ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯ ಭಗೀರಥ: ಅಮೈ ಮಹಾಲಿಂಗ ನಾಯಕರ ಕುರಿತ ಲೇಖನ

Last Updated 29 ಜನವರಿ 2022, 19:31 IST
ಅಕ್ಷರ ಗಾತ್ರ

ಯಾರಿಗೂ ಬೇಡವಾದ ಬರಡು ಗುಡ್ಡದಲ್ಲಿ ಏಕಾಂಗಿಯಾಗಿ ಸುರಂಗಗಳನ್ನು ಕೊರೆದು, ನೀರನ್ನು ಹರಿಸಿದ ಅಮೈ ಮಹಾಲಿಂಗ ನಾಯಕರ ಯಶೋಗಾಥೆ ಎಂಥವರಿಗೂ ಸ್ಫೂರ್ತಿ ತುಂಬಬಲ್ಲದು. ಮೈಸೂರು ವಿಶ್ವವಿದ್ಯಾಲಯದ ಬಹುಮಾಧ್ಯಮ ವಿದ್ಯುನ್ಮಾನ ಸಂಶೋಧನಾ ಕೇಂದ್ರವು ನಾಯಕರನ್ನು ಕುರಿತು ನಿರ್ಮಿಸಿದ ‘ಇನ್‍ಕ್ರೆಡಿಬಲ್ ಟೇಲ್ ಆಫ್ ಎ ವಾಟರ್ ವಾರಿಯರ್’ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವದಲ್ಲಿ ಜ್ಯೂರಿ ಸ್ಪೆಷಲ್ ಮೆನ್ಷನ್ ಪ್ರಶಸ್ತಿ ಲಭಿಸಿತ್ತು. ಈ ಸಾಕ್ಷ್ಯಚಿತ್ರಕ್ಕೆ ಲೇಖಕ ಬರೆದ ಚಿತ್ರಕಥೆಯನ್ನು ಆಧರಿಸಿದ ಕಿರು ಲೇಖನವಿದು.

***

1970 ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದ ಸಂದರ್ಭದಲ್ಲಿ ಬಂಟ್ವಾಳದ ಅಡ್ಯನಡ್ಕದ ಸ್ಥಳೀಯ ಜಮೀನ್ದಾರರಾಗಿದ್ದ ಮಹಾಬಲ ಭಟ್ಟರು ಎರಡು ಎಕರೆ ಭೂಮಿಯನ್ನು ಅಮೈ ಮಹಾಲಿಂಗ ನಾಯ್ಕರಿಗೆ ಸರ್ಕಾರದಿಂದ ದೊರಕಿಸಿಕೊಟ್ಟಿದ್ದರು. ಆದರೆ ಅದು ಯಾರಿಗೂ ಬೇಡವಾದ ಬರಡು ಗುಡ್ಡವಾಗಿತ್ತು! ಕೃಷಿ ಮಾಡುವುದಿರಲಿ, ಮನೆ ಕಟ್ಟಿಕೊಂಡು ಜೀವನ ನಡೆಸುವುದಕ್ಕೂ ಲಾಯಕ್ಕಿಲ್ಲದ ಸ್ಥಳ ಅದಾಗಿತ್ತು. ಒಣ ಹುಲ್ಲು ಮತ್ತು ಕಾಡು ಬಳ್ಳಿಗಳಿಂದ ಆವೃತ್ತವಾಗಿದ್ದ ಬರಡು ಬೆಟ್ಟದಲ್ಲಿ ನೀರಿನ ಕುರುಹಂತೂ ಇರಲೇ ಇಲ್ಲ. ಇಂಥ ಭೂಮಿಯಲ್ಲಿ ಸುರಂಗಗಳನ್ನು ಏಕಾಂಗಿಯಾಗಿ ಕೊರೆದು, ನೀರು ಹರಿಸಿ ಕೃಷಿ ಮಾಡುವ ದುಸ್ಸಾಹಸಕ್ಕೆ ಕೈಹಾಕಿದ ನಾಯ್ಕರಿಗೆ ಈಗ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಹಲವು ಪುರಸ್ಕಾರಗಳೂ ಹುಡುಕಿಕೊಂಡು ಬಂದಿವೆ. ಆದರೆ, ಒಮ್ಮೆ ಕೂಡ ಮಹಾಲಿಂಗ ನಾಯ್ಕರಿಗೆ ಇದ್ಯಾವುದೂ ದೊಡ್ಡ ಸಾಧನೆ ಎನಿಸಲೇ ಇಲ್ಲ! ಭೂರಹಿತ ಕೃಷಿ ಕಾರ್ಮಿಕನಾಗಿ ಇತರರ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ನಾಯ್ಕರಿಗೆ ತಮ್ಮ ಪಾಲಿಗೆ ಬಂದ ಭೂಮಿಯಲ್ಲಿ ಕಷ್ಟಪಟ್ಟು ದುಡಿದು ಬದುಕುವುದಷ್ಟೇ ಮುಖ್ಯ ಎನಿಸಿತು. ಒಂದು ಕಾಲದ ಬರಡು ಬೆಟ್ಟ ಮೂರು ದಶಕಗಳ ಇವರ ಭಗೀರಥ ಪ್ರಯತ್ನದಿಂದ ಈಗ ನಂದನವನವೇ ಆಗಿದೆ.

ದೂರದ ಬೆಟ್ಟದಲ್ಲಿ ತನ್ನದೊಂದು ಪುಟ್ಟ ಮನೆಯನ್ನು ಕಟ್ಟಿಕೊಂಡು ಬದುಕು ಸಾಗಿಸಲು ಕೃಷಿ ಮಾಡುವ ಸಣ್ಣ ಕನಸಿನೊಂದಿಗೆ ಬರಡು ಪ್ರದೇಶದಲ್ಲಿ ಕಾಲಿರಿಸಿದ ನಾಯ್ಕರು ಮತ್ತು ಅವರ ಪತ್ನಿ ಲಲಿತ, ‘ಏರಿಳಿತದಿಂದ ಕೂಡಿರುವ ಗುಡ್ಡವು ಯಾವುದೇ ರೀತಿಯಲ್ಲಿಯೂ ಕೃಷಿಗೆ ಯೋಗ್ಯವಲ್ಲ. ಇಂಥ ಭೂಮಿಯಲ್ಲಿ ಕೃಷಿ ಮಾಡಲು ಹೊರಟಿರುವ ಇವರಿಗೆ ಹುಚ್ಚು ಹಿಡಿದಿರಬೇಕು’ ಎಂದು ನೆರೆಹೊರೆಯವರಿಂದ, ಗ್ರಾಮಸ್ಥರಿಂದ ಹೀಯಾಳಿಕೆಗೆ ಗುರಿಯಾಗಿದ್ದರು. ಬಹುಶಃ ಅದು ನಿಜವೂ ಆಗಿತ್ತು. ಆದರೆ, ಗ್ರಾಮಸ್ಥರ ಟೀಕೆಗೆ ಧೃತಿಗೆಡದೆ ಮುಂದಡಿಯಿಟ್ಟ ನಾಯ್ಕರು, ಮೊದಲಿಗೆ ಗುಡ್ಡದ ಮಧ್ಯಭಾಗದಲ್ಲಿ ಸುಮಾರು ಹತ್ತು ಸಾವಿರ ಚದರ ಅಡಿಯಷ್ಟು ಭೂಮಿಯನ್ನು ಸಮತಟ್ಟು ಮಾಡಿ, ಪುಟ್ಟ ಮಣ್ಣಿನ ಮನೆಯನ್ನು ಸ್ವತಃ ಕಟ್ಟಿಕೊಂಡರು. ನಂತರ ಇಡೀ ಗುಡ್ಡವನ್ನು ಎರಡು ಮೀಟರ್ ಎತ್ತರ ಮತ್ತು ಐದು ಮೀಟರ್ ಅಗಲದ ಮೆಟ್ಟಿಲುಗಳಾಗಿ ಸಮತಟ್ಟು ಮಾಡಿ, ಪ್ರತಿಯೊಂದು ಮೆಟ್ಟಿಲಿಗೂ, ಸ್ಥಳೀಯವಾಗಿ ದೊರಕುತ್ತಿದ್ದ ಜಂಬಿಟ್ಟಿಗೆಯ ಮೂಲಕ ಕಾಂಪೌಂಡ್‍ನಂತಹ ಗೋಡೆ ನಿರ್ಮಿಸಿದರು.

ಜಮೀನಿನ ಸುತ್ತ ಕಾಂಪೌಂಡ್ ಮತ್ತು ಮೆಟ್ಟಿಲುಗಳನ್ನು ಕಟ್ಟಲು ಜಂಬಿಟ್ಟಿಗೆಗಳನ್ನು ಗುಡ್ಡದ ಮೇಲೆ ಸಾಗಿಸಿದ್ದೇ ಮತ್ತೊಂದು ರೋಚಕ ಕಥನ! ನಾಯ್ಕರದು ಏಕಾಂಗಿ ಹೋರಾಟವಾದರೂ ಮನೆ ಮತ್ತು ಮಕ್ಕಳನ್ನು ಸಂಭಾಳಿಸಿಕೊಂಡು ಬಂದ ಪತ್ನಿ ಲಲಿತ ಕೂಡ ಯಶಸ್ಸಿನ ಪಾಲುದಾರರೆಂದರೆ ತಪ್ಪಾಗಲಾರದು. ಪ್ರತಿದಿನ ಕೂಲಿ ಮುಗಿಸಿ ಮಧ್ಯಾಹ್ನದ ವೇಳೆಗೆ ಹಿಂದಿರುಗುವಾಗ ನಾಯ್ಕರು ಎರಡು ಜಂಬಿಟ್ಟಿಗೆಯನ್ನು ಹೊತ್ತು ತರುತ್ತಿದ್ದರು. ಹದಿನೈದು ದಿನಗಳಿಗೊಮ್ಮೆ ಮೂವತ್ತು ಜಂಬಿಟ್ಟಿಗೆಗಳು ಸೇರ್ಪಡೆಯಾದಾಗ, ಗುಡ್ಡದ ಸುತ್ತ ಕಾಂಪೌಂಡ್ ನಿರ್ಮಿಸಲಾರಂಭಿಸಿದರು. ಹೀಗೆ ಹಂತ ಹಂತವಾಗಿ ಛಲಬಿಡದ ತ್ರಿವಿಕ್ರಮನಂತೆ ಜಮೀನಿನ ಸುತ್ತಲೂ ಸುಮಾರು 250 ಮೀಟರ್ ಉದ್ದ, ಎರಡು ಮೀಟರ್ ಎತ್ತರದ ಕಾಂಪೌಂಡ್ ನಿರ್ಮಿಸಿದರು. ಮಳೆಗಾಲದಲ್ಲಿ ಭೂಕುಸಿತವಾಗದಂತೆ ಜಮೀನನ್ನು ರಕ್ಷಿಸಲು ಮತ್ತು ಕೃಷಿ ಚಟುವಟಿಕೆ ಕೈಗೊಳ್ಳುವ ದೃಷ್ಟಿಯಿಂದ ಕಾಂಪೌಂಡ್ ನಿರ್ಮಿಸಿದರೂ, ನೀರಾವರಿಯ ಯಾವುದೇ ಯೋಜನೆ ರೂಪಿಸದೆ ಕೃಷಿ ಮಾಡುವುದಾದರೂ ಹೇಗೆ? ಹೀಗೆ ಪೂರ್ವಾಪರ ಯೋಚಿಸದೆ ಬರಡು ಗುಡ್ಡವನ್ನು ಕೃಷಿಗೆ ಅನುವಾಗುವಂತೆ ಮೆಟ್ಟಿಲುಗಳನ್ನಾಗಿ ಸಮತಟ್ಟು ಮಾಡಿ ಆಯಿತು. ನಂತರ ಜಮೀನಿನ ಸುತ್ತ ಕಾಂಪೌಂಡ್ ಕೂಡ ಕಟ್ಟಿ ಆಯಿತು. ಆದರೆ ನೀರಿನ ಯಾವ ಕುರುಹೂ ಇಲ್ಲ! ಇದ್ಯಾವುದರಿಂದಲೂ ವಿಚಲಿತರಾಗದ ನಾಯ್ಕರು, ಕುಡಿಯಲು, ಮನೆ ಬಳಕೆಗೆ ಮತ್ತು ಕೃಷಿಗೆ ಗುಡ್ಡದ ಕೆಳಗಿನಿಂದ ನೀರು ತರಲಾರಂಭಿಸಿದರು. ದಿನಕಳೆದಂತೆ, ನಿತ್ಯ ಜಂಜಾಟದಿಂದ ರೋಸಿಹೋದ ನಾಯ್ಕರಿಗೆ ಹೊಸದೊಂದು ಆಲೋಚನೆ ಹೊಳೆಯಿತು. ಅದುವೇ ನೀರಿಗಾಗಿ ಸುರಂಗ ಕೊರೆಯುವುದು!

ಕರಾವಳಿಯ ಹಲವೆಡೆ, ಅದರಲ್ಲಿಯೂ ವಿಶೇಷವಾಗಿ ವಿಟ್ಲ, ಕಾಸರಗೋಡು ಭಾಗದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿಗೆ ಸುರಂಗಗಳನ್ನು ಕೊರೆಯುವುದು ಸರ್ವೇಸಾಮಾನ್ಯ. ‘ಈ ಭಾಗದಲ್ಲಿ ಮನೆಬಳಕೆ ಮತ್ತು ಕುಡಿಯುವ ನೀರಿಗಾಗಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸುರಂಗಗಳನ್ನು ಬಳಸಲಾಗುತ್ತಿದೆ’ ಎನ್ನುತ್ತಾರೆ ಕಾಸರಗೋಡು ಮೂಲದ ‘ಅಡಿಕೆ ಪತ್ರಿಕೆ’ಯ ಸಂಪಾದಕ ಶ್ರೀಪಡ್ರೆ. ಗುಡ್ಡಗಳಲ್ಲಿ ತೆರೆದ ಬಾವಿಗಳನ್ನು ಕೊರೆಯಲು ಸಾಧ್ಯವಿಲ್ಲ. ಇಲ್ಲಿ ಇತರೆ ಇನ್ಯಾವುದೇ ನೀರಿನ ಮೂಲಗಳು ಇಲ್ಲದಿರುವುದರಿಂದ, ಉಳಿದಿರುವ ಒಂದೇ ಮಾರ್ಗ, ನೀರಿನ ಸುರಂಗಗಳು ಮತ್ತು ಅಡ್ಡ ಬೋರ್‌ವೆಲ್‍ಗಳು. ನೀರಾವರಿಗಾಗಿ ಸುರಂಗಗಳನ್ನು ಬಳಸುವುದು ಕರಾವಳಿಯ ಈ ಭಾಗದಲ್ಲಿ ವಿಶೇಷವೇನಲ್ಲ! ಇದು ಸುರಂಗಗಳ ಕಥೆಯೂ ಅಲ್ಲ. ಏಕಾಂಗಿಯಾಗಿ ಮೂರು ದಶಕಗಳ ಕಾಲ ಒಮ್ಮೆಯೂ ಧೃತಿಗೆಡದೆ, ನಿರಾಶೆಗೊಳ್ಳದೆ ಸುರಂಗಗಳನ್ನು ಕೊರೆದು ನೀರಿನ ಒರತೆಯನ್ನು ಹರಿಸಿದ ಕರಾವಳಿಯ ಭಗೀರಥ ನಾಯಕರ ಸಾಹಸ ಸ್ಫೂರ್ತಿದಾಯಕ.

ನಾಯಕರು ಆರಂಭದಲ್ಲಿ ಪ್ರತಿದಿನ ದಿನಗೂಲಿ ಮುಗಿಸಿ ಹಿಂದಿರುಗಿದ ಮೇಲೆ ಮಧ್ಯಾಹ್ನದ ನಂತರ ಸುರಂಗವನ್ನು ಕೊರೆಯುತ್ತಿದ್ದರು. ಗುದ್ದಲಿ, ಪಿಕಾಸಿ, ಮಣ್ಣಿನ ಬಾಣಲೆ ಮತ್ತು ಬುಡ್ಡಿ ದೀಪ ಹಿಡಿದು ಮಧ್ಯರಾತ್ರಿಯವರೆಗೂ ಸುರಂಗ ಕೊರೆಯುವ ಕಾಯಕದಲ್ಲಿ ನಿರತರಾಗುತ್ತಿದ್ದರು. ಹೀಗೆ ದಿನಗಳು, ತಿಂಗಳುಗಳು ಕಳೆದು, ಒಂದು ವರುಷದ ಬಳಿಕ ಸುಮಾರು 30 ಮೀಟರ್‌ವರೆಗಿನ ಆಳೆತ್ತರದ ಸುರಂಗವನ್ನು ಕೊರೆದರೂ ನೀರು ಬರಲಿಲ್ಲ! ಮೊದಲ ಸುರಂಗ ವಿಫಲವಾಯಿತು. ಮೊದಲ ವೈಫಲ್ಯದಿಂದ ವಿಚಲಿತರಾಗದೆ ಮರುವರ್ಷ ಮತ್ತೊಂದು ಸ್ಥಳದಲ್ಲಿ ಸುರಂಗ ಕೊರೆಯಲಾರಂಭಿಸಿದರು. ಸ್ಥಳೀಯ ಗ್ರಾಮಸ್ಥರೊಬ್ಬರು ‘ಯಾರಾದರೂ ಗುಡ್ಡದ ಮೇಲೆ ನಿಂತು ಮೂತ್ರ ಮಾಡಿದರೆ ಮಾತ್ರ ನೀರು ಬರಬಹುದು. ಸುರಂಗ ಕೊರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಜರಿದರು. ಬೇರೆ ಯಾರಾಗಿದ್ದರೂ ಬಹುಶಃ ಕೆಲಸ ಕೈಬಿಡುತ್ತಿದ್ದರೇನೋ, ಆದರೆ ದೃಢಮನಸ್ಸಿನ ನಾಯ್ಕರು ಎಲ್ಲರ ಮಾತುಗಳನ್ನು ನಿರ್ಲಕ್ಷಿಸಿ ಸುರಂಗದ ಕಾರ್ಯ ಮುಂದುವರಿಸಿದರು. ಎರಡು, ಮೂರು ಮತ್ತು ನಾಲ್ಕನೆಯ ಸುರಂಗಳೂ ನೀರು ಒದಗಿಸಲು ವಿಫಲವಾದವು.

ಐದನೆಯ ಸುರಂಗವನ್ನು ಸುಮಾರು 20 ಮೀಟರ್‌ನಷ್ಟು ಕೊರೆದಾಗ ಮೇಲ್ಭಾಗದಿಂದ ನೀರು ತೊಟ್ಟಿಕ್ಕಲು ಪ್ರಾರಂಭವಾಯಿತು. ಥಟ್ಟನೆ, ಅಲ್ಲಿಂದಲೇ ಮೂರು ಮೀಟರ್ ಎತ್ತರಕ್ಕೆ ಮಣ್ಣು ತೆಗೆದು, ಒಬ್ಬ ವ್ಯಕ್ತಿ ಕೂರುವಷ್ಟು ಎತ್ತರದ ಸುರಂಗವನ್ನು ಕೊರೆಯಲಾರಂಭಿಸಿದರು. ಭೂಕುಸಿತದ ಭಯವಿದ್ದರೂ ಅಂಜದೆ ಕೆಲಸ ಮುಂದುವರಿಸುವ ನಾಯ್ಕರ ಛಲಬಿಡದ ಪ್ರಯತ್ನಕ್ಕೆ ಗೆಲುವು ಲಭಿಸಲೇಬೇಕಿತ್ತು. ಐದನೆಯ ಸುರಂಗದಲ್ಲಿ ನೀರಿನ ಮೂಲ ಸಿಕ್ಕೇಬಿಟ್ಟಿತು! ಐದನೆಯ ಸುರಂಗ ನಾಯ್ಕರ ಜೀವನವನ್ನೇ ಬದಲಾಯಿಸಿತು. ಈ ಸುರಂಗವನ್ನು ಸುಮಾರು 70 ಮೀಟರ್ ಉದ್ದ ಕೊರೆದು ನೀರನ್ನು ಮನೆಗೆ ಮತ್ತು ಕೃಷಿಗೆ ಬಳಸಲಾರಂಭಿಸಿದರು. ಬರಡು ಗುಡ್ಡದ ಮೆಟ್ಟಿಲುಗಳಲ್ಲಿ ಸುಮಾರು 300 ಅಡಿಕೆ ಸಸಿಗಳು, 40 ತೆಂಗಿನ ಸಸಿಗಳು ಮತ್ತು ಮೆಣಸಿನ ಬಳ್ಳಿಗಳನ್ನು ನೆಟ್ಟರು. ಈಗ ಇವೆಲ್ಲವೂ ಫಸಲು ನೀಡುತ್ತಿವೆ!

ನಾಯಕರ ಭೂಮಿಗೆ ಈ ಸುರಂಗದ ನೀರೇ ಮೂಲಾಧಾರ. ಮನೆಯ ಮೇಲ್ಭಾಗದ ಎತ್ತರದಲ್ಲಿರುವ ಸುರಂಗದಿಂದ ಹರಿದು ಬರುವ ನೀರನ್ನು 15 ಅಡಿ ಆಳ ಮೂವತ್ತು ಅಡಿ ಸುತ್ತಳತೆಯ ಟ್ಯಾಂಕ್ ನಿರ್ಮಿಸಿ ಶೇಖರಣೆ ಮಾಡುತ್ತಿದ್ದಾರೆ. ಈ ಟ್ಯಾಂಕ್ ತುಂಬಿ ಹರಿದು ಬರುವ ನೀರನ್ನು ಸ್ಪ್ರಿಂಕ್ಲರ್‌ಗಳನ್ನು ಬಳಸಿ ತುಂತುರು ನೀರಾವರಿಯ ಮೂಲಕ ಮೂರು ಮೆಟ್ಟಿಲುಗಳಲ್ಲಿರುವ ಗಿಡಗಳಿಗೆ ಹಾಯಿಸುತ್ತಿದ್ದಾರೆ. ಮೇಲ್ಭಾಗದ ಗಿಡಗಳಿಗೆ ಕೊಳವೆಯ ಮೂಲಕ ನೀರನ್ನು ಹಾಯಿಸುತ್ತಿದ್ದಾರೆ. ಇಷ್ಟಕ್ಕೇ ತೃಪ್ತರಾಗದ ನಾಯ್ಕರು ಇನ್ನೆರಡು ಸುರಂಗಗಳನ್ನು ಕೊರೆದಿದ್ದಾರೆ. ಇದರಲ್ಲಿ ಒಂದು ಸುರಂಗ ಮನೆಯ ಹಿಂದೆಯೇ ಇದ್ದು, ಇದರಲ್ಲಿ ನೀರಿನ ಒರತೆ ದೊರಕಿದೆ. ಸುಮಾರು ಹನ್ನೆರಡು ಸಾವಿರ ಅಡಿಯ ಟ್ಯಾಂಕ್ ನಿರ್ಮಿಸಿ ಈ ಸುರಂಗದ ನೀರನ್ನು ಶೇಖರಿಸುತ್ತಿದ್ದಾರೆ. ಈಗ ಇದೇ ನೀರನ್ನು ಮನೆಬಳಕೆಗೆ ಮತ್ತು ಕುಡಿಯುವ ನೀರಿಗೆ ಬಳಸಲಾಗುತ್ತಿದೆ. ಆರು ದಿನಗಳಿಗೊಮ್ಮೆ ತುಂಬಿ ಹರಿಯುವ ನೀರನ್ನು ಕೆಳಭಾಗದ ಜಮೀನಿಗೆ ಹರಿಸಲಾಗುತ್ತಿದೆ.

ನಾಯ್ಕ ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದು, ಕಿರಿಯ ಮಗ ಮತ್ತು ಸೊಸೆಯೊಂದಿಗೆ
ಹಸಿರು ಗುಡ್ಡದ ಮೇಲಿನ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಿರಿಯ ಮಗ ಪುತ್ತೂರಿನ ಆಯುಷ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನೊಬ್ಬ ಮಗ ಸಣ್ಣಪುಟ್ಟ ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ಮಗಳಿಗೆ ಮದುವೆಯಾಗಿದ್ದು, ಸಮೀಪದ ಬೊಳ್ನಾಡು ಗ್ರಾಮದಲ್ಲಿ ನೆಲೆಸಿದ್ದಾರೆ. ತಾವು ಬೆಳೆಸಿದ ತೋಟವನ್ನು ನೋಡಿಕೊಂಡು ಮಕ್ಕಳು ಸ್ವಾವಲಂಬಿಗಳಾಗಲಿ ಎಂಬ ಆಸೆಯಿದ್ದರೂ ಅವರಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ ಎಂದು ನಾಯ್ಕರು ನಿರಾಶರಾಗುತ್ತಾರೆ. ತಮ್ಮ ಜೀವನದ ಇಳಿಸಂಜೆಯಲ್ಲಿ ಮೂರು ದಶಕಗಳ ಪರಿಶ್ರಮದಿಂದ ಕಟ್ಟಿದ ನಂದನವನವನ್ನು ಮಕ್ಕಳು ಪೋಷಿಸುತ್ತಾರೆ ಎಂಬ ನಂಬಿಕೆಯನ್ನು ಈಗಲೂ ಇರಿಸಿಕೊಂಡಿರುವ ನಾಯ್ಕರನ್ನು ಈಗ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT