸಿರುವ ಸಾಕ್ಷ್ಯಚಿತ್ರವು ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆ ಹಾಗೂ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಬಿಡುಗಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್‌ ಅಧ್ಯಕ್ಷ ಮೊದಲಾದವರು ಸಾಕ್ಷಿಯಾಗಿದ್ದರು.

ಇವರ ತಂಡದಲ್ಲಿ ಕೆಲಸ ಮಾಡಿದ ಕಲ್ಯಾಣ್‌ ವರ್ಮಾ ಅವರೂ ವನ್ಯಜೀವಿ ಛಾಯಾಗ್ರಾಹಕ ಹಾಗೂ ಸಿನಿಮಾ ನಿರ್ದೇಶಕ. ಇವರು ವನ್ಯಜೀವಿ ಹಾಗೂ ಪರಿಸರ ಕುರಿತು ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಖ್ಯಾತ ನಿಯತಕಾಲಿಕೆ, ಪರಿಸರರಕ್ಷಣೆ ಸಂಬಂಧಿಸಿದ ಸ್ವಯಂಸೇವಾ ಸಂಸ್ಥೆ, ನ್ಯಾಷನಲ್‌ ಜಿಯೋಗ್ರಫಿ, ಬಿಬಿಸಿ ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದಾರೆ.

ಅಮೋಘವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT