ಸೋಮವಾರ, ಏಪ್ರಿಲ್ 12, 2021
26 °C
ಆವಾಸ ಕುಗ್ಗಿ ಸಂತತಿಗೆ ಎದುರಾಗಿದೆ ಅಪಾಯ

ವಿಶ್ವ ಗುಬ್ಬಚ್ಚಿ ದಿನ: ಕಾಂಕ್ರಿಟ್ ಕಾಡಿನಲ್ಲಿ ಕ್ಷೀಣಿಸಿದ ಚಿಂವ್ ಚಿಂವ್ ಸದ್ದು

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಗುಬ್ಬಿ ಗುಬ್ಬಿ ಗುಬ್ಬಚ್ಚಿ ಚಿಂವ್ ಚಿಂವ್ ಅಂತ ಒದರುತ್ತಿ ಪುಟ್ಟಗೂಡು ಕಟ್ಟಿಕೊಂಡು ಚಿಕ್ಕದಾಗಿ ಇರುತ್ತಿ...

ಡಾ.ಪ್ರಭು ಗಂಜಿಹಾಳ್ ಅವರ ಈ ಪುಟ್ಟ ಕವನ ಗುಬ್ಬಚ್ಚಿ ಜೀವನ ಶೈಲಿಯನ್ನು ಸರಳವಾಗಿ ಕಟ್ಟಿಕೊಡುತ್ತದೆ. ಸದಾ ಲವಲವಿಕೆಯಿಂದ ಕುಣಿಯುವ, ಜಾಗವೇ ಇಲ್ಲದ ಪುಟ್ಟ ಗೂಡಿನಲ್ಲಿ ಮೆರೆಯುವ ಇದರ ಸಂಭ್ರಮ ನಮ್ಮ ಬದಕಿಗೂ ಪಾಠವಾಗಬಲ್ಲದು. ಕಾಂಕ್ರೀಟ್‌ ಕಾಡಿನ ಭರಾಟೆಯಲ್ಲಿ ಅಪರೂಪವಾಗುತ್ತಿರುವ ಗುಬ್ಬಚ್ಚಿಗಳಿಗಾಗಿಯೇ ಮೀಸಲಾಗಿರುವ ದಿನ ‘ಮಾರ್ಚ್-20’.

ಕಾಣದ ಗುಬ್ಬಚ್ಚಿಗಳು: ತಾಲ್ಲೂಕಿನ ಸುತ್ತಮುತ್ತಲೂ ಗುಬ್ಬಚ್ಚಿಗಳು ಭತ್ತದ ಕಟಾವು ಮುಗಿಯುತ್ತಿದ್ದಂತೆ ಒಂದೊಂದೇ ಹುಲ್ಲಿನ ತುಂಡು ಹೆಕ್ಕುತ್ತ ಸಾಗುವ ತವಕ ಸೋಜಿಗವನ್ನು ಉಂಟುಮಾಡುತ್ತಿತ್ತು. ಮುಂಗಾರಿಗೂ ಮುನ್ನ ಗೂಡು ಕಟ್ಟಿಕೊಂಡು ಮರಿಗಳೊಡನೆ ಹಾಡುವ ಗಾನದ ಪುಳಕಕ್ಕೆ ಮಕ್ಕಳು ಕಿವಿಯಾನಿಸಿ ಆಲಿಸುತ್ತಿದ್ದರು. ಬಿಸಿಲಿನ ಬೇಗೆ ಏರುತ್ತಿದ್ದಂತೆ ಪುಟ್ಟ ಪುಟ್ಟ ನೀರಿನ ಒರತೆಗಳ ಬಳಿ ಮಿಂದೆದ್ದು ಸಂಭ್ರಮಿಸುವ ಗುಬ್ಬಿಗಳ ಕಿಚಕಿಚ ಶಬ್ದ ಮಕ್ಕಳ ಸ್ಫೂರ್ತಿಗೆ ಕಾರಣವಾಗುತ್ತಿತ್ತು. ಗೆಳೆಯರ ಗುಂಪು ಹಿಗ್ಗುತ್ತ ಪುಟ್ಟ ಹಕ್ಕಿಯ ಹಾಡಿಗೆ ಧ್ವನಿಯಾಗುತ್ತಿತ್ತು. ಆದರೆ, ಇಂತಹ ಸಂತಸ-ಸಡಗರ ತಂದೊಡ್ಡುತ್ತಿದ್ದ ಗುಬ್ಬಚ್ಚಿ ಸಂಸಾರದ ಗುನುಗು, ಗುಂಗು ಈಗ ಕಾಣದಾಗಿದೆ. ಮಾನವ ಸಂಪರ್ಕಕ್ಕೆ ಸದಾ ಹಾತೊರೆಯುತ್ತಿದ್ದ ಗುಬ್ಬಚ್ಚಿಗಳ ಆವಾಸದಲ್ಲಿ ಆಗುತ್ತಿರುವ ಪಲ್ಲಟದಿಂದ ಇವುಗಳ ಸಂತತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿದೆ.

ಗ್ರಾಮೀಣ ಭಾಗಗಳ ಮನೆಯಂಗಳಗಳಲ್ಲಿ ಈಗಲೂ ನೇಸರನ ಆಗಮನದೊಂದಿಗೆ ಚೆಲ್ಲಾಟ ಆಡುವ ಹಕ್ಕಿಗಳನ್ನು ಕಾಣಬಹುದು. ಅವುಗಳಲ್ಲಿ ಗುಬ್ಬಚ್ಚಿಗಳದ್ದೇ ಕಾರುಬಾರು. ಮುಂಜಾನೆ ಬಂದು ಕಾಳು ಹೆಕ್ಕಿ ಪರಿಸರವನ್ನು ಸ್ವಚ್ಛಗೊಳಿಸುತ್ತವೆ. ಈಗ ಗುಂಪುಗಳಿಗೆ ಬದಲಾಗಿ ಬೆರಳೆಣಿಕೆಯಲ್ಲಿ ಆಗಮಿಸುತ್ತಿವೆ. ಬರುತ್ತಲೇ ಚಿಂವ್ ಚಿಂವ್ ಸಂಗೀತದ ಲಹರಿ ಹರಿಸುತ್ತವೆ. ತನ್ನ ಬಳಗಕ್ಕೆ ಬೇಕಾದ ಆಹಾರ ಅರಸುತ್ತದೆ. ಈಗಲೂ, ಭಯ ಇಲ್ಲದೆ ಜನ ಜಂಗುಳಿಯ ನಡುವೆ ಹಾದು ಬರುವ ಗುಬ್ಬಚ್ಚಿಗಳ ದರ್ಶನ ನಿಸರ್ಗದ ಚಲುವನ್ನು ವಿಸ್ತರಿಸುತ್ತದೆ ಎನ್ನುತ್ತಾರೆ ಪಕ್ಷಿ ಪ್ರಿಯರು.

ಕುಸಿದ ಆವಾಸ– ಹಿಗ್ಗಿದ ಸಿಮೆಂಟ್ ದಾರಿ: ಗುಬ್ಬಚ್ಚಿಗಳ ಆವಾಸ ಮಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಪಕ್ಷಿ ಸಂಶೋಧಕರು, ವೀಕ್ಷಕರು ಮತ್ತು ಪರಿಸರ ಪ್ರಿಯರು ಇದಕ್ಕೆ ಕಾರಣಗಳನ್ನು ಹುಡುಕುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಧಾನ್ಯದ ಒಕ್ಕಣೆ ಯಾಂತ್ರೀಕರಣದಿಂದ ಕಾಳು, ಬೇಳೆ ಸಿಗುವುದೇ ಈ‌ಗ ಕಷ್ಟವಾಗಿದೆ. ಪಟ್ಟಣದ ಅಂಗಡಿ-ಮುಂಗಟ್ಟುಗಳ ಬಳಿ ಚೆಲ್ಲುತ್ತಿದ್ದ ದವಸ ಧಾನ್ಯಗಳನ್ನು ಸಿಮೆಂಟ್ ರಸ್ತೆಯಲ್ಲಿ ಹುಡುಕುವುದೇ ಸವಾಲಾಗಿದೆ.

ಗೋಣಿ ಚೀಲ ಹುಡುಕಿ ಆಹಾರ ಸೇವಿಸುತ್ತಿದ್ದ ದಿನಗಳು ಕಾಣೆಯಾಗಿವೆ. ಪ್ಲಾಸ್ಟಿಕ್ ಬ್ಯಾಗ್‌ಗಳ ಭರಾಟೆಯಿಂದ ದೈನಂದಿನ ಅಕ್ಕಿ-ರಾಗಿ ಇವುಗಳು ಹುಡುಕಾಟಕ್ಕೆ ನಿಲುಕದಾಗಿವೆ. ನಗರಗಳ ಮನೆ ನಿರ್ಮಾಣ ಶೈಲಿ ಗ್ರಾಮೀಣ ಪ್ರದೇಶಗಳ ರಸ್ತೆ, ಬಡವಾಣೆಗಳು ಕಾಂಕ್ರೀಟ್‌ನಿಂದ ಸಜ್ಜುಗೊಂಡು ನಿಸರ್ಗಸ್ನೇಹಿ ನೆಲೆಗಳು ಅಳಿಯುತ್ತಿವೆ. ಸಿಮೆಂಟ್ ಹಾದಿಗಳಲ್ಲಿ ಗಿಡ, ಮರ, ಬಳ್ಳಿಗಳು ಅಸ್ತಿತ್ವ ಕಳೆದುಕೊಂಡು, ಗುಬ್ಬಿಗಳಿಗೆ ಸೂಕ್ತ ಸ್ಥಳಾವಕಾಶಕ್ಕೂ ಕಂಟಕವಾಗಿದೆ ಎನ್ನುತ್ತಾರೆ ಪಕ್ಷಿತಜ್ಞರು.

ಗುಬ್ಬಚ್ಚಿ ಉಳಿಸಲು ನಾವೇನು ಮಾಡಬಹುದು?
‘ಬೇಸಿಗೆ ಅವಧಿಯಲ್ಲಿ ಮನೆಗಳ ಮುಂದೆ ಶುದ್ಧ ನೀರು ಮತ್ತು ಕಾಳನ್ನು ಇಟ್ಟು ಗುಬ್ಬಚ್ಚಿಗಳ ಜೀವ ಸಂಕುಲವನ್ನು ಉಳಿಸಬೇಕು. ತಾರಸಿ ಕಟ್ಟಡಗಳ ಬಳಿಯೂ ಗೂಡುಗಳ ಮಾದರಿಯನ್ನು ಇಟ್ಟು ಸಂರಕ್ಷಣೆಗೆ ಮುಂದಾಗಬೇಕು. ಕೃಷಿಯಲ್ಲಿ ಕೀಟ ನಾಶಕಗಳ ಬಳಕೆ ನಿಯಂತ್ರಿಸಬೇಕು.  ಇದರಿಂದ ಹುಳು-ಹುಪ್ಪಟೆ ಹೆಚ್ಚು ದೊರೆತು ಗುಬ್ಬಚ್ಚಿಗಳ ಆವಾಸ ಹಿಗ್ಗುತ್ತದೆ. ಬೆಳೆಗಳನ್ನು ಕಾಡುವ ಕೀಟಗಳನ್ನು ಜೈವಿಕವಾಗಿ ಹತೋಟಿ ಮಾಡಲು ಸಾಧ್ಯವಾಗುತ್ತದೆ’ ಎಂದು ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು