ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಅತ್ತಿವೇರಿಯಲ್ಲಿ ಹೆರಿಗೆ, ಕಡಲಲ್ಲಿ ಆಹಾರ!

ಚಳಿಗಾಲದಲ್ಲಿ ಉತ್ತರ ಕನ್ನಡಕ್ಕೆ ವಲಸೆ ಬರುವ ದೇಶ ವಿದೇಶಗಳ ಹಕ್ಕಿಗಳು
Last Updated 29 ಜನವರಿ 2022, 19:45 IST
ಅಕ್ಷರ ಗಾತ್ರ

ಕಾರವಾರ: ಮಳೆ ಮುಗಿದು ಚಳಿಗಾಲ ಶುರುವಾಗುತ್ತಿದ್ದಂತೆ ಉತ್ತರ ಕನ್ನಡವು ಪಕ್ಷಿಪ್ರಿಯರನ್ನು ಸೆಳೆಯುತ್ತದೆ. ಮುಂಡಗೋಡದ ಅತ್ತಿವೇರಿಗೆ 20ಕ್ಕೂ ಹೆಚ್ಚು ದೇಶಗಳ ಹತ್ತಾರು ಪ್ರಭೇದಗಳ ಹಕ್ಕಿಗಳು ‘ಹೆರಿಗೆ’ಗಾಗಿ ಬಂದರೆ, ಕಡಲ ತಡಿಗೆ ‘ಸೀಗಲ್‌’ಗಳು ಆಹಾರ ಅರಸುತ್ತ ಬರುತ್ತವೆ.

ಉತ್ತರಕನ್ನಡ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ ಗಡಿಯಲ್ಲಿರುವ ‘ಅತ್ತಿವೇರಿ’ ಪಕ್ಷಿಧಾಮವು ಮುಂಡಗೋಡ ತಾಲ್ಲೂಕಿನಲ್ಲಿದೆ. ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ವಿದೇಶಿ ಪಕ್ಷಿಗಳ ಬರುವಿಕೆ ತಡವಾಗಿದ್ದರೂ ದೇಶದ ವಿವಿಧ ಭಾಗಗಳ ಖಗಸಂಕುಲಕ್ಕೆ ಕೊರತೆಯಿಲ್ಲ.

‘ಅತ್ತಿವೇರಿ ಪಕ್ಷಿಧಾಮಕ್ಕೆ ಪ್ರತಿವರ್ಷ 20ಕ್ಕೂ ಹೆಚ್ಚು ದೇಶಗಳಿಂದ 50ರಿಂದ 60 ಪ್ರಭೇದಗಳ ಪಕ್ಷಿಗಳು ವಲಸೆ ಬರುತ್ತವೆ. ಅವುಗಳಲ್ಲಿ ಕೆಲವು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿದರೆ, ಮತ್ತೆ ಕೆಲವು ಚಳಿಗಾಲದವರೆಗೆ ಆಹಾರ ಹುಡುಕುತ್ತ ಮರಳಿ ಹೋಗುತ್ತವೆ. ಈ ವರ್ಷ ಜನವರಿ ಮಧ್ಯದವರೆಗೆ 20ಕ್ಕೂ ಹೆಚ್ಚು ವಿಧಗಳ ಪಕ್ಷಿಗಳು ವಲಸೆ ಬಂದಿವೆ’ ಎನ್ನುತ್ತಾರೆ ಅತ್ತಿವೇರಿ ಪಕ್ಷಿಧಾಮದ ಉಪವಲಯ ಅರಣ್ಯಾಧಿಕಾರಿ ಸಂಜೀವ.

‘ನವೆಂಬರ್ ತಿಂಗಳ ಮಧ್ಯದಿಂದ ಫೆಬ್ರುವರಿ ಎರಡನೇ ವಾರದವರೆಗೆ ಪಕ್ಷಿಧಾಮದಲ್ಲಿ ವಲಸೆ ಹಕ್ಕಿಗಳನ್ನು ನೋಡಬಹುದು. ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ವಲಸೆ ಪಕ್ಷಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ವಲಸೆ ಹೊರಡುವ ಅವಧಿಯಲ್ಲಿಯೇ ಆಗಾಗ ಮಳೆ ಸುರಿದಿದೆ. ಇದು ಹಕ್ಕಿಗಳು ಮಾರ್ಗ ಬದಲಿಸಲು ಕಾರಣವಾಗಿರಬಹುದು’ ಎಂದು ಹೇಳುತ್ತಾರೆ.

ಇತ್ತ ಕಾರವಾರ ಸೇರಿ ಕರಾವಳಿಯ ವಿವಿಧ ಕಡಲತೀರಗಳಲ್ಲಿ ‘ಸೀಗಲ್’ಗಳ ಚಿನ್ನಾಟ ಆಕರ್ಷಿಸುತ್ತದೆ.

‘ಸೀಗಲ್‌ಗಳು ಆಹಾರ ಹುಡುಕಿಕೊಂಡು, ಅವುಗಳಿಗೆ ಹೊಂದಾಣಿಕೆ ಆಗುವಂಥ ವಾತಾವರಣಕ್ಕೆ ವಲಸೆ ಬರುತ್ತವೆ. ಸಮುದ್ರದಲ್ಲಿ ಮೀನು ಕೊರತೆಯಾದರೆ ಅವು ಬರುವುದಿಲ್ಲ. ಈ ಬಾರಿ ಮೀನಿನ ಸಂತತಿ ಸ್ವಲ್ಪ ಸುಧಾರಿಸಿದೆ. ಇದರ ಪರಿಣಾಮ ಸೀಗಲ್‌ಗಳು ಹೆಚ್ಚು ಬಂದಿವೆ’ ಎಂದು ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ವಿಶ್ಲೇಷಿಸುತ್ತಾರೆ.

ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ಡಿಸೆಂಬರ್‌ನಲ್ಲಿ ನಿತ್ರಾಣಗೊಂಡಂತೆ ಕಂಡುಬಂದ ಬಿಳಿ ರಣಹದ್ದಿನ ಮರಿಗೆ ಸ್ಥಳೀಯ ಯುವಕರು ಆರೈಕೆ ಮಾಡುತ್ತಿರುವುದು
ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ಡಿಸೆಂಬರ್‌ನಲ್ಲಿ ನಿತ್ರಾಣಗೊಂಡಂತೆ ಕಂಡುಬಂದ ಬಿಳಿ ರಣಹದ್ದಿನ ಮರಿಗೆ ಸ್ಥಳೀಯ ಯುವಕರು ಆರೈಕೆ ಮಾಡುತ್ತಿರುವುದು

ಮತ್ತೆ ಬಂದವು ರಣಹದ್ದುಗಳು!

ಕಾಳಿ ನದಿಯ ಸುತ್ತಮುತ್ತ ಕೆಲವು ವರ್ಷಗಳ ಹಿಂದಿನವರೆಗೆ ರಣಹದ್ದುಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದವು. ಕಾಲಕ್ರಮೇಣ ಅವುಗಳು ನಾಪತ್ತೆಯಾದವು. ಈ ವರ್ಷ ಮತ್ತೆ ಕಾಣಿಸಿಕೊಂಡಿದ್ದು, ಪಕ್ಷಿ ವೀಕ್ಷಕರ ಸಂತಸ ಇಮ್ಮಡಿಗೊಳಿಸಿದೆ.

‘ಕೈಗಾ ಬರ್ಡರ್ಸ್’ ತಂಡವು ಸ್ಥಳೀಯ ವಲಸಿಗ ಬಿಳಿ ರಣಹದ್ದು (ಈಜಿಪ್ಷಿಯನ್ ವಲ್ಚರ್) ಹಾಗೂ ಹಿಮಾಲಯದ ದೊಡ್ಡ ರಣಹದ್ದು (ಹಿಮಾಲಯನ್ ಗ್ರಿಫೋನ್ ವಲ್ಚರ್) ಇರುವಿಕೆಯನ್ನು ಡಿಸೆಂಬರ್‌ನಲ್ಲಿ ಗುರುತಿಸಿದೆ. ರಣಹದ್ದುಗಳು 2016ರ ನಂತರ ಈ ವರ್ಷವೇ ಕಂಡುಬಂದಿವೆ.

ಅಲ್ಲದೇ ಉತ್ತರ ಯುರೋಪ್, ಸೈಬೀರಿಯಾ, ಫಿನ್ಲೆಂಡ್, ಮೆಡಿಟರೇನಿಯನ್ ಸಮುದ್ರ, ಟಿಬೆಟ್ ಹಾಗೂ ಲಡಾಖ್‌ಗಳಿಂದ ಬಂದಿರುವ ಹಕ್ಕಿಗಳನ್ನೂ ತಂಡ ಗುರುತಿಸಿದೆ.

ಅತ್ತಿವೇರಿಯಲ್ಲಿ ಈ ವರ್ಷ ಇರುವ ಪಕ್ಷಿಗಳು:

ಬ್ಲ್ಯಾಕ್‌ ಹೆಡೆಡ್‌ ಐಬೀಸ್‌, ಯುರೇಸಿಯನ್‌ ಸ್ಪೂನ್‌ಬಿಲ್‌, ರಿವರ್ಟನ್‌, ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌, ಕಾರ್ಮೋರಂಟ್ಸ್‌, ಇಗ್ರೆಟ್ಸ್‌, ಏಷ್ಯನ್‌ ಓಪನ್‌ ಬಿಲ್ಡ್ ಸ್ಟಾರ್ಕ್‌, ಸ್ಯಾಂಡ್‌ ಪೈಪರ್‌ (ಕಾಮನ್‌ ಮತ್ತು ಗ್ರೀನ್‌ ಸ್ಯಾಂಡ್‌ ಪೈಪರ್)‌, ಓರಿಯೆಂಟೆಡ್‌ ಡಾರ್ಟರ್‌, ಪರ್ಪಲ್‌ ಹೆರಾನ್‌, ಗ್ರೇ ಹೆರಾನ್‌, ಸ್ಪಾಟ್ ಬಿಲ್ಡ್ ಡಕ್‌, ಇಂಡಿಯನ್‌ ಗ್ರೇ ಹಾರ್ನ್‌ಬಿಲ್‌, ಫಾರೆಸ್ಟ್‌ ಮತ್ತು ವೈಟ್‌ ವಾಗ್ಟೇಲ್‌, ಮಾರ್ಶ್ ಹ್ಯಾರಿಯರ್‌, ಗ್ರೇಟ್‌ ಟಿಟ್‌.

ಕಾಳಿ ನದಿ ಸುತ್ತ ಕಂಡುಬಂದವು:ಕಿತ್ತಳೆಕಾಲಿನ ಕಡಲಹಕ್ಕಿ, ನೀಲಕತ್ತಿನ ಉಲ್ಲಂಕಿ, ಕಡಲ ಉಲ್ಲಂಕಿ, ಬೂದುಬೆನ್ನಿನ ಕಡಲಕ್ಕಿ, ಕೆಂಪುಕಾಲಿನ ಚಾಣ , ಪಟ್ಟೆರೆಕ್ಕೆಯ ಸೆಳೆವ, ಪಟ್ಟೆ ತಲೆ ಹೆಬ್ಬಾತು ಹಾಗೂ ಬಿಳಿಕತ್ತಿನ ಉಲಿಯಕ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT