ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟದ ತಪ್ಪಲಿನಲ್ಲೂ ವಿಪರೀತ ಧಗೆ

ಬೇಸಿಗೆಯ ತಾಪಕ್ಕೆ ನಲುಗಿದ ಹಳ್ಳಿಗರು
Last Updated 12 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ಗುಂಟ ಬೇಸಿಗೆ ತಾಪ ಜನರನ್ನು ಹೈರಾಣಾಗಿಸಿದ್ದರೆ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಹಳ್ಳಿಗರನ್ನೂ ಈ ಬಾರಿಯ ತಾಪಮಾನ ಕಂಗೆಡಿಸಿದೆ.

ಮಾರ್ಚ್‌ನಿಂದ ಮೇವರೆಗೆ ಕಡಲ ತೀರದ ಊರುಗಳು ಅಕ್ಷರಶಃ ಕೆಂಡದಂತಾಗುತ್ತವೆ. ಆದರೆ, ಈ ಬಾರಿ ಕರಾವಳಿ ಮಾತ್ರವಲ್ಲ, ಕಾಡನ್ನು ಆವರಿಸಿಕೊಂಡ ಹಳ್ಳಿಗಳಲ್ಲಿ ಫೆಬ್ರುವರಿ ತಿಂಗಳಿನಿಂದಲೇ ಆಗುತ್ತಿರುವ ಧಗೆಯ ಅನುಭವ ಈಗ ಅಸಹನೀಯವಾಗುತ್ತಿದೆ.

‘ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಸುಳ್ಯದಲ್ಲಿ ದಶಕದ ಹಿಂದೆ ಬೇಸಿಗೆಯಲ್ಲಿ ಗರಿಷ್ಠ ತಾಪಮಾನ 27–28 ಡಿಗ್ರಿಯಷ್ಟು ಇರುತ್ತಿತ್ತು. ಕಳೆದ ವರ್ಷ ಬೇಸಿಗೆಯಲ್ಲಿ ಈ ಭಾಗದಲ್ಲಿ ಗರಿಷ್ಠ 38 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಈ ವರ್ಷ ಮಾರ್ಚ್ ಕೊನೆಯ ಹೊತ್ತಿಗೆ 33 ಡಿಗ್ರಿ ಉಷ್ಣಾಂಶ ದಾಖಲಾಗಿದೆ’ ಎನ್ನುತ್ತಾರೆ ನ್ಯಾಷನಲ್ ಎನ್ವಿರಾನ್‌ಮೆಂಟ್ ಕೇರ್ ಫೌಂಡೇಷನ್ (ಎನ್‌ಇಸಿಎಫ್) ಪ್ರಧಾನ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ.

‘ಪ್ರಾಕೃತಿಕ ಸಮತೋಲನಕ್ಕೆ ಪ್ರತಿರೋಧವೊಡ್ಡಿ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿ, ಗಣಿಗಾರಿಕೆಯಂತಹ ಚಟುವಟಿಕೆ ನಡೆಸಿರುವ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. ಕಾನ, ಬಾನ, ಗೋಮಾಳ ಜಾಗಗಳನ್ನೂ ಬಿಡದೆ, ಅತಿಕ್ರಮಣ ಮಾಡಲಾಗುತ್ತಿದೆ. ಕಾಡಿಗೆ ಹಾಕುವ ಬೆಂಕಿ, ಹೆಚ್ಚುತ್ತಿರುವ ರಬ್ಬರ್ ತೋಟಗಳು, ತಾಪಮಾನ ಹೆಚ್ಚಳದಲ್ಲಿ ಪ್ರತಿಫಲಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಬೇಸಿಗೆಯಲ್ಲೂ ಹಿತವಾದ ಅನುಭವ ನೀಡುತ್ತಿದ್ದ ಕಾಡಿನ ಪ್ರದೇಶಗಳು ಈಗ ಬೆಂಕಿಯ ಚೆಂಡಿನಂತಾಗಿವೆ. ಮುಂಗಾರು ಮುಗಿಯುವ ವೇಳೆಗೆ ಸೆಕೆಯ ಅನುಭವವಾಗುತ್ತದೆ. ಕಾಡಿನಲ್ಲಿರುವ ಹುಲ್ಲಿನ ಹೊದಿಕೆ ಕಣ್ಮರೆಯಾಗುತ್ತಿದೆ. ನೀರಿಂಗುವ ಜಲಾನಯನ ಪ್ರದೇಶಗಳನ್ನು ರೆಸಾರ್ಟ್, ಅರಣ್ಯ ಒತ್ತುವರಿ, ಜಲವಿದ್ಯುತ್ ಯೋಜನೆಗಳು ಆಕ್ರಮಿಸಿವೆ. ವಿವಿಧೆಡೆ ಭೂ ಕುಸಿತವಾದ ಮೇಲೆ, ಭೂಮಿಯೊಳಗಿನ ಮಣ್ಣು, ಕಲ್ಲು ಸೂರ್ಯನ ಬೆಳಕಿಗೆ ತೆರದುಕೊಂಡಿದೆ. ಗಿಡ ಮರಗಳ ಮೇಲೆ ಬೀಳುತ್ತಿದ್ದ ಸೂರ್ಯ ಕಿರಣ ನೇರವಾಗಿ ಕಲ್ಲು–ಮಣ್ಣಿನ ಮೇಲೆ ಬೀಳುವ ಪರಿಣಾಮ ಉಷ್ಣತೆ ಹೆಚ್ಚಾಗುತ್ತಿದೆ’ ಎಂದು ಪರಿಸರ ಕಾರ್ಯಕರ್ತ ದಿನೇಶ ಹೊಳ್ಳ ತಿಳಿಸಿದರು.

‘ಜನರಿಗೆ ಕಾಡಿನ ಕಾಳಜಿ ಕಡಿಮೆಯಾಗಿದೆ. ಪಶ್ಚಿಮಘಟ್ಟದ ಕಾಡು, ಕರಾವಳಿ ಬಯಲುಸೀಮೆಗೆ ತಂಪನ್ನು ರವಾನಿಸುತ್ತದೆ. ಈ ಪ್ರದೇಶವೇ ಉಷ್ಣವಾದಾಗ ಇಡೀ ವಾತಾವರಣದಲ್ಲಿ ತಾಪದ ಅಧಿಕವಾಗುತ್ತದೆ. ಹೀಗಾಗಿ, ಈಗ ಕರಾವಳಿ, ಮಲೆನಾಡು, ಬಯಲುಸೀಮೆ ಎಲ್ಲವೂ ಒಂದೇ ಆಗಿವೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪ್ರಾಕೃತಿಕ ವ್ಯವಸ್ಥೆ ರಕ್ಷಣೆಯಾಗಲಿ’

ಕಾಡು ನಾಶ, ಭೂ ಬಳಕೆಯಲ್ಲಿ ಬದಲಾವಣೆ, ಮಳೆಗಾಲದಲ್ಲಿ ವ್ಯತ್ಯಾಸದಂತಹ ಅನೇಕ ಕಾರಣಗಳು ಪರಿಸರ ಅಸಮತೋಲನ ಸೃಷ್ಟಿಸಿವೆ. ಬೇಸಿಗೆಯಲ್ಲಿ ಬರಿದಾಗುವ ನದಿಗಳು, ತೊರೆಗಳು ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತವೆ. ನೈಸರ್ಗಿಕ ಕಾಡು, ಜೀವವೈವಿಧ್ಯಗಳ ತದ್ರೂಪಿ ನಿರ್ಮಾಣ ಅಸಾಧ್ಯವಾಗಿರುವುದರಿಂದ ಇರುವ ಪ್ರಾಕೃತಿಕ ವ್ಯವಸ್ಥೆಯನ್ನು ರಕ್ಷಿಸಬೇಕು ಎನ್ನುತ್ತಾರೆ ಭೂಗರ್ಭ ಶಾಸ್ತ್ರಜ್ಞ ಡಾ. ಜಿ.ವಿ.ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT