ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವೈಪರೀತ್ಯವೂ ಗುಬ್ಬಿಗಳ ಗೋಳೂ

Last Updated 17 ಜನವರಿ 2023, 19:30 IST
ಅಕ್ಷರ ಗಾತ್ರ

ಹ ವಾಮಾನ ವೈಪರೀತ್ಯ ಎಂದರೇನು? ಈ ಪ್ರಶ್ನೆ ತುಂಬಾ ಅಸಂಬದ್ಧ ಎನಿಸಬಹುದು ಈಗ. ಏಕೆಂದರೆ ಹವಾಮಾನ ಬದಲಾವಣೆ ಎನ್ನುವುದು ಸರ್ಕಾರ, ಪರಿಸರತಜ್ಞರು, ಚಿಂತಕರು, ಶಿಕ್ಷಕರು, ವಿದ್ಯಾರ್ಥಿಗಳೆಲ್ಲರ ಬಾಯಲ್ಲೂ ಸಾಮಾನ್ಯ ವಿಷಯವಾಗಿಬಿಟ್ಟಿದೆ. ಮಕ್ಕಳಿಂದ ಸರ್ಕಾರದವರೆಗೆ ಎಷ್ಟೇ ಭಾಷಣಗಳನ್ನು ಮಾಡಿಕೊಂಡು, ಯೋಜನೆಗಳನ್ನು ಹೂಡಿದರೂ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮಾತ್ರ ಕಿಂಚಿತ್ತೂ ತಡೆಗಟ್ಟಲಾಗುತ್ತಿಲ್ಲ. ನಮ್ಮ ಐಷಾರಾಮಿ ಜೀವನಕ್ಕಾಗಿ ಆಗಿರುವ ಆಧುನೀಕರಣವೇ ಇದಕ್ಕೆ ಕಾರಣವಾದರೂ ನಾವು ಮಾತ್ರ ನಮ್ಮ ಭದ್ರತೆಯನ್ನು ಕಾಪಾಡಿಕೊಂಡು ಇತರೆ ಜೀವಿಗಳ ಬಗ್ಗೆ ನಿರ್ಲಕ್ಷ್ಯ ತೋರಿದಂತಿದೆ. ಮೇಲ್ನೋಟಕ್ಕೆ ಇಡೀ ಜೀವಸಂಕುಲದ ರಕ್ಷಣೆಯ ಬಗ್ಗೆ ಗಮನ ಹರಿಸಿದರೂ, ಪಾಪ ಅದೆಷ್ಟೋ ಪುಟ್ಟ ಜೀವಿಗಳು ತಮ್ಮ ಅಳಿವು ಉಳಿವಿನ ಹೋರಾಟ ನಡೆಸುತ್ತಿವೆಯೋ ಬಲ್ಲವರಾರು? ಆದರೆ ಯಾವುದೇ ಆಧುನೀಕರಣಕ್ಕೂ ಬೇಗ ಬಲಿಯಾಗುವುದೇ ಈ ಗುಬ್ಬಚ್ಚಿಗಳು. ಮೊಬೈಲ್‌ಫೋನ್ ಬಂದಾಗಿನಿಂದ ಗುಬ್ಬಚ್ಚಿಗಳ ಸಂತತಿ ಕ್ಷೀಣಿಸುತ್ತಿದೆ ಎಂದು ನಾವೆಲ್ಲ ಕೇಳಿದ್ದೇವೆ. ಆದರೀಗ ಅವಕ್ಕೆ ಮತ್ತೊಂದು ಕಂಟಕ ಬಂದೊದಗಿದೆ. ಇದೋ ಆಸ್ಟ್ರೇಲಿಯಾದ ನ್ಯಾಷನಲ್‌ ಯೂನಿವರ್ಸಿಟಿಯ ಪರಿಸರ ವಿಜ್ಞಾನಿಗಳು ‘ಫೇರಿ ರೆನ್ಸ್‌’ ಎನ್ನುವ ಚಂದದ ಪುಟ್ಟ ಗುಬ್ಬಚ್ಚಿಗಳ ಬದುಕಿನಲ್ಲಿ ಹವಾಮಾನ ಬದಲಾವಣೆಯು ತಂದೊಡ್ಡಿರುವ ಅವ್ಯವಸ್ಥೆಯನ್ನು ಹಾಗೂ ಚಳಿಗಾಲದಲ್ಲಿಯೇ ಏಕೆ ಇವು ಹೆಚ್ಚು ಮರಣಿಸುತ್ತಿವೆ ಎನ್ನುವುದನ್ನೂ ಅಧ್ಯಯನ ಮಾಡಿದ್ದಾರೆ.

ಹೌದು. ಇದೊಂದು 27 ವರ್ಷಗಳ ಸುದೀರ್ಘ ಅಧ್ಯಯನ. ಲೀ ಎಲ್ವಿ, ಯಾಂಗ್‌ ಲಿಯೂ ಮತ್ತು ತಂಡದವರು ಅಧ್ಯಯನ ಮಾಡಿರುವ ಫೇರಿ ರೆನ್ಸ್‌ ಹಕ್ಕಿಗಳ ಸಂಶೋಧನೆಯು ಮೊನ್ನೆ ಸೈನ್ಸ್‌ ಅಡ್ವಾನ್ಸಸ್‌ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಫೇರಿ ರೆನ್ಸ್‌ ಗುಬ್ಬಚ್ಚಿಗಳು ಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುವ ಹಾಗೂ ಮೂಲತಃ ಕೀಟಗಳನ್ನು ತಿಂದು ಬದುಕುವ ಪುಟ್ಟ ಪಕ್ಷಿಗಳು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಇವುಗಳಿಗಾಗುವ ಆಹಾರದ ಕೊರತೆ, ಅವುಗಳ ದೇಹದಲ್ಲಿ ನಡೆಯುವ ಜೈವಿಕ ಕ್ರಿಯೆಗಳು, ಅವುಗಳ ಸಂತಾನೋತ್ಪತ್ತಿಗಾಗುವ ತೊಂದರೆ ಹಾಗೂ ಅವು ಮಾಡಿಕೊಳ್ಳಬೇಕಾದ ಕೆಲವು ಮಾರ್ಪಾಡುಗಳು ಅವನ್ನು ಎಷ್ಟರ ಮಟ್ಟಿಗೆ ಬದುಕಗೊಡುತ್ತಿವೆ ಎನ್ನುವುದು ಈ ಸುದೀರ್ಘ ಅಧ್ಯಯನವು ತಿಳಿಸುತ್ತಿರುವ ವಿಷಯ.

ಚಳಿಗಾಲದಲ್ಲಿ ಎಲ್ಲ ಪ್ರಾಣಿ–ಪಕ್ಷಿಗಳ ದೇಹದಲ್ಲಿಯೂ ಸ್ವಾಭಾವಿಕವಾಗಿಯೇ ತಾಪವನ್ನು ನಿರ್ವಹಿಸುವ ಕೆಲವು ವಿಧಾನಗಳಿವೆ. ಆದರೆ ದೇಹದಿಂದ ಇದಕ್ಕಾಗಿ ಖರ್ಚಾಗುವ ಶಕ್ತಿ ಹೆಚ್ಚಾಗಿರುತ್ತದೆ. ಉದಾಹರಣೆಗೆ, ಕರಡಿಗಳು ದೀರ್ಘಕಾಲದ ನಿದ್ರೆಗೆ ಜಾರಿಕೊಳ್ಳುತ್ತವೆ. ನಾವು ಬಿಸಿಬಿಸಿ ಆಹಾರ ತಿಂದು, ಉಣ್ಣೆಯ ಬಟ್ಟೆಗಳನ್ನು ಧರಿಸಿ ಬೆಚ್ಚಗಿರುತ್ತೇವೆ. ಸ್ವಾಭಾವಿಕವಾಗಿಯೇ ಇತರೆ ಜೀವಿಗಳೂ ಒಂದೊಂದು ಉಪಾಯವನ್ನು ಕಂಡುಕೊಂಡಿರುತ್ತವೆ. ಆದರೆ ಸಮಶೀತೋಷ್ಣ ಪ್ರದೇಶಗಳಲ್ಲಿ ವಾಸಿಸುವ ಯಾವುದೇ ಜೀವಿಗಳಿಗೆ ಅತಿ ಶೀತ ಅಥವಾ ಅತಿಯಾದ ಬಿಸಿಲಿನಂತಹ ಬಿರುಸಿನ ವಾತಾವರಣವನ್ನು ತಡೆದುಕೊಳ್ಳಲಾಗುವುದಿಲ್ಲ. ಇಂತಹ ಪ್ರಾಣಿಗಳಿಗೆ ಶಕ್ತಿಯ ಅವಶ್ಯಕತೆ ಹೆಚ್ಚು ಇರುತ್ತದೆ. ಆದರೆ ಇದೇ ಸಮಯದಲ್ಲಿ ಆಹಾರದ ಕೊರತೆಯೂ ಉಲ್ಬಣಿಸಿಬಿಡುತ್ತದೆ. ಇದೇ ಈ ಫೇರಿ ರೆನ್ಸ್‌ ಗುಬ್ಬಚ್ಚಿಗಳಿಗೂ ಕಾಡುತ್ತಿರುವ ತೊಂದರೆ.

ಹವಾಮಾನ ಬದಲಾವಣೆಯು ಚಳಿಗಾಲದಲ್ಲಿಯೂ ವಾತಾವರಣದ ತಾಪಮಾನದಲ್ಲಿ ಏರಿಕೆಯನ್ನು ತರುವುದು, ಹಿಮಗಟ್ಟಿಸುವುದು ಅಥವಾ ಮಳೆಯನ್ನು ತರಿಸುವುದು. ಇದು ಇಡೀ ಜೀವಸಂಕುಲದ ಮೇಲೆ ಪ್ರಭಾವ ಬೀರುತ್ತಿದ್ದರೂ ಫೇರಿ ರೆನ್ಸ್‌ ಹಕ್ಕಿಗಳ ಜೀವವನ್ನೇ ಬಲಿತೆಗೆದುಕೊಳ್ಳುತ್ತಿದ್ದು, ಅದರಲ್ಲೂ ವಯಸ್ಸಿನ ಹಕ್ಕಿಗಳೇ ಹೆಚ್ಚು ಸಾಯುತ್ತಿವೆಯಂತೆ ಹಾಗೂ ಸಂತಾನೋತ್ಪತ್ತಿಯಲ್ಲಿಯೂ ವ್ಯತ್ಯಾಸವಾಗುತ್ತಿದೆಯಂತೆ. ಆದರೆ ಇವು ಯಾವ ಕ್ಷಣದಲ್ಲಿ ಸಾಯುತ್ತವೆ ಎನ್ನುವುದನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ವಿಜ್ಞಾನಿಗಳ ಪ್ರಕಾರ ಈ ಗುಬ್ಬಿಗಳು ಅವುಗಳ ಮಿಲನಸಮಯದ ಬಳಿಕ, ಅಂದರೆ ಚಳಿಗಾಲದಲ್ಲಿ ಹೆಚ್ಚು ಸಾಯುತ್ತಿದ್ದದನ್ನು ಗಮನಿಸಿದರು. ಇದನ್ನು ಪರೀಕ್ಷಿಸಲು ಲೀ ಎಲ್ವಿ ಮತ್ತು ಸಂಗಡಿಗರು ಅನುಸರಿಸಿದ್ದು ‘ಪಾತ್‌ ಅನಾಲಿಸಿಸ್’.‌ ಅಂದರೆ ವಿವಿಧ ದತ್ತಾಂಶಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ, ವಿಶ್ಲೇಷಿಸಿ ಆ ಮಾನದಂಡಗಳ ಪ್ರಕಾರ ಒಂದು ಘಟನೆಗೆ ಕಾರಣವನ್ನು ಪತ್ತೆ ಮಾಡುವುದು. ಇದಕ್ಕಾಗಿ ಇವರು ಕೆಲವು ಪಕ್ಷಿಗಳನ್ನು ಹಿಡಿದು ಅವುಗಳ ಕಾಲಿಗೆ ಕೆಲವು ಹಗುರವಾದ ವೈಜ್ಞಾನಿಕ ಮೀಟರುಗಳನ್ನು ಅಳವಡಿಸಿ ಅವುಗಳಿಂದ ಹೊರಡುವ ರೇಡಿಯೋ ಸಂಕೇತಗಳಿಂದ ನಿರಂತರವಾದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಹೀಗೆ ಇವರು 27 ವರ್ಷಗಳವರೆಗೆ ಪ್ರತಿ ವಾರವೂ ಹಕ್ಕಿಗಳ ಗಣತಿ ಮಾಡಿದ್ದಾರೆ. ಅವುಗಳ ಚಲನವಲನಗಳನ್ನು ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇದರಿಂದ ಹಕ್ಕಿಯು ಮರಣಿಸಿದ ದಿನವನ್ನು ಸುಲಭವಾಗಿ ಲೆಕ್ಕ ಹಾಕಬಹುದಾಗಿತ್ತು. ಹೀಗೆ ಇವರು ಹಿಂಬಾಲಿಸಿದ 1670 ಪ್ರೌಢ, ಅಂದರೆ ಒಂದು ವರ್ಷದ ಮೇಲ್ಪಟ್ಟ ಹಕ್ಕಿಗಳಲ್ಲಿ, ನೂರಕ್ಕೆ ಸುಮಾರು 59 ಹಕ್ಕಿಗಳು ಚಳಿಗಾಲದಲ್ಲಿಯೇ ಸಾಯುತ್ತಿದ್ದುವಂತೆ ಮತ್ತು ಸುಮಾರು ಪ್ರತಿಶತ 37 ಹಕ್ಕಿಗಳು ಅವುಗಳ ಮಿಲನಕಾಲ, ಅಂದರೆ ವಸಂತಕಾಲದಲ್ಲಿಯೇ ಮರಣಿಸುತ್ತಿದ್ದುವಂತೆ. ಈ ಎಲ್ಲಾ ವೈಪರಿತ್ಯಗಳನ್ನು ಸಹಿಸಿಕೊಂಡ ಕೆಲವೇ ಅಂದರೆ ಶೇ. 4 ಹಕ್ಕಿಗಳು ಮಾತ್ರ ಇವರ ಪರೀಕ್ಷೆಯ ಕೊನೆಯ ಹಂತದವರೆಗೂ ಬದುಕಿದ್ದುವಂತೆ. ವಸಂತಕಾಲ, ಮಳೆಗಾಲ ಹಾಗೂ ಚಳಿಗಾಲದಲ್ಲಿ ವಾತಾವರಣದ ಉಷ್ಣತೆ, ಮಳೆ ಹಾಗೂ ಶೀತದ ಪ್ರಮಾಣದ ಅಂಕಿ–ಅಂಶಗಳ ವಿಶ್ಲೇಷಣೆಯ ಪ್ರಕಾರ ಹವಾಮಾನ ವೈಪರಿತ್ಯ ಹಾಗೂ ಫೇರಿ ರೆನ್ಸ್‌ ಹಕ್ಕಿಗಳ ಸಾವಿಗೂ ನೇರ ಸಂಬಂಧವಿತ್ತು. ವಸಂತಕಾಲದಲ್ಲಿ ಹಕ್ಕಿಗಳು ಹೆಚ್ಚಾಗಿ ಸಾಯದಿದ್ದರೂ ಆ ಸಮಯದಲ್ಲಾಗಿರುವ ಭೌತಿಕ ಹಾಗೂ ಜೈವಿಕ ಬದಲಾವಣೆಗಳು ಚಳಿಗಾಲದಲ್ಲಿ ಪರಿಣಾಮವನ್ನು ಬೀರುತ್ತಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಬೇಸಿಗೆಯಲ್ಲಿ ಅತಿಯಾಗಿ ಹೊರಡುವ ಬಿಸಿಕಿರಣಗಳು ಅಥವಾ ಅಚಾನಕ್ಕಾಗಿ ಬೀಸುವ ಶೀತಗಾಳಿಯು ಈ ಪುಟ್ಟ ಹಕ್ಕಿಗಳ ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ಕುಗ್ಗಿಸಬಹುದು. ಅದು ಚಳಿಗಾಲದಲ್ಲಿ ಮತ್ತೆ ತನ್ನ ಉಷ್ಣತೆಯನ್ನು ಕಾಪಾಡಿಕೊಳ್ಳಲಾಗದೆ, ಜೊತೆಗೆ ಆಹಾರವೂ ಸಿಗದೆ ಮರಣಿಸುತ್ತಿರಬಹುದು ಎಂಬುದು ಲೀ ಎಲ್ವಿ ಮತ್ತು ತಂಡದವರ ಅಭಿಪ್ರಾಯ.

ಹೀಗೆ ಹವಾಮಾನ ತಾಪಮಾನದಲ್ಲಿ ಏರಿಕೆಯಾಗುತ್ತಿರುವುದು ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತಿದೆ. ಚಳಿಗಾಲದಲ್ಲಿ ಇದ್ದಕ್ಕಿದಂತೆ ಬಿಸಿಯಾಗುವಿಕೆ ಅಥವಾ ಬೇಸಿಗೆಯಲ್ಲಿ ಬಿರುಬಿಸಿಲು ಅಥವಾ ಅತಿಯಾದ ಮಳೆ ಯಾವುದೂ ಜೀವಸಂಕುಲಕ್ಕೆ ಕ್ಷೇಮವಲ್ಲ. ದೈತ್ಯಪ್ರಾಣಿಗಳು ಹೇಗೋ ಇಂತಹ ವ್ಯತ್ಯಾಸಗಳನ್ನು ಸಹಿಸಿಕೊಂಡರೂ ಪರಿಸರದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುವ ಎಷ್ಟೋ ಪುಟ್ಟಜೀವಿಗಳು ಅದನ್ನು ತಡೆದುಕೊಳ್ಳಲಾರವು. ನಮ್ಮಂತೆ ದೀರ್ಘಾವಧಿಗೆ ಬೇಕಾಗುವಷ್ಟು ಆಹಾರಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗದ ಮತ್ತು ಬಿರುಸಿನ ಹವಾಗುಣಗಳಿಂದ ರಕ್ಷಿಸಿಕೊಳ್ಳಲಾಗದ ಜೀವಿಗಳು ಆಹಾರದ ಆಶ್ರಯಗಳಿಲ್ಲದೆ ಅದೆಷ್ಟು ಚಡಪಡಿಸುತ್ತಿವೆಯೋ ಕಾಣೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT