ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಮೀನಂಗಡಿ ಗ್ರಾಮ ಪಂಚಾಯ್ತಿಯೂ ‘ಇಂಗಾಲ ತಟಸ್ಥತೆ’ಯ ಮಾದರಿಯೂ..

Last Updated 30 ಅಕ್ಟೋಬರ್ 2020, 6:58 IST
ಅಕ್ಷರ ಗಾತ್ರ

‘ಕೇರಳದ ಊಟಿ’ ಎಂದೇ ಪ್ರಸಿದ್ಧವಾದ, ಕರ್ನಾಟಕ ಮತ್ತು ತಮಿಳುನಾಡಿನ ಗಡಿಗಳನ್ನು ಹಂಚಿಕೊಂಡಿರುವ ಆ ರಾಜ್ಯದ ಏಕೈಕ ಜಿಲ್ಲೆಯಾದ ವೈನಾಡುವಿನಲ್ಲಿರುವ ಮೀನಂಗಡಿ ಎಂಬ ಗ್ರಾಮ ಪಂಚಾಯ್ತಿಯು 2020 ಮುಗಿಯುವ ಹೊತ್ತಿಗೆ ಇಂಗಾಲ ತಟಸ್ಥತೆ ಸಾಧಿಸಲೇಬೇಕೆಂಬ ಗುರಿಯತ್ತ ಮುನ್ನುಗ್ಗುತ್ತಿದೆ.

---

ಮೀನಂಗಡಿ ಗೊತ್ತೆ? ‘ಹೌದು, ಎಲ್ಲರಿಗೂ ಗೊತ್ತು. ಮೀನು ಮಾರಾಟ ಮಾಡುವ ಸ್ಥಳವಲ್ಲದೆ ಮತ್ತೇನು’ ಎಂದು ನೀವು ಕೇಳಬಹುದು. ಆದರೆ ಇಲ್ಲಿ ಹೇಳಲು ಹೊರಟಿರುವುದು ಅಂಗಡಿ ಬಗ್ಗೆಯಷ್ಟೇ ಅಲ್ಲ. ಕೇರಳದ ಒಂದು ವಿಶೇಷ ಗ್ರಾಮ ಪಂಚಾಯ್ತಿ ಬಗ್ಗೆ. ಅದರ ಹೆಸರೇ ಮೀನಂಗಡಿ. ಹೆಸರಿಗೆ ತಕ್ಕಂತೆ ಮೀನು ಮತ್ತು ಜಾನುವಾರು ಮಾರುಕಟ್ಟೆಗೂ ಅದು ಪ್ರಖ್ಯಾತವೇ.

ಜಾಗತಿಕ ಹವಾಮಾನ ವೈಪರೀತ್ಯ ಮತ್ತು ತಾಪಮಾನದ ಏರಿಕೆಯಿಂದ ಜೀವಸಂಕುಲದ ಮೇಲೆ ಆಗುತ್ತಿರುವ ಅನಾಹುತಕಾರಿ ಪರಿಣಾಮಗಳನ್ನು ತಡೆಯಲು ಇಂಗಾಲದ ತಟಸ್ಥತೆಯನ್ನು (carbon neutrality) ಸಾಧಿಸುವುದೇ ಏಕೈಕ ದಾರಿ ಎಂಬ ಪ್ರತಿಪಾದನೆ ಗಂಭೀರವಾಗಿ ನಡೆಯುತ್ತಿರುವ ಕಾಲಘಟ್ಟದಲ್ಲಿ ಈ ಪಂಚಾಯ್ತಿಯು ಆ ದಾರಿಯಲ್ಲಿ ನಡೆಯಲಾರಂಭಿಸಿ ನಾಲ್ಕು ವರ್ಷವನ್ನು ಪೂರ್ಣಗೊಳಿಸುತ್ತಿದೆ.

ಉತ್ತರ ಕೇರಳದ ಪಶ್ಚಿಮಘಟ್ಟಗಳ ಪರಿಸರದ ನಡುವಿನ ಪಂಚಾಯ್ತಿಯು ನಗರ ಪ್ರದೇಶಗಳಾದ ಕಲ್‌ಪೆಟ್ಟ ಮತ್ತು ಸುಲ್ತಾನ್‌ ಬತೇರಿ ನಡುವಿನ ಜಿಲ್ಲಾ ಕೇಂದ್ರದಲ್ಲೇ ಇದೆ. ಕೋಲ್ಕತ್ತಾ–ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ಕೂಡ ಈ ಪಂಚಾಯಿತಿ ಮೂಲಕವೇ ಹಾದುಹೋಗಿದೆ. ಹೀಗಾಗಿ ಇಲ್ಲಿ ವಾಣಿಜ್ಯ ಚಟುವಟಿಕೆಗಳೂ ಹೆಚ್ಚು.

4 ಸಣ್ಣ ನದಿಗಳು ಮತ್ತು 23 ಕಿರುತೊರೆಗಳ ನೀರಿನಿಂದ ಸಂಪನ್ನವಾದ ಈ ಪ್ರದೇಶದಲ್ಲಿ ವಾರ್ಷಿಕ 221 ಸೆಂಟಿಮೀಟರ್‌ ಮಳೆ ಬೀಳುತ್ತದೆ. 4,919 ಹೆಕ್ಟೇರ್‌ ಪ್ರದೇಶದಲ್ಲಿ ಕರಿಮೆಣಸು, ಕಾಫಿ, ತೆಂಗು, ರಬ್ಬರ್, ಭತ್ತ, ಶುಂಟಿ, ಹರಿಶಿನವನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ.

2011ರ ಜನಗಣತಿ ಪ್ರಕಾರ 33,450 ಜನಸಂಖ್ಯೆಯುಳ್ಳ ಈ ಪಂಚಾಯ್ತಿ ವ್ಯಾಪ್ತಿಯಲ್ಲಿರುವುದು ಎರಡೇ ಗ್ರಾಮಗಳು. ಒಂದು ಪುರಕ್ಕಡಿ, ಇನ್ನೊಂದು ಕೃಷ್ಣಗಿರಿ. ಇಲ್ಲಿನ ಶೇ 76 ಜನ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ.

‘ಕೇರಳದ ಊಟಿ’ ಎಂದೇ ಪ್ರಸಿದ್ಧವಾದ, ಕರ್ನಾಟಕ ಮತ್ತು ತಮಿಳುನಾಡಿನ ಗಡಿಗಳನ್ನು ಹಂಚಿಕೊಂಡಿರುವ ಆ ರಾಜ್ಯದ ಏಕೈಕ ಜಿಲ್ಲೆಯಾದ ವೈನಾಡುವಿನಲ್ಲಿ ಮೀನಂಗಡಿ ಇದೆ. ‘ರೈಲು ಹಳಿಗಳೇ ಇಲ್ಲ’ವೆಂಬ ಖ್ಯಾತಿಯೂ ಉಳ್ಳ ಜಿಲ್ಲೆಯ ಕಲ್‌ಪೆಟ್ಟ ತಾಲ್ಲೂಕಿನ ಈ ಪಂಚಾಯ್ತಿಯಲ್ಲಿ 2016ರ ಜೂನ್‌ 5ರಂದು ನಡೆದ ವಿಶ್ವ ಪರಿಸರ ದಿನಾಚರಣೆಯಂದು ಶುರುವಾದ, ಕೇರಳ ರಾಜ್ಯದ ಅನನ್ಯವಾದ ಪ್ರಾಯೋಗಿಕ ಯೋಜನೆಯು ಇಡೀ ದೇಶದ ಮಟ್ಟಿಗೆ ಒಂದು ದಾಖಲೆಯಾಗಿ ಪರಿಣಮಿಸಿದೆ.

ಏಕೆಂದರೆ, 2020ರ ವೇಳೆಗೆ ಈ ಪಂಚಾಯ್ತಿಯನ್ನು ಸಂಪೂರ್ಣವಾಗಿ ಇಂಗಾಲ ತಟಸ್ಥತೆ ಏರ್ಪಟ್ಟ ಪ್ರದೇಶವನ್ನಾಗಿ ಪರಿವರ್ತಿಸುವ ಕಾರ್ಯಕ್ರಮ ಶುರುವಾಗಿದ್ದು ಅಂದಿನಿಂದಲೇ. 2015ರ ಪ್ಯಾರಿಸ್‌ ಜಾಗತಿಕ ಹವಾಮಾನ ಒಪ್ಪಂದ ಏರ್ಪಟ್ಟ ಮರುವರ್ಷವೇ ಮೀನಂಗಡಿಯಲ್ಲಿ ಯೋಜನೆ ಆರಂಭವಾಗಿದೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.

ಒಪ್ಪಂದದಲ್ಲಿ ಇರಬೇಕೋ ಅಥವಾ ಬೇಡವೋ ಎಂಬ ಬಗ್ಗೆ ವಿವಿಧ ದೇಶಗಳು ಪ್ರಕಟಿಸುತ್ತಿರುವ ಭಿನ್ನಾಭಿಪ್ರಾಯಗಳ ನಡುವೆಯೇ ಈ ಪಂಚಾಯ್ತಿಯು ತನ್ನ ಗುರಿಸಾಧನೆಯ ವಿಶ್ಲೇಷಣೆಯ ಹೊಸ್ತಿಲಲ್ಲಿದೆ.

ಪರಿಸರದ ಉಷ್ಣಾಂಶವೆಲ್ಲವನ್ನೂ ಹಿಡಿದಿಟ್ಟುಕೊಂಡು ಭೂಮಿಯ ತಾಪಮಾನವನ್ನು ಹೆಚ್ಚಿಸುವ ಹಸಿರು ಮನೆ ಅನಿಲವನ್ನು (green house gas) ನಿಯಂತ್ರಿಸಲು ಇಂಗಾಲ ತಟಸ್ಥತೆಯಿಂದಷ್ಟೇ ಸಾಧ್ಯ ಎಂಬ ಹಿನ್ನೆಲೆಯಲ್ಲಿ, ಯೂರೋಪಿಯನ್‌ ಒಕ್ಕೂಟ 2050ರ ವೇಳೆಗೆ ಈ ತಟಸ್ಥತೆಯನ್ನು ಸಾಧಿಸುವ ನಿರ್ಧಾರವನ್ನು 2020ರ ಅ.7ರಂದು ಕೈಗೊಂಡಿದೆ. 2030ರ ವೇಳೆಗೆ ಕಾರ್ಬನ್‌ ಹೊರಸೂಸುವಿಕೆಯನ್ನು ಶೇ 60ರಷ್ಟು ತಗ್ಗಿಸುವ ಗುರಿಯನ್ನೂ ಹಾಕಿಕೊಂಡಿದೆ. ಆದರೆ ಭಾರತದ ಸಾಮಾನ್ಯ ಗ್ರಾಮ ಪಂಚಾಯ್ತಿಯಾದ ಮೀನಂಗಡಿ ಈ ಒಕ್ಕೂಟಕ್ಕಿಂತ ಬಹಳ ಮುಂದೆ ಹೋಗಿ ಆಗಿದೆ!

ಇದು ತನ್ನ ಅರಣ್ಯ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯ ಜೊತೆಗೇ ನಡೆದಿರುವ ಪರಿಸರಸ್ನೇಹಿ ಪಯಣ. ಗ್ರೀನ್‌ ಕೇರಳ ಎಕ್ಸ್‌ಪ್ರೆಸ್‌ ರಿಯಾಲಿಟಿ ಶೋನ ಟಾಪ್‌ ಐದು ಪಂಚಾಯ್ತಿಗಳಲ್ಲಿ ಒಂದಾಗಿದ್ದುದು ಈ ಪಯಣದ ಹೆಗ್ಗಳಿಕೆಗಳಲ್ಲೊಂದು.

ಈಗ ಈ ಕಾರ್ಯಕ್ರಮ ಹೇಗೆ ಅನುಷ್ಠಾನಗೊಂಡಿದೆ ಮತ್ತು ಇಲ್ಲಿನ ಜನ ಸಮುದಾಯದ ಪ್ರಜ್ಞೆ ಮತ್ತು ಪರಿಸರದಲ್ಲಿ ಅದರ ಫಲಶೃತಿ ಏನು ಎಂಬುದರ ಮೌಲ್ಯಮಾಪನಕ್ಕೆ ಪಂಚಾಯ್ತಿ ಸಿದ್ಧವಾಗುತ್ತಿದೆ.

ಹೀಗಾಗಿ, 2021– ದೇಶದ ಉಳಿದೆಲ್ಲ ಪಂಚಾಯ್ತಿಗಳಿಗೆ ಎಂದಿನಂತೆ ಹೊಸ ವರ್ಷವಷ್ಟೇ ಆಗಿದ್ದರೆ, ಮೀನಂಗಡಿಯು ನಿಜವಾದ ಅರ್ಥದಲ್ಲಿ ಪರಿಸರಸ್ನೇಹಿಯಾದ ಒಂದು ಹೊಸ ಜೀವನಶೈಲಿಯ ಮಾದರಿಯನ್ನು ಜಗತ್ತಿಗೆ ಅನಾವರಣ ಮಾಡಲಿದೆ.

ಆಧುನಿಕ ನಾಗರಿಕತೆಯ ಸಾಮಾಜಿಕ, ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳು ಸೇರಿದಂತೆ ಎಲ್ಲದ್ದರಲ್ಲೂ ಇಂಗಾಲದ ಹೊರಸೂಸುವಿಕೆ ಮತ್ತು ಹೀರಿಕೊಳ್ಳುವಿಕೆಯ ನಡುವೆ ಸಮತೋಲನ ಕಾಪಾಡಿಕೊಳ್ಳುವುದನ್ನೇ ಇಂಗಾಲದ ತಟಸ್ಥತೆ ಎಂದು ಕರೆಯಲಾಗುತ್ತದೆ. ಪರಿಸರವನ್ನು ಕಸಮುಕ್ತ ಮತ್ತು ಹೊಗೆಮುಕ್ತವನ್ನಾಗಿ ಮಾಡುವುದೇ ಇಂಗಾಲ ತಟಸ್ಥತೆಯ ಪ್ರಮುಖ ಉದ್ದೇಶ.

ಇಂಗಾಲದ ಹೊರಸೂಸುವಿಕೆ ಹೆಚ್ಚಾದಷ್ಟೂ, ಅದನ್ನು ಹೀರಿಕೊಳ್ಳುವ ಸಾಮರ್ಥ್ಯ ಪರಿಸರದಲ್ಲಿ ಕಡಿಮೆಯಾದಷ್ಟೂ ಜೀವ ಸಂಕುಲದ ಆರೋಗ್ಯ ಕೆಡುತ್ತದೆ. ಈಗಾಗಲೇ ಸಾಕಷ್ಟು ಕೆಟ್ಟಿದೆ. ಕೆಟ್ಟ ಆರೋಗ್ಯವನ್ನು ಸರಿಪಡಿಸಿ ಸುಸ್ಥಿರಗೊಳಿಸುವ ಚಿಕಿತ್ಸಕ ಪ್ರಯತ್ನ ಮೀನಂಗಡಿಯದ್ದು.

ಮೀನಂಗಡಿಯೇ ಏಕೆ?

ಇಷ್ಟೆಲ್ಲ ತಿಳಿದ ಬಳಿಕ, ಕೇರಳ ಸರ್ಕಾರ ತನ್ನ ಪ್ರಾಯೋಗಿಕ ಯೋಜನೆಗೆ ಮೀನಂಗಡಿ ಪಂಚಾಯ್ತಿಯನ್ನೇ ಏಕೆ ಆಯ್ಕೆ ಮಾಡಿತು ಎಂಬ ಪ್ರಶ್ನೆ ಸಹಜ.

ಕೇರಳ ಸರ್ಕಾರದ, ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ (SAPCC: State Action Plan on Climate Change) ಪ್ರಕಾರ, ರಾಜ್ಯದ ಹವಾಮಾನ ಬದಲಾವಣೆಯ ನಾಲ್ಕು ಹಾಟ್‌ಸ್ಪಾಟ್‌ಗಳಲ್ಲಿ ವೈನಾಡು ಕೂಡಾ ಒಂದು.

ಜೀವವೈವಿಧ್ಯತೆ ಮತ್ತು ಜನಸಮುದಾಯದ ಮೇಲೆ ಅನಾಹುತಕಾರಿ ಪರಿಣಾಮ ಬೀರಬಲ್ಲ ಪ್ರವಾಹ, ಬರಗಾಲ ಏರ್ಪಡುವ ಸಾಧ್ಯತೆ ಇಲ್ಲಿ ಹೆಚ್ಚು. ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಭೂಮಿಯ ತಾಪಮಾನ 2050 ವೇಳೆಗೆ 2 ಡಿಗ್ರಿ ಸೆಲ್ಶಿಯಸ್‌ನಿಂದ 4.5 ಡಿಗ್ರಿ ಸೆಲ್ಶಿಯಸ್‌ಗೆ ಹೆಚ್ಚಾಗುವ ಅಪಾಯವೂ ಇದೆ.

ಹೆಚ್ಚಾಗುವ ತಾಪಮಾನದ ಪ್ರತಿ ಡಿಗ್ರಿ ಸೆಲ್ಶಿಯಸ್‌ಗೂ ರಾಜ್ಯದಲ್ಲಿ ಭತ್ತದ ಉತ್ಪಾದನೆ ಪ್ರಮಾಣ ಶೇ 6ರಷ್ಟು ಕುಸಿಯುವ ಸಾಧ್ಯತೆ ಇದೆ.ಅತಿಯಾದ ಉಷ್ಣಾಂಶ ಮತ್ತು ಮಳೆಯ ಏರುಪೇರಿನ ಪರಿಣಾಮವಾಗಿ, ಹವಾಮಾನ ಆಧಾರಿತ ಬೆಳೆಗಳಾದ ಏಲಕ್ಕಿ, ಕಾಫಿ, ಟೀ. ಕರಿಮೆಣಸು ಬೆಳೆಗಳ ಮೇಲೂ ದುಷ್ಪರಿಣಾಮ ಬೀರಬಹುದು ಎಂದು ಸರ್ಕಾರ ಅಂದಾಜಿಸಿತ್ತು.

2015ರ ಪ್ಯಾರಿಸ್‌ ಒಪ್ಪಂದದ ಬಳಿಕ ನಡೆದ ಚರ್ಚೆಯಲ್ಲಿ ಕೇರಳದ ಪರಿಸರ ತಜ್ಞರು, ವೈನಾಡು ಜಿಲ್ಲೆಯ ಪಂಚಾಯ್ತಿಗಳ ಮುಖಂಡರು, ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆಯೂ ‘ಮುಂದೇನು’ ಎಂಬ ಪ್ರಶ್ನೆ ಎದ್ದಿತ್ತು.

ಆಗ ಅಚ್ಚರಿಯ ಪ್ರಯತ್ನವೆಂಬಂತೆ ಮೀನಂಗಡಿ ಪಂಚಾಯ್ತಿಯ ಪ್ರತಿನಿಧಿಗಳು ‘ಇಂಗಾಲ ತಟಸ್ಥತೆ’ಯ ಯೋಜನೆಯನ್ನು ಮುಂದಿಟ್ಟರು. ಒಣಗುತ್ತಿರುವ ಭತ್ತದ ಗದ್ದೆಗಳು, ಬರಗಾಲ, ಅತಿಯಾದ ಬಿಸಿಲು, ವಾಡಿಕೆ ಮಳೆಯ ಏರಿಳಿತಗಳ ನಡುವೆ ನಲುಗಿದ ಏಲಕ್ಕಿ, ಕರಿಮೆಣಸು, ಕಾಫಿ ತೋಟಗಳ ಪರಿಸ್ಥಿತಿಯನ್ನು ವಿವರಿಸಿದರು. ಅದಕ್ಕೆ ರಾಜ್ಯಸರ್ಕಾರದ ಸಹಮತವೂ ದೊರಕಿತು. ಥನಲ್‌ ಸ್ವಯಂಸೇವಾ ಸಂಸ್ಥೆಯು ಯೋಜನೆಯ ರೂಪರೇಷೆಯನ್ನು ತಯಾರಿಸಿಕೊಟ್ಟಿತು.

ಆ ನಂತರದ ಮೂರು ತಿಂಗಳ ಕಾಲ, 2020ರ ವೇಳೆಗೆ ಮೀನಂಗಡಿಯನ್ನು ವಿಷಾನಿಲ ಮತ್ತು ಕಸ ಮುಕ್ತ ಹಾಗೂ ಇಂಗಾಲ ತಟಸ್ಥ ಸಮಾಜವನ್ನಾಗಿ ಮರುರೂಪಿಸುವ ಕುರಿತ ರೂಪುರೇಷೆಗಳು ಸಿದ್ಧವಾದವು. ಅದಕ್ಕೆ ವಯನಾಡಿನ ಎಂ.ಎಸ್‌.ಸ್ವಾಮಿನಾಥನ್‌ ರಿಸರ್ಚ್‌ ಫೌಂಡೇಶನ್‌ –ಕಮ್ಯುನಿಟಿ ಬಯೋ ಡೈವರ್ಸಿಸಿ ಸೆಂಟರ್‌ ಜೊತೆಯಾಯಿತು. ನಂತರ ಹೊಳೆದದ್ದು ದಾರಿ, ಉಳಿದದ್ದು ಆಕಾಶ!

ಕೈಗಾರಿಕೆಗಳು ಮತ್ತು ತಂತ್ರಜ್ಞಾನ, ಇಂಧನ ಮತ್ತು ಸಾರಿಗೆ, ಸಮಗ್ರ ಸಂಪನ್ಮೂಲ ಮತ್ತು ತ್ಯಾಜ್ಯ ನಿರ್ವಹಣೆ, ಮಣ್ಣು ಮತ್ತು ನೀರು, ಕೃಷಿ ಮತ್ತು ಆಹಾರ, ಜವಾಬ್ದಾರಿಯುತ ಪ್ರವಾಸೋದ್ಯಮ, ಅರಣ್ಯಗಳು ಮತ್ತು ಜೀವವೈವಿಧ್ಯತೆ, ಪ್ರಕೃತಿ ವಿಕೋಪಗಳ ನಿರ್ವಹಣೆ, ನಷ್ಟಗಳನ್ನು ಭರಿಸುವ ದಾರಿಗಳು.. ಹೀಗೆ ಹಲವು ವಿಭಾಗ ಕ್ರಮಗಳಲ್ಲಿ ಯೋಜನೆಯ ಅನುಷ್ಠಾನದ ಪ್ರಯತ್ನಗಳು ಆರಂಭವಾದವು.

ಕನ್ನೂರು ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ತಜ್ಞರು ಮಣ್ಣು ಸಸ್ಯಗಳಲ್ಲಿ ಇಂಗಾಲದ ಪ್ರಮಾಣವನ್ನು ಪತ್ತೆ ಹಚ್ಚುವ ಕೆಲಸ ಮಾಡಿದರು. 20 ದಿನಗಳ ಸಮೀಕ್ಷೆಗಾಗಿ ಕೇರಳ ಕೃಷಿ ವಿಶ್ವವಿದ್ಯಾಲಯವು ಪಂಚಾಯ್ತಿಯ ವಾರ್ಡ್‌ಗಳನ್ನು ಗುರುತಿಸುವ ಕೆಲಸವನ್ನು ಆರಂಭಿಸಿತು. ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯಿಂದ ಮುಕ್ತವಾದ ಸಾವಯವ ಕೃಷಿ ಭೂಮಿ ನಿರ್ಮಾಣ ಪ್ರಯತ್ನಗಳು ಶುರುವಾದವು. ಶುದ್ಧ ಆಹಾರ ಉತ್ಪಾದನೆಯ ಜೊತೆಗೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯ ದಾರಿಗಳ ಶೋಧನೆಯೂ ನಡೆಯಿತು.

ಅರಣ್ಯ ಭೂಮಿಯನ್ನು ಬೆಳೆಸಲೆಂದೇ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ‘ಪುಣ್ಯವನ’ ಕಾರ್ಯಕ್ರಮ ರೂಪುಗೊಂಡ ಪರಿಣಾಮವಾಗಿ ಪಂಚಾಯ್ತಿಯ ಮುಖ್ಯ ದೇವಾಲಯದ 38 ಎಕರೆ ದೊಡ್ಡ ಕಾಡಾಗಿ ಪರಿವರ್ತನೆಯಾಯಿತು. ಸಾಮಾಜಿಕ ಅರಣ್ಯವನ್ನು ಸಮೃದ್ಧಗೊಳಿಸುವ ಸಲುವಾಗಿಯೇ ಪಂಚಾಯ್ತಿಯು ಗ್ರಾಮಸ್ಥರಿಗೆ ಲಕ್ಷಾಂತರ ಸಸಿಗಳನ್ನು ವಿತರಿಸಿತು. ಲಕ್ಷಾಂತರ ಮರಗಳಿಗೆ ಜಿಯೋ ಟ್ಯಾಗ್‌ ಅಳವಡಿಸಲಾಗಿದ್ದು, ಪ್ರತಿ ಆರು ತಿಂಗಳು ಮತ್ತು ವರ್ಷಕ್ಕೆ ಅವುಗಳ ಬೆಳವಣಿಗೆಯನ್ನೂ ದಾಖಲಿಸಲಾಗುತ್ತಿದೆ.

ಕಸವನ್ನು ಪ್ರತ್ಯೇಕಿಸಿ ಸಾವಯವ ಗೊಬ್ಬರವನ್ನಾಗಿಸುವ ಪ್ರಯತ್ನವೂ ಪಂಚಾಯ್ತಿಯಲ್ಲಿ ನಿರಂತರವಾಗಿ ನಡೆಯಿತು. ವಾಣಿಜ್ಯ ಪ್ರದೇಶ ಮತ್ತು ಮಾರುಕಟ್ಟೆಗಳಿಂದ ದಿನವೂ 1 ಟನ್‌ನಷ್ಟು ಕಸವನ್ನು ಸಂಗ್ರಹಿಸುತ್ತಿದ್ದ ಪಂಚಾಯ್ತಿಯು ಅದರ ಸಂಸ್ಕರಣೆಗೆಂದೇ ಬೃಹತ್‌ ಘಟಕವನ್ನೂ ಸ್ಥಾಪಿಸಿತು. ಮನೆಗಳಲ್ಲೇ ಕಸ ನಿರ್ವಹಣೆ ಹಾಗೂ ಸಾವಯವ ಗೊಬ್ಬರ ಉತ್ಪಾದನೆಗಾಗಿ ‘ಪಾಟ್‌ ಕಾಂಪೊಸ್ಟ್‌’ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ಬೀದಿಗಳಿಗೆ ಎಲ್‌ಇಡಿ ದೀಪಗಳನ್ನೇ ಅಳವಡಿಸಲಾಯಿತು.

ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮನೆಗಳಿಂದ ಸಂಗ್ರಹಿಸಲೆಂದೇ ‘ಹರಿತ ಕರ್ಮ ಸೇನಾ’ ರೂಪುಗೊಂಡಿತು. ಅವರು ಸಂಗ್ರಹಿಸಿ ಪ್ರತ್ಯೇಕಿಸುವ ಈ ತ್ಯಾಜ್ಯವನ್ನು ಡಾಂಬರನ್ನಾಗಿ ಪರಿವರ್ತಿಸಿ ರಸ್ತೆ ದುರಸ್ತಿಗೂ ಬಳಸಿರುವುದು ವಿಶೇಷ.

ಪಂಚಾಯ್ತಿಯು ವಿವಿಧೆಡೆ ಸುಮಾರು 500 ಕೃಷಿ ಹೊಂಡಗಳನ್ನು ನಿರ್ಮಿಸಿತು. ಈ ಹೊಂಡಗಳಲ್ಲಿ ಮೀನುಕೃಷಿಯೂ ಶುರುವಾಯಿತು. ₹ 80 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸಿದ ಬಳಿಕ, ಶವಸಂಸ್ಕಾರಕ್ಕೆ ಸೌದೆಗಳ ಅತಿಯಾದ ಬಳಕೆಯೂ ನಿಂತಿತು.
ಕಾರ್ಯಕ್ರಮದ ಅನುಷ್ಠಾನದ ಸಲುವಾಗಿಯೇ ಪಂಚಾಯ್ತಿಯು ತನ್ನ ವ್ಯಾಪ್ತಿಯ ಪ್ರದೇಶದ ಸಮಗ್ರ ಸಸ್ಯ ಸಂಕುಲ ಗಣತಿಯನ್ನೂ ನಡೆಸಿದೆ. ಮಣ್ಣು ಮತ್ತು ಇಂಧನದ ಆಡಿಟ್‌ ಮಾಡಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಿದೆ. ಜನರಿಗೆ ಪ್ಲಾಸ್ಟಿಕ್‌ ಮುಕ್ತ ಜೀವನ ಶೈಲಿಯನ್ನು ಹೇಳಿಕೊಟ್ಟಿದೆ.

ಮತ್ತೆ ಪರಿಸರಕ್ಕೆ ಮರಳುವ ಅನನ್ಯವಾದ ಸಮುದಾಯದ ಜೀವನಶೈಲಿಯು ನಾಲ್ಕು ವರ್ಷ ಪೂರ್ಣಗೊಳಿಸುತ್ತಿದೆ. ಮೌಲ್ಯಮಾಪನದ ದಿನಗಳು ಹತ್ತಿರ ಬರುತ್ತಿವೆ.

ಟ್ರೀ ಬ್ಯಾಂಕಿಂಗ್‌: ಸಾಲಕ್ಕೆ ಮರವೇ ಭದ್ರತಾ ಠೇವಣಿ!

ಇಂಗಾಲದ ತಟಸ್ಥತೆಯ ದಾರಿಯಲ್ಲಿ ನಡೆದಿರುವ ಪಂಚಾಯ್ತಿ ತನ್ನ ರೈತರಿಗಾಗಿ ನೂತನ ಟ್ರೀ ಬ್ಯಾಂಕಿಂಗ್‌ ಎಂಬ ಬಡ್ಡಿ ರಹಿತ ಸಾಲ ಯೋಜನೆಯನ್ನೂ ಇತ್ತೀಚೆಗೆ ಜಾರಿಗೊಳಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬ್ಯಾಂಕ್‌ನಿಂದ ಸಾಲ ನೀಡಲು ರೈತರ ಮರಗಳನ್ನೇ ಭದ್ರತಾ ಠೇವಣಿಯನ್ನಾಗಿ ಪರಿಗಣಿಸುವ ಯೋಜನೆ ಇದು.

ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಿಕೊಳ್ಳುವ ಸಲುವಾಗಿ ಮನೆಯಂಗಳದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ರೈತರು ಅವೇ ಮರಗಳನ್ನು ಮೀನಂಗಡಿ ಸೇವಾ ಸಹಕಾರ ಬ್ಯಾಂಕಿಗೆ ಅಡವಿಟ್ಟು ವಾರ್ಷಿಕ ಸಾಲ ಪಡೆಯಬಹುದು.

ಒಂದು ಮರಕ್ಕೆ ವಾರ್ಷಿಕ ₨ 50 ಸಾಲ ದೊರಕುತ್ತದೆ. ಒಬ್ಬರು ಕನಿಷ್ಠ 100 ಮರ ಅಡವಿಟ್ಟರೆ ಪ್ರತಿ ವರ್ಷವೂ 5 ಸಾವಿರ ಸಾಲ ದೊರಕುತ್ತದೆ. ಬಡ್ಡಿ ಹಣವನ್ನು ಪಂಚಾಯ್ತಿಯೇ ಪಾವತಿಸುತ್ತದೆ. ಮರಗಳನ್ನು ಕಡಿಯದೇ ಇದ್ದರೆ ಸಾಲ ತೀರಿಸಬೇಕಿಲ್ಲ. ಮರ ಕಡಿದರೆ ಸಾಲ ತೀರಿಸಲೇಬೇಕು. ಇದಷ್ಟೇ ನಿಯಮ! ಇದುವರೆಗೆ 184 ರೈತರು ಸಾಲ ಪಡೆದಿದ್ದಾರೆ.

ಯೋಜನೆಯನ್ನು ಉದ್ಘಾಟಿಸಿದ್ದ ಕೇರಳದ ಹಣಕಾಸು ಸಚಿವ ಥಾಮಸ್‌ ಇಸಾಕ್‌, ‘ಈ ಸಾಲ ಯೋಜನೆಯ ಲಾಭ ಪಡೆಯುವ ಸಲುವಾಗಿಯಾದರೂ ಸ್ಥಳೀಯರು ಹೆಚ್ಚು ಮರಗಳನ್ನು ಬೆಳೆಸಬೇಕು. ಆ ಮೂಲಕ ಇಂಗಾಲ ತಟಸ್ಥತೆಯ ಗುರಿ ಮುಟ್ಟಲು ಪಂಚಾಯ್ತಿಯೊಂದಿಗೆ ಸಹಕರಿಸಬೇಕು’ ಎಂಬ ಸಲಹೆಯನ್ನೂ ನೀಡಿದ್ದರು.

ಅವಶ್ಯಕತೆಯೇ ಅನ್ವೇಷಣೆಗೆ ದಾರಿ ಎಂಬ ನಾಣ್ಣುಡಿಯು ಮೀನಂಗಡಿ ಪಂಚಾಯ್ತಿ ವಿಷಯದಲ್ಲಿ ಭಿನ್ನ ರೀತಿಯಲ್ಲಿ ಹೊಳೆಯುತ್ತದೆ. ಅವಶ್ಯಕತೆ ಎಂಬುದನ್ನು ಈ ಪಂಚಾಯ್ತಿ ಸಾಂಸ್ಥಿಕ ನೆಲೆಯಲ್ಲಷ್ಟೇ ವಿವರಿಸಿಕೊಳ್ಳದೇ, ಹವಾಮಾನ ವೈಪರೀತ್ಯದಂಥ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತನ್ನ ಸಮುದಾಯದ ಪ್ರಜ್ಞೆ ಮತ್ತು ಪರಿಸರದ ಅವಶ್ಯಕತೆಯನ್ನಾಗಿ ಪರಿಗಣಿಸಿದೆ. ಅದರ ಪರಿಣಾಮವಾಗಿಯೇ, ಸ್ವತಃ ತಾನೇ ಲೋಕೋಪಯೋಗಿಯಾಗಿ ಮಾರ್ಪಾಡಾಗಿದೆ. ಈ ವರ್ಷವೂ ಮತ್ತೆ ಇಂಗಾಲದ ಆಡಿಟ್‌ಗೆ ಸಿದ್ಧತೆ ನಡೆಸಿ ಇತರೆ ಪಂಚಾಯ್ತಿಗಳಿಗೂ ಮಾದರಿಯಾಗಿದೆ.

(ಪೂರಕ ಮಾಹಿತಿ: ಇಂಟರ್‌ನೆಟ್)‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT