ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜಲ ದಿನ ವಿಶೇಷ: ‘ನೀರ ನೆಮ್ಮದಿ’ಯ ಕಟ್ಟಗಳು

Last Updated 22 ಮಾರ್ಚ್ 2021, 0:30 IST
ಅಕ್ಷರ ಗಾತ್ರ

ಜಲಕ್ಷಾಮ ಈ ಜಗತ್ತಿನ ಮುಂದೆ ಇರುವ ಬಿಕ್ಕಟ್ಟುಗಳಲ್ಲಿ ಅತ್ಯಂತ ಗಂಭೀರವಾದುದು. ನಮ್ಮ ದೇಶದಲ್ಲಿ ಕೂಡ ಈ ಸಮಸ್ಯೆ ತೀವ್ರವಾಗಿದೆ. ಒಟ್ಟು ಜನಸಂಖ್ಯೆಯ ಶೇ 50ರಷ್ಟು ಜನರಿಗೆ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ಹಾಗಾಗಿಯೇ ನೀರು ಸಂರಕ್ಷಣೆ ಈಗಿನ ಜರೂರು. ಇದು ವಿಶ್ವ ಜಲದಿನದ ವಿಶೇಷ.

***

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗದಲ್ಲಿ ಹರಿವ ತೊರೆಗಳು, ತೋಡುಗಳು, ಹಳ್ಳ–ಹೊಳೆಗಳಿಗೆ ನಿರ್ಮಾಣ ಮಾಡುವ ಸಣ್ಣ ಒಡ್ಡುಗಳಿಗೆ ‘ಕಟ್ಟ’ ಎನ್ನುತ್ತಾರೆ. ಇದು ತಾವು ಕಲಿತ ನೆಲಮೂಲದ ಜ್ಞಾನದಿಂದ ರೈತರೇ ನಿರ್ಮಾಣ ಮಾಡಿಕೊಳ್ಳುವ ಪಾರಂಪರಿಕ ಜಲ ಸಂರಕ್ಷಣಾ ರಚನೆ.

ಪ್ರತಿ ವರ್ಷ ಮಳೆಗಾಲ ಮುಗಿದ ನಂತರ, ಬೇಸಿಗೆ ಆರಂಭಕ್ಕೆ ಮುನ್ನ ಕಟ್ಟ ನಿರ್ಮಾಣ ಕೆಲಸ ಶುರು. ಈ ಸಮಯದಲ್ಲಿ ಹಳ್ಳ–ಹೊಳೆಗಳಿಗೆ ಕಟ್ಟ ಕಟ್ಟಿದರೆ ಮಾತ್ರ ಬೇಸಿಗೆಯಲ್ಲಿ ಕೃಷಿಗೆ, ಮನೆ ಬಳಕೆಗೆ ನೀರು, ಇಲ್ಲದಿದ್ದರೆ ಜಲ ಕ್ಷಾಮ. ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳು ಜಲಕ್ಷಾಮದ ಭಯವಿಲ್ಲದೇ ಬೇಸಿಗೆಯಲ್ಲಿ ತಂಪಾಗಿರುತ್ತವೆ. ಇದಕ್ಕೆ ಕಾರಣ, ‘ಕಟ್ಟ’ಗಳು ಅರ್ಥಾತ್ ಸಣ್ಣ ಒಡ್ಡುಗಳು.

‘ಕಟ್ಟ ಸಂಸ್ಕೃತಿ 75 ವರ್ಷಗಳಷ್ಟು ಹಳೆಯದೆಂದು ಭಾವಿಸಿದ್ದೆವು. ಆದರೆ, 1934ರ ಬ್ರಿಟಿಷರ ಆಳ್ವಿಕೆಯಲ್ಲಿ ಆಗಿನ ಡಿಸ್ಟ್ರಿಕ್ಟ್‌ ಕಲೆಕ್ಟರ್‌, ಕೃಷಿಕರಿಗೆ ಕಟ್ಟ ಕಟ್ಟಲು ತಿಳಿಸಿರುವ ದಾಖಲೆಗಳು ಸಿಕ್ಕ ಮೇಲೆ, ಅದಕ್ಕಿಂತ ಪುರಾತನ ಹಿನ್ನೆಲೆ ಇರುವುದು ಗೊತ್ತಾಯಿತು’ ಎನ್ನುತ್ತಾರೆ ಏತಡ್ಕದಲ್ಲಿ ಕಟ್ಟ ಸಂಸ್ಕೃತಿಗೆ ಮರುಜೀವ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಚಂದ್ರಶೇಖರ ಏತಡ್ಕ.

80ರ ದಶಕದ ಆರಂಭದವರೆಗೂ ಕಟ್ಟ ನಿರ್ಮಾಣ ವಾರ್ಷಿಕ ಕಾರ್ಯಸೂಚಿಯ ಭಾಗವಾಗಿತ್ತು. ಬರನಿರೋಧಕಗಳಾಗಿ ಕೆಲಸ ಮಾಡಿದ ಕಟ್ಟಗಳು ಕೃಷಿ ವಿಸ್ತರಣೆಗೆ ನೆರವಾದವು. ಆಧುನಿಕ ಯಂತ್ರಗಳು ಹಳ್ಳಿಗೆ ನುಗ್ಗಿ ಬೋರ್‌ವೆಲ್ ಕೊರೆಯಲಾರಂಭಿಸಿದಾಗ, ನಿಧಾನವಾಗಿ ಕಟ್ಟಗಳ ಬಗ್ಗೆ ಉದಾಸೀನ ಬೆಳೆಯಿತು. ಆದರೆ, ಹಿರಿಯರು, ಜಲತಜ್ಞರ ಎಚ್ಚರದಿಂದಾಗಿ ಪುನಃ ಕಟ್ಟಗಳ ನಿರ್ಮಾಣಕ್ಕೆ ಒತ್ತು ದೊರೆಯಿತು’ ಎಂದು ಚಂದ್ರಶೇಖರ್ ಹೆಮ್ಮೆಯಿಂದ ಹೇಳುತ್ತಾರೆ.

ಕಳೆದೊಂದು ದಶಕದಿಂದ ಈ ಭಾಗದ ಕೃಷಿಕರು ಕಟ್ಟ ನಿರ್ಮಾಣವನ್ನು ಆಂದೋಲನ ಮತ್ತು ಹಬ್ಬ ರೀತಿ ನಡೆಸುತ್ತಾರೆ. ಏತಡ್ಕದಲ್ಲಿ ನವೆಂಬರ್ 15 ಅನ್ನು ‘ಕಟ್ಟ ದಿನ’ ಎಂದು ಆಚರಿಸುತ್ತಾರೆ. ಅಂದರೆ, ಅಂದಿನಿಂದ ಕಟ್ಟ ನಿರ್ಮಾಣದ ಸಿದ್ಧತೆಗಳು ಆರಂಭವಾಗುತ್ತವೆ. ಡಿಸೆಂಬರ್ ಮಧ್ಯದೊಳಗೆ ತೋಡಿನ ನಡುವೆ ಎತ್ತರದ ಒಡ್ಡುಗಳು ಮೇಲೆದ್ದು, ಓಡುವ ಜಲಕ್ಕೆ ಲಗಾಮು ಹಾಕುತ್ತವೆ. ಹಳ್ಳಿಗರಿಗೆ ಇದು ಬರೀ ನೀರಲ್ಲ, ಪವಿತ್ರ ಗಂಗೆ. ಹೀಗಾಗಿಯೇ ಅವರು ಕಟ್ಟ ಕಟ್ಟುವಾಗ ಕಾಲಿಗೆ ಚ‍ಪ್ಪಲಿಯನ್ನೂ ಧರಿಸುವುದಿಲ್ಲ. ಕೆಲಸ ಪೂರ್ಣಗೊಂಡ ಮೇಲೆ ಕಟ್ಟಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಕೃಷಿಕರು ನಿರ್ಮಿಸಿರುವ ಸಾಂಪ್ರದಾಯಿಕ ಕಟ್ಟಗಳ ಮಾದರಿಯಿಂದ ಉತ್ತೇಜನಗೊಂಡ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ ವಿಶೇಷ ಅಧಿಕಾರಿ ರಾಜ್ ಮೋಹನ್ ಅವರು, ಜಿಲ್ಲೆಯ ವಿವಿಧೆಡೆ ನೂರಾರು ಕಟ್ಟಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಿದ್ದಾರೆ ಎಂದು ಚಂದ್ರಶೇಖರ ಏತಡ್ಕ ಹೇಳುತ್ತಾರೆ.

***

ದಕ್ಷಿಣ ಕನ್ನಡ, ಕಾಸರಗೋಡು ಭಾಗದಲ್ಲಿ ಜನರಿಂದಲೇ ಕಟ್ಟಗಳು ನಿರ್ಮಾಣವಾಗುತ್ತವೆ. ಕಟ್ಟ ನಿರ್ಮಾಣಕ್ಕೆ ಪಾಲುದಾರಿಕೆಯಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ. ಹೊಸ ಪೀಳಿಗೆಯವರೂ ಅತ್ಯುತ್ಸಾಹದಿಂದ ದೇಗುಲ ಕಟ್ಟುವಷ್ಟು ಶ್ರದ್ಧೆಯಿಂದ ಇಲ್ಲಿ ಕಟ್ಟ ಕಟ್ಟುತ್ತಾರೆ

ಶ್ರೀಪಡ್ರೆ, ಜಲತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT