ಸೋಮವಾರ, ಮೇ 17, 2021
21 °C
‘ವಿಷನ್ ಚಿಕ್ಕಮಗಳೂರು ಟ್ರಸ್ಟ್‌‘ನ ‘ಜನಾಂದೋಲನ –ಜಲಾಂದೋಲನ‘

ವಿಶ್ವ ಜಲ ದಿನ ವಿಶೇಷ: ಹೊಯ್ಸಳ ಕೆರೆಗೆ ಮರುಜೀವ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ವರ್ಷದ ಹಿಂದೆ ಅಕ್ಷರಶಃ ಮುಚ್ಚಿಹೋಗಿದ್ದ ಚಿಕ್ಕಮಗಳೂರು ನಗರದ ಹಳೆಉಪ್ಪಳ್ಳಿಯ ಹೊಯ್ಸಳ ಕೆರೆಗೆ ಈಗ ಮರುಜೀವ ಸಿಕ್ಕಿದೆ. ಈಗ ಕೆರೆಯು ಜಲ ಸಂಪತ್ತಿನಿಂದ ನಳನಳಿಸುತ್ತಿದೆ. ಜಾನುವಾರುಗಳಿಗೆ ನೀರಾಸರೆಯಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೊಂಡಿದೆ.

ಹೂಳು ತುಂಬಿಕೊಂಡು, ಗಿಡಗಂಟಿ ಬೆಳೆದು ಮುಚ್ಚಿ ಹೋಗಿದ್ದ ಹೊಯ್ಸಳ ಕೆರೆಗೆ ಮರು ಜೀವ ನೀಡಿದ್ದು ‘ವಿಷನ್ ಚಿಕ್ಕಮಗಳೂರು ಟ್ರಸ್ಟ್‌’. ಕಾಫಿನಾಡಿನ ಊರುಗಳಲ್ಲಿ ಜನಾಂದೋಲನದ ಮೂಲಕ ಕೆರೆ, ಗೋಕಟ್ಟೆ, ಕಲ್ಯಾಣಿಗಳ ಸಂರಕ್ಷಣೆಯಂತಹ ಜಲಾಂದೋಲನ ನಡೆಸುತ್ತಿರುವ ಈ ಟ್ರಸ್ಟ್‌, ಆಂದೋಲನದ ಭಾಗವಾಗಿ ಹಳ್ಳೆಉಪ್ಪಳ್ಳಿ ಗ್ರಾಮದವರ ಸಹಭಾಗಿತ್ವದಲ್ಲಿ ಹೊಯ್ಸಳ ಕೆರೆಯನ್ನು ಅಭಿವೃದ್ಧಿಪಡಿಸಿದೆ. ಈ ಟ್ರಸ್ಟ್‌ನ ಅಧ್ಯಕ್ಷ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಅವರೇ ಈ ‘ಆಂದೋಲನ‘ದ ರೂವಾರಿ.

ಹೇಗಿತ್ತು ಹೇಗಾಯ್ತು...

ಗಿಡ–ಗಂಟಿ ಬೆಳೆದುಕೊಂಡು ಒಂದು ಅರ್ಥದಲ್ಲಿ ಕಣ್ಮರೆಯೇ ಆಗಿದ್ದ ಹೊಯ್ಸಳ ಕೆರೆಯಲ್ಲಿ ಎಂಟು ತಿಂಗಳ ಹಿಂದೆ ಟ್ರಸ್ಟ್‌ನವರು, ಜನರ ಸಹಭಾಗಿತ್ವದಲ್ಲಿ ಶ್ರಮದಾನ ಮಾಡಿದರು. ಶ್ರಮದಾನದಲ್ಲಿ ಗಿಡಗಂಟಿ ತೆರವುಗೊಳಿಸಿ, ಕೆರೆ ಅಂಗಳ ಸ್ವಚ್ಛಗೊಳಿಸಿದರು. ಈ ಭಾಗದಲ್ಲಿ ಬಿದ್ದ ಮಳೆಯ ನೀರು ಕೆರೆ ಸೇರುವಂತೆ, ನೀರು ಹರಿಯುವ ದಾರಿಗಳನ್ನು ಸ್ವಚ್ಛಗೊಳಿಸಿದರು.

ಕೆರೆ ಸ್ವಚ್ಛಗೊಳಿಸುವ ಜತೆಗೆ, ಕೆರೆಗೆ ಏರಿ ನಿರ್ಮಿಸಿದರು. ಗ್ರಾಮಸ್ಥರು, ದಾನಿಗಳು ನೀಡಿದ ₹ 12 ಲಕ್ಷ ನೆರವಿನಲ್ಲಿ ಈ ಕೆರೆ ನಿರ್ಮಾಣ ಕಾರ್ಯ ನಡೆದಿದೆ. 3,016 ಚದರ ಮೀಟರ್‌ ವಿಸ್ತೀರ್ಣದ ಈ ಕೆರೆಯ ಜಲಸಂಗ್ರಹಣೆ ಸಾಮರ್ಥ್ಯ 1.20 ಕೋಟಿ ಲೀಟರ್‌.

ಜನಸಹಭಾಗಿತ್ವಕ್ಕೆ ಒತ್ತು

‘ಜನರ ಸಹಭಾಗಿತ್ವದಲ್ಲಿ ಜಲ ಸಂರಕ್ಷಣೆ ಕಾರ್ಯಗಳು ನಡೆಯಬೇಕು. ಇದರ ಬಗ್ಗೆ ಅರಿವು ಮೂಡಿಸಬೇಕು’ ಎಂಬುದು ವಿಷನ್ ಚಿಕ್ಕಮಗಳೂರು ಟ್ರಸ್ಟ್‌ನ ಉದ್ದೇಶ. ಇಂಥ ಮಹತ್ವದ ಉದ್ದೇಶವಿಟ್ಟುಕೊಂಡಿರುವ ಈ ಟ್ರಸ್ಟ್‌ನಲ್ಲಿ ಅಧ್ಯಕ್ಷ ನಾಗರಾಜ್‌, ಕಾರ್ಯದರ್ಶಿ ಎ.ಆರ್‌. ಪ್ರಕಾಶ್‌ ಸೇರಿದಂತೆ 15 ಟ್ರಸ್ಟಿಗಳಿದ್ದಾರೆ. ‘ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನಮ್ಮ ಭೂಮಿ ನಮ್ಮ ಹೆಮ್ಮೆ’ ಎಂಬ ಧ್ಯೇಯದೊಂದಿಗೆ ಟ್ರಸ್ಟ್‌ ಮುನ್ನಡೆಯುತ್ತಿದೆ.

ಚಿಕ್ಕಮಗಳೂರು ತಾಲ್ಲೂಕಿನ ಹಲವು ಕೆರೆ ಕಟ್ಟೆಗಳ ಅಭಿವೃದ್ಧಿಗೆ ಟ್ರಸ್ಟ್‌ ಮುಂದಾಗಿದೆ. ಕೆರೆ, ಕಟ್ಟೆ ಪುನಶ್ಚೇತನಕ್ಕೆ ಸಮುದಾಯವನ್ನು ಸಜ್ಜುಗೊಳಿಸಲು ‘ನಮ್ಮೂರ ಕೆರೆ ಹಬ್ಬ’ ದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕೆರೆ ಅಭಿವೃದ್ಧಿಯ ನಂತರ, ಅದರ ನಿರ್ವಹಣೆಗಾಗಿ, ಸ್ಥಳೀಯರನ್ನೇ ಸೇರಿಸಿ ‘ಕೆರೆ ನಿರ್ವಹಣಾ ಸಂಘ’ವನ್ನು ಟ್ರಸ್ಟ್‌ ರಚಿಸುತ್ತಿದೆ.

‘ಟ್ರಸ್ಟ್‌ ವತಿಯಿಂದ ಕೆರೆಗಳ ಪುನರುಜ್ಜೀವನ, ಒತ್ತುವರಿ ತೆರವು, ಜಲಮೂಲಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದೇವೆ. ‘ಕೆರೆಗಳು ಊರಿನ ಜೀವನಾಡಿಗಳು’ ಎಂಬುದನ್ನು ಜನರಿಗೆ ಮನದಟ್ಟು ಮಾಡುತ್ತಿದ್ದೇವೆ. ಪುನರುಜ್ಜೀವನದ ನಂತರ ಕೆರೆ ತುಂಬಿದರೆ ಜನರು ಖುಷಿಯಾಗುತ್ತಾರೆ. ಅದೇ ನಮಗೆ ಸ್ಪೂರ್ತಿ’ ಎನ್ನುತ್ತಾರೆ ನಾಗರಾಜ್‌.

ಹೊಯ್ಸಳ ಕೆರೆ ಅಭಿವೃದ್ಧಿಪಡಿಸಿದ ನಂತರ, ಮಳೆ ಬಂದು ಕೆರೆ ತುಂಬಿದೆ. ಕೆರೆಯಲ್ಲಿ ನೀರು ತುಂಬಿಕೊಂಡಿರುವುದು ಸ್ಥಳೀಯರಲ್ಲಿ ಉತ್ಸಾಹ ಮೂಡಿಸಿದೆ. ‘ಹೊಯ್ಸಳರ ಕಾಲದ ನಮ್ಮೂರಿನ ಕೆರೆಗೆ ನಾಗರಾಜ್‌ ಮತ್ತು ಪ್ರಕಾಶ್‌ ಅವರ ಕೃಪೆಯಿಂದಾಗಿ ಹೊಸ ಸ್ಪರ್ಶ ಸಿಕ್ಕಿದೆ. ಗಲೀಜಾಗಿದ್ದ ಪ್ರದೇಶವನ್ನು ಸುಂದರ ತಾಣವಾಗಿಸಿದ್ದಾರೆ’ ಎಂದು ಹಳೆಉಪ್ಪಳ್ಳಿ ಗ್ರಾಮಸ್ಥ ಚಂದ್ರಶೇಖರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

***

ಕೆರೆ ಅಭಿವೃದ್ಧಿಯ ನಂತರ ಕೆರೆ ನಿರ್ವಹಣೆಗೆ ಆ ಊರಿನಲ್ಲಿ ಸಂಘವೊಂದನ್ನು ರಚಿಸಿ ಅದಕ್ಕೆ ಕೆರೆ ಜವಾಬ್ದಾರಿ ವಹಿಸುತ್ತೇವೆ. ಜನರಿಗೂ ಕೆರೆ ರಕ್ಷಣೆ ಬಗ್ಗೆ ಜವಾಬ್ದಾರಿ ಮೂಡಲಿ ಎಂಬುದು ಇದರ ಉದ್ದೇಶ

- ಡಾ.ಎಚ್‌.ಎಲ್‌.ನಾಗರಾಜ್‌, ಅಧ್ಯಕ್ಷ, ವಿಷನ್ ಚಿಕ್ಕಮಗಳೂರು ಟ್ರಸ್ಟ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು