ಬುಧವಾರ, ಸೆಪ್ಟೆಂಬರ್ 22, 2021
22 °C

PV Web Exclusive: ಪಾಚಿ ಚೆಂಡಿನ ಪಯಣದ ಕತೆ!

ಅಮೃತ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಅಲಾಸ್ಕಾದ ನೀರ್ಗಲ್ಲು ಪ್ರದೇಶದಲ್ಲಿ ಪಾಚಿ ಮೆತ್ತಿದ ಚೆಂಡುಗಳು ನಡೆಯಲು ಶುರು ಮಾಡಿವೆ!. ಹೌದು, ‘ಗ್ಲೇಸಿಯರ್ ಮಿಸ್’ ಎಂದು ಕರೆಯಲಾಗಿರುವ ಈ ಚೆಂಡುಗಳ ದೈನಂದಿನ ಪಯಣದ ಮರ್ಮ ಅರಿಯಲು ವಿಜ್ಞಾನಿಗಳಲ್ಲಿ ಹೆಣಗಾಡುತ್ತಿದ್ದಾರೆ. 

ನಿಧಾನವಾಗಿ ಹರಿಯುವ ಹಿಮನದಿಗಳು ಬೃಹತ್ ಪ್ರಮಾಣದ ಹಿಮ ಹಾಗೂ ಮಂಜುಗಡ್ಡೆಯ ಸಂಗ್ರಹಾಗಾರಗಳು. ತುಂಬಾ ಶೀತ ಇರುವ ಕಾರಣ, ಹಿಮನದಿಗಳಲ್ಲಿ ವಾಸಿಸುವುದು ಅತ್ಯಂತ ಕಠಿಣ. ಆದರೆ ಗ್ಲೇಸಿಯರ್ ಮಿಸ್‌ಗಳು ಇದಕ್ಕೆ ಅಪವಾದ. ಹಿಮನದಿಗಳಲ್ಲಿ ವಾಸ್ತವ್ಯ ಹೂಡಿರುವ ಜತೆಜತೆಗೆ ಅವುಗಳ ನಡಿಗೆ ಕುತೂಹಲಕ್ಕೆ ಕಾರಣವಾಗಿದೆ. 

ಪಾಚಿ ಚೆಂಡುಗಳು ಹುಟ್ಟುಹಾಕಿರುವ ಪ್ರಶ್ನೆಗಳು ಹಲವಿವೆ. ಅವು ಹೇಗೆ ರೂಪುಗೊಳ್ಳುತ್ತವೆ? ಅವು ಬದುಕುಳಿಯುವುದು ಹೇಗೆ? ಅವು ಗೋಳಾಕಾರದಲ್ಲಿ ಇರುವುದು ಏಕೆ? ಅವು ಚಲಿಸುವುದಾದರೂ ಹೇಗೆ? ಅವು ಒಟ್ಟೊಟ್ಟಿಗೆ ಸ್ಥಾನಪಲ್ಲಟ ಮಾಡುವುದಾದರೂ ಏಕೆ? ಎಂಬಿತ್ಯಾದಿ ಕುತೂಹಲಭರಿತ ಪ್ರಶ್ನೆಗಳು ಕಾಡುತ್ತವೆ. 

ಸಮತಟ್ಟಾದ ಮೇಲ್ಮೈ ಮೇಲೆ ಪಾಚಿ ಹಬ್ಬುವುದು ಸಹಜ. ನೆಲ ಅಥವಾ ಇತರೆ ಮೇಲ್ಮೈನಲ್ಲಿ ಅದು ಬೆಳೆಯುತ್ತದೆ. ಇದು ಒಟ್ಟಿಗೆ ಸೇರಿಕೊಂಡಿರುವ ಅನೇಕ ಸಣ್ಣ ಪಾಚಿ ಸಸ್ಯಗಳ ಸಂಗ್ರಹವಾಗಿದೆ. ಉಳಿದ ಸಸ್ಯಗಳಂತೆ ಪಾಚಿಯು ತನ್ನ ದೇಹದ ಮೂಲಕ ನೀರನ್ನು ಹರಿಸುವುದಿಲ್ಲ. ಅದು ಸ್ಪಂಜಿನಂತೆ ನೀರನ್ನು ಹೀರಿಕೊಳ್ಳುತ್ತದೆ. ಆದರೆ ಟೆನಿಸ್ ಚೆಂಡಿನ ರೂಪದಲ್ಲಿ ಅಂಡಾಕಾರವಾಗಿ ಬೆಳೆದಿರುವ ಪಾಚಿ ಸಸ್ಯಗಳು ಹಿಮಾವೃತ ನದಿಗಳ ಮೇಲ್ಮೈನಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ. 

ನೈಸರ್ಗಿಕ ಪಾಚಿಯು ಸಾಮಾನ್ಯವಾಗಿ ಹಿಮನದಿಯಲ್ಲಿ ರೂಪುಗೊಳ್ಳುವುದಿಲ್ಲ. ಆದರೆ ಈಗ ಕಂಡುಬಂದಿರುವ ಪಾಚಿಯು ಬಹುಶಃ ದೂಳಿನ ಕಣಗಳನ್ನು ಆವರಿಸಿಕೊಂಡು ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ ಕೊರೆಯುವ ಶೀತದ ಕಾರಣ ಮಂಜುಗಡ್ಡೆಯ ಮೇಲೆ ಅದು ಹೆಚ್ಚು ಹೊತ್ತು ಇರಲು ಸಾಧ್ಯವಿಲ್ಲ. ಹೀಗಾಗಿ ಪಾಚಿಯು ಚೆಂಡಿನ ರೂಪ ತಾಳಿದ್ದು, ಉರುಳಲು ಸಾಧ್ಯವಾಗುವ ಹಾಗೆ ರೂಪುಗೊಂಡಿದೆ. ಉರುಳಿದಾಗ, ಒಮ್ಮೆಗೆ ಒಂದು ಭಾಗವಷ್ಟೇ ಮಂಜುಗಡ್ಡೆಯನ್ನು ಸ್ಪರ್ಶಿಸುತ್ತದೆ. ಹೀಗಾಗಿ ಉಳಿದ ಭಾಗಗಳು ಅತಿಶೀತದ ಪರಿಣಾಮದಿಂದ ಪಾರಾಗುತ್ತವೆ. ಆಗ ಪಾಚಿ ಬದುಕುಳಿಯುದೆ ಎಂಬುದು ವಿಜ್ಞಾನಿಗಳ ಮಾತು. 

ಈ ಪಾಚಿ ಚೆಂಡುಗಳು ಸಾಮಾನ್ಯವಾಗಿ ತೆಳುವಾದ ನೀರ್ಗಲ್ಲಿನ ಮೇಲೆ ಆಶ್ರಯ ಪಡೆದಿರುತ್ತವೆ. ಬಿಸಿಲಿನಿಂದ ನೀರ್ಗಲ್ಲು ಕರಗಲು ಶುರುವಾಗುತ್ತಿದ್ದಂತೆ, ಚೆಂಡು ನಿಧಾನವಾಗಿ ಉರುಳಲು ಶುರು ಮಾಡುತ್ತದೆ. 

2009ರಲ್ಲಿ ವಿಜ್ಞಾನಿಗಳು ಗ್ಲೇಸಿಯರ್ ಮಿಸ್ ಅಧ್ಯಯನ ಶುರು ಮಾಡಿದರು. 30 ಚೆಂಡುಗಳಿಗೆ ಉಪಕರಣವೊಂದನ್ನು ಕಟ್ಟಿದ್ದರು. ಪಾಚಿ ಚೆಂಡು ಉರುಳಿದಂತೆಲ್ಲಾ, ಎಲ್ಲಿ ಹೋಗುತ್ತಿದೆ ಎಂಬ ಮಾಹಿತಿಯು ದಾಖಲಾಗುತ್ತಿತ್ತು. ಪಾಚಿ ಚೆಂಡು ದಿನಕ್ಕೆ 2.5 ಸೆಂಟಿಮೀಟರ್ ಚಲಿಸುತ್ತದೆ ಎಂದು ತಿಳಿದುಬಂದಿತು. ಪ್ರತಿ ಚಂಡುಗಳು ಹೇಗೆಬೇಕೋ ಹಾಗೆ ಚಲಿಸುತ್ತವೆ ಎಂಬ ವಿಜ್ಞಾನಿಗಳ ಊಹೆ ತಪ್ಪಾಗಿತ್ತು. ಅವು ಒಂದು ತಂಡವಾಗಿ ಪಯಣಿಸುತ್ತವೆ. ಒಂದೇ ದಿಕ್ಕಿನಲ್ಲಿ, ಒಂದೇ ವೇಗದಲ್ಲಿ ಹಾಗೂ ಸಮಾನ ದೂರದಲ್ಲಿ ಅವು ಸ್ಥಾನ ಬದಲಾಯಿಸುತ್ತವೆ. ಪ್ರಾಣಿಗಳ ಹಿಂಡಿನ ಹಾಗೆ. 

ಅವು ಉರುಳುವುದು ಏಕಾಗಿ ಎಂಬ ಬಗ್ಗೆ ಮೂರ್ನಾಲ್ಕು ಮಾದರಿಗಳನ್ನು ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ತಗ್ಗು ಇದ್ದ ಕಡೆಗೆ ಚಲಿಸುವುದು, ಗಾಳಿಯ ನೂಕುವಿಕೆಯಿಂದ ಚಲನೆ, ಸೂರ್ಯನನ್ನು ಅನುಸರಿಸಿ ಪಯಣ. ಆದರೆ ಈ ಯಾವ ಸಿದ್ಧಾಂತಗಳೂ ಪಾಚಿ ಚೆಂಡು ಚಲನೆಗೆ ನಿಖರ ಉತ್ತರ ಒದಗಿಸಲಿಲ್ಲ. ಮುಂದಿನ ದಿನಗಳಲ್ಲಿ ಟೈಮ್ ಲ್ಯಾಪ್ಸ್ ಕ್ಯಾಮರಾಗಳನ್ನು ಬಳಸಿ ಪರೀಕ್ಷೆ ನಡೆಸಲು ವಿಜ್ಞಾನಿಗಳು ಯೋಚಿಸಿದ್ದಾರೆ. 

ಪಾಚಿ ಚೆಂಡುಗಳು ಇರುವುದೇ ವಿರಳ. ಹವಾಮಾನ ಬದಲಾವಣೆಯಿಂದಾಗಿ ಅನೇಕ ಹಿಮನದಿಗಳು ಕರಗುತ್ತಿದ್ದು, ಅವುಗಳನ್ನು ಪತ್ತೆಹಚ್ಚುವುದು ಇನ್ನೂ ಕಷ್ಟವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು